ಕರ್ನಾಟಕದ ಮಹಿಳಾ ಉದ್ಯೋಗಿಗಳಿಗೆ 6 ದಿನ ವೇತನ ಸಹಿತ ಮುಟ್ಟಿನ ರಜೆ; ಸಲಹೆ ಸೂಚನೆ ಆಹ್ವಾನಿಸಿದ ಸರ್ಕಾರ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದ ಮಹಿಳಾ ಉದ್ಯೋಗಿಗಳಿಗೆ 6 ದಿನ ವೇತನ ಸಹಿತ ಮುಟ್ಟಿನ ರಜೆ; ಸಲಹೆ ಸೂಚನೆ ಆಹ್ವಾನಿಸಿದ ಸರ್ಕಾರ

ಕರ್ನಾಟಕದ ಮಹಿಳಾ ಉದ್ಯೋಗಿಗಳಿಗೆ 6 ದಿನ ವೇತನ ಸಹಿತ ಮುಟ್ಟಿನ ರಜೆ; ಸಲಹೆ ಸೂಚನೆ ಆಹ್ವಾನಿಸಿದ ಸರ್ಕಾರ

ಕರ್ನಾಟಕದ ಮಹಿಳಾ ಉದ್ಯೋಗಿಗಳಿಗೆ ವಾರ್ಷಿಕ 6 ದಿನ ವೇತನ ಸಹಿತ ಮುಟ್ಟಿನ ರಜೆ ನೀಡುವ ಪ್ರಸ್ತಾವನೆಗೆ ಸಂಬಂಧಿಸಿ ಸಮಾಲೋಚನೆ ನಡೆಯುತ್ತಿದೆ. ಈ ಸಂಬಂಧ ಸಾರ್ವಜನಿಕರಿಂದ ಸಲಹೆ ಸೂಚನೆಯನ್ನು ಸರ್ಕಾರ ಆಹ್ವಾನಿಸಿದೆ.

ಕರ್ನಾಟಕದ ಮಹಿಳಾ ಉದ್ಯೋಗಿಗಳಿಗೆ 6 ದಿನ ವೇತನ ಸಹಿತ ಮುಟ್ಟಿನ ರಜೆಗೆ ಸಂಬಂಧಿಸಿ ಸಾರ್ವಜನಿಕರಿಂದ ಸಲಹೆ ಸೂಚನೆಗಳನ್ನು ಸರ್ಕಾರ ಆಹ್ವಾನಿಸಿದೆ.
ಕರ್ನಾಟಕದ ಮಹಿಳಾ ಉದ್ಯೋಗಿಗಳಿಗೆ 6 ದಿನ ವೇತನ ಸಹಿತ ಮುಟ್ಟಿನ ರಜೆಗೆ ಸಂಬಂಧಿಸಿ ಸಾರ್ವಜನಿಕರಿಂದ ಸಲಹೆ ಸೂಚನೆಗಳನ್ನು ಸರ್ಕಾರ ಆಹ್ವಾನಿಸಿದೆ.

ಬೆಂಗಳೂರು: ಕರ್ನಾಟಕದ ಕಾರ್ಮಿಕ ಇಲಾಖೆಯು ಕಳೆದ ತಿಂಗಳು ಕರ್ನಾಟಕದ ಮಹಿಳಾ ಉದ್ಯೋಗಿಗಳಿಗೆ ವಾರ್ಷಿಕವಾಗಿ 6 ದಿನ ವೇತನ ಸಹಿತ ಮುಟ್ಟಿನ ರಜೆ ಒದಗಿಸುವ ಪ್ರಸ್ತಾಪ ಮಾಡಿತ್ತು. ಅಲ್ಲದೆ, ಕ್ರೈಸ್ಟ್ ವಿವಿಯ ಕಾನೂನು ವಿಭಾಗದ ಮುಖ್ಯಸ್ಥೆ ಡಾ. ಸಪ್ನಾ ಎಸ್ ಅವರ ನೇತೃತ್ವದಲ್ಲಿ 18 ಸದಸ್ಯರ ಸಮಿತಿ ರಚಿಸಿತ್ತು. ಈಗ ಸಾರ್ವಜನಿಕರು ಮತ್ತು ಸಂಬಂಧಪಟ್ಟ ಪಾಲುದಾರರಿಂದ ಈ ವಿಷಯಕ್ಕೆ ಸಂಬಂಧಿಸಿ ಸಲಹೆ ಸೂಚನೆಗಳನ್ನು ಆಹ್ವಾನಿಸಿದೆ. ಸಲಹೆ ಸೂಚನೆ ನೀಡುವುದಕ್ಕೆ ಒಂದು ತಿಂಗಳ ಕಾಲಾವಕಾಶ ಇದೆ ಎಂದು ದ ಹಿಂದೂ ವರದಿ ಮಾಡಿದೆ. ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ವಾರ್ಷಿಕವಾಗಿ ಆರು ದಿನಗಳ ವೇತನ ಸಹಿತ ಮುಟ್ಟಿನ ರಜೆಯನ್ನು ಪರಿಚಯಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ.

