ಬೆಂಗಳೂರು ರಸ್ತೆ ಗುಂಡಿ ಸಮಸ್ಯೆ; ಡಾ. ವಿಷ್ಣುವರ್ಧನ್ ರಸ್ತೆ ಸಮಸ್ಯೆಗೆ ಸ್ಪಂದಿಸದ ಜನಪ್ರತಿನಿಧಿಗಳು, ಬಿಬಿಎಂಪಿ ಅಧಿಕಾರಿಗಳಿಗೂ ಬೇಡ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ರಸ್ತೆ ಗುಂಡಿ ಸಮಸ್ಯೆ; ಡಾ. ವಿಷ್ಣುವರ್ಧನ್ ರಸ್ತೆ ಸಮಸ್ಯೆಗೆ ಸ್ಪಂದಿಸದ ಜನಪ್ರತಿನಿಧಿಗಳು, ಬಿಬಿಎಂಪಿ ಅಧಿಕಾರಿಗಳಿಗೂ ಬೇಡ

ಬೆಂಗಳೂರು ರಸ್ತೆ ಗುಂಡಿ ಸಮಸ್ಯೆ; ಡಾ. ವಿಷ್ಣುವರ್ಧನ್ ರಸ್ತೆ ಸಮಸ್ಯೆಗೆ ಸ್ಪಂದಿಸದ ಜನಪ್ರತಿನಿಧಿಗಳು, ಬಿಬಿಎಂಪಿ ಅಧಿಕಾರಿಗಳಿಗೂ ಬೇಡ

ಬೆಂಗಳೂರು ರಸ್ತೆ ಗುಂಡಿ ಸಮಸ್ಯೆ ಇತ್ತೀಚೆಗೆ ಹೆಚ್ಚು ಗಮನಸೆಳೆಯತೊಡಗಿದೆ. ಬಹುತೇಕ ರಸ್ತೆಗಳು ಹದಗೆಟ್ಟುಹೋಗಿವೆ. ಕೆಂಗೇರಿ ರಸ್ತೆ ಮತ್ತು ಕನಕಪುರ ರಸ್ತೆಗೆ ಸಂಪರ್ಕ ಕೊಂಡಿಯಾಗಿರುವ ಡಾ. ವಿಷ್ಣುವರ್ಧನ್ ರಸ್ತೆ ಸಮಸ್ಯೆಗೆ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ಬಿಬಿಎಂಪಿ ಅಧಿಕಾರಿಗಳಿಗೂ ಇದು ಬೇಡ ಎಂಬ ಅಸಮಾಧಾನ ಸ್ಥಳೀಯರಲ್ಲಿ ಹೆಚ್ಚಾಗಿದೆ.

ಬೆಂಗಳೂರು ರಸ್ತೆ ಗುಂಡಿ ಸಮಸ್ಯೆ; ಡಾ. ವಿಷ್ಣುವರ್ಧನ್ ರಸ್ತೆ ಸಮಸ್ಯೆಗೆ ಸ್ಪಂದಿಸುವವರೇ ಇಲ್ಲ ಎಂಬುದು ಸ್ಥಳೀಯ ಅಳಲು.
ಬೆಂಗಳೂರು ರಸ್ತೆ ಗುಂಡಿ ಸಮಸ್ಯೆ; ಡಾ. ವಿಷ್ಣುವರ್ಧನ್ ರಸ್ತೆ ಸಮಸ್ಯೆಗೆ ಸ್ಪಂದಿಸುವವರೇ ಇಲ್ಲ ಎಂಬುದು ಸ್ಥಳೀಯ ಅಳಲು.

