logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಲ್ಲಿ ಎಳನೀರು ದರ 100 ರೂಪಾಯಿ ಸನಿಹ; ತೆಂಗು ಬೆಳೆಗಾರರಿಗೆ ಸಿಗುವ ಆದಾಯ ಇಷ್ಟೆ, ಆದರೂ ಖುಷಿಯಲ್ಲಿದ್ದಾರೆ ಅವರು

ಬೆಂಗಳೂರಲ್ಲಿ ಎಳನೀರು ದರ 100 ರೂಪಾಯಿ ಸನಿಹ; ತೆಂಗು ಬೆಳೆಗಾರರಿಗೆ ಸಿಗುವ ಆದಾಯ ಇಷ್ಟೆ, ಆದರೂ ಖುಷಿಯಲ್ಲಿದ್ದಾರೆ ಅವರು

Umesh Kumar S HT Kannada

Oct 17, 2024 01:48 PM IST

google News

ಬೆಂಗಳೂರಲ್ಲಿ ಎಳನೀರು ದರ 100 ರೂಪಾಯಿ ಸನಿಹ ತಲುಪಿದೆ. ತೆಂಗು ಬೆಳೆಗಾರರಿಗೆ ಸಿಗುವ ಆದಾಯ ಇಷ್ಟೆ, ಆದರೂ ಖುಷಿಯಲ್ಲಿದ್ದಾರೆ ಅವರು. (ಸಾಂಕೇತಿಕ ಚಿತ್ರ)

  • ಬೆಂಗಳೂರು ನಗರದಲ್ಲಿ ಎಳನೀರು ದರ 100 ರೂಪಾಯಿ ಸನಿಹ ತಲುಪಿದೆ. ತೆಂಗು ಬೆಳೆಗಾರರಿಗೆ ಸಿಗುವ ಆದಾಯ ಕಡಿಮೆಯಾದರೂ, ಅವರೂ ಖುಷಿಯಲ್ಲಿದ್ದಾರೆ. ಬೆಂಗಳೂರು ನಗರದಲ್ಲಿ ಎಳನೀರು ಪೂರೈಕೆ ದರ ಎಷ್ಟಿದೆ, ರೈತರಿಗೆ ಎಷ್ಟು ಸಿಗುತ್ತಿದೆ ಎಂಬಿತ್ಯಾದಿ ವಿವರ ಇಲ್ಲಿದೆ.

ಬೆಂಗಳೂರಲ್ಲಿ ಎಳನೀರು ದರ 100 ರೂಪಾಯಿ ಸನಿಹ ತಲುಪಿದೆ. ತೆಂಗು ಬೆಳೆಗಾರರಿಗೆ ಸಿಗುವ ಆದಾಯ ಇಷ್ಟೆ, ಆದರೂ ಖುಷಿಯಲ್ಲಿದ್ದಾರೆ ಅವರು. (ಸಾಂಕೇತಿಕ ಚಿತ್ರ)
ಬೆಂಗಳೂರಲ್ಲಿ ಎಳನೀರು ದರ 100 ರೂಪಾಯಿ ಸನಿಹ ತಲುಪಿದೆ. ತೆಂಗು ಬೆಳೆಗಾರರಿಗೆ ಸಿಗುವ ಆದಾಯ ಇಷ್ಟೆ, ಆದರೂ ಖುಷಿಯಲ್ಲಿದ್ದಾರೆ ಅವರು. (ಸಾಂಕೇತಿಕ ಚಿತ್ರ) (Pexels)

