logo
ಕನ್ನಡ ಸುದ್ದಿ  /  ಕರ್ನಾಟಕ  /  Chikkamagaluru News: ಚಿಕ್ಕಮಗಳೂರಿನಲ್ಲಿ ಕೆನರಾ ಬ್ಯಾಂಕ್‌ ಎಟಿಎಂ ಒಡೆದು ಕಳ್ಳತನ: ಭದ್ರತೆಯಿಲ್ಲದೇ ಹೆಚ್ಚಿದ ಎಟಿಎಂ ದೋಚುವ ಪ್ರಕರಣ

Chikkamagaluru News: ಚಿಕ್ಕಮಗಳೂರಿನಲ್ಲಿ ಕೆನರಾ ಬ್ಯಾಂಕ್‌ ಎಟಿಎಂ ಒಡೆದು ಕಳ್ಳತನ: ಭದ್ರತೆಯಿಲ್ಲದೇ ಹೆಚ್ಚಿದ ಎಟಿಎಂ ದೋಚುವ ಪ್ರಕರಣ

HT Kannada Desk HT Kannada

Aug 17, 2023 10:12 AM IST

google News

ಚಿಕ್ಕಮಗಳೂರು ಹೊರ ವಲಯದಲ್ಲಿ ಎಟಿಎಂ ಒಡೆದು ಕಳ್ಳತನ ಮಾಡಲಾಗಿದೆ.

    • Canara Bank ATM Looted ಕರ್ನಾಟಕದಲ್ಲಿ ಎಟಿಎಂಗಳನ್ನು ದೋಚುವ ಪ್ರಕರಣ ಹೆಚ್ಚುತ್ತಿವೆ. ಕೆಲ ದಿನಗಳ ಹಿಂದೆಯಷ್ಟೇ ಕಲಬುರಗಿಯ ಅಫಜಲಪುರ( Afzalpur), ಮಂಗಳೂರು(Mangalore) ನಗರದಲ್ಲಿ ಎಟಿಎಂ ದರೋಡೆ ಪ್ರಕರಣ ನಡೆದ ಬೆನ್ನಲ್ಲೇ ಚಿಕ್ಕಮಗಳೂರು ನಗರದಲ್ಲೂ ಇಂತಹುದೇ ಪ್ರಕರಣ ವರದಿಯಾಗಿದೆ. ಭದ್ರತೆಯಿಲ್ಲದೇ ಎಟಿಎಂ ಕಳ್ಳತನ ಪ್ರಕರಣಗಳು ಹೆಚ್ಚಿವೆ.
ಚಿಕ್ಕಮಗಳೂರು ಹೊರ ವಲಯದಲ್ಲಿ ಎಟಿಎಂ ಒಡೆದು ಕಳ್ಳತನ ಮಾಡಲಾಗಿದೆ.
ಚಿಕ್ಕಮಗಳೂರು ಹೊರ ವಲಯದಲ್ಲಿ ಎಟಿಎಂ ಒಡೆದು ಕಳ್ಳತನ ಮಾಡಲಾಗಿದೆ.

ಚಿಕ್ಕಮಗಳೂರು: ಕರ್ನಾಟಕದಲ್ಲಿ ಎಟಿಎಂ ಒಡೆದು ಹಣ ದೋಚುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಚಿಕ್ಕಮಗಳೂರು ನಗರ ಹೊರವಲಯದಲ್ಲೂ ಪ್ರಕರಣ ನಡೆದಿದೆ.