ಬೆಂಗಳೂರು: ಸದ್ಯ ಬೆಂಗಳೂರಲ್ಲಿ ಧೂಳು ಏಳುವ ರಸ್ತೆ ಮತ್ತು ರಸ್ತೆ ಗುಂಡಿಗಳದ್ದೇ ಮಾತು. ಬೆಂಗಳೂರು ಮಳೆಗೆ ಬಹಳಷ್ಟು ರಸ್ತೆಗಳು ಹದಗೆಟ್ಟು ಹೋಗಿವೆ. ಈ ಪೈಕಿ ಈಗ ಹೆಚ್ಚು ಗಮನಸೆಳೆಯುತ್ತಿರುವುದು ಬೆಂಗಳೂರು ದಕ್ಷಿಣ ಕ್ಷೇತ್ರದ ಡಾ. ವಿಷ್ಣುವರ್ಧನ್ ರಸ್ತೆ. ಹೊಂಡಗಳಿಂದ ಕೂಡಿದ ಅಸಮ ರಸ್ತೆಗಳು, ಅವೈಜ್ಞಾನಿಕ ಸ್ಪೀಡ್ ಬ್ರೇಕರ್‌ ಮತ್ತು ವಾಣಿಜ್ಯ ಸಂಸ್ಥೆಗಳಿರುವಲ್ಲಿ ರಸ್ತೆ ಬದಿ ವಾಹನ ನಿಲುಗಡೆ ಇವಲ್ಲವೂ ಈ ರಸ್ತೆಯ ಸಾಮಾನ್ಯ ಸಮಸ್ಯೆ. ಇಲ್ಲಿ ಅಪಘಾತಗಳೂ ಹೆಚ್ಚು. ಬಳಕೆದಾರರು ಈ ವಿಷಯನ್ನು ಪದೇಪದೆ ಸೋಷಿಯಲ್ ಮೀಡಿಯಾದಲ್ಲಿ ಪ್ರಸ್ತಾಪಿಸುತ್ತಿದ್ದರೂ ಬಿಬಿಎಂಪಿ ಮಾತ್ರ ಇನ್ನೂ ನಿದ್ದೆಯಿಂದ ಎಚ್ಚೆತ್ತುಕೊಂಡಿಲ್ಲ ಎಂಬುದು ಸಾರ್ವಜನಿಕರ ಅಸಮಾಧಾನ.

ಡಾ. ವಿಷ್ಣುವರ್ಧನ್ ರಸ್ತೆಯಲ್ಲಿ ಪ್ರತಿವಾರ ರಾತ್ರಿ ವೇಳೆ ಏನಿಲ್ಲವೆಂದರೂ ಕನಿಷ್ಠ 3 ಅಪಘಾತ

ಡಾ. ವಿಷ್ಣುವರ್ಧನ್ ರಸ್ತೆಯಲ್ಲಿ ರಾತ್ರಿ ವೇಳೆ ಅಪಘಾತಗಳು ಹೆಚ್ಚು. ಪ್ರತಿ ವಾರ ರಾತ್ರಿ ವೇಳೆ ಆಗುವ ಅಪಘಾತಗಳ ಸಂಖ್ಯೆ ಕನಿಷ್ಠ 3. ಇದಕ್ಕೆ ಕಾರಣ ಕಂಡೂ ಕಾಣದಂತೆ ಇರುವ ರಸ್ತೆ ಉಬ್ಬುಗಳು. ರಾತ್ರಿ ಪ್ರಯಾಣದ ವೇಳೆ ಡಾ. ವಿಷ್ಣುವರ್ಧನ ರಸ್ತೆಯ ಪಟಾಲಮ್ಮ ದೇವಸ್ಥಾನದ ಸಮೀಪದ ಅವೈಜ್ಞಾನಿಕ ರಸ್ತೆ ಉಬ್ಬಿನ ಮೇಲೆ ಬಿಳಿ ಪಟ್ಟಿ ಇಲ್ಲದ ಕಾರಣ ಅದು ಗೋಚರಿಸುವುದಿಲ್ಲ. ಹೀಗಾಗಿ ಅನೇಕ ವಾಹನ ಸವಾರರು ಅಪಘಾತಕ್ಕೀಡಾಗುವುದು ಸಾಮಾನ್ಯ ಎಂದು ಸ್ಥಳೀಯರೊಬ್ಬರು ಹೇಳಿರುವುದಾಗಿ ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಡಾ. ವಿಷ್ಣುವರ್ಧನ್‌ ರಸ್ತೆ ಮೈಸೂರು ರಸ್ತೆ ಮತ್ತು ಕನಕಪುರ ರಸ್ತೆಯ ನಡುವಿನ ಸಂಪರ್ಕ ರಸ್ತೆ. ಈ ರಸ್ತೆಯ ಎರಡೂ ಬದಿಯಲ್ಲಿ ವಸತಿ ಲೇಔಟ್‌ ಮತ್ತು ವಾಣಿಜ್ಯ ಸಂಸ್ಥೆಗಳು ಬಹಳಷ್ಟು ಶುರುವಾಗಿವೆ. ಇನ್ನಷ್ಟು ವಸತಿ ಲೇಔಟ್ ಮತ್ತು ವಾಣಿಜ್ಯ ಸಂಸ್ಥೆಗಳು ತಲೆ ಎತ್ತುತ್ತಿವೆ. ಹೀಗಾಗಿ ಈ ರಸ್ತೆಯಲ್ಲಿ ನಿತ್ಯವೂ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಾರೆ. ಈ ರಸ್ತೆಯ ಪೂರ್ತಿ ವಿಡಿಯೋವನ್ನು ಬಳಕೆದಾರರೊಬ್ಬರು ವಿವರಿಸುತ್ತ ಕಳೆದ ವರ್ಷ ಯೂಟ್ಯೂಬ್‌ನಲ್ಲಿ ಹಾಕಿದ್ದಾರೆ. ಅಂದಿಗೂ ಇಂದಿಗೂ ಅದರಲ್ಲಿ ವ್ಯತ್ಯಾಸವೇನೂ ಆಗಿಲ್ಲ. ರಸ್ತೆ ಹೊಂಡಗಳು ಹೆಚ್ಚಾಗಿ ಇನ್ನೂ ಹೆಚ್ಚು ಅಧ್ವಾನವಾಗಿದೆ.

