ಕೋಲಾರ ಚಿತ್ರಕಲಾ ಶಿಕ್ಷಕನ 5 ಮೊಬೈಲ್‌ಗಳಲ್ಲಿ 5000ಕ್ಕೂ ಹೆಚ್ಚು ಹೆಣ್ಮಕ್ಕಳ ನಗ್ನಚಿತ್ರ, ನೂರಾರು ವಿಡಿಯೋ; ಕೇಸ್ ರದ್ದಾಗದು ಎಂದ ಕೋರ್ಟ್
Sep 07, 2024 11:14 AM IST
ಹೈದರಾಬಾದ್ ಕರ್ನಾಟಕ ಕೋಟಾದ ಉದ್ಯೋಗಿಯ ಹೊರ ವರ್ಗಾವಣೆಗೆ ಅಡ್ಡಿ ಇಲ್ಲ; ಕರ್ನಾಟಕ ಹೈಕೋರ್ಟ್ ಸ್ಷಪ್ಟ ತೀರ್ಪು
POCSO Case against Kolar teacher; ಕೋಲಾರ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಚಿತ್ರಕಲಾ ಶಿಕ್ಷಕ ಮುನಿಯಪ್ಪನ ಮೊಬೈಲ್‌ಗಳಲ್ಲಿ 5000ಕ್ಕೂ ಹೆಚ್ಚು ಹೆಣ್ಮಕ್ಕಳ ನಗ್ನಚಿತ್ರ, ನೂರಾರು ವಿಡಿಯೋ ಪತ್ತೆಯಾಗಿವೆ. ಹೀಗಾಗಿ ಈ ಕೃತ್ಯ ಅಕ್ಷಮ್ಯವಾಗಿದ್ದು, ಕೇಸ್ ರದ್ದಾಗದು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಬೆಂಗಳೂರು: ಕೋಲಾರ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯೊಂದರ ಬಾಲಕಿಯರ 5000ಕ್ಕೂ ಹೆಚ್ಚು ಅಶ್ಲೀಲ ಫೋಟೋ ಮತ್ತು ನೂರಾರು ವಿಡಿಯೋ ಹೊಂದಿರುವ ಚಿತ್ರಕಲಾ ಶಿಕ್ಷಕನ ವಿರುದ್ಧದ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಪ್ರಕರಣ ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ಶಾಲೆಯಲ್ಲಿ ಬಾಲಕಿಯರು ಬಟ್ಟೆ ಬದಲಿಸುವ ಸಮಯದ 5000ಕ್ಕೂ ಹೆಚ್ಚು ಫೋಟೋ ಹಾಗೂ ನೂರಾರು ವಿಡಿಯೋ ಸೆರೆಹಿಡಿದ ಆರೋಪ ಶಿಕ್ಷಕನ ಮೇಲಿದ್ದು, ಸಾಕ್ಷ್ಯವೆಂಬಂತೆ ಆತನ 5 ಮೊಬೈಲ್‌ಗಳಲ್ಲಿ ಆ ದೃಶಗಳು ಸಂಗ್ರಹವಾಗಿವೆ ಎಂಬುದನ್ನು ಕೋರ್ಟ್ ಗಮನಿಸಿದೆ. ಈ ರೀತಿ ಕಾಮುಕ ವರ್ತನೆ ತೋರಿರುವ ಶಿಕ್ಷಕ ಮುನಿಯಪ್ಪ (46).
ಚಿತ್ರಕಲಾ ಶಿಕ್ಷಕನ ಕಾಮುಕ ವರ್ತನೆ ಬಗ್ಗೆ ಕರ್ನಾಟಕ ಹೈಕೋರ್ಟ್ ಕಳವಳ
ಮುನಿಯಪ್ಪ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಸಾರಾಸಗಟಾಗಿ ತಿರಸ್ಕರಿಸಿ, ಶಿಕ್ಷಕನ ಕೃತ್ಯವು ನಿಜಕ್ಕೂ ಅಸಭ್ಯ ಹಾಗೂ ಭಯಾನಕವಾಗಿದೆ. ಇಂತಹ ಪ್ರಕರಣ ವನ್ನು ರದ್ದುಪಡಿಸಲಾಗದು ಎಂದು ಸ್ಪಷ್ಪಪಡಿಸಿದೆ.
ಪೋಕೋ ಕಾಯ್ದೆ ಸೆಕ್ಷನ್ 11 ಪ್ರಕಾರ, ಮಕ್ಕಳ ದೇಹ ಅಥವಾ ದೇಹದ ಯಾವುದೇ ಭಾಗವನ್ನು ಅಸಭ್ಯ ರೀತಿಯಲ್ಲಿ ಪ್ರದರ್ಶಿಸುವುದು ಲೈಂಗಿಕ ಕಿರುಕುಳವಾಗುತ್ತದೆ. ಈ ಅಪರಾಧವು ಕಾಯ್ದೆಯ ಸೆಕ್ಷನ್ 12ರಡಿ ಶಿಕ್ಷಾರ್ಹ ಎಂಬುದನ್ನು ಕೋರ್ಟ್ ಉಲ್ಲೇಖಿಸಿತು.
