logo
ಕನ್ನಡ ಸುದ್ದಿ  /  ಕರ್ನಾಟಕ  /  ಟೆಕಿಗಳು ಉದ್ಯಮಿಗಳಿಗೆ ಬೆಂಗಳೂರು ಇಷ್ಟವಾಗುವುದೇಕೆ? ದೆಹಲಿ, ಮುಂಬೈ ಪ್ರಾಬಲ್ಯಕ್ಕೆ ಸೆಡ್ಡು ಹೊಡೆದ ಬೆಂಗಳೂರು: ಗಮನಿಸಬೇಕಾದ 10 ಅಂಶಗಳಿವು

ಟೆಕಿಗಳು ಉದ್ಯಮಿಗಳಿಗೆ ಬೆಂಗಳೂರು ಇಷ್ಟವಾಗುವುದೇಕೆ? ದೆಹಲಿ, ಮುಂಬೈ ಪ್ರಾಬಲ್ಯಕ್ಕೆ ಸೆಡ್ಡು ಹೊಡೆದ ಬೆಂಗಳೂರು: ಗಮನಿಸಬೇಕಾದ 10 ಅಂಶಗಳಿವು

Umesh Kumar S HT Kannada

Nov 21, 2024 05:52 PM IST

google News

ಟೆಕಿಗಳು ಉದ್ಯಮಿಗಳಿಗೆ ಬೆಂಗಳೂರು ಇಷ್ಟವಾಗುವುದೇಕೆ? ಎಂಬ ಪ್ರಶ್ನೆ ಸಹಜ. ದೆಹಲಿ, ಮುಂಬೈ ಪ್ರಾಬಲ್ಯಕ್ಕೆ ಸೆಡ್ಡು ಹೊಡೆದ ಬೆಂಗಳೂರು ನಗರದಲ್ಲಿ ಗಮನಿಸಬೇಕಾದ 10 ಅಂಶಗಳ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)

  • ಕರ್ನಾಟಕದ ರಾಜಧಾನಿ ಬೆಂಗಳೂರು ಟೆಕ್ ಹಬ್ ಆಗಿ, ಸ್ಟಾರ್ಟಪ್‌ ನಗರವಾಗಿ, ಸಿಲಿಕಾನ್ ಸಿಟಿಯಾಗಿ, ಉದ್ಯಾನ ನಗರಿಯಾಗಿ ಗುರುತಿಸಿಕೊಂಡಿದೆ. ಇವೆಲ್ಲದರ ನಡುವೆ, ಟೆಕಿಗಳು ಉದ್ಯಮಿಗಳಿಗೆ ಬೆಂಗಳೂರು ಇಷ್ಟವಾಗುವುದೇಕೆ ಎಂಬ ಪ್ರಶ್ನೆ ಕಾಡುವುದು ಸಹಜ. ದೆಹಲಿ, ಮುಂಬೈ ಪ್ರಾಬಲ್ಯಕ್ಕೆ ಸೆಡ್ಡು ಹೊಡೆದ ಬೆಂಗಳೂರು ನಗರದ ಬಗ್ಗೆ ಗಮನಿಸಬೇಕಾದ 10 ಅಂಶಗಳು ಹೀಗಿವೆ.

ಟೆಕಿಗಳು ಉದ್ಯಮಿಗಳಿಗೆ ಬೆಂಗಳೂರು ಇಷ್ಟವಾಗುವುದೇಕೆ? ಎಂಬ ಪ್ರಶ್ನೆ ಸಹಜ. ದೆಹಲಿ, ಮುಂಬೈ ಪ್ರಾಬಲ್ಯಕ್ಕೆ ಸೆಡ್ಡು ಹೊಡೆದ ಬೆಂಗಳೂರು ನಗರದಲ್ಲಿ ಗಮನಿಸಬೇಕಾದ 10 ಅಂಶಗಳ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)
ಟೆಕಿಗಳು ಉದ್ಯಮಿಗಳಿಗೆ ಬೆಂಗಳೂರು ಇಷ್ಟವಾಗುವುದೇಕೆ? ಎಂಬ ಪ್ರಶ್ನೆ ಸಹಜ. ದೆಹಲಿ, ಮುಂಬೈ ಪ್ರಾಬಲ್ಯಕ್ಕೆ ಸೆಡ್ಡು ಹೊಡೆದ ಬೆಂಗಳೂರು ನಗರದಲ್ಲಿ ಗಮನಿಸಬೇಕಾದ 10 ಅಂಶಗಳ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ) (GoK)