ಚಿಕ್ಕಮಗಳೂರಿನಿಂದ ಕಡೂರಿಗೆ ಹೋಗುವ ಮಾರ್ಗದಲ್ಲಿರುವ ಹೌಸಿಂಗ್‌ ಬೋರ್ಡ್‌ ಕಾಲೋನಿಯ ಕೆನರಾ ಬ್ಯಾಂಕ್‌ನ ಎಟಿಎಂ ಅನ್ನು ಒಡೆದು ಕಳ್ಳತನ ಮಾಡಲಾಗಿದೆ. ಈ ಎಟಿಎಂ ನಗರದಿಂದ ದೂರದಲ್ಲಿಯೇ ಇರುವುದು ಹಾಗೂ ಭದ್ರತಾ ಸಿಬ್ಬಂದಿ ಇಲ್ಲದೇ ಇರುವುದರಿಂದ ಸುಲಭವಾಗಿ ಕಳ್ಳತನ ಮಾಡಲು ದಾರಿ ಮಾಡಿಕೊಟ್ಟಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಹಾಸನ ಜಿಲ್ಲೆಯ ಬೇಲೂರಿನಿಂದ ಕಾರೊಂದನ್ನು ಕಳ್ಳತನ ಮಾಡಿಕೊಂಡು ಬಂದ ಮೂವರು ಕಳ್ಳರ ತಂಡ ಕೆನರಾ ಎಟಿಎಂ ಲೂಟಿ ಮಾಡುವ ಯೋಜನೆ ರೂಪಿಸಿದೆ. ಕಾರಿನಿಂದ ಬಂದವರೇ ಸ್ವಲ್ಪ ದೂರದಲ್ಲಿ ನಿಲ್ಲಿಸಿದ್ದಾರೆ. ಒಬ್ಬಾತ ಟೋಪಿ ಧರಿಸಿಕೊಂಡು ಒಳ ಹೋಗಿದ್ದು, ಇನ್ನಿಬ್ಬರು ಹೊರಗಡೆಯೇ ಕುಳಿತಿದ್ದಾರೆ. ಒಳ ಹೋದಾಗ ಸಿಸಿಟಿವಿ ಕ್ಯಾಮರಾ ಕಾಣದಂತೆ ಯಾವುದೇ ವಸ್ತುವನ್ನು ಸ್ಪ್ರೇ ಮಾಡಿದ್ದಾನೆ. ಎಟಿಎಂ ಒಳಗಿನ ಸ್ಥಿತಿ ನೋಡಿಕೊಂಡು ಮಾಹಿತಿ ನೀಡಿದ ಬಳಿಕ ಇನ್ನಿಬ್ಬರು ಒಳಗೆ ಹೋಗಿದ್ದಾರೆ. ಮೂವರೂ ಸೇರಿಕೊಂಡು ಎಟಿಎಂನ ಶೆಲ್ಟರ್‌ ಎಳೆದುಕೊಂಡು ಕಳ್ಳತನ ಮಾಡಿದ್ದಾರೆ. ಎಟಿಎಂ ಅನ್ನು ಒಡೆದು ಅದರಲ್ಲಿದ್ದ ಹಣವನ್ನು ಹೊತ್ತೊಯ್ದಿದ್ದಾರೆ. ಎಟಿಎಂ ಕಳ್ಳತನ ಮಾಡಿದ ನಂತರ ಅಲ್ಲಿಯೇ ಕಾರು ಬಿಟ್ಟು ಹೋಗಿರುವುದು ಕೂಡ ಕಂಡು ಬಂದಿದೆ.

ಇದೆಲ್ಲವೂ ಬ್ಯಾಂಕಿನ ಎದುರಿಗೆ ಇರುವ ಇನ್ನೊಂದು ಸಿಸಿಕ್ಯಾಮರಾದಲ್ಲಿ ದಾಖಲಾಗಿದೆ. ಮೂವರು ಅಲ್ಲಿಯೇ ಇದ್ದುಕೊಂಡು ಮಂಗಳವಾರ ಮಧ್ಯರಾತ್ರಿ ಕೃತ್ಯ ನಡೆಸಿರುವ ಮಾಹಿತಿ ಸಂಗ್ರಹಿಸಲಾಗಿದೆ.

ಎಟಿಎಂ ಕಳ್ಳತನವಾಗಿರುವುದನ್ನು ಗಮನಿಸಿದವರು ಬೆಳಿಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೆನರಾ ಬ್ಯಾಂಕ್‌ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ನಂತರ ಅವರೂ ಆಗಮಿಸಿ ವಿವರ ಸಂಗ್ರಹಿಸಿದರು. ಒಟ್ಟು 14 ಲಕ್ಷ ರೂ. ಹಣವನ್ನು ದೋಚಿರುವ ಕುರಿತು ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ವಶಕ್ಕೆ ಪಡೆದ ಪೊಲೀಸರು

ಎಟಿಎಂ ದೋಚಿದ ನಂತರ ಕಾರು ಬಿಟ್ಟು ಹೋಗಿರುವುದನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಕಾರನ್ನು ಬೇಲೂರಿನಲ್ಲಿ ಕಳ್ಳತನ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ. ಈ ಕುರಿತು ಇನ್ನಷ್ಟು ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.

ಪೊಲೀಸರು ಚಿಕ್ಕಮಗಳೂರು ಜಿಲ್ಲೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳಲ್ಲಿ ನಡೆದಿರುವ ಇಂತಹುದೇ ಎಟಿಎಂ ಕಳ್ಳತನ ಪ್ರಕರಣದ ಮಾಹಿತಿ ಆಧರಿಸಿ ಎಲ್ಲಾ ಆಯಾಮಗಳಲ್ಲೂ ತನಿಖೆ ಚುರುಕುಗೊಳಿಸಿದ್ದಾರೆ. ಎಟಿಎಂ ಎದುರಿನ ಸಿಸಿಟಿವಿಯಲ್ಲಿ ದಾಖಲಾದ ಚಿತ್ರಗಳನ್ನೂ ಆಧರಿಸಿ ಕಳ್ಳರ ಜಾಡು ಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ.

