ಹಾಸನಾಂಬೆ ದೇವಿ ದರ್ಶನ ಪಡೆದ ಸಿದ್ದರಾಮಯ್ಯ; ಖಡ್ಗಮಾಲಾ ಸ್ತೋತ್ರದ ಮೂಲಕ ಅರ್ಚನೆ ಮಾಡಿಸಿದ ಸಿಎಂ!
Oct 30, 2024 01:08 AM IST
ಹಾಸನಾಂಬೆ ದೇವಿ ದರ್ಶನ ಪಡೆದ ಸಿದ್ದರಾಮಯ್ಯ; ಖಡ್ಗಮಾಲಾ ಸ್ತೋತ್ರದ ಮೂಲಕ ಅರ್ಚನೆ ಮಾಡಿಸಿದ ಸಿಎಂ
- CM Siddaramaiah: ಮುಡಾ ಹಗರಣ ಸೇರಿದಂತೆ ಅನೇಕ ಸಮಸ್ಯೆ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರು, ಸಮಸ್ಯೆಯಿಂದ ಪಾರಾಗಲು ಖಡ್ಗಮಾಲಾ ಸ್ತೋತ್ರದ ಮೂಲಕ ಅರ್ಚನೆ ಮಾಡಿಸಿದ್ದಾರೆ.
ಹಾಸನ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನೆಲ್ಲಾ ಕಷ್ಟಗಳು ದೂರವಾಗಲೆಂದು ಇಲ್ಲಿನ ಪ್ರಸಿದ್ಧ ಹಾಸನಾಂಬ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಕ್ಟೋಬರ್ 28ರಂದು ದೇವಸ್ಥಾನಕ್ಕೆ ನೀಡಿದ್ದ ಸಿಎಂ ಹಾಸನಾಂಬ ದೇವಿಯ ದರ್ಶನ ಪಡೆದಿದ್ದಲ್ಲದೆ, ಖಡ್ಗಮಾಲಾ ಸ್ತೋತ್ರದ ಮೂಲಕ ಅರ್ಚನೆ ಮಾಡಿಸಿದ್ದಾರೆ. ಸಮಸ್ಯೆಯಿಂದ ಪಾರಾಗಲು ಖಡ್ಗಮಾಲಾ ಸ್ತೋತ್ರದ ಮೂಲಕ ಅರ್ಚನೆ ಮಾಡಿಸಿದ್ದಾರೆ.
ಹಾಸನಾಂಬೆ ದೇವಿ ದರ್ಶನ ಪಡೆಯುವಾಗ ಅಷ್ಟೋತ್ತರದಿಂದ ಪೂಜೆ ಮಾಡುವುದು ವಾಡಿಕೆ. ಈ ಬಾರಿ ಸಿಎಂ ಖಡ್ಗಮಾಲಾ ಸ್ತೋತ್ರದ ಮೂಲಕ ದೇವಿಯನ್ನು ಅರ್ಚಿಸಿದ್ದು ವಿಶೇಷ. ಖಡ್ಗಮಾಲಾ ಸ್ತೋತ್ರ ಶಕ್ತಿ ದೇವಿಯ ಅತ್ಯಂತ ಪವಿತ್ರ ಮತ್ತು ಶಕ್ತಿಯುತ ಮಂತ್ರ ಎಂದು ಹೇಳಲಾಗಿದೆ. ಖಡ್ಗಮಾಲಾ ಸ್ತೋತ್ರವನ್ನು ಪಠಿಸುವುದರಿಂದ ಅತೀಂದ್ರಿಯ ಆಯುಧಗಳ ರಕ್ಷಣಾತ್ಮಕ ಮಾಲೆ ಸಿಗುತ್ತದೆ ಎಂಬುದು ಭಕ್ತರ ನಂಬಿಕೆ. ಜೊತೆಗೆ ಎಲ್ಲಾ ರೀತಿಯ ಸಮಸ್ಯೆಗಳಿಂದ ಇದು ಮುಕ್ತಿ ನೀಡುತ್ತದೆ ಎನ್ನುವ ನಂಬಿಕೆ ಇದೆ.
ಸಿದ್ದರಾಮಯ್ಯ ಟೆಂಪಲ್ ರನ್
ಮುಡಾ ಹಗರಣದಲ್ಲಿ ಸಿಲುಕಿದಾಗಿನಿಂದ ಸಿದ್ದರಾಮಯ್ಯ ಟೆಂಪಲ್ ರನ್ ಹೆಚ್ಚಾಗಿದೆ. ಪ್ರಕರಣದ ಆರಂಭದಲ್ಲಿ ಕೇವಲ 21 ದಿನಗಳಲ್ಲಿ ಮೈಸೂರಿನ ಚಾಮುಂಡೇಶ್ವರಿ ದೇವಿಯ ದರ್ಶನ ಮಾಡಿದ್ದರು. ದಸರಾ ಅವಧಿಯಲ್ಲಿ ಆಗಾಗ್ಗೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರು. ಅವರು ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಪುರಾತನ ದೇವರಗುಡ್ಡ ಮಾಲತೇಶ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇತ್ತೀಚೆಗೆ ಸವದತ್ತಿ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನಕ್ಕೂ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಅಲ್ಲದೆ ಪೊಳಲಿ ದೇವಸ್ಥಾನಕ್ಕೂ ಭೇಟಿ ನೀಡಿದ್ದರು. ಇದೀಗ ಹಾಸನಾಂಬೆ ದರ್ಶನ ಪಡೆದಿದ್ದಲ್ಲದೆ, ವಿಶೇಷ ಅರ್ಚನೆಯನ್ನೂ ಮಾಡಿಸಿದ್ದಾರೆ.