ಬೆಂಗಳೂರು: ಕಳೆದ 10 ವರ್ಷದ ಅವಧಿಯಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರು ಭರವಸೆಯ ಟೆಕ್ ಹಬ್‌ ಆಗಿ ರೂಪಾಂತರವಾಗುವ ಮೂಲಕ ಟೆಕ್ಕಿಗಳ, ಉದ್ಯಮಿಗಳ ಒಲವಿನ ತಾಣವಾಗಿ ರೂಪುಗೊಂಡಿದೆ. ಭಾರತದ ಮುಂಚೂಣಿ ಟೆಕ್ ಹಬ್‌ಗಳಾದ ದೆಹಲಿ ಮತ್ತು ಮುಂಬಯಿಗಳಿಗೆ ಸರಿಸಮವೆನ್ನುವಂತೆ ಮುನ್ನಡೆಯುತ್ತಿದೆ. ಬೆಂಗಳೂರು ಟೆಕ್‌ ಶೃಂಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ರೈಸಿಂಗ್ ಬೆಂಗಳೂರು" ವರದಿಯನ್ನು ಅನಾವರಣಗೊಳಿಸಿದ್ದರು. “ಭಾರತದ ಟೆಕ್ ಹಬ್ ಬೆಂಗಳೂರು ನವೋದ್ಯಮದ ರಾಜಧಾನಿಯಾಗಿ ವೇಗವಾಗಿ ಬೆಳೆಯುತ್ತಿದೆ. ಈ ಬೆಳವಣಿಗೆಯು ನಗರದೊಳಗೆ ಉತ್ತಮ ಮತ್ತು ಕೆಟ್ಟದ್ದು ಎಂಬ ನಾಟಕೀಯವೆನಿಸುವ ಬಹು-ಪದರದ ಬದಲಾವಣೆಗಳನ್ನು ಉಂಟುಮಾಡಿದೆ" ಎಂದು ಫೌಂಡೇಶನ್‌ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್‌ ಹೇಳಿದ್ದಾಗಿ ಟೈಮ್ಸ್ ನೌ ವರದಿ ಮಾಡಿದೆ. ಅದು ಬೆಂಗಳೂರು ನಗರದ ಆರ್ಥಿಕ ಬೆಳವಣಿಗೆ, ಜೀವನಶೈಲಿಯ ಆಕರ್ಷಣೆ ಮತ್ತು ಜಾಗತಿಕ ಪ್ರಭಾವದ ಸ್ಪೂರ್ತಿದಾಯಕ ಚಿತ್ರಣವನ್ನು ಅಂದವಾಗಿ ಕಟ್ಟಿಕೊಟ್ಟಿದೆ. ರೈಸಿಂಗ್ ಬೆಂಗಳೂರು ವರದಿಯು ಹಲವು ಆಸಕ್ತಿದಾಯಕ ದತ್ತಾಂಶಗಳನ್ನು ಒಳಗೊಂಡಿದ್ದು, ಅನ್‌ಬಾಕ್ಸಿಂಗ್ ಬಿಎಲ್‌ಆರ್ ಫೌಂಡೇಶನ್‌ ಅದನ್ನು ತಯಾರಿಸಿದೆ.