ಎಸ್ಪಿ ಉಮಾ ಭೇಟಿ

ಚಿಕ್ಕಮಗಳೂರು ಎಸ್ಪಿ ಉಮಾಪ್ರಶಾಂತ್‌ ಹಾಗೂ ಅಧಿಕಾರಿಗಳು, ಸಿಬ್ಬಂದಿಗಳ ತಂಡ ಕಳ್ಳತನ ನಡೆದ ಕೆನರಾ ಬ್ಯಾಂಕ್‌ನ ಎಟಿಎಂಗೆ ಭೇಟಿ ನೀಡಿದ್ದರು. ಬೆರಳಚ್ಚು ತಜ್ಞರು ಹಾಗೂ ಶ್ವಾನ ಪಡೆಯಿಂದಲೂ ಮಾಹಿತಿ ಕಲೆ ಹಾಕಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಹಿಂದೆಯೂ ಎಟಿಎಂ ಕಳ್ಳತನ ನಡೆದಿರುವ ಪ್ರಕರಣಗಳು ದಾಖಲಾಗಿವೆ. ಚಿಕ್ಕಮಗಳೂರು ಹೊರ ವಲಯದಲ್ಲಿ ನಡೆದಿರುವ ಪ್ರಕರಣದ ತನಿಖೆ ಚುರುಕುಗೊಂಡಿದೆ. ಕಾರು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಸಾಕಷ್ಟು ಪ್ರಗತಿ ಆಗಿದ್ದು. ಶೀಘ್ರವೇ ಆರೋಪಿಗಳನ್ನು ಬಂಧಿಸುತ್ತೇವೆ ಎನ್ನುವುದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಉಮಾಪ್ರಶಾಂತ್‌ ವಿವರಣೆ.

ಭದ್ರತಾ ಸಿಬ್ಬಂದಿಗಳೇ ಇಲ್ಲ

ಬೆಂಗಳೂರು, ಮೈಸೂರು ಸೇರಿದಂತೆ ಹಲವು ಕಡೆ ಎಟಿಎಂ ದರೋಡೆ ಪ್ರಕರಣಗಳು ದಾಖಲಾಗಿದ್ದವು. ಅದರಲ್ಲೂ ಮಹಿಳೆಯೊಬ್ಬರು ಹಣ ಪಡೆಯಲು ಎಟಿಎಂಗೆ ಬಂದಾಗ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹಣ ದೋಚಲಾಗಿತ್ತು. ಬಳಿಕ ಪೊಲೀಸ್‌ ಇಲಾಖೆಯ ಕಟ್ಟುನಿಟ್ಟಿನ ಸೂಚನೆ ಮೇರೆಗೆ ಬಹುತೇಕ ಶಾಖೆಗಳಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗುತ್ತಿತ್ತು. ಕೆಲವು ಕಡೆಯಂತೂ ಕಡ್ಡಾಯವಾಗಿ ರಾತ್ರಿ ವೇಳೆ ಭದ್ರತಾ ಸಿಬ್ಬಂದಿ ಇರುತ್ತಿದ್ದರು. ಇದಾದ ಕೆಲವೇ ದಿನಗಳಲ್ಲಿ ಬಹುತೇಕ ಎಟಿಎಂಗಳಲ್ಲಿ ಭದ್ರತಾ ಸಿಬ್ಬಂದಿ ಇಲ್ಲ. ಎಲ್ಲ ಕಡೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಅದೇ ಭದ್ರತಾ ಸಿಬ್ಬಂದಿ ರೀತಿ ಕೆಲಸ ಮಾಡಲಿದೆ ಎನ್ನುವುದು ಬ್ಯಾಂಕ್‌ಗಳ ಸ್ಪಷ್ಟನೆ. ಆದರೆ ಕಳೆದ ಮೂರ್ನಾಲ್ಕು ತಿಂಗಳಿನಲ್ಲಿಯೇ ಎಟಿಎಂ ಅನ್ನು ಒಡೆದು ಹಾಕಿ ಹಣ ದೋಚಿರುವ ಪ್ರಕರಣಗಳು ದಾಖಲಾಗಿವೆ. ಬ್ಯಾಂಕ್‌ ಶಾಖೆಯ ಆವರಣದಲ್ಲಿರುವ ಎಟಿಎಂಗಳು ಮಾತ್ರವಲ್ಲದೇ ಶಾಖೆಯಿಂದ ದೂರದಲ್ಲಿ, ನಿರ್ಜನ ಪ್ರದೇಶದಲ್ಲಿರುವ ಶಾಖೆಗಳಿಗೆ ಭದ್ರತಾ ಸಿಬ್ಬಂದಿ ಒದಗಿಸಬೇಕು. ಹಣ ತೆಗೆಯುವಾಗಲೂ ದಾಳಿಯಾಗುವ ಸಾಧ್ಯತೆಗಳಿರುವುದರಿಂದ ಸುರಕ್ಷತೆಗೆ ಒತ್ತು ನೀಡಬೇಕು ಎನ್ನುವುದು ಬ್ಯಾಂಕ್‌ ಗ್ರಾಹಕರ ಆಗ್ರಹ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