Bidar News: ಬೀದರ್ ನಗರದಿಂದ ಬೆಂಗಳೂರಿಗೆ 10 ತಿಂಗಳ ನಂತರ ಮತ್ತೆ ಹಾರಲಿದೆ ವಿಮಾನ: ಕೈ ಕೊಟ್ಟ ಕೇಂದ್ರ ಸರ್ಕಾರ, ಕರ್ನಾಟಕದಿಂದಲೇ ಸಹಾಯಧನ
Oct 29, 2024 10:48 AM IST
ಬೀದರ್ ನಗರದ ವಿಮಾನ ನಿಲ್ದಾಣದಲ್ಲಿ ಮತ್ತೆ ಸೇವೆಗಳು ಪುನಾರಂಭಗೊಳ್ಳಲಿವೆ.
- Bidar Airport operational again: ಬೀದರ್ ನಗರದ ವಿಮಾನ ಸೇವೆ ಹತ್ತು ತಿಂಗಳ ಹಿಂದೆಯೇ ಸ್ಥಗಿತಗೊಂಡಿತ್ತು. ಈಗ ಪುನಾರಂಭದ ಕಾಲ ಬಂದಿದೆ. ಕರ್ನಾಟಕ ಸರ್ಕಾರವೇ ಸಹಾಯಧನ ಭರಿಸಿ ವಿಮಾನ ಸೇವೆ ಆರಂಭಕ್ಕೆ ಹಸಿರು ನಿಶಾನೆ ತೋರಿದೆ.
ಬೆಂಗಳೂರು: ಕರ್ನಾಟಕದ ತುತ್ತ ತುದಿಯ ಜಿಲ್ಲೆ, ಐತಿಹಾಸಿಕ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ಬೀದರ್‌ನಿಂದ ಮತ್ತೆ ವಿಮಾನ ಆರಂಭವಾಗುವ ಲಕ್ಷಣಗಳು ಕಾಣುತ್ತಿವೆ. ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಕಾರ್ಯನಿರ್ವಹಿಸಿದ್ದರೂ ಕಳೆದ ಡಿಸೆಂಬರ್‌ನಲ್ಲಿ ಸ್ಥಗಿತಗೊಂಡಿದ್ದ ಬೀದರ್ ವಿಮಾನ ಸೇವೆಗಳನ್ನು ಪುನಾರಂಭಿಸುವ ಪ್ರಯತ್ನಗಳು ನಡೆದಿದ್ದವು. ಕೇಂದ್ರ ಸರ್ಕಾರ ಉಡಾನ್ ಸಹಿತ ಯಾವುದೇ ಯೋಜನೆಯಡಿ ನೆರವು ನೀಡುವುದಿಲ್ಲ ಎನ್ನುವುದು ಸದ್ಯಕ್ಕೆ ಖಚಿತವಾದ ನಂತರ ಕರ್ನಾಟಕ ಸರ್ಕಾರವೇ ಸಹಾಯಧನ ಭರಿಸಿ ವಿಮಾನ ಸೇವೆ ಪುನಾರಂಭಿಸಲು ಮುಂದಾಗಿದೆ. ಕೆಲವೇ ದಿನಗಳಲ್ಲಿ ಮತ್ತೆ ಬೀದರ್ ನಗರದ ಮೇಲೆ ವಿಮಾನ ಹಾರುವ ದಿನಗಳೂ ಬರಲಿವೆ.
ಕಳೆದ 10 ತಿಂಗಳುಗಳಿಂದ ಸ್ಥಗಿತಗೊಂಡಿರುವ ಬೀದರ್ ನಾಗರೀಕ ವಿಮಾನಯಾನ ಸೇವೆಯನ್ನು ಪುನಾರಂಭಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿರುವುದರಿಂದ ಆಸೆಗಳು ಗರಿಗೆದರಿವೆ.
ಉಡಾನ್ ಯೋಜನೆಯಡಿ ನೀಡಲಾಗುತ್ತಿದ್ದ ಸಬ್ಸಿಡಿ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ವಿಮಾನ ಯಾನ ಸೇವೆ ಸ್ಥಗಿತವಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೇ ಸಬ್ಸಿಡಿ ನೀಡಿ ಕರುನಾಡ ಕಿರೀಟ ಬೀದರ್ ಗೆ ವಾಯುಯಾನ ಕಲ್ಪಿಸಲು ನಿರ್ಧರಿಸಿದೆ. ರಾಜ್ಯ ಸರ್ಕಾರದ ವತಿಯಿಂದ ನೀಡಲಾಗುವ ಸಬ್ಸಿಡಿ ಹಣದ ಪೈಕಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಶೇ. 70ರಷ್ಟು ಮತ್ತು ರಾಜ್ಯ ಸರ್ಕಾರ ಶೇ.30 ಭರಿಸಲಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ವಿಮಾನಯಾನ ಸೇವೆ ಪುನಾರಂಭವಾಗಲಿದೆ ಎಂದು ಬೀದರ್ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಅರಣ್ಯ,ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ವಿವರಣೆ.
