ಯೋಗೇಶ್ವರ್‌ ‘ಕೈ’ ಹಿಡಿದಿದ್ದಾದರೂ ಏಕೆ, ಜೆಡಿಎಸ್ ಅಭ್ಯರ್ಥಿ ಯಾರು? ಇಲ್ಲಿದೆ ನಿಮ್ಮ ಕುತೂಹಲಕ್ಕೆ ಉತ್ತರ
ಕನ್ನಡ ಸುದ್ದಿ  /  ಕರ್ನಾಟಕ  /  ಯೋಗೇಶ್ವರ್‌ ‘ಕೈ’ ಹಿಡಿದಿದ್ದಾದರೂ ಏಕೆ, ಜೆಡಿಎಸ್ ಅಭ್ಯರ್ಥಿ ಯಾರು? ಇಲ್ಲಿದೆ ನಿಮ್ಮ ಕುತೂಹಲಕ್ಕೆ ಉತ್ತರ

ಯೋಗೇಶ್ವರ್‌ ‘ಕೈ’ ಹಿಡಿದಿದ್ದಾದರೂ ಏಕೆ, ಜೆಡಿಎಸ್ ಅಭ್ಯರ್ಥಿ ಯಾರು? ಇಲ್ಲಿದೆ ನಿಮ್ಮ ಕುತೂಹಲಕ್ಕೆ ಉತ್ತರ

CP Yogeshwara: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್​ ಟಿಕೆಟ್ ಗೊಂದಲದ ನಡುವೆಯೇ ಬಿಜೆಪಿ ತೊರೆದು ಸಿಪಿ ಯೋಗೇಶ್ವರ್ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಆದರೆ ಯೋಗಿ ಕೈ ಹಿಡಿಯಲು ಕಾರಣವಾದರೂ ಏನು? ಇಲ್ಲಿದೆ ವಿವರ. (ವರದಿ-ಎಚ್. ಮಾರುತಿ)

ಡಿಕೆ ಶಿವಕುಮಾರ್​ ನೇತೃತ್ವದಲ್ಲಿ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರಿದ ಕ್ಷಣ.
ಡಿಕೆ ಶಿವಕುಮಾರ್​ ನೇತೃತ್ವದಲ್ಲಿ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರಿದ ಕ್ಷಣ. (PTI)

ಬೆಂಗಳೂರು: ಸಿಪಿ ಯೋಗೇಶ್ವರ್‌ ಕೇವಲ ಚಲನಚಿತ್ರ ರಂಗದಲ್ಲಿ ಮಾತ್ರ ವರ್ಣರಂಜಿತ ನಟ ಅಲ್ಲ, ರಾಜಕೀಯ ಜೀವನದಲ್ಲೂ ಕಲರ್​ಫುಲ್‌ ರಾಜಕಾರಣಿ. ಒಂದೊಂದು ಚುನಾವಣೆಗೆ ಒಂದೊಂದು ಚಿಹ್ನೆಯ ಮೇಲೆ ಸ್ಪರ್ಧೆ ಮಾಡುವುದು ಇವರ ಜಾಯಮಾನ ಬೊಂಬೆಗಳ ನಾಡು ಚನ್ನಪಟ್ಟಣದಲ್ಲಿ 1999ರಿಂದ ನಡೆದ ಆಯಾ ಚುನಾವಣೆಗೆ ತಕ್ಕಂತೆ ಅವರು ಪಕ್ಷವನ್ನು ಬದಲಾಯಿಸುತ್ತಾ ಬಂದಿದ್ದಾರೆ. ಹಾಗೆಯೇ ಗೆಲುವು ಸಾಧಿಸುತ್ತಲೂ ಇದ್ದಾರೆ. ಪಕ್ಷದ ನಾಮಬಲಕ್ಕಿಂತ ಸ್ವಂತ ಬಲದಿಂದ ಗೆಲ್ಲುತ್ತಿದ್ದರು ಎನ್ನುವುದು ವಾಸ್ತವ. ಇಲ್ಲವಾದಲ್ಲಿ ಪಕ್ಕಾ ಒಕ್ಕಲಿಗರ ಕ್ಷೇತ್ರ ಚನ್ನಪಟ್ಟಣದಲ್ಲಿ ಸ್ವತಂತ್ರ, ಸಮಾಜವಾದಿ ಪಕ್ಷದ ಚಿನ್ಹೆಯಿಂದಲೂ ಗೆಲ್ಲುವುದು ಸಾಧ್ಯವೇ?

