ಮೈಸೂರು ದಸರಾ ಹಿನ್ನೆಲೆ 34 ರೈಲುಗಳಿಗೆ ಹೆಚ್ಚುವರಿ ಬೋಗಿ; ಸೆ 27ರಿಂದ ಯಶವಂತಪುರ-ತುಮಕೂರು ನಡುವೆ ಮೆಮು ರೈಲು ಆರಂಭ
ದಸರಾ ಪ್ರಯುಕ್ತ 34 ರೈಲುಗಳಿಗೆ ಹೆಚ್ಚು ಬೋಗಿಗಳನ್ನು ಅಳವಡಿಸಲು ನೈರುತ್ಯ ರೈಲ್ವೆಯು ನಿರ್ಧರಿಸಿದೆ. ಅಲ್ಲದೆ, ಸೆಪ್ಟೆಂಬರ್ 27ರಿಂದ ಯಶವಂತಪುರ ಮತ್ತು ತುಮಕೂರು ನಡುವೆ ಹೊಸದಾಗಿ ಮೆಮು ರೈಲು ಸಂಚಾರ ಆರಂಭವಾಗಲಿದೆ.
ಬೆಂಗಳೂರು: ನಾಡಹಬ್ಬ ಮೈಸೂರು ದಸರಾಗೆ ಭರ್ಜರಿ ಸಿದ್ದತೆ ನಡೆಯುತ್ತಿದೆ. ಈಗಿನಿಂದಲೇ ಪ್ರವಾಸಿಗರು ಮೈಸೂರಿನತ್ತ ಹೆಜ್ಜೆ ಹಾಕುತ್ತಿದ್ದಾರೆ. ಹಬ್ಬಕ್ಕೂ ಮುನ್ನವೇ ಹೋಟೆಲ್, ಲಾಡ್ಜ್ಗಳು, ರೆಸಾರ್ಟ್ಗಳು ಮುಂಗಡ ಬುಕ್ಕಿಂಗ್ ಆಗುತ್ತಿವೆ. ದಸರಾ ಸಂದರ್ಭದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ ಎಂಬ ಕಾರಣಕ್ಕೆ ಹಾಗೂ ದಟ್ಟಣೆ ಕಡಿಮೆ ಮಾಡುವ ಸಲುವಾಗಿ ಅಕ್ಟೋಬರ್ 1 ರಿಂದ ಅಕ್ಟೋಬರ್ 15ರ ತನಕ 34 ರೈಲುಗಳಿಗೆ ತಾತ್ಕಾಲಿಕ ಹೆಚ್ಚುವರಿ ಬೋಗಿಗಳ ಜೋಡಣೆಗೆ ನೈರುತ್ಯ ರೈಲ್ವೆಯು ಮುಂದಾಗಿದೆ.
ಮೈಸೂರು–ಬೆಳಗಾವಿ–ಮೈಸೂರು ಎಕ್ಸ್‌ಪ್ರೆಸ್, ಹುಬ್ಬಳ್ಳಿ -ಮೈಸೂರು– ಹುಬ್ಬಳ್ಳಿ ಹಂಪಿ ಎಕ್ಸ್‌ಪ್ರೆಸ್, ಮೈಸೂರು-ಚಾಮರಾಜ ನಗರ- ಮೈಸೂರು ಎಕ್ಸ್‌ಪ್ರೆಸ್, ಮೈಸೂರು-ಪಂಡರಪುರ–ಮೈಸೂರು ಗೋಲಗುಂಬಜ್ ಎಕ್ಸ್‌ಪ್ರೆಸ್, ಮೈಸೂರು ಬಾಗಲಕೋಟೆ–ಮೈಸೂರು ಬಸವ ಎಕ್ಸ್‌ಪ್ರೆಸ್ ರೈಲುಗಳಿಗೆ ತಲಾ 1 ಸ್ಲೀಪರ್ ಕ್ಲಾಸ್ ಬೋಗಿ, ಮೈಸೂರು-ತಾಳಗುಪ್ಪ– ಮೈಸೂರು ಎಕ್ಸ್‌ಪ್ರೆಸ್ ರೈಲುಗಳಿಗೆ ತಲಾ 2 ಸ್ಲೀಪರ್ ಕ್ಲಾಸ್ ಬೋಗಿಗಳನ್ನು ಜೋಡಿಸಲು ನಿರ್ಧರಿಸಲಾಗಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
- ಮೈಸೂರು- ಚಾಮರಾಜನಗರ- ಮೈಸೂರು ಪ್ಯಾಸೆಂಜರ್ ಸ್ಪೆಷಲ್
- ತಾಳಗುಪ್ಪ-ಮೈಸೂರು–ತಾಳಗುಪ್ಪ ಕುವೆಂಪು ಎಕ್ಸ್‌ಪ್ರೆಸ್
- ಕೆಎಸ್ಆರ್ ಬೆಂಗಳೂರು-ಅರಸೀಕೆರೆ-ಕೆಎಸ್ಆರ್ ಬೆಂಗಳೂರು ಪ್ಯಾಸೆಂಜರ್