ಬೀದರ್ ಸರ್ವ ಧರ್ಮ ಸಮನ್ವಯ ಕೇಂದ್ರ. ಸರ್ವ ಜನಾಂಗದ ಶಾಂತಿಯ ತೋಟ. ಇಲ್ಲಿ ಹಿಂದೂ, ಮುಸ್ಲಿಂ, ಸಿಖ್, ಇಸಾಯಿಗಳು ಅಣ್ಣತಮ್ಮಂದಿರಂತೆ ಬಾಳುತ್ತಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಬಸವಾದಿ ಶರಣರ ಅನುಭವ ಮಂಟಪ ಇರುವ ಬಸವಕಲ್ಯಾಣವೂ ಇದೆ. ಗುರುನಾನಕ್ ಝೀರಾ ಗುರುದ್ವಾರವೂ ಇದೆ. 1460ರಲ್ಲಿ ಆರಂಭವಾದ ಮಹಮದ್ ಗವಾನರ ಮದರಸಾ ಇದೆ. ಝರಣಿ ನರಸಿಂಹಸ್ವಾಮಿ ದೇವಾಲಯವೂ ಇದೆ ಜೊತೆಗೆ ಬೀದರ್ ಕೋಟೆಯ ವಿಶಿಷ್ಟ ಕರೇಜ್ ಇದೆ. ಈಗ ಕೃಷ್ಣ ಮೃಗಗಳ ಸಂರಕ್ಷಿತ ತಾಣವೂ ಸಿದ್ಧವಾಗುತ್ತಿದೆ, ಹೀಗಾಗಿ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದೆ. ನಾಗರೀಕ ವಿಮಾನಯಾನ ಸೇವೆಯಿಂದ ಇದಕ್ಕೆ ಹೆಚ್ಚಿನ ಒತ್ತು ಸಿಗಲಿದೆ.
ದೇಶದಲ್ಲೇ ವಿಶಿಷ್ಟವಾದ ಬಿದರೀ ಕಲೆಗೆ ಬೀದರ್ ಜಿಲ್ಲೆ ವಿಶ್ವ ವಿಖ್ಯಾತವಾಗಿದೆ. ಹೀಗಾಗಿ ಕ್ಷೇತ್ರವನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿ ಪಡಿಸಬೇಕಾದರೆ ನಾಗರೀಕ ವಿಮಾನಯಾನ ಸೇವೆ ಅತ್ಯಗತ್ಯ. ಬಸವ ಕಲ್ಯಾಣದಲ್ಲಿ ಆಧುನಿಕ ಅನುಭವ ಮಂಟಪ ನಿರ್ಮಾಣವಾಗುತ್ತಿದ್ದು, ಭವಿಷ್ಯದಲ್ಲಿ ಬೀದರ್ ವಾಯುಯಾನಕ್ಕೆ ಹೆಚ್ಚಿನ ಬೇಡಿಕೆ ಬರಲಿದೆ. ಜನರ ಬೇಡಿಕೆಯ ಸಮಯಕ್ಕೆ ಅನುಗುಣವಾಗಿ ವಿಮಾನಯಾನ ಸೇವೆ ಕಲ್ಪಿಸಿದಲ್ಲಿ ವಿಮಾನಯಾನ ಪೂರೈಕೆ ಸಂಸ್ಥೆಗೂ ನಷ್ಟವಾಗುವುದಿಲ್ಲ. ಜನರಿಗೂ ಅನುಕೂಲವಾಗುತ್ತದೆ ಎನ್ನುತ್ತಾರೆ ವಿಮಾನ ನಿಲ್ದಾಣ ಪುನಾರಂಭಕ್ಕೆ ನಿರಂತರ ಪ್ರಯತ್ನ ಮಾಡುತ್ತಿರುವ ಸಚಿವ ಖಂಡ್ರೆ
ಬೀದರ್‌ನಲ್ಲಿ ಇರುವುದು ಭಾರತೀಯ ಸೇನೆ ಬಳಕೆಗೆ ಇರುವ ವಿಮಾನ ನಿಲ್ದಾಣ. ಹದಿನೈದು ವರ್ಷಗಳ ಹಿಂದೆ ಭಾರತೀಯ ಸೇನೆಗೆ ಮನವಿ ಸಲ್ಲಿಸಿ ಇಲ್ಲಿ ನಾಗರೀಕ ವಿಮಾನ ಬಳಕೆಗೂ ಕೋರಲಾಗಿತ್ತು. ಆಗಿನಿಂದಲೂ ವಿಮಾನ ಸೇವೆ ಇಲ್ಲಿ ಇದೆ. ಆರು ವರ್ಷದ ಹಿಂದೆ ಉಡಾನ್ ಅಡಿ ಬೀದರ್ ವಿಮಾನ ನಿಲ್ದಾಣ ಸೇರಿಸಿ ಅಭಿವೃದ್ದಿಪಡಿಸಲಾಗಿತ್ತು.
ಬೆಂಗಳೂರಿಗೆ ಇಲ್ಲಿಂದ ವಿಮಾನ ಸೇವೆಯೂ ಇತ್ತು. ಹತ್ತು ತಿಂಗಳ ಹಿಂದೆಯೇ ಸ್ಟಾರ್ ಏರ್‌ವೇಸ್ ವಿಮಾನ ಸೇವೆ ನಿಲ್ಲಿಸಿದ ನಂತರ ಬೀದರ್‌ಗೆ ವಿಮಾನ ಸೇವೆ ಇರಲಿಲ್ಲ. ಈ ಕುರಿತು ಚರ್ಚೆಗಳೂ ನಡೆದಿದ್ದರೂ ಉಪಯೋಗ ಆಗಿರಲಿಲ್ಲ. ಕೇಂದ್ರ ಸಚಿವ ರಾಮಮೋಹನ್ ನಾಯ್ಡು ಅವರನ್ನು ಸಚಿವ ಈಶ್ವರ ಖಂಡ್ರೆ, ಸಂಸದ ಸಾಗರ್ ಖಂಡ್ರೆ ಭೇಟಿ ಮಾಡಿ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ.
ವಿಭಾಗ