ಬೆಂಗಳೂರು: ಇಷ್ಟು ದುಡ್ ಕೊಟ್ಟ ತರಕಾರಿ ಗಂಟಲಲ್ಲಿ ಇಳೀಬಹುದಾ; ಮನೆ ನಡೆಸೋದು ಅಂದುಕೊಂಡಷ್ಟು ಸುಲಭ ಅಲ್ಲ ಅಂತಿದೆ ಈ ಸಮೀಕ್ಷೆ
Oct 22, 2024 03:54 PM IST
ಬೆಂಗಳೂರಲ್ಲಿ ಸೊಪ್ಪು ತರಕಾರಿ ಬೆಲೆ ಹೆಚ್ಚಳದ ಕಾರಣ, ಅನೇಕ ಕುಟುಂಬಗಳು ತರಕಾರಿ ಬಳಕೆ ಕಡಿಮೆ ಮಾಡಿವೆ ಎಂದು ಸಮೀಕ್ಷೆ ತಿಳಿಸಿದೆ. (ಸಾಂಕೇತಿಕ ಚಿತ್ರ)
ಸೊಪ್ಪು ತರಕಾರಿ ಬೆಲೆ ಗಗನಮುಖಿಯಾಗಿರುವುದು ಎಲ್ಲರಿಗೂ ತಿಳಿದೇ ಇದೆ. ಇದೇ ವಿಷಯ ಇಟ್ಟುಕೊಂಡು ಲೋಕಲ್‌ಸರ್ಕಲ್ಸ್ ನಡೆಸಿದ ಸಮೀಕ್ಷೆ ಬೆಂಗಳೂರಲ್ಲಿ ಮನೆ ನಡೆಸೋದು ಅಂದುಕೊಂಡಷ್ಟು ಸುಲಭ ಅಲ್ಲ ಎಂಬುದನ್ನು ಬಹಿರಂಗಪಡಿಸಿದೆ. ಅದರ ವಿವರ ಇಲ್ಲಿದೆ.
ಬೆಂಗಳೂರು: “ತರಕಾರಿ ಬೆಲೆ ಈ ರೀತಿ ಏರ್ತಾ ಇದ್ದರೆ, ಇಷ್ಟು ದುಡ್ ಕೊಟ್ಟು ಕೊಂಡ ತರಕಾರಿ ಗಂಟಲಲ್ಲಿ ಇಳೀಬಹುದಾ!?” - ಇದು ಬೆಂಗಳೂರಲ್ಲಿರುವ ಬಹುತೇಕ ಬಡ ಮತ್ತು ಕೆಳಮಧ್ಯಮ ಕುಟುಂಬದಲ್ಲಿ ಸದ್ಯ ಕೇಳಿಬರುವ ಮಾತು. ತರಕಾರಿ ಬೆಲೆ ಏರಿದಂತೆ, ಯಾವ ತರಕಾರಿ ಕಡಿಮೆ ಬೆಲೆಗೆ ಸಿಗುತ್ತೆ ಅಂತ ನೋಡಿ ಬದುಕು ತೂಗಿಸಿಕೊಂಡು ಮನೆ ನಡೆಸುವ ಕುಟುಂಬಗಳೇ ನಮ್ಮ ಬೆಂಗಳೂರಲ್ಲಿ ಹೆಚ್ಚು. ಇದಕ್ಕೆ ಪೂರಕವಾಗಿ ಕಳೆದ ಕೆಲವು ತಿಂಗಳಿಂದ ಗಗನಮುಖಿಯಾಗಿರುವ ಬೆಲೆಗಳ ಕಾರಣಕ್ಕೆ ಬೆಂಗಳೂರಿನ ಶೇಕಡ 19 ಕುಟುಂಬಗಳು ಅಗತ್ಯ ಹಸಿರು ತರಕಾರಿಗಳನ್ನಷ್ಟೆ ಖರೀದಿಸತೊಡಗಿವೆ. ಅಲ್ಲದೆ ತರಕಾರಿ ಬಳಕೆಯನ್ನೂ ಕಡಿಮೆ ಮಾಡಿವೆ. ಆದರೆ, ಶೇಕಡ 60 ಕುಟುಂಬ ಇನ್ನೂ ತರಕಾರಿ ಖರೀದಿಯಲ್ಲಿ ವ್ಯತ್ಯಾಸ ಮಾಡಿಕೊಂಡಿಲ್ಲ ಎಂಬ ಅಂಶ ಇತ್ತೀಚಿನ ಸಮೀಕ್ಷೆ ಒಂದರಲ್ಲಿ ಬಹಿರಂಗವಾಗಿದೆ. ಈ ಸಮೀಕ್ಷೆ ಪ್ರಕಾರ, ಬೆಂಗಳೂರಿನ ಶೇಕಡ 59 ಜನ ಟೊಮೆಟೊ, ಆಲೂಗಡ್ಡೆ, ಈರುಳ್ಳಿ ದರ ಹೆಚ್ಚಾದರೂ ಖರೀದಿಸುತ್ತಿರುವುದಾಗಿ ಹೇಳಿರುವುದು ಗಮನಸೆಳೆದಿದೆ.
