logo
ಕನ್ನಡ ಸುದ್ದಿ  /  ಕರ್ನಾಟಕ  /  ದೀಪಾವಳಿ ವೇಳೆ ಹೂವು, ಹಣ್ಣುಗಳ ದರ ನವರಾತ್ರಿಗಿಂತಲೂ ಹೆಚ್ಚಾಗಿದೆಯಾ? ಮಳೆ ಬಂದ ಕಾರಣ ಇಳಿಕೆಯಾಗಿದೆಯಾ? ಇಲ್ಲಿದೆ ವಿವರ

ದೀಪಾವಳಿ ವೇಳೆ ಹೂವು, ಹಣ್ಣುಗಳ ದರ ನವರಾತ್ರಿಗಿಂತಲೂ ಹೆಚ್ಚಾಗಿದೆಯಾ? ಮಳೆ ಬಂದ ಕಾರಣ ಇಳಿಕೆಯಾಗಿದೆಯಾ? ಇಲ್ಲಿದೆ ವಿವರ

Umesh Kumar S HT Kannada

Nov 01, 2024 11:12 AM IST

google News

ದೀಪಾವಳಿ ಹಬ್ಬ: ಹೂವು, ಹಣ್ಣುಗಳ ದರ ನವರಾತ್ರಿಗಿಂತಲೂ ಹೆಚ್ಚಾಗಿದೆಯಾ? ಮಳೆ ಬಂದ ಕಾರಣ ಇಳಿಕೆಯಾಗಿದೆಯಾ? (ಕಡತ ಚಿತ್ರ)

  • ದೀಪಾವಳಿ ಹಬ್ಬದ ಸಂಭ್ರಮ. ಹೂವು ಹಣ್ಣುಗಳ ಖರೀದಿಯೂ ಹೆಚ್ಚು. ಆದರೆ, ಹೂವು ಹಣ್ಣುಗಳ ದರ ನವರಾತ್ರಿಗಿಂತಲೂ ಹೆಚ್ಚಾಗಿದೆಯಾ ಹೇಗಿದೆ ಪರಿಸ್ಥಿತಿ. ಮಳೆ ಬೇರೆ ಬರುತ್ತಿದೆಯಲ್ಲ, ಬೇಡಿಕೆ ಕುಸಿದ ಕಾರಣ ದರವೂ ಕುಸಿದಿದೆಯಾ- ಇಲ್ಲಿದೆ ಆ ವಿವರ.

ದೀಪಾವಳಿ ಹಬ್ಬ: ಹೂವು, ಹಣ್ಣುಗಳ ದರ ನವರಾತ್ರಿಗಿಂತಲೂ ಹೆಚ್ಚಾಗಿದೆಯಾ? ಮಳೆ ಬಂದ ಕಾರಣ ಇಳಿಕೆಯಾಗಿದೆಯಾ? (ಕಡತ ಚಿತ್ರ)
ದೀಪಾವಳಿ ಹಬ್ಬ: ಹೂವು, ಹಣ್ಣುಗಳ ದರ ನವರಾತ್ರಿಗಿಂತಲೂ ಹೆಚ್ಚಾಗಿದೆಯಾ? ಮಳೆ ಬಂದ ಕಾರಣ ಇಳಿಕೆಯಾಗಿದೆಯಾ? (ಕಡತ ಚಿತ್ರ)

ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಬಹುತೇಕರಿಗೆ ಬೋನಸ್ ಸಿಕ್ಕಿದ್ದು, ಅಂಥವರ ಹಬ್ಬದ ಸಂಭ್ರಮ ಇಮ್ಮಡಿಯಾಗಿದೆ. ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಗುರುವಾರ ಬೆಳಗ್ಗೆಯಿಂದಲೇ ಖರೀದಿ ಭರಾಟೆ ಕಂಡುಬಂದಿತ್ತಾದರೂ ಮಳೆಯ ಕಾರಣ ಅನೇಕರು ಖರೀದಿಗೆ ಹಿಂದೇಟು ಹಾಕಿದ್ದರು. ನರಕ ಚತುರ್ದಶಿ ಹಿನ್ನೆಲೆಯಲ್ಲಿ ಬಹುತೇಕರು ತಮ್ಮ ಅಂಗಡಿ ಮಳಿಗೆಗಳಿಗೆ, ಕಾರ್ಖಾನೆಗಳಲ್ಲಿ ಯಂತ್ರಗಳಿಗೆ ಹಾಗೂ ವಾಹನಗಳಿಗೆ ಗುರುವಾರವೇ ಪೂಜೆ ಸಲ್ಲಿಸಿದರು. ಇನ್ನು ಶುಕ್ರವಾರ ದೀಪಾವಳಿ ಅಮಾವಾಸ್ಯೆ, ಲಕ್ಷ್ಮೀ ಪೂಜೆ ಇದೆ. ಶನಿವಾರ ಬಲಿಪಾಡ್ಯ ಹಬ್ಬದ ಕಾರಣ ನಗರದ ಮಾರುಕಟ್ಟೆಗಳಿಗೆ ರಾಶಿ ರಾಶಿ ಬೂದುಕುಂಬಳ, ನಿಂಬೆ ಹಣ್ಣು, ಬಾಳೆಕಂದುಗಳು ಆಗಮಿಸಿವೆ. ನವರಾತ್ರಿ ಹಬ್ಬದ ಸಂದರ್ಭದಲ್ಲಿ ಹೂವು, ಹಣ್ಣು, ತರಕಾರಿ ದರ ಏರಿಕೆಯಾಗಿತ್ತು. ಅದು ದೀಪಾವಳಿಗೂ ಮುಂದುವರಿಯಬಹುದು ಎಂಬ ನಿರೀಕ್ಷೆ ಇತ್ತು. ಆದರೆ ನಡುವೆ ಮಳೆ ಸುರಿಯಲಾರಂಭಿಸಿದ ಕಾರಣ ಹೂವು, ಹಣ್ಣುಗಳ ಬೇಡಿಕೆ ಕುಸಿಯಿತು. ಹೀಗಾಗಿ ಅವುಗಳ ದರವೂ ಕುಸಿದಿದೆ.

ಹೂವು, ಹಣ್ಣುಗಳ ದರ ಕುಸಿತ

ನಿರಂತರ ಮಳೆಯ ಕಾರಣ ಹಬ್ಬದ ಸಂಭ್ರಮ, ಸಡಗರ ಕಡಿಮೆಯಾಗಿದೆ. ಹೂವು, ಹಣ್ಣುಗಳ ಬೇಡಿಕೆಯೂ ಕುಸಿದೆ. ಹೀಗಾಗಿ ದೀಪಾವಳಿ ಹಬ್ಬದ ದಿನ ಹೂವು ಹಣ್ಣುಗಳ ದರ ಗಣನೀಯವಾಗಿ ಇಳಿಕೆಯಾಗಿದೆ. ಕನಕಾಂಬರ ಹೂವು 1000 - 1500 ರೂಪಾಯಿ, ಮಲ್ಲಿಗೆ 1000 ರೂಪಾಯಿ, ಸುಗಂಧ ರಾಜ 300 ರೂಪಾಯಿ, ಗುಲಾಬಿ 200 ರೂಪಾಯಿ, ಸೇವಂತಿಗೆ 160 -200 ರೂ., ಕೇಸರಿ ಚೆಂಡು ಹೂವು 120-160 ರೂ. ಹಳದಿ ಚೆಂಡು ಹೂವು 60 - 80 ರೂಪಾಯಿ ಇದ್ದ ದರ ಗುರುವಾರ ಸಂಜೆ ವೇಳೆಗೆ ಮಳೆಯ ಕಾರಣ ಪೂರ್ತಿ ಇಳಿದಿತ್ತು. ಸಾಮಾನ್ಯವಾಗಿ ನವರಾತ್ರಿಯ ಸಂದರ್ಭದಲ್ಲಿ ಇರುವಷ್ಟು ಹೂವು ಹಣ್ಣುಗಳ ಬೇಡಿಕೆ ದೀಪಾವಳಿಗೆ ಇರುವುದಿಲ್ಲ ಎಂದೂ ವ್ಯಾಪಾರಿಗಳು ಹೇಳುತ್ತಾರೆ.