ಯೋಗೇಶ್ವರ್‌ ಮೂಲತಃ ರಿಯಲ್‌ ಎಸ್ಟೇಟ್‌ ಉದ್ಯಮಿ. ಮೆಗಾ ಸಿಟಿ ಎಂಬ ರಿಯಲ್‌ ಎಸ್ಟೇಟ್‌ ಎಂಬ ಕಂಪನಿ ಸ್ಥಾಪಿಸಿ ನಡೆಸಿದ್ದರು. ನಂತರ ಸಿನಿಮಾ ಗೀಳು ಹಿಡಿಸಿಕೊಂಡು ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ನಂತರ ತಾವೇ ಬಂಡವಾಳ ಹೂಡಿ ಸೈನಿಕ ಮೊದಲಾದ ಚಿತ್ರಗಳಲ್ಲಿ ನಾಯಕ ನಟನಾಗಿಯೂ ಅಭಿನಯಿಸಿದ್ದರು. ನಂತರ 1999ರಲ್ಲಿ ರಾಜಕಾರಣ ಪ್ರವೇಶಿಸಿ ಸಿನಿಮಾ ಗೀಳನ್ನು ಕಡಿಮೆ ಮಾಡಿಕೊಂಡರು. ಅಲ್ಲಿಂದೀಚೆಗೆ ರಾಜಕೀಯದಲ್ಲಿ ಏಳು ಬೀಳುಗಳನ್ನು ಕಾಣುತ್ತಾ ಬಂದಿದ್ದಾರೆ. 2019ರಲ್ಲಿ ಮತ್ತೊಮ್ಮೆ ಅಪರೇಷನ್‌ ಕಮಲ ನಡೆಸಿ ಬಿಎಸ್​ ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಯಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. ಶಾಸಕರ ಆಪರೇಷನ್​​ಗಾಗಿ ಬಂಡವಾಳವನ್ನೂ ಹೂಡಿದ್ದರು ಎಂದು ಅವರ ಆಪ್ತರು ಹೇಳುತ್ತಾರೆ. ಆಗ ಯಡಿಯೂರಪ್ಪ ಸಂಪುಟದಲ್ಲಿ ಸಚಿವರೂ ಆಗಿದ್ದರು.

ಯೋಗೇಶ್ವರ್ ರಾಜಕೀಯದ ಹಾದಿ

1999ರಲ್ಲಿ ವಿಧಾನಸಭಾ ಚುನಾವಣೆಗೆ ಸ್ವತಂತ್ರವಾಗಿ ಸ್ಪರ್ಧಿಸಿದ್ಧ ಸಿಪಿ ಯೋಗೇಶ್ವರ್‌ ವಿಧಾನಸಭೆ ಪ್ರವೇಶಿಸಿದ್ದರು. ನಂತರ ಕಾಂಗ್ರೆಸ್‌ ಸೇರ್ಪಡೆಯಾಗಿ 2004 ಮತ್ತು 2008ರಲ್ಲಿ ಗೆಲುವು ದಾಖಲಿಸಿದ್ದರು. 2011ರಲ್ಲಿ ಎದುರಾದ ಉಪ ಚುನಾವಣೆಯಲ್ಲಿ ಯೋಗೇಶ್ವರ್‌ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದರು. 2013ರಲ್ಲಿ ಸಮಾಜವಾದಿ ಪಕ್ಷಕ್ಕೆ ಹಾರಿ ಆಗಲೂ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿದ್ದರು. 2018 ಮತ್ತು 2023ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಯೋಗೇಶ್ವರ್‌, ಜೆಡಿಎಸ್‌ ವರಿಷ್ಠ ಎಚ್​ಡಿ ಕುಮಾರಸ್ವಾಮಿ ಅವರ ಎದುರು ಸೋಲು ಕಾಣಬೇಕಾಯಿತು. ನಂತರ ಅವರು ವಿಧಾನಪರಿಷತ್‌ ಸದಸ್ಯರಾಗಿ ಸಚಿವರಾಗಿದ್ದು ಇತಿಹಾಸ. ಯೋಗೇಶ್ವರ್‌ ಕಾಂಗ್ರೆಸ್‌ ಬಿಟ್ಟ ನಂತರ ಅಲ್ಲಿ ಕಾಂಗ್ರೆಸ್​ಗೆ ನೆಲೆಯೇ ಇಲ್ಲವಾಗಿತ್ತು. ಯಾರೊಬ್ಬರೂ ಕೈ ಚಿಹ್ನೆಯಿಂದ ಗೆಲ್ಲಲು ಆಗಿರಲಿಲ್ಲ.

ಚನ್ನಪಟ್ಟಣದಲ್ಲಿ ಯೋಗೇಶ್ವರ್ ಸಾಧನೆ

ಕ್ಷೇತ್ರದ ಯೋಗೇಶ್ವರ್‌ ಅವರಿಗೆ ಇರುವ ಹಿಡಿತ ಪ್ರಬಲವಾಗಿದೆ. ಮೊದಲನೆಯದಾಗಿ ಅವರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು. ಯೋಗೇಶ್ವರ್‌ 10ಕ್ಕೂ ಹೆಚ್ಚು ಕೆರೆಗಳಿಗೆ ನೀರು ಹರಿಸಿ ಚನ್ನಪಟ್ಟಣದ ಭಗೀರಥ ಎಂದೇ ಹೆಸರುವಾಸಿಯಾಗಿದ್ದಾರೆ. ಕ್ಷೇತ್ರದ ಜನರು ಅಲ್ಪಸಂಖ್ಯಾತ ಮುಸಲ್ಮಾನ ಮತ್ತು ಹಿಂದುಳಿದ ವರ್ಗಗಳೊಂದಿಗೆ ಇಟ್ಟುಕೊಂಡಿರುವ ಒಡನಾಟ ಗೆಲುವಿಗೆ ಸಹಕಾರಿಯಾಗಲಿದೆ. ಈಗ ಕಾಂಗ್ರೆಸ್‌ ಸೇರ್ಪಡೆ ಆಗಿದ್ದು ಸಿದ್ದರಾಮಯ್ಯ, ಶಿವಕುಮಾರ್‌, ಜಮೀರ್‌ ಅಹ್ಮದ್‌ ಕಾರಣಗಳಿಗೆ ಈ ಮತಗಳು ಮತ್ತಷ್ಟು ಕ್ರೋಢೀಕರಣಗೊಳ್ಳುತ್ತವೆ ಎಂದು ಯೋಗೇಶ್ವರ್‌ ಆಪ್ತರು ಹೇಳುತ್ತಾರೆ.