ಟೆಕಿಗಳು ಉದ್ಯಮಿಗಳಿಗೆ ಬೆಂಗಳೂರು ಇಷ್ಟವಾಗುವುದೇಕೆ; ಗಮನ ಸೆಳೆಯುವ 10 ಅಂಶಗಳು

1) ಬೆಂಗಳೂರು ಎಂಬ ಉದ್ಯೋಗ ಮಾರುಕಟ್ಟೆ: ಭಾರತದ ಪ್ರಮುಖ ಆರ್ಥಿಕ ಶಕ್ತಿಯಾಗಿ ಬೆಂಗಳೂರು ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. 2012 ಮತ್ತು 2023 ರ ನಡುವೆ, 27,000 ಹೊಸ ಕಂಪನಿಗಳನ್ನು ನೋಂದಾಯಿಸಿ ಕೊಂಡಿದೆ. ಈ ವಿಚಾರದಲ್ಲಿ ಮುಂಬೈ ಮತ್ತು ದೆಹಲಿಯ ನಂತರ ಮೂರನೇ ಸ್ಥಾನದಲ್ಲಿದೆ. ಇದು 80 ಮಿಲಿಯನ್ ಚದರ ಅಡಿ ಗ್ರೇಡ್ ಎ ಕಚೇರಿ ಸ್ಥಳವನ್ನು ಹೊಂದಿದ್ದು, ಆ ಮೂಲಕ 800,000 ಉದ್ಯೋಗಗಳನ್ನು ಸೃಷ್ಟಿಸಿದೆ. ಇದು ಭಾರತೀಯ ಮಹಾನಗರಗಳಲ್ಲಿ ಅತ್ಯಧಿಕ.

2) ನವೋದ್ಯಮಗಳ ತವರು ಬೆಂಗಳೂರು: ನವೋದ್ಯಮ ಕ್ಷೇತ್ರದಲ್ಲಿ ಬೆಂಗಳೂರು ಕಳೆದ 10 ವರ್ಷಗಳ ಅವಧಿಯಲ್ಲಿ ವರ್ಷಕ್ಕೆ ಸರಾಸರಿ 1400 ಹೊಸ ನವೋದ್ಯಮಗಳಿಗೆ ನೆಲೆ ಒದಗಿಸಿದೆ. ಅವುಗಳಿಗೆ ಬೇಕಾದ ಪರಿಸರ, ಆರಂಭಿಕ ಬಂಡವಾಳ ಒದಗಿಸುವಲ್ಲೂ ಮುಂಚೂಣಿಯಲ್ಲಿದೆ. ಯೂನಿಕಾರ್ನ್‌ ಕಂಪನಿಗಳ ಸೃಷ್ಟಿಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿದ್ದು ಗಮನಸೆಳೆದಿದೆ. 3) ಅನುಕೂಲಕರ ಮಹಾನಗರ ಬೆಂಗಳೂರು: ಅನುಕೂಲಕರ ಜೀವನಕ್ಕೆ ಅಗತ್ಯ ಸೌಕರ್ಯ ಮತ್ತು ಸಂಪರ್ಕದ ಮಿಶ್ರಣವು ಬೆಂಗಳೂರು ಮಹಾನಗರವನ್ನು ಭವಿಷ್ಯದ ನಗರ ಎಂಬಂತೆ ರೂಪಿಸಿದೆ.. ವಾರ್ಷಿಕವಾಗಿ 181 ದಿನಗಳ ಆಹ್ಲಾದಕರ ಹವಾಮಾನ ನಗರಕ್ಕೆ ಇರುವ ಪ್ಲಸ್ ಪಾಯಿಂಟ್‌. ದೇಶದಲ್ಲಿ ಇದು ಅತ್ಯುತ್ತಮ ಅನುಕೂಲಕರ ವಾತಾವರಣ. ಗುರುಗ್ರಾಮ, ನವಿ ಮುಂಬಯಿಗಳಿಗೆ ಹೋಲಿಸಿದರೆ ವಸತಿ ವೆಚ್ಚ ಕೈಗೆಟುವಂತಿದೆ. ಅತಿ ಹೆಚ್ಚು ಪಾಸ್‌ಪೋರ್ಟ್‌ ಹೊಂದಿರುವ ಅಂದರೆ ದೇಶದ ಶೇಕಡ 25 ಪಾಸ್‌ಪೋರ್ಟ್‌ ಬೆಂಗಳೂರಿಗರ ಬಳಿ ಇದೆ.

