ಶೃಂಗೇರಿ ಬೆನ್ನಲ್ಲೇ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಲ್ಲೂ ಭಕ್ತರಿಗೆ ಡ್ರೆಸ್ಕೋಡ್ ಜಾರಿ; ನಿಯಮ ಏನಿದೆ?
Sep 21, 2024 12:49 PM IST
ಶೃಂಗೇರಿ ಬೆನ್ನಲ್ಲೇ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಭಕ್ತರಿಗೆ ಡ್ರೆಸ್ಕೋಡ್ ಜಾರಿ
- Horanadu Sri Annapoorneshwari Temple: ರಾಜ್ಯದ ಪವಿತ್ರ ಯಾತ್ರಾ ಸ್ಥಳವಾದ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿಗೆ ತರಲಾಗಿದೆ.
ಕಳಸ (ಚಿಕ್ಕಮಗಳೂರು): ಶೃಂಗೇರಿಯ ಶಾರದಾ ದೇಗುಲದಲ್ಲಿ ವಸ್ತ್ರ ಸಂಹಿತೆ ಜಾರಿಯಾದ ಬೆನ್ನಲ್ಲೇ ರಾಜ್ಯದ ಪವಿತ್ರ ಯಾತ್ರಾ ಸ್ಥಳವಾದ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿಗೆ ತರಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರು ಇಂತಹದ್ದೇ ಉಡುಪು ಧರಿಸಬೇಕು ಎಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ದೇವಸ್ಥಾನದ ಆಡಳಿತ ಮಂಡಳಿ ಸೂಚಿಸಿದಂತೆ ಪುರುಷರು ಸಾಂಪ್ರದಾಯಿಕ ಪಂಚೆ, ಶಲ್ಯ ಅಥವಾ ಪ್ಯಾಂಟ್ ಧರಿಸುವುದು ಇನ್ಮುಂದೆ ಕಡ್ಡಾಯ. ಮಹಿಳೆಯರು ಸೀರೆ ಅಥವಾ ಚೂಡಿದಾರ್ ಧರಿಸಿ ದೇಗುಲದ ಒಳಗೆ ಪ್ರವೇಶ ಪಡೆಯಬಹುದಾಗಿದೆ. ಈ ಬಟ್ಟೆಗಳನ್ನು ಹೊರತುಪಡಿಸಿ ಬೇರೆ ಬಗೆಯ ಬಟ್ಟೆ ಧರಿಸಿದವರಿಗೆ ದೇಗುಲದ ಒಳಗೆ ಪ್ರವೇಶ ನಿರಾಕರಿಸಲಾಗುತ್ತದೆ ಎಂದು ದೇವಸ್ಥಾನದ ಹೊರಗೆ ಫಲಕ ಹಾಕಲಾಗಿದೆ.
ದೇವಸ್ಥಾನದ ಆವರಣದಲ್ಲಿ ಶ್ರದ್ಧೆ ಮತ್ತು ಭಕ್ತಿ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದ್ದೇವೆ. ಭಕ್ತರು ಎಂದಿನಂತೆ ಈ ಬದಲಾವಣೆಗೂ ಸಹಕಾರ ನೀಡಬೇಕು ಎಂದು ಆಡಳಿತ ಮಂಡಳಿ ಕೋರಿದೆ. ಕೆಲವರು ಆಧುನಿಕ ಉಡುಪು ಧರಿಸಿ ಉಳಿದ ಭಕ್ತರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಇತ್ತೀಚೆಗೆ ಶೃಂಗೇರಿಯ ಶ್ರೀ ಶಾರದಾಂಬೆ ಸನ್ನಿದಾನದಲ್ಲೂ ಡ್ರೆಸ್ ಕೋಡ್ ಬದಲಾಗಿತ್ತು.
ಆಗಸ್ಟ್ 1ರಿಂದ ಶೃಂಗೇರಿಯಲ್ಲಿ ಡ್ರೆಸ್ ಕೋಡ್
ಇತ್ತೀಚೆಗೆ ಪ್ರಸಿದ್ಧ ಶೃಂಗೇರಿಯ ಶ್ರೀ ಶಾರದಾಂಬೆ ಸನ್ನಿಧಾನದಲ್ಲಿ ಹಾಗೂ ಸುತ್ತಲಿನ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಯಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲೂ ಅಂತಹದ್ದೇ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿಂದೆ ಹಲವು ದೇವಾಯಲಗಳಲ್ಲೂ ಡ್ರೆಸ್ ಕೋಡ್ ಜಾರಿಯಾಗಿದ್ದನ್ನು ಸ್ಮರಿಸಬಹುದು.
ಆಗಸ್ಟ್ 1ರಿಂದ ಶೃಂಗೇರಿಯಲ್ಲಿ ವಸ್ತ್ರಸಂಹಿತೆ ಜಾರಿಗೆ ಆಗಿತ್ತು. ಆಧುನಿಕ ಉಡುಪು ಧರಿಸಿದರೆ ದೇವಸ್ಥಾನದೊಳಗೆ ಮಾತ್ರವಲ್ಲ ದೇವಸ್ಥಾನದ ಆವರಣಕ್ಕೂ ಪ್ರವೇಶ ಇಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಿಸಿತ್ತು. ಶಾರದಾಂಬೆಯ ದೇವಸ್ಥಾನ ಅಲ್ಲದೆ, ಪಕ್ಕದಲ್ಲಿರುವ ಶ್ರೀ ಶಂಕರಾಚಾರ್ಯರ ದೇವಸ್ಥಾನ, ತುಂಗಾ ತೀರ, ಕಪ್ಪೆ ಶಂಕರನ ಗುಡಿಯಲ್ಲೂ ವಸ್ತ್ರ ಸಂಹಿತೆ ಪಾಲಿಸಬೇಕು ಎಂದು ಸೂಚಿಸಿತ್ತು.
ಇಲ್ಲೂ ಸಹ ಪುರುಷರು ಪಂಚೆ, ಶಲ್ಯ ಮತ್ತು ಜುಬ್ಬಾ - ಪೈಜಾಮ ಧರಿಸಿ ದೇವರ ದರ್ಶನ ಪಡೆಯಬಹುದು. ಮಹಿಳೆಯರು ಸಾಂಪ್ರದಾಯಿಕ ಸೀರೆ, ಸಾಂಪ್ರದಾಯಿಕ ರವಿಕೆ, ಸಲ್ವಾರ್ ಜತೆಗೆ ದುಪ್ಪಟ್ಟ ಅಥವಾ ಲಂಗ ದಾವಣಿ ಧರಿಸಿಕೊಂಡು ಬರಬೇಕು ಎಂದು ದೇವಾಲಯದ ಆಡಳಿತ ಮಂಡಳಿ ಸೂಚಿಸಿತ್ತು. ಈ ಡ್ರೆಸ್ ಕೋಡ್ನಂತೆ ಬಂದರೆ ಮಾತ್ರ ದೇವಿಯ ದರ್ಶನ ಸಿಗಲಿದೆ ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿತ್ತು.