ಬೆಂಗಳೂರಲ್ಲಿ ತರಕಾರಿ ಬೆಲೆ; ಲೋಕಲ್‌ಸರ್ಕಲ್ಸ್ ಸಮೀಕ್ಷೆ
ಇಷ್ಟೆಲ್ಲ ದುಡ್ ಕೊಟ್ಟು ತರಕಾರಿ ಖರೀದಿಸುತ್ತ ಮನೆ ನಡೆಸೋದು ಅಂದುಕೊಂಡಷ್ಟು ಸುಲಭದ ಕೆಲಸವಲ್ಲ ಎಂಬುದನ್ನು ಜನ ಹೇಳತೊಡಗಿರುವುದು ಕಮ್ಯೂನಿಟಿ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರಂ ಲೋಕಲ್‌ಸರ್ಕಲ್ಸ್ ಸಮೀಕ್ಷೆ ಬಹಿರಂಗಪಡಿಸಿದೆ. ಮಾರುಕಟ್ಟೆಗೆ ಅಗತ್ಯ ತರಕಾರಿ ಪೂರೈಕೆ ಆಗದೇ ಇರುವುದು ಮತ್ತು ಬೆಳೆ ಹಾನಿಯೇ ತರಕಾರಿ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ. ಈರುಳ್ಳಿ, ಟೊಮ್ಯಾಟೊ ಮತ್ತು ಸೊಪ್ಪು ತರಕಾರಿಗಳು ಸಗಟು ಮಾರುಕಟ್ಟೆಗಳನ್ನು ಸರಿಯಾಗಿ ತಲುಪದ ಕಾರಣ ನಗರದಾದ್ಯಂತ ಬೆಲೆಗಳು ಸಾಮಾನ್ಯಕ್ಕಿಂತ ಹೆಚ್ಚಾಗಿವೆ. ತರಕಾರಿ ಬೆಲೆ ಏರಿಕೆಯು ಬಹುತೇಕ ಮನೆಗಳಲ್ಲಿ ತರಕಾರಿ ಬಳಕೆಯನ್ನು ಕಡಿಮೆ ಮಾಡುವಂತೆ ಮಾಡಿದೆ ಎಂದು ವರದಿ ವಿವರಿಸಿದೆ.
ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆಯನ್ನು ಕಿಲೋಗೆ ಎಷ್ಟು ರೂಪಾಯಿ ಕೊಟ್ಟು ಖರೀದಿಸಲಾಗುತ್ತಿದೆ ಎಂದು ಗ್ರಾಹಕರನ್ನು ಕೇಳಲಾಗಿತ್ತು. ಒಟ್ಟು 1528 ಗ್ರಾಹಕರು ಪ್ರತಿಕ್ರಿಯಿಸಿದ್ದು, ಈ ಪೈಕಿ ಶೇಕಡ 59 ಜನ ಟೊಮೆಟೋವನ್ನು ಕಿಲೋಗೆ 75 ರೂಪಾಯಿಗೂ ಹೆಚ್ಚು ಹಣ ಕೊಟ್ಟು ಖರೀದಿಸಿದರೆ, ಆಲೂಗಡ್ಡೆಗೆ 40 ರೂಪಾಯಿ ಮತ್ತು ಹೆಚ್ಚು, ಈರುಳ್ಳಿಗೆ 50 ರೂಪಾಯಿ ಮತ್ತು ಹೆಚ್ಚು ಹಣ ಕೊಟ್ಟು ಖರೀದಿಸುತ್ತಿರುವುದಾಗಿ ಹೇಳಿದ್ದಾರೆ. ಇದೇ ರೀತಿ, ಶೇಕಡ 34 ಜನ ಟೊಮೆಟೊವನ್ನು 50- 75 ರೂಪಾಯಿ, ಆಲೂಗಡ್ಡೆಯನ್ನು 30 -40 ರೂಪಾಯಿ, ಈರುಳ್ಳಿಯನ್ನು 40- 50 ರೂಪಾಯಿಗೆ ಖರೀದಿಸುತ್ತಿರುವುದಾಗಿ ಹೇಳಿದ್ದಾರೆ. ಶೇಕಡ 4 ಜನ ಟೊಮೆಟೊವನ್ನು 50 ರೂಪಾಯಿಗಿಂತ ಕಡಿಮೆ, ಆಲೂಗಡ್ಡೆಯನ್ನು 30 ರೂ ಗಿಂತ ಕಡಿಮೆ, ಈರುಳ್ಳಿಯನ್ನು 40 ರೂ.ಗಿಂತ ಕಡಿಮೆ ದರದಲ್ಲಿ ಖರೀದಿಸುವುದಾಗಿ ತಿಳಿಸಿದ್ದಾರೆ. ಇನ್ನು ಶೇಕಡ 3 ಜನ ಸ್ಪಷ್ಟ ಉತ್ತರ ನೀಡಿಲ್ಲ ಎಂದು ಲೋಕಲ್‌ಸರ್ಕಲ್ಸ್ ವರದಿ ವಿವರಿಸಿದೆ.
ಬಜೆಟ್ ನೋಡಿಕೊಂಡು ಖರ್ಚು ಮಾಡುವವರು
1,466 ಗ್ರಾಹಕರು ಅಗತ್ಯ ವಸ್ತು ಮತ್ತು ಸೊಪ್ಪು ತರಕಾರಿಗಳನ್ನು ಹೆಚ್ಚು ಹಣ ಕೊಟ್ಟು ಖರೀದಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಪೈಕಿ ಶೇಕಡ 19 ಜನ ತಾವು ಬಜೆಟ್ ಮಿತಿಯಲ್ಲೇ ಖರ್ಚು ಮಾಡುವುದಾಗಿ ಹೇಳಿದ್ಧಾರೆ. ಶೇಕಡ 60 ಜನ ಹೆಚ್ಚು ಹಣ ಕೊಟ್ಟು ಬಳಕೆ ಮಿತಿಯನ್ನು ಉಳಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಇನ್ನುಳಿದಂತೆ ಶೇಕಡ 21 ಜನ ಕಡಿಮೆ ಹಣಕ್ಕೆ ಹೆಚ್ಚು ತರಕಾರಿ ಖರೀದಿಸಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ. ಹೆಚ್ಚು ಹಣ ಕೊಟ್ಟು ಸೊಪ್ಪು ತರಕಾರಿ ಖರೀದಿಸುವುದು ಕಷ್ಟ. ಹೀಗಾಗಿ ಬಳಕೆ ಕಡಿಮೆ ಮಾಡಿರುವುದಾಗಿ ಹಲವರು ತಿಳಿಸಿದ್ದಾರೆ ಎಂದು ವರದಿ ವಿವರಿಸಿದೆ.