4) ಬೆಂಗಳೂರಿನ ಜಾಗತಿಕ ಸಂಪರ್ಕ: ಜಗತ್ತಿನ ವಿವಿಧ ರಾಷ್ಟ್ರಗಳ ನಗರಗಳೊಂದಿಗೆ ಬೆಂಗಳೂರಿನ ಸಂಪರ್ಕ ಹೆಚ್ಚು. 2017-18ಕ್ಕೆ ಹೋಲಿಸಿದರೆ 2022-23ರ ವೇಳೆಗೆ ಹೆಚ್ಚು ಸಂಪರ್ಕ ಸಾಧಿಸಿದೆ. 27 ದೇಶೀಯ ವಿಮಾನ ಮಾರ್ಗ ಸೇರ್ಪಡೆಯಾಗಿದೆ. ಇದು ಭಾರತದ ಯಾವುದೇ ನಗರ ಸಂಪರ್ಕಕ್ಕೆ ಹೋಲಿಸಿದರೆ ಹೆಚ್ಚು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣದಲ್ಲಿ ಎರಡು ಟರ್ಮಿನಲ್‌ಗಳು ಸೇರ್ಪಡೆಯಾಗಿವೆ.

5) ಗ್ರಾಹಕ ಬೆಳವಣಿಗೆ: ಬೆಂಗಳೂರಿನ ಗ್ರಾಹಕ ಮಾರುಕಟ್ಟೆ ಪ್ರವರ್ಧಮಾನಕ್ಕೆ ಬರುತ್ತಿದೆ. ನಾಲ್ಕು ವರ್ಷಗಳಲ್ಲಿ ಬ್ಯಾಂಕ್ ಉಳಿತಾಯ ಠೇವಣಿಗಳು ವಾರ್ಷಿಕ ಸರಾಸರಿ 15.2 ಶೇಕಡ ದರದಲ್ಲಿ ಬೆಳೆದಿದ್ದು, 2023 ರ ಮಧ್ಯದ ವೇಳೆಗೆ 2.69 ಲಕ್ಷ ಕೋಟಿ ರೂಪಾಯಿ ತಲುಪಿದೆ. ನಗರವು ಡಿಜಿಟಲ್ ಪಾವತಿಗಳಲ್ಲಿ ಭಾರತವನ್ನು ಮುನ್ನಡೆಸಿದ್ದು, 2023 ರ ಕೊನೆಯ ತ್ರೈಮಾಸಿಕದಲ್ಲಿ 143 ಕೋಟಿ ಫೋನ್‌ಪೇ ವಹಿವಾಟುಗಳನ್ನು ನಡೆಸಿದೆ.

6) ಸುಸ್ಥಿರ ನಾಯಕತ್ವ: ಬೆಂಗಳೂರು ಸುಸ್ಥಿರ ನಾಯಕತ್ವದ ಪ್ರವೃತ್ತಿಯನ್ನು ಹೊಂದಿದ್ದು, 2023 ರಲ್ಲಿ, ಬೆಂಗಳೂರು 77,860 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನೋಂದಾಯಿಸಿದೆ, ಇದು ದೇಶದಲ್ಲೇ ಅತ್ಯಧಿಕ. 6,811 ವಾಹನಗಳೊಂದಿಗೆ ಎಲೆಕ್ಟ್ರಿಕ್ ಕಾರ್ ನೋಂದಣಿಯಲ್ಲಿ ಎರಡನೇ ಸ್ಥಾನದಲ್ಲಿದೆ.

7) ಸಂಚಾರ ದಟ್ಟಣೆ ಸವಾಲು: ಬೆಂಗಳೂರಿನ ಬೆಳವಣಿಗೆ ಗಮನಾರ್ಹವಾಗಿದ್ದರೂ, ಸಂಚಾರ ದಟ್ಟಣೆ ವಿಷಾದವಾಗಿ ಉಳಿದುಕೊಂಡಿದೆ. ಭಾರತದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತ ಸಂಭವಿಸುವ ಎರಡನೇ ನಗರವಾಗಿ ಬೆಂಗಳೂರು ಗೋಚರಿಸಿದೆ. ಕಳೆದ ಒಂದು ದಶಕದ ಅವಧಿಯಲ್ಲಿ ಅಪಘಾತದ ಸಾವು ನೋವುಗಳು ಕಡಿಮೆ ಆಗಿಲ್ಲ ಎಂಬುದು ಕಳವಳ ಪಡುವ ವಿಷಯ.