ಖಾಸಗಿ ವಲಯದಲ್ಲಿ ಮೊದಲು ಜಾರಿ, ನಂತರ ಸರ್ಕಾರಿ ಕಚೇರಿಗಳಿಗೆ ಅನ್ವಯಕ್ಕೆ ಚಿಂತನೆ

ಡಾ. ಸಪ್ನಾ ನೇತೃತ್ವದ ಸಮಿತಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ ಬಳಿಕ ಅದನ್ನು ಪರಿಶೀಲಿಸಿ ಮುಂದಿನ ಕ್ರಮವನ್ನು ಸರ್ಕಾರ ತೆಗೆದುಕೊಳ್ಳಲಿದೆ. ಆರಂಭಿಕ ಹಂತದಲ್ಲಿ ಖಾಸಗಿ ವಲಯದಲ್ಲಿ ಇದು ಜಾರಿಯಾಗಲಿದೆ. ಪೂರ್ಣ ಪ್ರಮಾಣದ ನೀತಿ ರೂಪಿಸಿದ ನಂತರ ಸರ್ಕಾರಿ ಇಲಾಖೆಗಳಲ್ಲಿ ಕಡ್ಡಾಯಗೊಳಿಸಲು ಚಿಂತನೆ ನಡೆದಿದೆ. ಮಹಿಳೆಯರಿಗೆ ಮುಟ್ಟಿನ ರಜೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ವ್ಯಕ್ತಪಡಿಸಿದ್ದ ಆಶಯಕ್ಕೆ ಅನುಗುಣವಾಗಿ ಸರ್ಕಾರ ಮುಟ್ಟಿನ ರಜೆ ಜಾರಿಗೊಳಿಸಲು ಮುಂದಾಗಿದೆ ಎಂದು ಕಾರ್ಮಿಕ ಇಲಾಖೆ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್ ತಿಳಿಸಿದ್ದಾಗಿ ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಕಳೆದ ತಿಂಗಳು ವರದಿ ಮಾಡಿದೆ.

“ಮುಟ್ಟಿನ ರಜೆಯನ್ನು ಪರಿಚಯಿಸುವುದು ಸ್ವಾಗತಾರ್ಹ ಕ್ರಮ. ಆದರೂ ಸಮಾಲೋಚನೆಯ ಸಮಯದಲ್ಲಿ ನಾವು ತಿಂಗಳಿಗೆ ಕನಿಷ್ಠ ಒಂದು ದಿನವನ್ನು ಒತ್ತಾಯಿಸಿದ್ದೇವೆ. ಒಡಿಶಾ ಸರ್ಕಾರವು ತಿಂಗಳಿಗೆ ಒಂದು ದಿನದ ರಜೆ ಘೋಷಿಸಿದಾಗ, ಕರ್ನಾಟಕವೂ ಅದೇ ರೀತಿ ಮಾಡಬಹುದಿತ್ತು, ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಂಗೀಕರಿಸಲ್ಪಟ್ಟ ಮಾನದಂಡ”ಎಂದು 18 ಸದಸ್ಯರ ಸಮಿತಿಗೆ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ ಪ್ರತಿನಿಧಿ ಸಿ.ಜಯಮ್ಮ ಹೇಳಿರುವುದಾಗಿ ದ ಹಿಂದೂ ವರದಿ ನಿನ್ನೆ (ನವೆಂಬರ್ 9) ಮಾಡಿದೆ.

