logo
ಕನ್ನಡ ಸುದ್ದಿ  /  ಕರ್ನಾಟಕ  /  ಆಯುಧ ಪೂಜೆ ಹಿನ್ನೆಲೆ ಹೂವಿನ ಬೆಲೆ ಇನ್ನಷ್ಟು ಏರಿಕೆ; 2500 ರೂಪಾಯಿ ಆಸುಪಾಸಲ್ಲಿ ಕನಕಾಂಬರ, ಮಲ್ಲಿಗೆ, ಗುಲಾಬಿಯೂ ದುಬಾರಿ

ಆಯುಧ ಪೂಜೆ ಹಿನ್ನೆಲೆ ಹೂವಿನ ಬೆಲೆ ಇನ್ನಷ್ಟು ಏರಿಕೆ; 2500 ರೂಪಾಯಿ ಆಸುಪಾಸಲ್ಲಿ ಕನಕಾಂಬರ, ಮಲ್ಲಿಗೆ, ಗುಲಾಬಿಯೂ ದುಬಾರಿ

Umesh Kumar S HT Kannada

Oct 11, 2024 08:53 AM IST

google News

ಹೂವಿನ ಬೆಲೆ ಇನ್ನಷ್ಟು ಏರಿಕೆ; 2500 ರೂಪಾಯಿ ಆಸುಪಾಸಲ್ಲಿ ಕನಕಾಂಬರ ಇದ್ದು, ಮಲ್ಲಿಗೆ, ಗುಲಾಬಿಯೂ ದುಬಾರಿಯಾಗಿದೆ, (ಸಾಂಕೇತಿಕ ಚಿತ್ರ)

  • ದೀಪಾವಳಿ ತನಕವೂ ದರ ಏರಿಕೆ ಇರಬಹುದು ಎಂದು ಹೇಳಲಾಗುತ್ತಿದ್ದು, ಆಯುಧ ಪೂಜೆ ಹಿನ್ನೆಲೆಯಲ್ಲಿ ಹೂವಿನ ಬೆಲೆ ಇನ್ನಷ್ಟು ಏರಿಕೆಯಾಗಿದೆ. 2500 ರೂಪಾಯಿ ಆಸುಪಾಸಲ್ಲಿ ಕನಕಾಂಬರ ಇದ್ದು, ಮಲ್ಲಿಗೆ, ಗುಲಾಬಿಯೂ ದುಬಾರಿಯಾಗಿದೆ. 

ಹೂವಿನ ಬೆಲೆ ಇನ್ನಷ್ಟು ಏರಿಕೆ; 2500 ರೂಪಾಯಿ ಆಸುಪಾಸಲ್ಲಿ ಕನಕಾಂಬರ ಇದ್ದು, ಮಲ್ಲಿಗೆ, ಗುಲಾಬಿಯೂ ದುಬಾರಿಯಾಗಿದೆ, (ಸಾಂಕೇತಿಕ ಚಿತ್ರ)
ಹೂವಿನ ಬೆಲೆ ಇನ್ನಷ್ಟು ಏರಿಕೆ; 2500 ರೂಪಾಯಿ ಆಸುಪಾಸಲ್ಲಿ ಕನಕಾಂಬರ ಇದ್ದು, ಮಲ್ಲಿಗೆ, ಗುಲಾಬಿಯೂ ದುಬಾರಿಯಾಗಿದೆ, (ಸಾಂಕೇತಿಕ ಚಿತ್ರ) (HTK)

