ಭಾರತದ ಮೊದಲ ಬುಲೆಟ್ ರೈಲು ಉತ್ಪಾದಿಸುವ ಅವಕಾಶ ನಮ್ಮ ಬೆಂಗಳೂರಿನ ಈ ಕಂಪನಿಗೆ ಸಿಕ್ತು ನೋಡಿ; 867 ಕೋಟಿ ರೂ ಡೀಲ್
Oct 16, 2024 12:10 PM IST
ಭಾರತದ ಮೊದಲ ಬುಲೆಟ್ ರೈಲು ಉತ್ಪಾದಿಸುವ ಅವಕಾಶ ನಮ್ಮ ಬೆಂಗಳೂರಿನ ಈ ಕಂಪನಿಗೆ ಸಿಕ್ಕಿದೆ. ಇದು 867 ಕೋಟಿ ರೂ. ಡೀಲ್ ಆಗಿದ್ದು, ಬಿಇಎಂಎಲ್ ಈ ರೈಲುಗಳನ್ನು ಉತ್ಪಾದಿಸಿಕೊಡಲಿದೆ. (ಸಾಂಕೇತಿಕ ಚಿತ್ರ)
ಭಾರತದ ರೈಲ್ವೆ ಕ್ಷೇತ್ರದಲ್ಲಿ ಹೈಸ್ಪೀಡ್ ರೈಲು ಅಥವಾ ಬುಲೆಟ್ ರೈಲು ಸಂಚಾರ ಒಂದು ಐತಿಹಾಸಿಕ ಮೈಲಿಗಲ್ಲು. ಇದನ್ನು ಈಡೇರಿಸುವ ಕೆಲಸ ಪ್ರಗತಿಯಲ್ಲಿದೆ. ಹಾಗೆ, ಭಾರತದ ಮೊದಲ ಬುಲೆಟ್ ರೈಲು ಉತ್ಪಾದಿಸುವ ಅವಕಾಶ ನಮ್ಮ ಬೆಂಗಳೂರಿನ ಬಿಇಎಂಎಲ್‌ಗೆ ಸಿಕ್ಕಿದೆ. ಇದು 867 ಕೋಟಿ ರೂಪಾಯಿ ಟೆಂಡರ್ ಆಗಿದ್ದು, ಉಳಿದ ವಿವರ ಈ ವರದಿಯಲ್ಲಿದೆ.
ಬೆಂಗಳೂರು: ಭಾರತದ ಮೂಲಸೌಕರ್ಯ ವೃದ್ಧಿ ಗಮನಿಸಿದರೆ ಹೊಸ ಹೊಸ ಐತಿಹಾಸಿಕ ಮೈಲಿಗಲ್ಲುಗಳು ದಾಖಲಾಗುತ್ತಿವೆ. ಈ ಪೈಕಿ ರೈಲ್ವೆ ಕ್ಷೇತ್ರದಲ್ಲಿ ಬುಲೆಟ್ ರೈಲು ಸಂಚಾರ ಬಹುನಿರೀಕ್ಷಿತ ಮತ್ತು ಮಹತ್ವಾಕಾಂಕ್ಷೆಯ ಯೋಜನೆ. ಇದರಲ್ಲಿ ಭಾಗಿಯಾಗುವ ಅವಕಾಶ ನಮ್ಮ ಬೆಂಗಳೂರಿನಲ್ಲಿರುವ ಸರ್ಕಾರಿ ಸ್ವಾಮ್ಯದ ಕಂಪನಿಗೆ ಸಿಕ್ಕಿದೆ. ಹೌದು, ಭಾರತದ ಮೊದಲ ಬುಲೆಟ್ ರೈಲು ಉತ್ಪಾದನೆಯ ಟೆಂಡರ್ ಅನ್ನು ಬೆಂಗಳೂರು ಮೂಲದ ಬಿಇಎಂಎಲ್ (ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್) ಪಡೆದುಕೊಂಡಿದೆ. ಬುಲೆಟ್ ರೈಲು ವಿನ್ಯಾಸ, ಉತ್ಪಾದನೆಯ ಹೊಣೆಗಾರಿಕೆ ಬಿಇಎಂಎಲ್ ಹೆಗಲೇರಿದೆ. ಎರಡು ಬುಲೆಟ್ ರೈಲು ಅಥವಾ ಹೈಸ್ಪೀಡ್ ರೈಲು ಉತ್ಪಾದನೆಯ ಗುತ್ತಿಗೆಯನ್ನು ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಬಿಇಎಂಎಲ್‌ಗೆ ನೀಡಿದೆ ಎಂದು ಕಂಪನಿ ಮಂಗಳವಾರ (ಅಕ್ಟೋಬರ್ 15) ಸ್ಟಾಕ್ ಎಕ್ಸ್‌ಚೇಂಜ್‌ಗೆ ಸಲ್ಲಿಸಿದ ಕಡತದಲ್ಲಿ ಮಾಹಿತಿ ನೀಡಿದೆ.
ಬೆಂಗಳೂರು ಮೂಲದ ಬಿಇಎಂಎಲ್‌ಗೆ ಬುಲೆಟ್ ರೈಲು ನಿರ್ಮಾಣದ 867 ಕೋಟಿ ರೂ. ಡೀಲ್
ಎರಡು ಹೈಸ್ಪೀಡ್ ರೈಲು (ಬುಲೆಟ್ ರೈಲು) ನಿರ್ಮಾಣದ ಹೊಣೆಗಾರಿಕೆ ಈಗ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಹೆಗಲೇರಿದೆ. ಇದರಂತೆ, ಎರಡು ರೈಲುಗಳು ಎಂದರೆ ಅದರಲ್ಲಿ ಒಂದೊಂದರಲ್ಲೂ 8 ಬೋಗಿಗಳಿರುತ್ತವೆ ಎಂದು ಈ ಗುತ್ತಿಗೆ ಕುರಿತಾದ ವರದಿಯಲ್ಲಿ ದ ಇಂಡಿಯನ್ ಎಕ್ಸ್‌ಪ್ರೆಸ್ ವಿವರಿಸಿದೆ.