ಮಹಿಳೆಯರ ಅಗತ್ಯ ಗಮನದಂತೆ ಕ್ರಮ: ಸರ್ಕಾರ

ಕರ್ನಾಟಕದಲ್ಲಿ ಮುಟ್ಟಿನ ರಜೆ ನೀತಿ ರೂಪಿಸುವ ವಿಚಾರವನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಳೆದ ತಿಂಗಳು ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪಿಸಿದ್ದರು. ಮುಟ್ಟಿನ ರಜೆ ಪ್ರಸ್ತಾವನೆ ಚರ್ಚೆ, ಸಮಾಲೋಚನೆ ಹಂತದಲ್ಲಿದೆ. ಸಚಿವರು ಆ ಬಗ್ಗೆ ನೀತಿ ರೂಪಿಸಲು ಚಿಂತನೆ ನಡೆಸಿದ್ದರು. ಕಾರ್ಮಿಕ ಇಲಾಖೆಯು ಕೆಲವೇ ದಿನಗಳಲ್ಲಿ ಪ್ರಸ್ತಾವನೆಯನ್ನು ಪರಿಶೀಲಿಸಲಿದೆ. ಆ ನಂತರ ಅದು ಇಲಾಖೆ ಮತ್ತು ಸರ್ಕಾರಿ ಹಂತಗಳಲ್ಲಿ ಮುಂದುವರಿಯಲಿದೆ ಎಂದು ಕಾರ್ಮಿಕ ಆಯುಕ್ತ ಡಾ. ಎಚ್ಎನ್ ಗೋಪಾಲಕೃಷ್ಣ ತಿಳಿಸಿದ್ದರು.

“ಉದ್ಯೋಗ ವಲಯದಲ್ಲಿ ಮಹಿಳೆಯರ ಪಾತ್ರ ಮುಖ್ಯವಾದುದು. ಅವರ ಅಗತ್ಯಗಳು ಪುರುಷರ ಅಗತ್ಯಕ್ಕಿಂತ ಭಿನ್ನವಾದುದು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಇದಕ್ಕೆ ಸಂವೇದನಾಶೀಲವಾಗಿ ಸ್ಪಂದಿಸಬೇಕಾದ್ದು ಸರ್ಕಾರದ ಕರ್ತವ್ಯ. ಇದನ್ನು ಆದ್ಯತೆಯಾಗಿ ತೆಗೆದುಕೊಂಡು ಕ್ರಮ ಜರುಗಿಸುತ್ತೇವೆ" ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ದಾರೆ.

ಬಿಹಾರದಲ್ಲಿ 1992ರಲ್ಲೇ ಅಲ್ಲಿನ ಸರ್ಕಾರ ಮುಟ್ಟಿನ ರಜೆ ನೀತಿಯನ್ನು ಸರ್ಕಾರಿ ಸಿಬ್ಬಂದಿಗೆ ಪರಿಚಯಿಸಿದೆ. ಕೇರಳದಲ್ಲಿ 2023ರಲ್ಲಿ ಈ ನೀತಿ ಕಾಲೇಜು ಶಿಕ್ಷಣ ಸಂಸ್ಥೆಗಳಲ್ಲಿ ಜಾರಿಗೆ ಬಂದಿದೆ.ಇದಕ್ಕೂ ಮೊದಲು ಒಡಿಶಾ ಸರ್ಕಾರ ಸರ್ಕಾರಿ ಮತ್ತು ಖಾಸಗಿ ವಲಯಕ್ಕೆ ಅನ್ವಯವಾಗುವಂತೆ ಈ ನೀತಿ ಜಾರಿಗೊಳಿಸಿದೆ.

Whats_app_banner