Karnataka Reservoirs: ಹಾರಂಗಿ, ಹೇಮಾವತಿ ಜಲಾಶಯದ ನೀರಿನ ಮಟ್ಟದಲ್ಲಿ ಕುಸಿತ; ಕಾವೇರಿ ಕಣಿವೆ ಜಲಾಶಯಗಳಲ್ಲಿ ನೀರು ಎಷ್ಟಿದೆ
Dec 04, 2024 04:00 PM IST
ಕರ್ನಾಟಕದ ಕಾವೇರಿ ಕಣಿವೆಯ ಹಾರಂಗಿ ಜಲಾಶಯದ ನೀರಿನ ಪ್ರಮಾಣ ಕುಸಿದಿದ್ದರೆ, ಕೆಆರ್‌ಎಸ್ ಜಲಾಶಯ ತುಂಬಿ ತುಳುಕುತ್ತಿದೆ.
- Water in Cauvery Basin Reservoirs: ಕಾವೇರಿ ಕಣಿವೆಯ ಜಲಾಶಯದ ನೀರಿನ ಮಟ್ಟದಲ್ಲಿ ಡಿಸೆಂಬರ್ ಹೊತ್ತಿಗೆ ನಿಧಾನವಾಗಿ ಕುಸಿತ ಕಂಡು ಬಂದಿದೆ.ಕೆಆರ್‌ಎಸ್ ಜಲಾಶಯ ತುಂಬಿದ್ದರೆ ಹಾರಂಗಿಯಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ.
Water in Cauvery Basin Reservoirs: ತಮಿಳುನಾಡಿನಿಂದ ನೀರಿನ ಬೇಡಿಕೆ ಸಹಿತ ಮಾಸಿಕ ನೀರು ಹಂಚಿಕೆಯಂತೆ ಬಿಡುಗಡೆ ಮಾಡಬೇಕಾದ ಒತ್ತಡ ಎದುರಿಸುವ ಕರ್ನಾಟಕದ ಕಾವೇರಿ ಕಣಿವೆಯ ಜಲಾಶಯಗಳಲ್ಲಿ ಡಿಸೆಂಬರ್ ಬಂದರೂ ನೀರಿನ ಸ್ಥಿತಿಗತಿ ಚೆನ್ನಾಗಿದೆ. ಮಂಡ್ಯ ಜಿಲ್ಲೆಯ ಪ್ರಮುಖ ಜಲಾಶಯ ಕೃಷ್ಣರಾಜಸಾಗರ ತುಂಬಿ ಬಳುಕುತ್ತಿದೆ. ಐದು ತಿಂಗಳಿನಿಂದ ತುಂಬಿದ ಸ್ಥಿತಿಯಲ್ಲಿಯೇ ಕೆಆರ್‌ಎಸ್ ಜಲಾಶಯವಿದೆ. ಆದರೆ ಕೊಡಗು ಜಿಲ್ಲೆಯ ಸಣ್ಣ ಜಲಾಶಯ ಹಾರಂಗಿ ನೀರಿನ ಪ್ರಮಾಣ ಭಾರೀ ಕುಸಿದಿದೆ. ಕೊಡಗಿನಲ್ಲಿ ಮಳೆಯಾಗುತ್ತಿದ್ದರೂ ಹಾರಂಗಿ ಜಲಾಶಯ ಮಟ್ಟ ಮಾತ್ರ ಆತಂಕದ ಮಟ್ಟಕ್ಕೆ ಇಳಿದಿದೆ. ಹಾಸನ ಜಿಲ್ಲೆಯ ಹೇಮಾವತಿ ಜಲಾಶಯದ ನೀರಿನ ಮಟ್ಟದಲ್ಲೂ ಕೊಂಚ ಇಳಿಕೆಯಾಗಿದೆ. ಆದರೆ ಮೈಸೂರು ಜಿಲ್ಲೆಯ ಕಬಿನಿ ಜಲಾಶಯದಲ್ಲೂ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ.
ತುಂಬಿರುವ ಕೆಆರ್‌ಎಸ್
ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯ ಸತತ ಐದು ತಿಂಗಳಿನಿಂದಲೂ ತುಂಬಿದ ಸ್ಥಿತಿಯಲ್ಲಿದೆ. ಈ ಬಾರಿ ಹೆಚ್ಚಿನ ಮಳೆಯಾಗಿದ್ದರಿಂದ ಜಲಾಶಯ ತುಂಬಿದೆ. ಅಕ್ಟೋಬರ್ ನಲ್ಲೂ ಮಳೆ ಸುರಿದ ಪರಿಣಾಮವಾಗಿ ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ.
ಬುಧವಾರವೂ ಜಲಾಶಯದ ನೀರಿನ ಮಟ್ಟ ಗರಿಷ್ಠ 124.80 ಅಡಿ ತಲುಪಿತ್ತು. ಜಲಾಶಯದಲ್ಲಿ ಗರಿಷ್ಠ 49.452 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ ಈಗ 3904 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ ನಾಲೆಗಳು ಹಾಗೂ ಕುಡಿಯುವ ನೀರಿಗೆಂದು 1757 ಕ್ಯೂಸೆಕ್ ನೀರನ್ನು ಹರಿ ಬಿಡಲಾಗುತ್ತಿದೆ. ಕಳೆದ ವರ್ಷ ಜಲಾಶಯದಲ್ಲಿ ಇದೇ ದಿನ 96.86 ಅಡಿ ನೀರಿತ್ತು. ಜಲಾಶಯದಲ್ಲಿ 20.45 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿತ್ತು.
