ಶಿವಮೊಗ್ಗ, ಚಿಕ್ಕಮಗಳೂರು, ಕರಾವಳಿಯಲ್ಲಿ ಹೆಚ್ಚು ಮಳೆ, ಬೆಂಗಳೂರಲ್ಲಿ ಇಂದು ಮಳೆ ಬರುತ್ತಾ- ಇಲ್ಲಿದೆ ಕರ್ನಾಟಕ ಹವಾಮಾನ ವಿವರ
Oct 31, 2024 06:38 AM IST
ಶಿವಮೊಗ್ಗ, ಚಿಕ್ಕಮಗಳೂರು, ಕರಾವಳಿಯಲ್ಲಿ ಹೆಚ್ಚು ಮಳೆ ಸಾಧ್ಯತೆ ಇದೆ. ಅದೇ ರೀತಿ ಬೆಂಗಳೂರಲ್ಲಿ ಇಂದು ಮಳೆ ಬರುತ್ತಾ ಎಂಬ ಪ್ರಶ್ನೆಗೆ ಉತ್ತರ ನೀಡುವ ಕರ್ನಾಟಕ ಹವಾಮಾನ ವಿವರ. (ಸಾಂಕೇತಿಕ ಚಿತ್ರ)
Karnataka Weather: ಕರ್ನಾಟಕದಲ್ಲಿ ಮತ್ತೆ ಮಳೆ ಕಾಣಿಸಿಕೊಂಡಿದ್ದು, ಇಂದು ಶಿವಮೊಗ್ಗ, ಚಿಕ್ಕಮಗಳೂರು, ಕರಾವಳಿಯಲ್ಲಿ ಹೆಚ್ಚು ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ವರದಿ ತಿಳಿಸಿದೆ. ಬೆಂಗಳೂರಲ್ಲಿ ಇಂದು ಮಳೆ ಬರುತ್ತಾ ಎಂಬ ಪ್ರಶ್ನೆ ಉತ್ತರ ಇರುವಂತಹ ಕರ್ನಾಟಕ ಹವಾಮಾನ ವಿವರ ಇಲ್ಲಿದೆ.
ಬೆಂಗಳೂರು: ನಾಡಿನ ಉದ್ದಗಲಕ್ಕೂ ದೀಪಾವಳಿ ಸಂಭ್ರಮಕ್ಕೆ ಮಳೆಯೂ ಜೊತೆಯಾಗಲಿದೆ. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇಂದು (ಅಕ್ಟೋಬರ್ 31) ಮಳೆಯಾಗುವ ಸಾಧ್ಯತೆ ಇದ್ದು, ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಿರಲಿದೆ. ಅದೇ ರೀತಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಅನ್ನು ಭಾರತೀಯ ಹವಾಮಾನ ಇಲಾಖೆ ಘೋಷಿಸಿದೆ. ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರ ನಿನ್ನೆ (ಅಕ್ಟೋಬರ್ 30) ಸಂಜೆ ನೀಡಿದ ಕರ್ನಾಟಕ ಹವಾಮಾನ ಮುನ್ಸೂಚನೆಯಂತೆ, ಸಿನೊಪ್ಟಿಕ್ ಹವಾಮಾನ ಲಕ್ಷಣ ಪ್ರಕಾರ, ಒಂದು ಚಂಡಮಾರುತದ ಪರಿಚಲನೆಯು ಮನ್ನಾರ್ ಕೊಲ್ಲಿಯಲ್ಲಿದೆ ಮತ್ತು ಸರಾಸರಿ ಸಮುದ್ರ ಮಟ್ಟದಿಂದ 2.1 ಕಿಮೀ ವರೆಗೆ ವಿಸ್ತರಿಸುತ್ತದೆ. ಮತ್ತೊಂದು ಮೇಲಿನ ವಾಯು ಚಂಡಮಾರುತದ ಪರಿಚಲನೆಯು ದಕ್ಷಿಣ ಆಂಧ್ರಪ್ರದೇಶದ ಕರಾವಳಿಯಿಂದ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 1.5 ಮತ್ತು 3.1 ಕಿಮೀ ನಡುವೆ ಚಲಿಸಿದೆ. ಹೀಗಾಗಿ, ಇಂದು ( ಅಕ್ಟೋಬರ್ 31) ರಾಜ್ಯದ ಬಹುತೇಕ ಸ್ಥಳಗಳಲ್ಲಿ ಮಳೆ ನಿರೀಕ್ಷಿಸಬಹುದು.
ಕರ್ನಾಟಕದಲ್ಲಿ ಇಂದು ಮಳೆ ಬರುತ್ತಾ - ಹವಾಮಾನ ಮುನ್ಸೂಚನೆ
ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರ ಕೊಟ್ಟಿರುವ ಕರ್ನಾಟಕ ಹವಾಮಾನ ಮುನ್ಸೂಚನೆ ಪ್ರಕಾರ, ಇಂದು (ಅಕ್ಟೋಬರ್ 31) ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀ ಮಳೆ/ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಹಾಗಾಗಿ ಈ ಎರಡೂ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಮೈಸೂರು, ಚಿತ್ರದುರ್ಗ, ಹಾಸನ, ಮಂಡ್ಯ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬೀದರ್ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣ ಹವೆಯಿರುವ ಸಾಧ್ಯತೆಯಿದೆ.
ಬೆಂಗಳೂರು ಸುತ್ತಮುತ್ತ ಇಂದು ಮಳೆ ಬರುತ್ತಾ, ಹೇಗಿರಲಿದೆ ಹವಾಮಾನ
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಇಂದು ಬಹುತೇಕ ಮೋಡ ಕವಿದ ವಾತಾವರಣ ಇರುವ ಸಾಧ್ಯತೆ ಇದೆ. ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ಮಾಹಿತಿ ಪ್ರಕಾರ, ಬೆಂಗಳೂರು ನಗರ ಜಿಲ್ಲೆಯಲ್ಲಿ ಇಂದು (ಅಕ್ಟೋಬರ್ 31) ಮೋಡ ಕವಿದ ವಾತಾವರಣ ಇರಲಿದೆ. ಹಲವೆಡೆ ಹಗುರದಿಂದ ಸಾಧಾರಣ ಮಳೆ ಕೂಡ ಸುರಿಯಬಹುದು. ಕೆಲವು ಪ್ರದೇಶಗಳಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಶಿಯಸ್ ಅಂದಾಜಿಸಲಾಗಿದೆ.
ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೂಡ ಮೋಡ ಕವಿದ ವಾತಾವರಣ, ಹಲವು ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕೆಲವು ಕಡೆ ಗುಡುಗು ಮಿಂಚು ಸಹಿತ ಮಳೆಯಾಗಬಹುದು. ಈ ಪ್ರದೇಶದಲ್ಲಿ ಇಂದು ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಶಿಯಸ್ ಇರಬಹುದು ಎಂದು ಹವಾಮಾನ ಮುನ್ಸೂಚನೆ ವರದಿ ವಿವರಿಸಿದೆ.