ಕಂಪನಿಯು ಸ್ಟಾಕ್ ಎಕ್ಸ್‌ಚೇಂಜ್‌ಗೆ ನೀಡಿದ ಮಾಹಿತಿ ಪ್ರಕಾರ, ಪ್ರತಿ ಬೋಗಿಯ ನಿರ್ಮಾಣಕ್ಕೆ 27.86 ಕೋಟಿ ರೂಪಾಯಿ ಅಂದಾಜಿಸಲಾಗಿದೆ. ಒಟ್ಟು ಗುತ್ತಿಗೆಯ ಮೌಲ್ಯ 866.87 ಕೋಟಿ ರೂಪಾಯಿ, ಇದರಲ್ಲಿ ವಿನ್ಯಾಸದ ವೆಚ್ಚ. ಒಂದು ಸಲದ ಅಭಿವೃದ್ಧಿ ವೆಚ್ಚ ಮತ್ತು ಇತರೆ ವೆಚ್ಚಗಳು ಒಳಗೊಂಡಿವೆ. ಈ ರೈಲುಗಳನ್ನು ಭಾರತದ ಭವಿಷ್ಯದ ಎಲ್ಲ ಹೈಸ್ಪೀಡ್ ಪ್ರಾಜೆಕ್ಟ್‌ಗಳಿಗೆ ಬಳಸಲಾಗುತ್ತದೆ ಎಂದು ವಿವರಿಸಿದೆ.
ಈ ಯೋಜನೆಯು ಭಾರತದ ಹೈಸ್ಪೀಡ್ ರೈಲು ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ. ಗಂಟೆಗೆ 280 ಕಿಮೀ ಪರೀಕ್ಷಾ ವೇಗದೊಂದಿಗೆ ಮೊದಲ ಪರೀಕ್ಷೆಗೆ ಸ್ಥಳೀಯವಾಗಿ ವಿನ್ಯಾಸಗೊಳಿಸಿ, ತಯಾರಿಸಿದ ರೈಲು ಸೆಟ್‌ಗಳನ್ನು ಬಳಸಲಾಗುತ್ತದೆ ಎಂದು ಬಿಇಎಂಎಲ್ ಹೇಳಿದೆ.
ಬೆಂಗಳೂರಿನಲ್ಲಿದೆ ಬಿಇಎಂಎಲ್ ಕೇಂದ್ರ ಕಚೇರಿ
ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಕಂಪನಿಯು ಭಾರತದ ರಕ್ಷಣಾ ಸಚಿವಾಲಯದ ಅಧೀನ ಇರುವ ಎ ದರ್ಜೆಯ ಕಂಪನಿ. ಇದು ಭಾರತದ ರಕ್ಷಣಾ ಕ್ಷೇತ್ರ, ಏರೋಸ್ಪೇಸ್, ರೈಲು ಮತ್ತು ಮೆಟ್ರೋ, ಇಂಧನ, ಗಣಿ ಮತ್ತು ಮೂಲಸೌಕರ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ. ಕಂಪನಿಯ ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ, ಕಂಪನಿಯ ವಾರ್ಷಿಕ ವಹಿವಾಟು 1965ರಲ್ಲಿ 5 ಕೋಟಿ ರೂಪಾಯಿ ಇತ್ತು ಈಗ ಇದು 4,300 ಕೋಟಿ ರೂಪಾಯಿಗೂ ಅಧಿಕ ಇದೆ.
ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್‌ನ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದೆ. ಬೆಂಗಳೂರು, ಕೋಲಾರ ಚಿನ್ನದ ಗಣಿ, ಮೈಸೂರು, ಪಾಲಕ್ಕಾಡ್‌ಗಳಲ್ಲಿ ಇದರ ಉತ್ಪಾದನಾ ಘಟಕಗಳಿವೆ. ಸಂಶೋಧನೆ ಮತ್ತು ಅಭಿವೃದ್ಧಿ ಘಟಕ ಮತ್ತು ರಾಷ್ಟ್ರವ್ಯಾಪಿ ಮಾರಾಟ ಮತ್ತು ಸೇವಾ ಜಾಲ ಇದ್ದು ಉತ್ತಮ ವಹಿವಾಟು ನಡೆಸುತ್ತಿದೆ.
ಭಾರತದ ಬುಲೆಟ್ ರೈಲು ಉತ್ಪಾದನೆ ಸಂಬಂಧ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಸೆಪ್ಟೆಂಬರ್ 5 ರಂದು ಟೆಂಡರ್ ಕರೆದಿತ್ತು. ಗಂಟೆಗೆ ಗರಿಷ್ಠ 280 ಕಿ.ಮೀ ವೇಗ ಮತ್ತು ಕಾರ್ಯಾಚರಣೆ ವೇಳೆ ಗಂಟೆಗೆ 249 ಕಿ.ಮೀ ವೇಗದ ರೈಲು ಉತ್ಪಾದನೆ ಮತ್ತು ವಿನ್ಯಾಸಗೊಳಿಸುವ ಕೆಲಸದ ಟೆಂಡರ್ ಇದಾಗಿತ್ತು. ಈ ಟೆಂಡರ್ ಈಗ ಬಿಇಎಂಎಲ್‌ಗೆ ಲಭಿಸಿದೆ.