ಬಿಜೆಪಿ ಒಕ್ಕಲಿಗರೇ ಕಾರಣ; ಹೆಚ್​ಡಿಕೆ ಆರೋಪ

ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಒಂದು ಹೆಜ್ಜೆ ಮುಂದಿಟ್ಟಿದೆ. ಜೆಡಿಎಸ್ ಡೋಲಾಯಮಾನ ಸ್ಥಿತಿ ತಲುಪಿದೆ. ಯಾರನ್ನು ಕಣಕ್ಕಿಳಿಸುವುದು ಎಂದು ಸಾಧಕ ಭಾದಕಗಳನ್ನು ಕುರಿತು ಲೆಕ್ಕ ಹಾಕುತ್ತಿದೆ. ತಮ್ಮ ಪುತ್ರ ನಿಖಿಲ್‌ ನಿಲ್ಲಿಸಿದರೆ ಗೆಲುವು ದಕ್ಕುವುದೇ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ನಿಖಿಲ್ ಗೆಲುವು ಕಷ್ಟ ಎನ್ನುವುದಾದರೆ ಒಕ್ಕಲಿಗರ ಸಂಘದ ನಿರ್ದೇಶಕ ಪಕ್ಷದ ಮುಖಂಡ ಜಯಮುತ್ತು ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆದಿದೆ ಎಂದು ತಿಳಿದು ಬಂದಿದೆ. ಬಿಜೆಪಿ-ಜೆಡಿಎಸ್ ಸಂಬಂಧ ಕೆಡಲು ಬಿಜೆಪಿಯ ಒಕ್ಕಲಿಗ ಮುಖಂಡರು ಕಾರಣ ಎನ್ನುವುದು ಕುಮಾರಸ್ವಾಮಿ ಅವರ ಆರೋಪವಾಗಿದೆ. ಯೋಗಿ ಬಿಜೆಪಿ ಸೇರಲು ಶೋಭಾ ಕರಂದ್ಲಾಜೆ, ಡಾ. ಅಶ್ವತ್ಥ ನಾರಾಯಣ ಕಾರಣ ಎಂದೂ ಹೇಳಲಾಗುತ್ತಿದೆ.

ಒಟ್ಟಿನಲ್ಲಿ ಹಳೇ ಮೈಸೂರು ಭಾಗದಲ್ಲಿ ಕುಮಾರಸ್ವಾಮಿ ಪ್ರಭಾವ ಕಡಿಮೆ ಮಾಡಬೇಕು ಎನ್ನುವುದು ಇವರ ಉದ್ದೇಶ ಎನ್ನಲಾಗುತ್ತಿದೆ. ರಾಜಕೀಯ ನಿಂತ ನೀರಲ್ಲ. ಸದಾ ಹರಿಯುತ್ತಲೇ ಇರುತ್ತದೆ. ಒಂದೊಂದು ಚುನಾವಣೆಗೆ ಒಂದೊಂದು ಚಿಹ್ನೆಯಿಂದ ಸ್ಪರ್ಧಿಸುತ್ತಿರುವ ಯೋಗೇಶ್ವರ್‌ ಅವರು ಮುಂದಿನ ಚುನಾವಣೆಯ ಹೊತ್ತಿಗೆ ಕಾಂಗ್ರೆಸ್ ನಲ್ಲಿ ಉಳಿಯುವರೇ ಎಂದು ಹೇಳಲಾಗದು. ಶಿವಕುಮಾರ್‌ ಅವರ ಜತೆ ಏಗುವುದು ಕಷ್ಟ ಎನ್ನುವುದು ಯೋಗೇಶ್ವರ್‌ ಅವರಿಗೆ ಗೊತ್ತಿಲ್ಲದ ವಿಷಯವೇನಲ್ಲ. ಈ ಚುನಾವಣೆಗೆ ಯೋಗೇಶ್ವರ್‌ ಅವರಿಗೆ ಕಾಂಗ್ರೆಸ್‌, ಕಾಂಗ್ರೆಸ್​ಗೆ ಯೋಗೇಶ್ವರ್‌ ಅನಿವಾರ್ಯವಾಗಿದ್ದಾರೆ.

Whats_app_banner