ಬೆಂಗಳೂರು: ಆಯುಧ ಪೂಜೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹೂವು, ಹಣ್ಣು, ಬೂದುಗುಂಬಳದ ರೇಟ್ ನಿರೀಕ್ಷೆಯಂತೆಯೇ ಹೆಚ್ಚಾಗಿದೆ. ಈ ದರ ಏರಿಕೆಯ ನಡುವೆಯೂ ಇಂದು (ಅಕ್ಟೋಬರ್ 11) ಕೊನೇ ಕ್ಷಣದ ಖರೀದಿ ಎಂದು ಕೆಆರ್‌ ಮಾರುಕಟ್ಟೆಯಲ್ಲಿ ಬೆಳ್ಳಂಬೆಳಗ್ಗೆಯೇ ಜನದಟ್ಟಣೆ ಕಂಡುಬಂತು. ಅನೇಕರು ಆಯುಧ ಪೂಜೆಗೆ ಹೂವು, ಹಣ್ಣು ಖರೀದಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಈ ತಿಂಗಳ ಕೊನೆಗೆ ದೀಪಾವಳಿಯೂ ಇದ್ದು, ಹೂವು, ಹಣ್ಣುಗಳ ಪೂರೈಕೆ ಕಡಿಮೆ ಕಾರಣ ದರ ಇನ್ನಷ್ಟು ಏರಬಹುದು ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಕನಕಾಂಬರ, ಗುಲಾಬಿ, ಚೆಂಡು ಹೂವು, ಸೇವಂತಿಗೆ ಹೂವುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ಕಳೆದ ವಾರಕ್ಕೆ ಹೋಲಿಸಿದರೆ ಈಗ ದರ ಮೂರು ಪಟ್ಟು ಹೆಚ್ಚಾಗಿದೆ. ಇಂದು ಮತ್ತು ನಾಳೆ ಈ ದರ ಇನ್ನೂ ಏರಬಹುದು ಎಂದು ಅಂದಾಜಿಸಲಾಗಿದೆ.

ಆಯುಧ ಪೂಜೆ, ವಿಜಯದಶಮಿಗೆ ಹೂವು, ಹಣ್ಣು ಖರೀದಿ ಭರಾಟೆ

ಬೆಂಗಳೂರಿನ ಕೆ.ಆರ್.ಮಾರುಕಟ್ಟೆ, ಯಶವಂತಪುರ, ಬಸವನಗುಡಿ ಮಾರುಕಟ್ಟೆ ಪ್ರದೇಶಗಳು ಗ್ರಾಹಕರಿಂದ ತುಂಬಿ ತುಳುಕುತ್ತಿವೆ. ತರಕಾರಿ, ದಿನಸಿ, ಅಲಂಕಾರಿಕ ವಸ್ತು, ಪೂಜಾ ಸಾಮಗ್ರಿ, ಆಯುಧ ಪೂಜೆಗೆ ಅಗತ್ಯ ಬೇಕಾದ ಬೂದುಗುಂಬಳ, ಬಾಳೆಕಂದು, ವೀಳ್ಯದೆಲೆ, ತೆಂಗಿನಕಾಯಿ ಖರೀದಿ ಭರಾಟೆ ಜೋರಾಗಿದೆ.

ಆಯುಧ ಪೂಜೆಯ ದಿನ ಮನೆ, ವಾಹನ, ಅಂಗಡಿ, ಕಾರ್ಖಾನೆ ಪೂಜೆ ವೇಳೆ ಒಡೆಯುವ ಬೂದುಗುಂಬಳದ ದರ ಮಂಗಳವಾರ ಕಿಲೋಗೆ 30 ರೂಪಾಯಿಯಿಂದ 40 ರೂಪಾಯಿ ಇತ್ತು. ಇಂದು ಈ ದರ 60 ರೂಪಾಯಿ ಮೇಲಿದೆ. ಅತಿವೃಷ್ಟಿ, ಅನಾವೃಷ್ಟಿಕಾರಣಕ್ಕೆ ಕಳೆದ ವರ್ಷದ ಹಬ್ಬಕ್ಕಿಂತ ಈ ಬಾರಿ ಬೆಲೆ ಹೆಚ್ಚಾಗಿದೆ. ಮಾರುಕಟ್ಟೆಗಳಲ್ಲಷ್ಟೇ ಅಲ್ಲ, ತಳ್ಳುಗಾಡಿಗಳ ಮೂಲಕವೂ ಗಲ್ಲಿಗಲ್ಲಿಯಲ್ಲಿ ಹೂವು, ಬೂದುಗುಂಬಳ ಮಾರಾಟ ನಡೆದಿದೆ.

