logo
ಕನ್ನಡ ಸುದ್ದಿ  /  ಕರ್ನಾಟಕ  /  Childrens Day 2024: ಮಕ್ಕಳ ಸಮಗ್ರ ಪ್ರಗತಿಗಾಗಿ ಕರ್ನಾಟಕ ಸರ್ಕಾರದಿಂದ ಸಿಗುವ ಸೌಲಭ್ಯಗಳೇನು, ಪಡೆಯುವುದು ಹೇಗೆ

Childrens day 2024: ಮಕ್ಕಳ ಸಮಗ್ರ ಪ್ರಗತಿಗಾಗಿ ಕರ್ನಾಟಕ ಸರ್ಕಾರದಿಂದ ಸಿಗುವ ಸೌಲಭ್ಯಗಳೇನು, ಪಡೆಯುವುದು ಹೇಗೆ

Umesha Bhatta P H HT Kannada

Nov 13, 2024 08:40 AM IST

google News

ಕರ್ನಾಟಕದಲ್ಲಿ ಮಕ್ಕಳ ಸಮಗ್ರ ಅಭಿವೃದ್ದಿಗೆ ಹಲವಾರಿ ಯೋಜನೆಗಳನ್ನು ರೂಪಿಸಲಾಗಿದೆ.

    • Children Day 2024: ಮಕ್ಕಳ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರವು ಮಕ್ಕಳಿಗೆ ವಿಶೇಷ ಆರ್ಥಿಕ ನೆರವು, ಬೆಂಬಲ ಕೊಡುವ ಯೋಜನೆ ರೂಪಿಸಿದೆ. ಇಂತಹ ಯೋಜನೆಗಳ ವಿವರ ಇಲ್ಲಿದೆ. 
ಕರ್ನಾಟಕದಲ್ಲಿ ಮಕ್ಕಳ ಸಮಗ್ರ ಅಭಿವೃದ್ದಿಗೆ ಹಲವಾರಿ ಯೋಜನೆಗಳನ್ನು ರೂಪಿಸಲಾಗಿದೆ.
ಕರ್ನಾಟಕದಲ್ಲಿ ಮಕ್ಕಳ ಸಮಗ್ರ ಅಭಿವೃದ್ದಿಗೆ ಹಲವಾರಿ ಯೋಜನೆಗಳನ್ನು ರೂಪಿಸಲಾಗಿದೆ. (prajavani)

ಬೆಂಗಳೂರು: ಮಕ್ಕಳ ಸಮಗ್ರ ಅಭಿವೃದ್ದಿ ದೃಷ್ಟಿಯ ಉದ್ದೇಶದಿಂದ ಕರ್ನಾಟಕ ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಡಿಯಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿದೆ, ಮಕ್ಕಳ ಶಿಕ್ಷಣ, ಆರೋಗ್ಯ, ಪೌಷ್ಠಿಕಾಂಶವನ್ನು ಒದಗಿಸುವ ಜತೆಗೆ ಅವರು ಬದುಕು ಕಟ್ಟಿಕೊಳ್ಳಲು ಪೂರಕವಾಗುವಂತೆ ಆರ್ಥಿಕ ನೆರವು ಒದಗಿಸುವ ವಿಶಿಷ್ಟ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಲಾಗುತ್ತಿದೆ. ಬಹುತೇಕ ಯೋಜನೆಗಳನ್ನು ಆಯಾ ಜಿಲ್ಲೆಗಳ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ತಾಲ್ಲೂಕುಗಳಲ್ಲಿ ಸಮಗ್ರ ಮಕ್ಕಳ ಅಭಿವೃದ್ದಿ ಯೋಜನೆ, ಗ್ರಾಮ ಮಟ್ಟದಲ್ಲಿ ಅಂಗನವಾಡಿಗಳ ಮೂಲಕ ಜಾರಿಗೊಳಿಸಲಾಗುತ್ತದೆ. ಅಂತಹ ಪ್ರಮುಖ ಯೋಜನೆಗಳ ವಿವರ ಇಲ್ಲಿದೆ.