8) ನಗರ ಆಡಳಿತ, ಮೂಲಸೌಕರ್ಯ ಕೊರತೆ: ಬೆಂಗಳೂರು ಮಹಾನಗರದ ಸ್ಥಳೀಯಾಡಳಿತ ನಗರ ಆಡಳಿತದಲ್ಲೂ, ಮೂಲಸೌಕರ್ಯ ಯೋಜನೆ ಮತ್ತು ಅದರ ಅನುಷ್ಠಾನದಲ್ಲೂ ಹಿಂದುಳಿದಿದೆ. ಬಜೆಟ್ ಗಾತ್ರದಲ್ಲಿ ಬಿಬಿಎಂಪಿ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಅದರೂ ಇತರೆ ನಗರಗಳಿಗೆ ಹೋಲಿಸಿದರೆ ಈ ನಗರದಲ್ಲಿ ತಲಾ ಆದಾಯ ಕನಿಷ್ಠ ಮಟ್ಟದಲ್ಲಿದೆ. ಮೂಲ ಸೌಕರ್ಯಗಳಿಗೆ ಮಾಡಬೇಕಾದಷ್ಟು ನಿಖರ ಯೋಜನೆ ಮತ್ತು ಹೂಡಿಕೆ ಮಾಡದಿರುವ ಕೊರತೆ ಕಾಡುತ್ತಿದೆ.

9) ಹೊಸ ಅವಕಾಶಗಳ ಬೆಂಗಳೂರು: ಶತಮಾನಗಳಿಂದ ವಿಕಸನಗೊಂಡ ದೆಹಲಿ ಮತ್ತು ಮುಂಬೈಗಿಂತ ಭಿನ್ನವಾಗಿ, ಬೆಂಗಳೂರು ಮಹಾನಗರ ಪವರ್‌ಹೌಸ್‌ನಂತೆ ಹೊಸತನ ಮತ್ತು ಅವಕಾಶಗಳೊಂದಿಗೆ ಮುನ್ನಡೆಯುತ್ತಿರುವುದು ಹೊಸ ಬೆಳವಣಿಗೆ. ಆದಾಗ್ಯೂ, ಈ ಬೆಳವಣಿಗೆಯನ್ನು ಉಳಿಸಿಕೊಳ್ಳಲು ಅದರ ನಗರ ಸವಾಲುಗಳನ್ನು ಅಂದರೆ ಮೂಲ ಸೌಕರ್ಯ ಇತ್ಯಾದಿ ಸವಾಲುಗಳನ್ನು ಎದುರಿಸುವ ಅಗತ್ಯವಿದೆ.

10) ಎಲ್ಲರನ್ನೂ ಬರಮಾಡಿಕೊಳ್ಳುವ ಮಹಾನಗರ: ಯಾವುದೇ ಭಾಷಿಕರು ಇದ್ದರೂ ಅವರೆಲ್ಲರನ್ನೂ ತನ್ನವರಂತೆ ಬರಮಾಡಿಕೊಂಡು ಹೊಸ ಅವಕಾಶಗಳನ್ನು ಒದಗಿಸುವ ಮಹಾನಗರ ಬೆಂಗಳೂರು. ಕರ್ನಾಟಕರಾಜಧಾನಿಯಾಗಿರುವ ಈ ನಗರದ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆ, ಸಾಟಿಯಿಲ್ಲದ ನವೋದ್ಯಮ ಪರಿಸರ ವ್ಯವಸ್ಥೆ ಮತ್ತು ಅಪೇಕ್ಷಣೀಯ ಗುಣಮಟ್ಟದ ಜೀವನ ಗಮನಸೆಳೆಯುವಂಥದ್ದು. ಆದ್ದರಿಂದಲೇ ಬೆಂಗಳೂರು ನಗರ ಭಾರತದ ಟೆಕ್ ಹಬ್ ಆಗದೆ ಜಾಗತಿಕ ನಗರ ಐಕಾನ್ ಆಗುವ ಸಾಮರ್ಥ್ಯವನ್ನು ಹೊಂದಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