ಆದಾಗ್ಯೂ, ದಾಳಿಂಬೆ, ಆಪಲ್, ಬಾಳೆಹಣ್ಣು ಮುಂತಾದ ಹಣ್ಣು ಹಂಪಲುಗಳ ದರ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಸ್ವಲ್ಪ ಏರಿಕೆಯಾಗಿದೆ. ಏಲಕ್ಕಿ ಬಾಳೆ ಕೆ.ಜಿ.ಗೆ 115 ರೂ. ಇದ್ದರೆ, ದಾಳಿಂಬ 150 -200 ರೂ., ಸೇಬು 150-170 ರೂ., ದ್ರಾಕ್ಷಿ 90 ರೂ., ಸಪೋಟ - 65 ರೂ., ಮೂಸಂಬಿ 50 ರೂ., ಕಿತ್ತಳೆ ಹಣ್ಣು 40-50 ರೂ. ಅನಾನಸ್ 60 ರೂ. ದರ ಚಾಲ್ತಿಯಲ್ಲಿದೆ. ಬೆಂಗಳೂರು ಗ್ರಾಮಾಂತರದ ಹೊಸಕೋಟೆ ಭಾಗದಲ್ಲಿ ಹಣ್ಣುಗಳ ದರ ಅನಾನಸ್ ಜೊತೆ 100 ರೂ. ಸೀತಾಫಲ 60 ರೂ. ಸಪೋಟ 70 ರೂ. ಬಾಳೆಹಣ್ಣು 80-100 ರೂಪಾಯಿ ಇದ್ದು, ತರಕಾರಿ ದರದಲ್ಲೂ ಏರಿಕೆಯಾಗಿದೆ.

ದೀಪಗಳಿಗೆ ಬೇಡಿಕೆ ಹೆಚ್ಚು, ಮಳೆ ಕಾರಣ ಪಟಾಕಿ ಬೇಡಿಕೆ ಕುಸಿತ

ಈ ಸಲ ದೀಪಾವಳಿಗೆ ಪೂಜೆಗೆ ಅಗತ್ಯವಾಗಿರುವ ವೀಳ್ಯದೆಲೆ ಅಡಿಕೆ, ಅರಿಶಿಣ ಕೊಂಬು, ಹಣತೆ ಬಾಗಿನ ಮೊರಕ್ಕೆ ಇತ್ಯಾದಿ ಸಾಮಗ್ರಿಗಳ ಬೆಲೆಯೂ ಭಾರಿ ಪ್ರಮಾಣದಲ್ಲಿ ಹೆಚ್ಚಳಗೊಂಡು, ಹಬ್ಬದ ಖುಷಿಯಲ್ಲಿ ಸಾಮಾನುಗಳನ್ನು ಕೊಳ್ಳಲು ಮಾರುಕಟ್ಟೆಗೆ ಬಂದವರಿಗೆ ದರಗಳು ಶಾಕ್ ನೀಡಿದೆ. ಪಟಾಕಿಗಳ ಬೆಲೆಯಂತೂ ದುಪಟ್ಟಾಗಿದೆ. ನಡುವೆ ಮಳೆ ಬಂದ ಕಾರಣ ಪಟಾಕಿಗಳ ಬೇಡಿಕೆ ಕಡಿಮೆಯಾಗಿದೆ. ಹಾಗಾಗಿ ಪಟಾಕಿ ಮಾರಾಟಗಾರರು ಕಡಿಮೆ ಬೆಲೆಗೆ ಪಟಾಕಿ ಮಾರಾಟ ಶುರುಮಾಡಿದರು.

ದೀಪಾವಳಿ ಸಂದರ್ಭದಲ್ಲಿ ಬಗೆಬಗೆ ವಿನ್ಯಾಸದ ದೀಪಗಳಿಗೆ ಹೆಚ್ಚಿನ ಬೇಡಿಕೆ ಇದೆ. ಮಾರುಕಟ್ಟೆಗಳಲ್ಲಿ ಬಣ್ಣ ಬಣ್ಣದ ಆಕರ್ಷಕ ವಿನ್ಯಾಸದ ಮಣ್ಣಿನ ಹಣತೆಗಳಿವೆ. ದೀಪಗಳ ಜತೆಗೆ ವಿವಿಧ ವಿನ್ಯಾಸ ಹಾಗೂ ಬಣ್ಣಗಳ ಆಕಾಶ ಬುಟ್ಟಿಗಳು ಕೂಡ ಗ್ರಾಹಕರನ್ನು ಸೆಳೆಯುತ್ತಿದ್ದು, 200 ರೂಪಾಯಿಯಿಂದ 500 ರೂಪಾಯಿ ತನಕ ಮಾರಾಟವಾಗುತ್ತಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