  1. ಸಮಗ್ರ ಶಿಶು ಅಭಿವೃದ್ದಿ ಯೋಜನೆ

ಆರು ತಿಂಗಳಿನಿಂದ ಆರು ವರ್ಷದವರೆಗಿನ ಮಕ್ಕಳು, ಪ್ರಾಯ ಪೂರ್ವ ಬಾಲಕಿಯರಿಗೆ ಪೂರಕ ಪೌಷ್ಠಿಕ ಆಹಾರ ಹಾಗೂ ಆರೋಗ್ಯ ಸೇವೆ ನೀಡಲಾಗುತ್ತದೆ. ಇದರಲ್ಲಿ ಹಾಲು, ಕಾಳು, ಧಾನ್ಯಗಳನ್ನು ಒದಗಿಸಲಾಗುತ್ತದ, ಹತ್ತಿರದ ಅಂಗನವಾಡಿ ಸಂಪರ್ಕಿಸಬಹುದು.

2. ಭಾಗ್ಯ ಲಕ್ಷ್ಮಿ ಯೋಜನೆ

ಬಿಪಿಎಲ್‌ ಕುಟುಂಬದಲ್ಲಿ ಜನಿಸಿದ ಮೊದಲ ಇಬ್ಬರು ಹೆಣ್ಣು ಮಕ್ಕಳಿಗೆ ಆರೋಗ್ಯ ವಿಮೆ ಹಾಗೂ ಹದಿನೆಂಟು ವರ್ಷ ತುಂಬಿದ ನಂತರ ಒಂದು ಲಕ್ಷ ರೂ. ಮೊತ್ತವನ್ನು ಪಾವತಿ ಮಾಡುವ ಯೋಜನೆಯಿದು. ಸಂಬಂಧಿಸಿದ ಅಂಗನವಾಡ ಕೇಂದ್ರಗಳ ಮೂಲಕ ಸ್ವಸಹಾಯ ಸಂಘಗಳನ್ನು ರಚಿಸಿಕೊಂಡು ಭಾಗ್ಯಲಕ್ಷ್ಮಿ ಸವಲತ್ತು ಪಡೆಯಬಹುದು.

3. ಎಚ್‌ಐವಿ ಸೋಂಕಿತ/ ಬಾಧಿತ ಮಕ್ಕಳ ಯೋಜನೆ

ಏಡ್ಸ್‌, ಎಚ್‌ಐವಿ ಸೋಂಕಿತ/ ಬಾಧಿತ ಮಕ್ಕಳ ಜೀವನ ಮಟ್ಟ ಉತ್ತಮ ಪಡಿಸಲು ಶಿಕ್ಷಣ ಒದಗಿಸುವ ಮೂಲಕ ಅವರನ್ನು ಸಬಲರನ್ನಾಗಿಸಲು ಆರೋಗ್ಯ ಸೇವೆ ಹಾಗೂ ಉತ್ತಮ ಪೌಷ್ಠಿಕ ಆಹಾರ ಒದಗಿಸುವ ಯೋಜನೆಯಿದು. ಸೋಂಕು ಉಲ್ಬಣವಾಗದಂತೆ ಮಾಡಲು ಅವರಿಗೆ ಚಿಕಿತ್ಸೆ ಜತೆಗೆ ಆರ್ಥಿಕ ನೆರವನ್ನು ನೀಡಲಾಗುತ್ತದೆ. ಆಯಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ಸಂಪರ್ಕಿಸಬಹುದು.