- ಕೆಎಸ್ಆರ್ ಬೆಂಗಳೂರು- ಚನ್ನಪಟ್ಟಣ- ಕೆಎಸ್ಆರ್ ಬೆಂಗಳೂರು ಪ್ಯಾಸೆಂಜರ್
- ಅರಸೀಕೆರೆ- ಮೈಸೂರು– ಅರಸೀಕೆರೆ ಪ್ಯಾಸೆಂಜರ್
- ಮೈಸೂರು- ಶಿವಮೊಗ್ಗ– ಮೈಸೂರು ಎಕ್ಸ್‌ಪ್ರೆಸ್
- ಶಿವಮೊಗ್ಗ– ಚಿಕ್ಕಮಗಳೂರು– ಶಿವಮೊಗ್ಗ ಪ್ಯಾಸೆಂಜರ್
- ಚಿಕ್ಕಮಗಳೂರು- ಯಶವಂತಪುರ- ಚಿಕ್ಕಮಗಳೂರು ಎಕ್ಸ್‌ಪ್ರೆಸ್
- ಅರಸೀಕೆರೆ- ಮೈಸೂರು– ಅರಸೀಕೆರೆ ಪ್ಯಾಸೆಂಜರ್
- ಮೈಸೂರು-ಎಸ್ಎಂವಿಟಿ ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್
- ಎಸ್ಎಂವಿಟಿ ಬೆಂಗಳೂರು-ಕರೈಕಲ್–ಎಸ್ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲುಗಳಿಗೆ ತಲಾ ಒಂದು ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳನ್ನು ಜೋಡಿಸಲಾಗುತ್ತಿದೆ.
ಸೆಪ್ಟೆಂಬರ್ 27 ರಿಂದ ಮೆಮು ರೈಲು ಆರಂಭ
ಸೆಪ್ಟೆಂಬರ್ 27ರಿಂದ ಯಶವಂತಪುರ ಮತ್ತು ತುಮಕೂರು ನಡುವೆ ಹೊಸದಾಗಿ ಮೆಮು ರೈಲು ಸಂಚಾರ ಆರಂಭವಾಗಲಿದೆ. ಪ್ರತಿದಿನ ತುಮಕೂರಿನಿಂದ 8.45ಕ್ಕೆ ಹೊರಟು 10.25ಕ್ಕೆ ಯಶವಂತಪುರ ತಲುಪಲಿದೆ. ಸಂಜೆ ಯಶವಂತಪುರದಿಂದ ಹೊರಟರೆ ಸಂಜೆ 7.05ಕ್ಕೆ ತುಮಕೂರು ಮುಟ್ಟಲಿದೆ. ಎಲ್ಲಾ ನಿಲ್ದಾಣಗಳಲ್ಲೂ ರೈಲು ನಿಲುಗಡೆ ಆಗಲಿದೆ. ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಅವರು ಈ ಮೆಮು ರೈಲು ಸಂಚಾರಕ್ಕೆ ಸೆ 27ರಂದು ಚಾಲನೆ ನೀಡಲಿದ್ದಾರೆ.
ವಾರಕ್ಕೊಮ್ಮೆ ಅಂದರೆ ಪ್ರತಿ ಸೋಮವಾರ ಬಾಣಸವಾಡಿಯಿಂದ ಬೆಳಿಗ್ಗೆ 6.15ಕ್ಕೆ ಮತ್ತೊಂದು ಮೆಮು ರೈಲು ಸಂಚಾರ ಆರಂಭವಾಗಲಿದೆ. ಚಿಕ್ಕ ಬಾಣಾವರ ಮೂಲಕ (ಆದರೆ ಇಲ್ಲಿ ಯಶವಂತಪುರ ಮೂಲಕ ಅಲ್ಲ), ಸಂಚಾರ ನಡೆಸಲಿದ್ದು, ಬೆಳಿಗ್ಗೆ 8.35ಕ್ಕೆ ತುಮಕೂರು ತಲುಪಲಿದೆ. ವಾರಕ್ಕೊಮ್ಮೆ ಅಂದರೆ ಪ್ರತಿ ಶನಿವಾರ 7.40ಕ್ಕೆ ತುಮಕೂರಿನಿಂದ ಹೊರಟು ರಾತ್ರಿ 10.05ಕ್ಕೆ ಬಾಣಸವಾಡಿ ತಲುಪಲಿದೆ.