logo
ಕನ್ನಡ ಸುದ್ದಿ  /  ಕರ್ನಾಟಕ  /  ಕಡಿಮೆ ಬೆಲೆಯಲ್ಲಿ ದೆಹಲಿಗರಿಗೂ ನಂದಿನಿ ಹಾಲು; ಮಾರುಕಟ್ಟೆ ವಿಸ್ತರಣೆ ಯೋಜನೆ ಇದೆ ಎಂದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ

ಕಡಿಮೆ ಬೆಲೆಯಲ್ಲಿ ದೆಹಲಿಗರಿಗೂ ನಂದಿನಿ ಹಾಲು; ಮಾರುಕಟ್ಟೆ ವಿಸ್ತರಣೆ ಯೋಜನೆ ಇದೆ ಎಂದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ

Umesh Kumar S HT Kannada

Nov 22, 2024 10:45 AM IST

google News

ಕಡಿಮೆ ಬೆಲೆಯಲ್ಲಿ ದೆಹಲಿಗರಿಗೂ ನಂದಿನಿ ಹಾಲು ಪೂರೈಕೆ ಮಾಡುವ ಕೆಎಂಎಫ್‌ ಉಪಕ್ರಮಕ್ಕೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ (ನವೆಂಬರ್ 21) ಚಾಲನೆ ನೀಡಿದರು.

  • ನವದೆಹಲಿಯ ಮಾರುಕಟ್ಟೆಗೆ ಕರ್ನಾಟಕದ ಕೆಎಂಎಫ್‌ನ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಪ್ರವೇಶವಾಗಿದೆ. ಕಡಿಮೆ ಬೆಲೆಯಲ್ಲಿ ದೆಹಲಿಗರಿಗೂ ನಂದಿನಿ ಹಾಲು ಸಿಗಲಿದೆ. ಮಾರುಕಟ್ಟೆ ವಿಸ್ತರಣೆ ಯೋಜನೆ ಇದೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಅಮುಲ್‌ ಮತ್ತು ಮದರ್ ಡೇರಿ ಹಾಲುಗಳಿಗಿಂತ ಕಡಿಮೆ ದರ ಇದೆ.

ಕಡಿಮೆ ಬೆಲೆಯಲ್ಲಿ ದೆಹಲಿಗರಿಗೂ ನಂದಿನಿ ಹಾಲು ಪೂರೈಕೆ ಮಾಡುವ ಕೆಎಂಎಫ್‌ ಉಪಕ್ರಮಕ್ಕೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ (ನವೆಂಬರ್ 21) ಚಾಲನೆ ನೀಡಿದರು.
ಕಡಿಮೆ ಬೆಲೆಯಲ್ಲಿ ದೆಹಲಿಗರಿಗೂ ನಂದಿನಿ ಹಾಲು ಪೂರೈಕೆ ಮಾಡುವ ಕೆಎಂಎಫ್‌ ಉಪಕ್ರಮಕ್ಕೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ (ನವೆಂಬರ್ 21) ಚಾಲನೆ ನೀಡಿದರು.

ನವದೆಹಲಿ: ಕರ್ನಾಟಕದಲ್ಲಿ ನಿತ್ಯ 1 ಕೋಟಿ ಲೀಟರ್‌ಗೂ ಅಧಿಕ ಹಾಲು ಉತ್ಪಾದನೆಯಾಗುತ್ತಿದೆ. ಹಾಲು ಉತ್ಪಾದನೆಯಲ್ಲಿ ಗುಜರಾತ್‌ ಮೊದಲ ಸ್ಥಾನದಲ್ಲಿದ್ದರೆ ನಮ್ಮ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಉತ್ಪಾದನೆಯಾದ ಹಾಲು ಮಾರಾಟ ಹೆಚ್ಚಿಸಲು ಹಾಲು ಮಾರುಕಟ್ಟೆ ವಿಸ್ತರಣೆ ಕಡೆಗೆ ಗಮನಹರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಗುರುವಾರ (ನವೆಂಬರ್ 20) ನವದೆಹಲಿಯಲ್ಲಿ ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಲ ಹಾಗೂ ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟ ನಿಯಮಿತದ ನಂದಿನಿ ಬ್ರಾಂಡ್‌ನ ವಿವಿಧ ಶ್ರೇಣಿಯ ಹಾಲು ಬಿಡುಗಡೆ ಮಾಡಿ ಮಾತನಾಡಿದರು.