4. ಪ್ರಾಯೋಜಕತ್ವ ಯೋಜನೆ

ಸತತವಾಗಿ ಸರ್ಕಾರಿ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿರುವ ಕುಟುಂಬಗಳಿಗೆ ಮರು ಸೇರ್ಪಡೆ ಮಾಡುವ ಮಕ್ಕಳಿಗೆ ಇದು ಯೋಜನೆ. ಕುಟುಂಬಕ್ಕೆ ಆಧಾರವಾಗಿದ್ದ ಪೋಷಕರು ಜೈಲಿನಲ್ಲಿದ್ದರೆ, ಅಂತಹ ಮಕ್ಕಳಿಗೆ ಆರ್ಥಿಕ ಸೌಲಭ್ಯ ನೀಡಲಾಗುತ್ತದೆ. ಅನಾಥರು, ಏಕ ಪೋಷಕರು, ವಿಧವೆಯರ ಮಕ್ಕಳಿಗೂ ಸೌಲಭ್ಯ ಉಂಟು ಕುಷ್ಟ ರೋಗ/ ಎಚ್‌ಐವಿ ಸೋಂಕಿತ ಪೋಷಕರ ಮಕ್ಕಳಿಗೆ ಈ ಯೋಜನೆಯಡಿ ಪ್ರತಿ ಕುಟುಂಬದಲ್ಲಿನ ಹದಿನೆಂಟು ವರ್ಷದೊಳಗಿನ ಗರಿಷ್ಠ ಇಬ್ಬರು ಮಕ್ಕಳಿಗ ಮಾತ್ರ ಪ್ರತೀ ತಿಂಗಳು ಒಂದು ಸಾವಿರದಂತೆ ಗರಿಷ್ಠ ಮೂರು ವರ್ಷಗಳ ಕಾಲ ಆರ್ಥಿಕ ಬೆಂಬಲ ನೀಡಲಾಗುತ್ತದೆ. ಆಯಾ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರ ಕಚೇರಿ ಸಂಪರ್ಕಿಸಬಹುದು.

5. ಶೌರ್ಯ ಸಾಹಸ ಪ್ರಶಸ್ತಿ ಪಡೆದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ನೆರವು

ಕಷ್ಟದ ಸಂದರ್ಭದಲ್ಲಿ ಇಲ್ಲವೇ ಪರಿಸ್ಥಿತಿಯಲ್ಲಿ ಬೆಂಬಲವಾಗಿ ನಿಂತು ಶೌರ್ಯ ಪ್ರಶಸ್ತಿ ಪಡೆದ ಮಕ್ಕಳಿಗೆ ಶಾಲಾ ಶುಲ್ಕ ಹಾಗೂ ಪುಸ್ತಕ ಖರೀದಿಗಾಗಿ ವರ್ಷಕ್ಕೆ ಎರಡು ಸಾವಿರ ರೂ.ಧನ ಸಹಾಯವನ್ನು ಶಾಲಾ ಶಿಕ್ಷಣ ಮುಗಿಯುವವರೆಗೂ ನೀಡಲಾಗುತ್ತದೆ.

6. ಅಸಾಧಾರಣ ಪ್ರತಿಭೆ ಹೊಂದಿರುವ ಮಕ್ಕಳಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ

ಶಿಕ್ಷಣ, ಕಲೆ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಅಸಾಧಾರಣ ಪ್ರತಿಭೆಯುಳ್ಳ ಪ್ರತೀ ಕ್ಷೇತ್ರದಲ್ಲಿ ಇಬ್ಬರು ಮಕ್ಕಳನ್ನು ಗುರುತಿಸಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಸಮಿತಿಯ ಅನುಮೋದನೆಯೊಂದಿಗೆ ಪ್ರಶಸ್ತಿ ನೀಡುವ ಯೋಜನೆ ಇದಾಗಿದೆ. ಈ ಪ್ರಶಸ್ತಿಯು ರೂ. 10,000 ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಪ್ರತೀ ವರ್ಷ ಜಿಲ್ಲೆಯಲ್ಲಿ 8 ಇಂತಹ ಮಕ್ಕಳಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ.

7. ಕೌಶಲ್ಯ ಅಭಿವೃದ್ಧಿ ತರಬೇತಿ

ಸುಧಾರಣಾ ಸಂಸ್ಥೆಗಳಲ್ಲಿ ದಾಖಲಾಗುವ ಮಕ್ಕಳು ಹಾಗೂ ಮಹಿಳೆಯರ ಹಿನ್ನೆಲೆ ಶೋಚನೀಯ. ಈ ಮಕ್ಕಳು ಹಾಗೂ ಮಹಿಳೆಯರು ತೀರಾ ಬಡತನದಿಂದ, ಒಡೆದ ಕುಟುಂಬದಿಂದ, ಸಾಮರಸ್ಯವಿಲ್ಲದ ಕುಟುಂಬದಿಂದ, ಏಕ ಪೋಷಕರು ಅಥವಾ ಯಾರೂ ಪೋಷಕರಿಲ್ಲದ ಕುಟುಂಬದಿಂದ ಬಂದಂತಹವರಾಗಿರುತ್ತಾರೆ. 