ಬೆಂಗಳೂರು: ಮಳೆಗಾಲ ಮುಗಿದು ಚಳಿಗಾಲ ಶುರುವಾದರೂ ಬೇಡಿಕೆಗೆ ತಕ್ಕಂತೆ ಎಳನೀರು ಪೂರೈಕೆ ಇಲ್ಲ. ಎಳನೀರು ದರ ಗಗನಮುಖಿಯಾಗಿದ್ದು ಇ-ಕಾಮರ್ಸ್ ತಾಣಗಳಲ್ಲಿ 100 ರೂಪಾಯಿ ಸನಿಹದಲ್ಲಿದೆ. ರಸ್ತೆ ಬದಿ ಅಂಗಡಿಗಳಲ್ಲಿ ಎಳನೀರು 70- 90 ರೂಪಾಯಿ ನಡುವೆ ಇದೆ. ಮಳೆ ಏರುಪೇರಾಗಿರುವ ಕಾರಣ ತೆಂಗು ಬೆಳೆಯಲ್ಲೂ ಏರುಪೇರಾಗಿದೆ. ಇದರಿಂದಾಗಿ ಎಳನೀರು ಪೂರೈಕೆ ಕುಸಿತವಾಗಿದೆ. ಇನ್ನೂ ಹೇಳಬೇಕು ಎಂದರೆ ಕಳೆದ ವರ್ಷ ಬರಗಾಲ ಎದುರಾಗಿದ್ದರೆ ಈ ಬಾರಿ ಅನಾವೃಷ್ಟಿ. ಎರಡು ವೈಪರೀತ್ಯಗಳ ಕಾರಣ ತೆಂಗಿನ ಬೆಳೆ ಸರಿಯಾಗಿ ಫಲಕೊಟ್ಟಿಲ್ಲ. ಆದ್ದರಿಂದ ಎಳನೀರು ದರ ಗಗನಕ್ಕೇರತೊಡಗಿದೆ. ಇದೇ ಮೊದಲ ಬಾರಿಗೆ ಪ್ರತಿ ಎಳನೀರಿಗೆ 30-40 ರೂಪಾಯಿಯಷ್ಟು ದರ ಸಿಗಲಾರಂಭಿಸಿದೆ ಎಂದು ತೆಂಗು ಬೆಳೆಗಾರರೂ ಖುಷಿಯಾಗಿದ್ದಾರೆ.

ಬೆಂಗಳೂರಲ್ಲಿ 100 ರೂ ಸನಿಹದಲ್ಲಿದೆ ಎಳನೀರು ದರ

ಬೆಂಗಳೂರು ಮಹಾನಗರದಲ್ಲಿ 100 ರೂಪಾಯಿ ಸನಿಹದಲ್ಲಿದೆ ಎಳನೀರು ದರ. ಹೌದು ಆನ್‌ಲೈನ್ ಮೂಲಕ ಎಳನೀರು ಖರೀದಿಸುವುದಾದರೆ ಅಂದರೆ, ಬಿಗ್ ಬಾಸ್ಕೆಟ್‌ನ ಫ್ರೆಶೋ ಮೂಲಕ ಎಳನೀರು ಖರೀದಿ ಮಾಡುವುದಾದರೆ, 1 ಎಳನೀರಿನ ಬೆಲೆ 91.78 ರೂಪಾಯಿ. ಇದಕ್ಕೆ ಶೇಕಡ 31 ರಿಯಾಯಿತಿ ನೀಡಲಾಗಿದ್ದು 63 ರೂಪಾಯಿ ದರ ನಿಗದಿ ಮಾಡಿದೆ. ಅಮೆಜಾನ್ ಫ್ರೆಶ್‌ನಲ್ಲಿ ಒಂದು ಎಳನೀರು ದರ 94 ರೂಪಾಯಿ ಇದ್ದು, ಶೇಕಡ 26 ರಿಯಾಯಿತಿ ನೀಡಿ 70 ರೂಪಾಯಿ ದರ ಪ್ರಕಟಿಸಿದೆ. ಇನ್ನು, ರಸ್ತೆ ಬದಿ ಒಂದು ಎಳನೀರು ದರ 70 ರೂಪಾಯಿಯಿಂದ 80 ರೂಪಾಯಿ ಆಸುಪಾಸಿನಲ್ಲಿದೆ. ರಿಲಯನ್ಸ್‌ ಫ್ರೆಶ್‌ ಮತ್ತು ಇತರೆ ಮಾರ್ಟ್‌ಗಳಲ್ಲಿ ಕೂಡ ಇದೇ ದರದ ಆಸುಪಾಸಿನಲ್ಲಿ ಎಳನೀರು ಮಾರಾಟವಾಗುತ್ತಿದೆ.