ಆಯುಧಪೂಜೆ ವಿಜಯದಶಮಿಗಾಗಿ ಕಚೇರಿಗಳಿಗೆ ರಜೆ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವೆಡೆ ಗುರುವಾರವೇ ಅಂದರೆ ನಿನ್ನೆಯೇ ಆಯುಧ ಪೂಜೆ ನೆರವೇರಿದೆ. ನಗರದ ಹಲವೆಡೆ ಸಾರ್ವಜನಿಕ ದುರ್ಗಾ ಪೂಜೆ ನಡೆಯುತ್ತಿದ್ದು, ದುರ್ಗಾ ಪಂಡಾಲ್‌ಗಳನ್ನು ಸ್ಥಾಪಿಸಲಾಗಿದೆ. ಇದಲ್ಲದೆ, ಮನೆ ಮನೆಗಳಲ್ಲಿ ಬೊಂಬೆ ಪ್ರದರ್ಶನ, ಪೂಜೆ ನಡೆಯುತ್ತಿದೆ.

ಎಷ್ಟಾಗಿದೆ ಹೂವು ಹಣ್ಣು ದರ

ಬೆಂಗಳೂರಿನಲ್ಲಿ ಆಯುಧ ಪೂಜೆ, ವಿಜಯದಶಮಿ ಹಿನ್ನೆಲೆಯಲ್ಲಿ ಕನಕಾಂಬರ ಹೂವಿನ ಬೆಲೆ 2000 ರೂಪಾಯಿ ಇದ್ದದ್ದು 2500 ರೂಪಾಯಿಯ ಗಡಿ ದಾಟಿದೆ. ಇನ್ನು ಮಲ್ಲಿಗೆ 400 ರೂಪಾಯಿ ಇದ್ದದ್ದು 800 ರೂಪಾಯಿ- 1000 ರೂಪಾಯಿ ತಲುಪಿದೆ. ಗುಲಾಬಿ ಕೂಡ 500 ರೂಪಾಯಿಗೆ ಏರಿದೆ. ಬೂದುಗುಂಬಳ ಕಿಲೋಗೆ 50 ರಿಂದ 60 ರೂಪಾಯಿ ತನಕ ಹೋಗಿದೆ. ಗಾತ್ರದ ಮೇಲೆಯೂ ದರ ನಿಗದಿಯಾಗಿದ್ದು 100 ರೂಪಾಯಿಯಿಂದ 250 ರೂಪಾಯಿ ತನಕ ಮಾರಾಟವಾಗುತ್ತಿದೆ. ಬೆಂಗಳೂರಿನ ಮಾರುಕಟ್ಟೆಗೆ ಬೂದುಗುಂಬಳ ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಿಂದ ಪೂರೈಕೆಯಾಗಿದೆ. ಇನ್ನು ಹಬ್ಬದ ಪೂಜೆಗೆ ಬೇಕಾದ ಬಾಳೆಕಂದು 80 ರೂಪಾಯಿ, ನಿಂಬೆಹಣ್ಣು ಒಂದಕ್ಕೆ 10 ರೂಪಾಯಿ, ವೀಳ್ಯದೆಲೆ 100ಕ್ಕೆ 120 ರೂಪಾಯಿ, ತೋರಣಕ್ಕೆ ಬೇಕಾದ ಮಾವಿನ ಎಲೆ ದರ 50 ರೂಪಾಯಿ ಆಗಿದೆ. ಅದೇ ರೀತಿ ಹಣ್ಣುಗಳ ವಿಚಾರಕ್ಕೆ ಬಂದರೆ ಏಲಕ್ಕಿ ಬಾಳೆ ಹಣ್ಣು 150 ರೂಪಾಯಿ ಆಸುಪಾಸಲ್ಲಿದೆ. ಸೇಬು ಹಣ್ಣು ಸಾಧಾರಣದ್ದು 150 ರೂಪಾಯಿ ಇದ್ದು, 250, 300 ರೂಪಾಯಿ ತನಕವೂ ಇದೆ. ದಾಳಿಂಬೆ 150 ರೂಪಾಯಿ ತನಕ ಇದೆ. ದ್ರಾಕ್ಷಿ 150 ರೂಪಾಯಿ ತನಕ, ಸೀತಾಫಲ 120 ರೂಪಾಯಿ ತನಕ ಇದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