ಇಂತಹ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಇಲಾಖೆಯು ಶ್ರಮಿಸುತ್ತಿದ್ದು ಈಗ ಸದ್ಯ ನೀಡಲಾಗುತ್ತಿರುವ ಔಪಚಾರಿಕ ಶಿಕ್ಷಣದ ಜೊತೆಗೆ ಈ ಸಂಸ್ಥೆಗಳಲ್ಲಿನ ಮಕ್ಕಳು ಮತ್ತು ಮಹಿಳೆಯರು ಸ್ಪರ್ಧಾತ್ಮಕ ಜಗತ್ತಿನಲ್ಲಿ ಜೀವನದ ಮುಖ್ಯವಾಹಿನಿಗೆ ಸೇರಲು ಉದ್ಯೋಗಾಧಾರಿತ ಕೌಶಲ್ಯ ತರಬೇತಿಗಳನ್ನು ಪಡೆಯುವುದು ಅವಶ್ಯಕವೆಂದು ಮನಗಂಡು ಸರ್ಕಾರವು ಸುಧಾರಣಾ ಸಂಸ್ಥೆಗಳ ನಿವಾಸಿಗಳಿಗೆ ಕೌಶಲ್ಯತೆ ಅಭಿವೃದ್ಧಿ ತರಬೇತಿ ಯೋಜನೆಯನ್ನು ಜಾರಿಗೆ ತಂದಿದೆ. 

ಈ ಯೋಜನೆಯಡಿ ಸಂಸ್ಥೆಯ ನಿವಾಸಿಗಳು ಅವರ ಆಸಕ್ತಿ, ಅರ್ಹತೆಗನುಗುಣವಾಗಿ ಯಾವುದೇ ಕುಶಲತೆಯಲ್ಲಿ ತರಬೇತಿಯನ್ನು ಹೊಂದಬಹುದು.

8. ಬಾಲಭವನ

6-16 ವರ್ಷದ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರಲು ಜಿಲ್ಲಾ ಬಾಲಭವನದಿಂದ ಸೃಜನಾತ್ಮಕ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. 

ಈ ಚಟುವಟಿಕೆಗಳಲ್ಲಿ ಸಂಗೀತಾ, ನೃತ್ಯ, ಚಿತ್ರಕಲೆ, ಕರಕುಶಲ ಕಲೆ, ಜೇಡಿ ಮಣ್ಣಿನ ಕಲೆ, ನಾಟಕ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಂಡು ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಯನ್ನು ಗುರುತಿಸಿ ಬೆಳಕಿಗೆ ತರುವುದೇ ಬಾಲಭವನದ ಉದ್ದೇಶ. 

ಈ ಕಾರ್ಯಕ್ರಮಗಳನ್ನು ಸರ್ಕಾರಿ ಶಾಲಾ ಮಕ್ಕಳು ಹಾಗೂ ಸೌಲಭ್ಯ ವಂಚಿತ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡುವುದು ಸರ್ಕಾರಿ ಬಾಲಕರು/ಬಾಲಕಿಯರು ಬಾಲಮಂದಿರದ ಸಂಸ್ಥೆಗಳ ಮಕ್ಕಳಿಗೆ, ವಿಕಲಚೇತನ ಮಕ್ಕಳಿಗೆ ಮತ್ತು ಹೆಚ್ ಐ ವಿ ಸೊಂಕುಪೀಡಿತ ಮಕ್ಕಳಿಗೂ ವಿಶೇಷ ಆದ್ಯತೆ ನೀಡಲಾಗುತ್ತದೆ.

ಮಾಹಿತಿಗೆ ಸಂಪರ್ಕ ಸಂಖ್ಯೆ 080-2225 2329.

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