ಎಳನೀರು ಸಂಬಂಧಿಸಿದಂತೆ ಮದ್ದೂರು ಎಳನೀರು ಮಾರುಕಟ್ಟೆ ಮುಖ್ಯವಾದುದು. ಇಲ್ಲಿಂದಲೇ ಹೊರ ರಾಜ್ಯಗಳಿಗೆ ಎಳನೀರು ಪೂರೈಕೆಯಾಗುತ್ತಿದೆ. ಈ ಬಾರಿ ಬೇಡಿಕೆ ಹೆಚ್ಚಾಗಿದೆ. ಆದರೆ ಈ ಮಾರುಕಟ್ಟೆಗೇ ಎಳನೀರು ಪೂರೈಕೆ ಕಡಿಮೆಯಾಗಿದೆ. ಮದ್ದೂರು ಹಾಗೂ ಕೆ.ಆರ್.ಪೇಟೆ ಎಳನೀರು ಮಾರುಕಟ್ಟೆಯಿಂದ ದೆಹಲಿ, ಪಂಜಾಬ್, ಹರಿಯಾಣ, ಮಹಾರಾಷ್ಟ್ರ, ಆ೦ಧ್ರಪ್ರದೇಶ ಸೇರಿ ವಿವಿಧ ರಾಜ್ಯಗಳಿಗೆ ಎಳನೀರು ಸರಬರಾಜುಮಾಡಲಾಗುತ್ತಿದೆ. ಈ ಎಳನೀರು ಮಾರುಕಟ್ಟೆಗಳಿಗೆ ಹೊರ ಜಿಲ್ಲೆಗಳಿಂದಲೂ ಎಳನೀರು ಬರುತ್ತಿದೆ. ಮಂಡ್ಯ, ಮೈಸೂರು, ಹಾಸನ, ಚಾಮರಾ ಜನಗರ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಎಳನೀರು ತಂದು ಹೊರರಾಜ್ಯಗಳಿಗೆ ಪೂರೈಸಲಾಗುತ್ತಿದೆ ಎ೦ದು ವರ್ತಕರೊಬ್ಬರು ತಿಳಿಸಿರುವುದಾಗಿ ವರದಿ ವಿವರಿಸಿದೆ.

ತೆಂಗು ಬೆಳೆಗಾರರಿಗೆ ಸಿಗುವ ಎಳನೀರು ದರ 35 ರೂ ನಿಂದ 40 ರೂ

ಹವಾಮಾನದಲ್ಲಿ ಏರುಪೇರಾದ ಕಾರಣ ಎಳನೀರು ಫಸಲು ಕೂಡ ನಿರೀಕ್ಷಿತ ಮಟ್ಟದಲ್ಲಿ ಬಂದಿಲ್ಲ. ಬೇಡಿಕೆ ಹೆಚ್ಚಾಗಿದ್ದು ಪೂರೈಕೆ ಈಡೇರಿಸಲಾಗದ ಕಾರಣ ಬೆಲೆ ಏರಿಕೆ ಉಂಟಾಗಿದೆ. ಇದೇ ಕಾರಣಕ್ಕೆ ಮಧ್ಯವರ್ತಿಗಳು ರೈತರಿಗೂ 35- 40 ರೂಪಾಯಿ ಪಾವತಿಸಿ ಎಳನೀರು ಖರೀದಿಸಿ ಬೆಂಗಳೂರು ಮತ್ತು ಇತರೆ ಮಾರುಕಟ್ಟೆಗಳಿಗೆ ಪೂರೈಸತೊಡಗಿದ್ದಾರೆ. ಈ ಹಿಂದೆ ರೈತರಿಗೆ ಸಿಗುತ್ತಿದ್ದ ದರ ಪ್ರತಿ ಎಳನೀರಿಗೆ 20 ರೂಪಾಯಿ ಆಸುಪಾಸಿನಲ್ಲೇ ಇತ್ತು. ಈ ಬಾರಿ 33, 35, 40 ರೂಪಾಯಿ ಹೀಗೆ ದರ ನಿಗದಿ ಮಾಡಿ ರೈತರಿಂದಲೇ ಖರೀದಿಸುತ್ತಿದ್ದಾರೆ ಎಂದು ಉದಯವಾಣಿ ವರದಿ ಮಾಡಿದೆ. ಮಂಡ್ಯ ನರದಲ್ಲಿ ಒಂದು ಎಳನೀರು ದರ 40 ರೂಪಾಯಿಯಿಂದ 50 ರೂಪಾಯಿ ಆಸುಪಾಸಿನಲ್ಲಿದೆ. ಸಣ್ಣ ಗಾತ್ರದ ಎಳನೀರು ದರ 35 ರೂಪಾಯಿ ಇತ್ತು. ಬೆಂಗಳೂರಿಗೆ ಸರಬರಾಜಾಗುವ ಎಳನೀರು ದರ 50 ರಿಂದ 60 ರೂಪಾಯಿ ಸನಿಹ ತಲುಪಿದೆ. ಹೊರ ರಾಜ್ಯಗಳಿಗೆ 100 ರೂಪಾಯಿಗೂ ಹೆಚ್ಚಿನ ದರದಲ್ಲಿ ಎಳನೀರು ರವಾನಿಸಲಾಗುತ್ತಿದೆ. ಡಿಸೆಂಬರ್‌ ವೇಳೆಗೆ ಉತ್ತಮ ಫಸಲು ಬರುವ ನಿರೀಕ್ಷೆ ಇದ್ದು, ಆಗ ತೆಂಗು ಮತ್ತು ಎಳನೀರು ಎರಡರ ದರವೂ ಇಳಿಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ವ್ಯಾಪಾರಿಗಳು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