ಕೃಷ್ಣರಾಜಸಾಗರ ಜಲಾಶಯ ಈ ಬಾರಿ ನಿರಂತರವಾಗಿ ತುಂಬಿದೆ. ಮಳೆಯ ಪ್ರಮಾಣದಲ್ಲಿ ಕುಸಿತ ಕಾಣದೇ ಇದ್ದುದರಿಂದ ಜಲಾಶಯಕ್ಕೂ ಒಳಹರಿವು ಹೆಚ್ಚಿದೆ. ಈ ಕಾರಣದಿಂದ ಜಲಾಶಯದ ನೀರಿನ ಗರಿಷ್ಠ ಮಟ್ಟದಲ್ಲಿ ವ್ಯತ್ಯಾಸವಾಗಿಲ್ಲ. ಈ ಬೇಸಿಗೆಗೂ ತೊಂದರೆಯಾಗುವುದಿಲ್ಲ. ಹಿಂದಿನ ವರ್ಷ ಇದೇ ಅವಧಿಯಲ್ಲಿ ಶೇ. 40 ರಷ್ಟು ಮಾತ್ರ ನೀರು ಸಂಗ್ರಹವಾಗಿತ್ತು ಎಂದು ಅಧಿಕಾರಿಗಳು ಹೇಳುತ್ತಾರೆ.
ಕಬಿನಿಯಲ್ಲೂ ನೀರುಂಟು
ಕೇರಳದಲ್ಲಿ ಕಳೆದ ತಿಂಗಳವರೆಗೂ ಮಳೆಯಾಗಿ ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೆ ಒಳಹರಿವು ಕಡಿಮೆ ಪ್ರಮಾಣದಲ್ಲಿ ಬರುತ್ತಲೇ ಇತ್ತು. ಹೀಗಿದ್ದರೂ ಜಲಾಶಯ ಸಂಪೂರ್ಣ ತುಂಬದೇ ಹೋದರೂ ಹೆಚ್ಚಿನ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ.
ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟವು 2279.85 ಅಡಿ ಇತ್ತು. ಜಲಾಶಯದ ಗರಿಷ್ಠ ಮಟ್ಟ 2284 ಅಡಿ. ಜಲಾಶಯದಲ್ಲಿ ನೀರಿನ ಸಂಗ್ರಹ 16.96 ಟಿಎಂಸಿ ಇದೆ. ಜಲಾಶಯದ ಗರಿಷ್ಠ ಟಿಎಂಸಿ ಸಂಗ್ರಹ ಸಾಮರ್ಥ್ಯ 19.52 . ಜಲಾಶಯಕ್ಕೆ ಬರುತ್ತಿರುವ ಒಳ ಹರಿವಿನ ಪ್ರಮಾಣ 3303 ಕ್ಯೂಸೆಕ್ ಹಾಗೂ ಹೊರ ಹರಿವಿನ ಪ್ರಮಾಣ 0 ಕ್ಯೂಸೆಕ್ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2273.94 ಅಡಿಯಷ್ಟು ಹಾಗೂ 13.70 ಟಿಎಂಸಿ ನೀರು ಸಂಗ್ರಹವಿತ್ತು.
ಕುಸಿದ ಹಾರಂಗಿ
ಕೊಡಗಿನ ಹಾರಂಗಿ ಜಲಾಶಯದ ಇಂದಿನ ನೀರಿನ ಮಟ್ಟವು 2835.75 ಅಡಿ ಇತ್ತು. ಜಲಾಶಯದ ಗರಿಷ್ಠ ಮಟ್ಟ 2259 ಅಡಿ. ಜಲಾಶಯದಲ್ಲಿ ನೀರಿನ ಸಂಗ್ರಹ 3.73 ಟಿಎಂಸಿ ಇದೆ. ಜಲಾಶಯದ ಗರಿಷ್ಠ ಟಿಎಂಸಿ ಸಂಗ್ರಹ ಸಾಮರ್ಥ್ಯ 8.50. ಜಲಾಶಯಕ್ಕೆ ಬರುತ್ತಿರುವ ಒಳ ಹರಿವಿನ ಪ್ರಮಾಣ 879 ಕ್ಯೂಸೆಕ್ ಹಾಗೂ ಹೊರ ಹರಿವಿನ ಪ್ರಮಾಣ200 ಕ್ಯೂಸೆಕ್ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2834.93 ಅಡಿಯಷ್ಟು ಹಾಗೂ3.64 ಟಿಎಂಸಿ ನೀರು ಸಂಗ್ರಹವಿತ್ತು.
ಹೇಮಾವತಿಯಲ್ಲಿ ಎಷ್ಟಿದೆ
ಹೇಮಾವತಿ ಜಲಾಶಯದ ಇಂದಿನ ನೀರಿನ ಮಟ್ಟವು 2910.95 ಅಡಿ ಇತ್ತು. ಜಲಾಶಯದ ಗರಿಷ್ಠ ಮಟ್ಟ 2922 ಅಡಿ. ಜಲಾಶಯದಲ್ಲಿ ನೀರಿನ ಸಂಗ್ರಹ 27.41 ಟಿಎಂಸಿ ಇದೆ. ಜಲಾಶಯದ ಗರಿಷ್ಠ ಟಿಎಂಸಿ ಸಂಗ್ರಹ ಸಾಮರ್ಥ್ಯ37.10. ಜಲಾಶಯಕ್ಕೆ ಬರುತ್ತಿರುವ ಒಳ ಹರಿವಿನ ಪ್ರಮಾಣ 2841 ಕ್ಯೂಸೆಕ್ ಹಾಗೂ ಹೊರ ಹರಿವಿನ ಪ್ರಮಾಣ 4520 ಕ್ಯೂಸೆಕ್ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2892.17 ಅಡಿಯಷ್ಟು ಹಾಗೂ 15.27 ಟಿಎಂಸಿ ನೀರು ಸಂಗ್ರಹವಿತ್ತು.