ಅರ್ಜಿದಾರನ ಕೃತ್ಯವು ಭಯಾನಕತೆಗಿಂತ ಹೆಚ್ಚಿನ ತೀವ್ರತೆ ಹೊಂದಿದೆ. ಒಬ್ಬ ಶಿಕ್ಷಕನಾಗಿ ಇಂತಹ ವಿಡಿಯೋ ಚಿತ್ರೀಕರಿಸಿರುವುದು ನಿಜಕ್ಕೂ ಅಸಭ್ಯ. ಶಿಕ್ಷಕನ ಈ ಕೃತ್ಯ ಅಕ್ಷಮ್ಯ. ಇದಲ್ಲದೆ ಇನ್ಯಾವುದು ಅಪರಾಧವಾದೀತು ಎಂಬುದನ್ನು ಅರ್ಥಮಾಡಿಕೊಳ್ಳಭೇಕು. ಅರ್ಜಿದಾರ ಪೂರ್ಣ ಪ್ರಮಾಣದ ವಿಚಾರಣೆ ಎದುರಿಸಬೇಕು. ಆ ವಿಚಾರಣೆಯಲ್ಲಿ ಆರೋಪಮುಕ್ತವಾಗಿ ಬರಲಿ. ಅದು ಬಿಟ್ಟು ಈ ಹಂತದಲ್ಲಿ ಪ್ರಕರಣ ರದ್ದುಪಡಿಸಿದರೆ ಶಿಕ್ಷಕನ ಅಕ್ರಮ ಚಟುವಟಿಕೆಗಳನ್ನು ಉತ್ತೇಜಿಸಿದಂತಾಗುತ್ತದೆ ಎಂದು ಕಠಿಣ ಮಾತುಗಳಿಂದ ನ್ಯಾಯಪೀಠ, ಅರ್ಜಿಯನ್ನು ತಿರಸ್ಕರಿಸಿ ಆದೇಶಿಸಿದೆ.
ಪ್ರಕರಣದ ತನಿಖೆ ಮತ್ತು ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ದಾಖಲೆಗಳ ಪ್ರಕಾರ, ಅರ್ಜಿದಾರ ಅಂದರೆ ಮುನಿಯಪ್ಪ ಐದು ಮೊಬೈಲ್ ಫೋನ್ ಹೊಂದಿದ್ದಾರೆ. ಪ್ರತಿ ಮೊಬೈಲ್‌ನಲ್ಲೂ ಸುಮಾರು ಒಂದು ಸಾವಿರ ಚಿತ್ರ ಮತ್ತು ಸಾವಿರಾರು ವಿಡಿಯೋಗಳಿರುವುದು ಆಘಾತ ಮೂಡಿಸಿದೆ. ಇಷ್ಟು ಮೊಬೈಲ್‌ಗಳು ಓರ್ವ ಚಿತ್ರಕಲಾ ಶಿಕ್ಷಕ ಬಳಿ ಯಾಕಿತ್ತು? ಆ ವಿಡಿಯೋ ಹಾಗೂ ಚಿತ್ರಗಳು ಯಾವುವು? ಎಂಬುದು ಪೂರ್ಣ ಪ್ರಮಾಣದ ತನಿಖೆ ಮತ್ತು ವಿಚಾರಣೆಯ ಮೂಲಕ ಬಹಿರಂಗವಾಗಬೇಕಿದೆ ಎಂದು ನ್ಯಾಯಪೀಠ ಇದಕ್ಕೂ ಮೊದಲು ಅಭಿಪ್ರಾಯಪಟ್ಟಿತ್ತು.
ಕೋಲಾರ ಚಿತ್ರಕಲಾ ಶಿಕ್ಷಕನದ್ದು ಏನಿದು ಕೇಸ್
ಕೋಲಾರ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಚಿತ್ರಕಲಾ ಶಿಕ್ಷಕ ಮುನಿಯಪ್ಪ. ವಸತಿ ಶಾಲೆಯಲ್ಲಿ ಬಾಲಕಿಯರು ಬಟ್ಟೆ ಬದಲಿಸುವ ಸಮಯದಲ್ಲಿ ಅವರ ಫೋಟೋ ಹಾಗೂ ವಿಡಿಯೋವನ್ನು ತೆಗೆದ ಆರೋಪ ಎದುರಿಸುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ನಿಯಂತ್ರಣ ಕೊಠಡಿಗೆ ಈ ಕುರಿತು 2023ರ ಡಿ.15ರಂದು ದೂರು ಬಂದಿತ್ತು. ಈ ಕುರಿತು ಎಫ್‌ಐಆರ್ ದಾಖಲಾಗಿತ್ತು. ಈ ಎಫ್‌ಐಆರ್ ಮತ್ತು ಆ ಕುರಿತ ಕೋಲಾರ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (ಪೋಕ್ಸೊ ವಿಶೇಷ ಕೋರ್ಟ್)ದ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ಮುನಿಯಪ್ಪ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಈಗ ಅಲ್ಲೂ ಮುನಿಯಪ್ಪಗೆ ಹಿನ್ನಡೆಯಾಗಿದೆ.