ದೆಹಲಿಗೆ ಮಂಡ್ಯ ಕೆಎಂಎಫ್‌ ಹಾಲು ಪೂರೈಕೆ

ಭಾರತದಲ್ಲಿ ರೈತರ ಉಪಕಸುಬು ಪಶುಸಂಗೋಪನೆ. ಗುಜರಾತ್‌ನಲ್ಲಿ ಕುರಿಯನ್ ಅವರು ಹಾಲು ಉತ್ಪಾದಕರ ಸಂಘವನ್ನು ಆರಂಭಿಸಿದರು. ತಾನು ಹಿಂದೆ ಪಶುಸಂಗೋಪನಾ ಸಚಿವನಾಗಿ, ಕರ್ನಾಟಕ ಹಾಲು ಮಹಾ ಮಂಡಲದ ಅಧ್ಯಕ್ಷನೂ ಆಗಿ ಕೆಲಸ ಮಾಡಿದ್ದೆ. ಈಗ ದೇಶದ ರಾಜಧಾನಿ ದೆಹಲಿ ನಗರಕ್ಕೂ ಕರ್ನಾಟಕದ ಹಾಲು ಪೂರೈಕೆ ಶುರುವಾಗಿದೆ. ಮಂಡ್ಯ, ಕೆಎಂಎಫ್‌ನಿಂದ ಹಾಲು ಪೂರೈಕೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಹಾಲು ಉತ್ಪಾದಕರಿಗೆ ಸರಿಯಾದ ಆದಾಯ, ಲಾಭಾಂಶ ಸಿಗದೇ ಇರುವುದನ್ನು ಮನಗಂಡು ಆ ಶೋಷಣೆಯನ್ನು ತಪ್ಪಿಸುವ ಸಲುವಾಗಿ ಕರ್ನಾಟಕದಲ್ಲಿ ಹಾಲು ಉತ್ಪಾದಕರ ಸಂಘಗಳನ್ನು ರಚಿಸಲಾಯಿತು. ಆ ಒಕ್ಕೂಟಗಳು ಸೇರಿ ಹಾಲು ಮಹಾಮಂಡಲ (ಕೆಎಂಎಫ್‌) ರೂಪುಗೊಂಡಿದೆ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆನಪಿಸಿಕೊಂಡರು.

ಹಾಲು ಉತ್ಪಾದಕರ ಪ್ರೋತ್ಸಾಹಧನ ಹೆಚ್ಚಳ

ಕರ್ನಾಟಕದಲ್ಲಿ ಪ್ರತಿದಿನ 92 ರಿಂದ 93 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದೆ. ರೈತರಿಂದ ಲೀಟರ್‌ಗೆ 32 ರೂಪಾಯಿಗೆ ಹಾಲು ಖರೀದಿಸಲಾಗುತ್ತಿದೆ. ಕರ್ನಾಟಕ ಸರ್ಕಾರ ಕ್ಷೀರಧಾರೆ ಯೋಜನೆಯಡಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರಿಗೆ 5 ರೂಪಾಯಿ ಪ್ರೋತ್ಸಾಹಧನವನ್ನು ನೀಡುತ್ತಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾಲದಲ್ಲಿ 2 ರೂಪಾಯಿ ಇದ್ದ ಪ್ರೋತ್ಸಾಹಧನ, ನಂತರ 3 ರೂಪಾಯಿ ಆಯಿತು. ನಾನು ಮುಖ್ಯಮಂತ್ರಿಯಾದ ನಂತರ ಇದನ್ನು 5 ರೂಪಾಯಿಗೆ ಹೆಚ್ಚಿಸುವ ಘೋಷಣೆ ಮಾಡಿದೆ. ಈಗ ಹಾಲು ಉತ್ಪಾದಕರ ಪ್ರೋತ್ಸಾಹಧನಕ್ಕಾಗಿ ಪ್ರತಿ ದಿನ 5 ಕೋಟಿ ರೂಪಾಯಿಯನ್ನು ಕರ್ನಾಟಕ ಸರ್ಕಾರ ವೆಚ್ಚ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಿಸಿದರು.

ಕರ್ನಾಟಕದಲ್ಲಿ 16 ಹಾಲು ಉತ್ಪಾದಕರ ಒಕ್ಕೂಟಗಳಿವೆ. ಅಂದಾಜು 1 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಈ ಪೈಕಿ ಆಂಧಪ್ರದೇಶ ಮತ್ತು ಮಹಾರಾಷ್ಟ್ರಕ್ಕೆ ನಿತ್ಯ ತಲಾ 2.5 ಲಕ್ಷ ಲೀಟರ್ ಹಾಲು ಪೂರೈಕೆಯಾಗುತ್ತಿದ.ಎ ಆರಂಭಿಕ ಹಂತದಲ್ಲಿ ದೆಹಲಿಗೂ 2.5 ಲಕ್ಷ ಲೀಟರ್ ಹಾಲು ಪೂರೈಕೆಯಾಗಲಿದೆ. ಇನ್ನು ಆರು ತಿಂಗಳ ಒಳಗೆ ಇದನ್ನು 5 ಲಕ್ಷ ಲೀಟರ್‌ಗೆ ಏರಿಸುವ ಯೋಜನೆ ಮತ್ತು ಗುರಿ ನಮ್ಮದು. ಇದೇ ರೀತಿ ಹಾಲು ಮಾರುಕಟ್ಟೆಯನ್ನು ವಿಸ್ತರಿಸುವ ಯೋಜನೆಯೂ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಿಸಿದರು.

ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ವೆಂಕಟೇಶ್, ಕೃಷಿ ಸಚಿವ ಚೆಲುವರಾಯಸ್ವಾಮಿ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಕರ್ನಾಟಕ ಹಾಲು ಮಹಾಮಂಡಲದ ಅಧ್ಯಕ್ಷ ಭೀಮಣ್ಣ ನಾಯಕ್, ರಾಜ್ಯ ಸಭಾ ಸದಸ್ಯ ಈರಣ್ಣ ಕರಾಡಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ, ಮಂಡ್ಯ ಹಾಲು ಒಕ್ಕೂಟದ ಅಧ್ಯಕ್ಷ ತಿಮ್ಮೇಗೌಡ ಮತ್ತು ಇತರರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