ಬೆಂಗಳೂರು ಸುತ್ತಮುತ್ತ ಕೆಲವೆಡೆ ಹನಿ ಮಳೆಯ ಸಿಂಚನ, ಬಿಸಿಲು ಮೋಡಗಳ ಕಣ್ಣಾಮುಚ್ಚಾಲೆ, ಕರ್ನಾಟಕ ಹವಾಮಾನ ಇಂದು ಹೀಗಿರಲಿದೆ
Oct 30, 2024 07:00 AM IST
ಕರ್ನಾಟಕ ಹವಾಮಾನ: ಬೆಂಗಳೂರು ಸುತ್ತಮುತ್ತ ಕೆಲವೆಡೆ ಹನಿ ಮಳೆಯ ಸಿಂಚನ, ಬಿಸಿಲು ಮೋಡಗಳ ಕಣ್ಣಾಮುಚ್ಚಾಲೆ ಇರಲಿದ್ದು, ಉಳಿದ ಜಿಲ್ಲೆಗಳ ಹವಾಮಾನ ವಿವರ ಈ ವರದಿಯಲ್ಲಿದೆ. (ಸಾಂಕೇತಿಕ ಚಿತ್ರ)
Karnataka Rains: ಕರ್ನಾಟಕದಲ್ಲಿ ಹಿಂಗಾರು ಮಳೆ ಮುಂದುವರಿದಿದೆ. ಬೆಂಗಳೂರು ಸುತ್ತಮುತ್ತ ಕೆಲವೆಡೆ ಹನಿ ಮಳೆಯ ಸಿಂಚನ, ಬಿಸಿಲು ಮೋಡಗಳ ಕಣ್ಣಾಮುಚ್ಚಾಲೆ ಇರಲಿದೆ. ಮುಂಜಾನೆ ಮಂಜು, ಸ್ವಲ್ಪ ಚಳಿಯ ವಾತಾವರಣ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಕರ್ನಾಟಕದ ಹವಾಮಾನ ಇಂದು (ಅಕ್ಟೋಬರ್ 30) ಹೀಗಿರಲಿದೆ.
ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮ, ಸಡಗರಕ್ಕೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಸಿಂಚನವಾಗಲಿದೆ. ಕೆಲವು ಕಡೆ ಹಗುರದಿಂದ ಸಾಧಾರಣ ಮಳೆಯಾಗಬಹುದು. ಕರ್ನಾಟಕದ ರಾಜಧಾನಿ ಬೆಂಗಳೂರು ಸುತ್ತಮುತ್ತ ಕೆಲವೆಡೆ ಹನಿ ಮಳೆಯ ಸಿಂಚನ ಮತ್ತು ಬಿಸಿಲು ಮೋಡಗಳ ಕಣ್ಣಾಮುಚ್ಚಾಲೆ ಕಾಣುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ ನೀಡಿದ ಹವಾಮಾನ ಮುನ್ಸೂಚನೆ ಪ್ರಕಾರ ಕರ್ನಾಟಕ ಹವಾಮಾನ ಇಂದು ಬಹುತೇಕ ಜಿಲ್ಲೆಗಳಲ್ಲಿ ಮಳೆ ಇದೆ. ಕೆಲವು ಕಡೆಗೆ ಹನಿ ಮಳೆ ಬಿದ್ದರೆ, ಇನ್ನು ಕೆಲವು ಕಡೆ ಹಗುರ ಮಳೆಯಾಗಬಹುದು ಹಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಮಳೆ ಮುನ್ಸೂಚನೆ ವರದಿ ವಿವರಿಸಿದೆ. ಮೂರ್ನಾಲ್ಕು ದಿನಗಳಿಂದ ಮರೆಯಾಗಿದ್ದ ಮಳೆರಾಯ ದೀಪಾವಳಿಗೆ ಮತ್ತೆ ಕಾಣಿಸಿಕೊಂಡಿದ್ದಾನೆ. ಇಂದು ಯಾವುದೇ ಅಪಾಯದ ಸೂಚನೆ ಇಲ್ಲ.
ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ಅಕ್ಟೋಬರ್ 31ರ ಬೆಳಗ್ಗೆವರೆಗಿನ ನೀಡಿರುವ ಹವಾಮಾನ ಮುನ್ಸೂಚನೆ ಪ್ರಕಾರ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳು ಅಂದರೆ ಇಂದು ಅಪರಾಹ್ನ ತನಕ ಭಾಗಶಃ ಮೋಡ ಕವಿದ ಆಕಾಶ. ಹಗುರ ಮಳೆಯಾಗುವ ಸಾಧ್ಯತೆ ಹೆಚ್ಚು. ಕೆಲವು ಸ್ಥಳಗಳಲ್ಲಿ ಮುಂಜಾನೆಯ ಸಮಯದಲ್ಲಿ ಮಂಜು ತುಂಬಾ ಸಾಧ್ಯತೆ ಇರುತ್ತದೆ. ಇದೇ ರೀತಿ, ಮುಂದಿನ 48 ಗಂಟೆಗಳು ಅಂದರೆ ನಾಳೆ (ಅಕ್ಟೋಬರ್ 31) ಅಪರಾಹ್ನದ ತನಕ ಭಾಗಶಃ ಮೋಡ ಕವಿದ ಆಕಾಶ ಮತ್ತು ಹಗುರ ಮಳೆಯಾಗುವ ಸಾಧ್ಯತೆ ಹೆಚ್ಚು. ಕೆಲವು ಸ್ಥಳಗಳಲ್ಲಿ ಮುಂಜಾನೆಯ ಸಮಯದಲ್ಲಿ ಮಂಜು ತುಂಬಾ ಸಾಧ್ಯತೆ ಇರುತ್ತದೆ.
ಬೆಂಗಳೂರು ಹವಾಮಾನ ಅ.30; ಇಂದು ಮಳೆ ಬರುತ್ತಾ
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಇಂದು (ಅಕ್ಟೋಬರ್ 30) ಹವಾಮಾನ ಹೇಗಿರಲಿದೆ? ಇಂದು ಮಳೆ ಬರುತ್ತಾ ಎಂಬ ಕುತೂಹಲ ಸಹಜ. ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರ ಕೊಟ್ಟಿರುವ ಹವಾಮಾನ ಮುನ್ಸೂಚನೆ ಪ್ರಕಾರ ನಾಳೆ (ಅಕ್ಟೋಬರ್ 31) ಬೆಳಗ್ಗೆ 8.30 ರ ತನಕ ಅಲ್ಲಲ್ಲಿ ಕೆಲವು ಕಡೆಗೆ ಹನಿ ಮಳೆ, ಹಗುರ ಮಳೆಯಿಂದ ಸಾಧಾರಣ ಮಳೆ ಸುರಿಯಬಹುದು. ಬೆಂಗಳೂರು ನಗರ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಶಿಯಸ್ ಇರಬಹುದು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಶಿಯಸ್ ಇರಬಹುದು. ಬೆಂಗಳೂರು ನಗರದಲ್ಲಿ ನಿನ್ನೆ ಗರಿಷ್ಠ ತಾಪಮಾನ 30.5 ಮತ್ತು ಕನಿಷ್ಠ ತಾಪಮಾನ 20.8 ಡಿಗ್ರಿ ಸೆಲ್ಶಿಯಸ್ ಇತ್ತು. ಮಂಜು ಮುಸುಕಿದ ವಾತಾವರಣ ಬೆಳಗ್ಗೆ ಇತ್ತು. ಇದೇ ರೀತಿ ಬೆಂಗಳೂರು ಗ್ರಾಮಾಂತರದಲ್ಲಿ ಗರಿಷ್ಠ ತಾಪಮಾನ 31.1 ಡಿಗ್ರಿ ಸೆಲ್ಶಿಯಸ್, ಕನಿಷ್ಠ ತಾಪಮಾನ 20.5 ಡಿಗ್ರಿ ಸೆಲ್ಶಿಯಸ್ ಇತ್ತು.
ಕರ್ನಾಟಕದ ಹವಾಮಾನ ಇಂದು (ಅಕ್ಟೋಬರ್ 30)
ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ನಗರ, ಚಾಮರಾಜನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಹಾವೇರಿ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಒಳನಾಡಿನ ಉಳಿದ ಜಿಲ್ಲೆಗಳ ಮೇಲೆ ಒಣ ಹವಾಮಾನದ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ತಿಳಿಸಿದೆ.