logo
ಕನ್ನಡ ಸುದ್ದಿ  /  ಜೀವನಶೈಲಿ  /  Childrens Day: ನವೆಂಬರ್ 14ರಂದೇ ಮಕ್ಕಳ ದಿನ ಆಚರಿಸಲು ಕಾರಣವೇನು? ಈ ದಿನದ ಇತಿಹಾಸ, ಮಹತ್ವ ತಿಳಿಯಿರಿ

Childrens Day: ನವೆಂಬರ್ 14ರಂದೇ ಮಕ್ಕಳ ದಿನ ಆಚರಿಸಲು ಕಾರಣವೇನು? ಈ ದಿನದ ಇತಿಹಾಸ, ಮಹತ್ವ ತಿಳಿಯಿರಿ

Reshma HT Kannada

Nov 07, 2024 12:59 PM IST

google News

ಮಕ್ಕಳ ದಿನಾಚರಣೆ 2024 (ಸಾಂಕೇತಿಕ ಚಿತ್ರ)

    • ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬ ಮಾತಿದೆ. ಮಕ್ಕಳ ಹಕ್ಕು ಹಾಗೂ ಶಿಕ್ಷಣದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಪ್ರತಿ ವರ್ಷ ನವೆಂಬರ್ 14 ರಂದು ಭಾರತದಲ್ಲಿ ಮಕ್ಕಳ ದಿನ ಆಚರಿಸಲಾಗುತ್ತದೆ. ವಿಶ್ವಸಂಸ್ಥೆ ನವೆಂಬರ್ 20ಕ್ಕೆ ಮಕ್ಕಳ ದಿನ ಆಚರಿಸಿದರೂ ಭಾರತದಲ್ಲಿ ನವೆಂಬರ್ 14ರಂದೇ ಮಕ್ಕಳ ದಿನ ಆಚರಿಸಲಾಗುತ್ತದೆ. ಇದಕ್ಕೆ ಕಾರಣ, ಈ ದಿನದ ಇತಿಹಾಸ, ಮಹತ್ವ ತಿಳಿಯಿರಿ.
ಮಕ್ಕಳ ದಿನಾಚರಣೆ 2024 (ಸಾಂಕೇತಿಕ ಚಿತ್ರ)
ಮಕ್ಕಳ ದಿನಾಚರಣೆ 2024 (ಸಾಂಕೇತಿಕ ಚಿತ್ರ)

ನವೆಂಬರ್ ತಿಂಗಳು ಎಂದರೆ ಮಕ್ಕಳ ತಿಂಗಳು ಎಂದರೂ ತಪ್ಪಾಗಲಿಕ್ಕಿಲ್ಲ. ಭಾರತದಾದ್ಯಂತ ಪ್ರತಿವರ್ಷ ನವೆಂಬರ್ 14 ರಂದು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಶಾಲೆಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಬಹುಮಾನ ವಿತರಣೆಗಳನ್ನೂ ಮಾಡಲಾಗುತ್ತದೆ. ಈ ದಿನವು ಮಕ್ಕಳ ಹಕ್ಕು ಮತ್ತು ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ದಿನವೂ ಆಗಿದೆ. ಭಾರತದಲ್ಲಿ ನವೆಂಬರ್ 14ರಂದೇ ಮಕ್ಕಳ ದಿನ ಆಚರಿಸುವುದೇಕೆ ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ ಇಲ್ಲಿದೆ ಉತ್ತರ.

ನವೆಂಬರ್ 14ರಂದೇ ಮಕ್ಕಳ ದಿನಾಚರಣೆ ಆಚರಿಸಲು ಕಾರಣವೇನು?

ನವೆಂಬರ್ 14 ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರು ಹುಟ್ಟಿದ ದಿನ. ನೆಹರೂ ಅವರ ಜನ್ಮವಾರ್ಷಿಕೋತ್ಸವವನ್ನು ಮಕ್ಕಳ ದಿನ ಎಂದು ಆಚರಿಸಲಾಗುತ್ತದೆ. ನೆಹರೂ ಅವರನ್ನು ಚಾಚಾ ಎಂದೇ ಕರೆಯಲಾಗುತ್ತದೆ. ನೆಹರೂ ಮಕ್ಕಳ ಶಿಕ್ಷಣ ಮತ್ತು ಹಕ್ಕುಗಳ ಪ್ರಬಲ ಪ್ರತಿಪಾದಕರಾಗಿದ್ದರು.

ಅವರ ದೃಷ್ಟಿಕೋನವು ದೇಶದ ಭವಿಷ್ಯ ಮತ್ತು ಸಮಾಜದ ಅಡಿಪಾಯವಾಗಿ ಮಕ್ಕಳ ಪ್ರಾಮುಖ್ಯತೆಯನ್ನು ಒತ್ತಿಹೇಳಿತು. ಮಕ್ಕಳು ಸಮಾಜದ ಆಸ್ತಿ ಎಂದು ನೆಹರೂ ಪ್ರತಿಪಾದಿಸಿದರು. ಎಲ್ಲಾ ಮಕ್ಕಳಿಗೂ ಶಿಕ್ಷಣ ಸಿಗಬೇಕು ಎಂದು ಅವರು ಒತ್ತಿ ಹೇಳಿದ್ದರು. 1955ರಲ್ಲಿ ಅವರು ಭಾರತೀಯ ಮಕ್ಕಳನ್ನು ಪ್ರತಿನಿಧಿಸಲು ಚಿಲ್ಡ್ರನ್ಸ್ ಫಿಲ್ಮ್ ಸೊಸೈಟಿ ಇಂಡಿಯಾವನ್ನು ಸ್ಥಾಪಿಸಿದ್ದರು.