ಕೆಂಗೇರಿ ಪ್ರವೇಶ ದ್ವಾರದಲ್ಲಿ ರಸ್ತೆಗುಂಡಿ, ಧೂಳು

ಮತ್ತೊಂದೆಡೆ, ಕೆಂಗೇರಿ ಪ್ರವೇಶ ದ್ವಾರದ ಬಳಿ ನಡೆಯುತ್ತಿರುವ ರಸ್ತೆ ವಿಸ್ತರಣೆ ಕಾಮಗಾರಿ ಕಾರಣ ಪರಿಸ್ಥಿತಿಯನ್ನು ಹದಗೆಟ್ಟಿದೆ. ಇಡೀ ಪರಿಸರ ಧೂಳು ಮಯವಾಗಿದ್ದು, ಉಸಿರಾಡಲು ಕಷ್ಟವೆನಿಸುವ ಪರಿಸ್ಥಿತಿ ಇದೆ. ಈಗಾಗಲೇ ರಸ್ತೆ ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಈ ಸನ್ನಿವೇಶ ಮತ್ತೊಂದು ಸವಾಲನ್ನು ಪ್ರಯಾಣಿಕರಿಗೆ ಮತ್ತು ಸ್ಥಳೀಯರಿಗೆ ಒಡ್ಡಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿರುವುದಾಗಿ ವರದಿ ವಿವರಿಸಿದೆ.

ಈ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ಹಂಪ್‌ಗಳನ್ನು ಅಳವಡಿಸಿರುವ ಕಾರಣ ಅನೇಕ ಸಮಸ್ಯೆಗಳಾಗುತ್ತಿವೆ. ಇತ್ತೀಚಿನ ಬೆಂಗಳೂರು ಮಳೆಗೆ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ರಸ್ತೆಯಲ್ಲಿ ನೀರು ತುಂಬಿಕೊಂಡದ್ದಲ್ಲದೆ, ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದಿರುವ ಘಟನೆಯೂ ನಡೆದಿದೆ. ಎಲ್ಲಿ ಹಂಪ್ ಇರಬೇಕೋ ಅಲ್ಲಿ ಇಲ್ಲ. ವಿಶೇಷವಾಗಿ ಶಾಲೆ, ಕಾಲೇಜು ಅಥವಾ ಮುಖ್ಯ ಜಂಕ್ಷನ್ ಬಳಿ ಹಂಪ್‌ಗಳು ಬೇಕು. ಆದರೆ ಅಲ್ಲಿ ಹಂಪ್ ಇಲ್ಲ. ಪಟಾಲಮ್ಮ ದೇವಸ್ಥಾನ, ಮಂತ್ರಿ ಆಲ್ಫೈನ್‌ ಪಾತ್‌ವೇ ಹಾಸ್ಪಿಟಲ್ ಬಳಿ ರಸ್ತೆಗುಂಡಿಗಳಿದ್ದು ಅವುಗಳನ್ನು ಮುಚ್ಚಿ ಮರು ಡಾಂಬರೀಕರಣ ಮಾಡಬೇಕು. ಅವೈಜ್ಞಾನಿಕ ಹಂಪ್‌ಗಳನ್ನು ತೆರವುಗೊಳಿಸಿ ಸರಿಯಾದ ರೀತಿಯಲ್ಲಿ ಹಂಪ್ ಅಳವಡಿಸಬೇಕು ಎಂದು ಸ್ಥಳೀಯರು ಮತ್ತು ವಾಹನ ಸವಾರರು ಆಗ್ರಹಿಸುತ್ತಿದ್ದಾರೆ. ಆದರೆ ಬಿಬಿಎಂಪಿ ಅಧಿಕಾರಿಗಳು, ಜನಪ್ರತಿನಿಧಿಗಳು ಇನ್ನೂ ಸ್ಪಂದಿಸಿಲ್ಲ ಎಂದು ವರದಿ ವಿವರಿಸಿದೆ.

Whats_app_banner