ಮಕ್ಕಳ ದಿನಾಚರಣೆಯ ಇತಿಹಾಸ

ಮಕ್ಕಳ ದಿನವನ್ನು ಮೊದಲ ಬಾರಿಗೆ 1948ರಲ್ಲಿ ನವೆಂಬರ್ 5 ರಂದು "ಫ್ಲವರ್ ಡೇ" ಎಂದು ಆಚರಿಸಲಾಯಿತು. ಭಾರತೀಯ ಮಕ್ಕಳ ಕಲ್ಯಾಣ ಮಂಡಳಿಯು ಫ್ಲವರ್ ಟೋಕನ್‌ಗಳನ್ನು ಮಾರಾಟ ಮಾಡುವ ಮೂಲಕ ಮಕ್ಕಳ ಕಲ್ಯಾಣಕ್ಕಾಗಿ ಹಣ ಸಂಗ್ರಹಿಸುವ ಪ್ರಯತ್ನ ಮಾಡಿತ್ತು. ನೆಹರೂ ಜನ್ಮದಿನವನ್ನು 1954 ರಲ್ಲಿ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಯಿತು.

ಆರಂಭದಲ್ಲಿ ವಿಶ್ವಸಂಸ್ಥೆಯು ವಿಶ್ವ ಮಕ್ಕಳ ದಿನವನ್ನು ಆಚರಿಸುವ ದಿನವಾದ ನವೆಂಬರ್ 20 ರಂದು ಭಾರತದಲ್ಲಿ ಮಕ್ಕಳ ದಿನವನ್ನು ಆಚರಿಸಲಾಯಿತು. ಆದಾಗ್ಯೂ, 1964ರಲ್ಲಿ ಜವಾಹರಲಾಲ್ ನೆಹರೂ ಅವರ ಮರಣದ ನಂತರ, ಭಾರತೀಯ ಸಂಸತ್ತು ನೆಹರೂ ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಸ್ಮರಿಸುವ ನಿರ್ಣಯವನ್ನು ಅಂಗೀಕರಿಸಿತು.

ಮಕ್ಕಳ ದಿನಾಚರಣೆಯ ಮಹತ್ವ

ಮಕ್ಕಳ ಶಿಕ್ಷಣ, ಹಕ್ಕುಗಳು ಹಾಗೂ ಕಾಳಜಿಯ ಬಗ್ಗೆ ಜಾಗೃತಿ ಮೂಡಿಸಲು ಇದು ವೇದಿಕೆಯಾಗಿ ಕಾರ್ಯನಿರ್ವಹಿಸುವುದರಿಂದ ಮಕ್ಕಳ ದಿನಾಚರಣೆಗೆ ಅಪಾರ ಮಹತ್ವವಿದೆ. ಜವಾಹರಲಾಲ್ ನೆಹರೂ ಒಮ್ಮೆ ಹೇಳಿದರು, ‘ಇಂದಿನ ಮಕ್ಕಳು ನಾಳಿನ ಭಾರತವನ್ನು ನಿರ್ಮಾಣ ಮಾಡುತ್ತಾರೆ‘ ಎಂದು. ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಮಕ್ಕಳ ಮಹತ್ವವನ್ನು ಅವರು ಒತ್ತಿ ಹೇಳಿದ್ದರು.

ಮಕ್ಕಳ ದಿನ ಆಚರಿಸುವುದು ಹೇಗೆ?

ಮಕ್ಕಳ ದಿನದಂದು ಮಕ್ಕಳಿಗೆ ವಿಶೇಷ ಉಡುಗೊರೆ ನೀಡುವ ಮೂಲಕ ಆಚರಿಸಬಹುದು. ಈ ದಿನ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಬಹುದು. ರಸಪ್ರಶ್ನೆಗಳು, ಚರ್ಚೆ, ಚಿತ್ರಕಲೆ, ಹಾಡುಗಾರಿಕೆ ಮತ್ತು ನೃತ್ಯದಂತಹ ಸ್ಪರ್ಧೆಗಳನ್ನು ಏರ್ಪಡಿಸಬಹುದು. ಮಕ್ಕಳಿಗೆ ಸಿಹಿತಿಂಡಿಗಳನ್ನು ಹಂಚುವ ಮೂಲಕ ಮಕ್ಕಳ ಆಚರಿಸಬಹುದು. ಅಲ್ಲದೇ ಈ ದಿನ ಜವಹಾರ್ ನೆಹರೂ ಅವರಿಗೆ ಸಂಬಂಧಿಸಿ ಪ್ರಬಂಧ ಸ್ಪರ್ಧೆ, ಛದ್ಮವೇಷ ಸ್ಪರ್ಧೆಗಳನ್ನು ಕೂಡ ಏರ್ಪಡಿಸಲಾಗುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