Mangaluru News: ಕದ್ದ ಜೆಸಿಬಿಯಿಂದಲೇ ಎಟಿಎಂ ಯಂತ್ರ ಕಳವಿಗೆ ವಿಫಲ ಯತ್ನ; ಮಂಗಳೂರು ಪೊಲೀಸ್ ಠಾಣೆಯ ಪಕ್ಕದಲ್ಲೇ ಕೃತ್ಯ
ಕದ್ದ ಜೆಸಿಬಿಯನ್ನೇ ಬಳಸಿ ಎಟಿಎಂ ಯಂತ್ರ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಮಂಗಳೂರು (ದಕ್ಷಿಣ ಕನ್ನಡ): Mangaluru Crime News ಹಣ ಕಳವು ಮಾಡಲು ನಾನಾ ದಾರಿಗಳನ್ನು ಹುಡುಕುವುದನ್ನು ನಾವು ನೋಡಿದ್ದೇವೆ. ಎಟಿಎಂನಲ್ಲಿ ಇರುವ ಕಂತೆ ಕಂತೆ ನೋಟುಗಳನ್ನು ಕದ್ದೊಯ್ಯುವುದು ಹೇಗೆ? ಕೆಲ ಕಿಡಿಗೇಡಿಗಳು ಮಂಗಳೂರಿನ ಹೊರವಲಯದ ಸುರತ್ಕಲ್‌ನಲ್ಲಿ ಒಂದು ಉಪಾಯ ಮಾಡಿದ್ದಾರೆ. ಜೆಸಿಬಿಯಲ್ಲಿ ಬಂದು ಎಟಿಎಂಅನ್ನು ಹೊತ್ತೊಯ್ಯಲು ಯತ್ನಿಸಿದ್ದಾರೆ.
ಕದ್ದ ಜೆಸಿಬಿಯಿಂದಲೇ ಎಟಿಎಂ ಕಳ್ಳನತಕ್ಕೆ ಯತ್ನ
ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಿ ಸೌತ್ ಇಂಡಿಯನ್ ಬ್ಯಾಂಕ್‌ನ ಶಾಖಾ ಮ್ಯಾನೇಜರ್ ರೋಹಿತ್ ಎಂಬವರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದಿ ಸೌತ್ ಇಂಡಿಯನ್ ಬ್ಯಾಂಕ್ ಶಾಖೆ ಸುರತ್ಕಲ್ ಪೇಟೆಯ ವಿದ್ಯಾದಾಯಿನೀ ಶಾಲೆ, ಸಮೀಪದ ರಾಷ್ಟ್ರೀಯ ಹೆದ್ದಾರಿ ಅಂಡರ್ ಪಾಸ್‌ನ ಪಶ್ಚಿಮದ ವಾಣಿಜ್ಯ ಸಂಕೀರ್ಣದ ಮೊದಲ ಮಹಡಿಯಲ್ಲಿ ಇದೆ. ಇದು ಪೊಲೀಸ್ ಠಾಣೆಯಿಂದ ಕೇವಲ 200 ಮೀ. ದೂರದಲ್ಲಿದೆ. ಕಳ್ಳರು ಬಳಸಿದ್ದ ಜೆಸಿಬಿ ಪಡುಬಿದ್ರಿಯಿಂದ ಕದ್ದಿರುವುದಾಗಿದೆ ಎಂದು ತನಿಖೆ ವೇಳೆ ಪೊಲೀಸರಿಗೆ ಗೊತ್ತಾಗಿದೆ.
ಎಟಿಎಂ ಬ್ಯಾಂಕ್ ಶಾಖೆಯ ಪಕ್ಕದ ಕೋಣೆಯಲ್ಲಿದ್ದು ಕಳ್ಳರು ಜೆಸಿಬಿ ಬಳಸಿ ಎಟಿಎಂ ಮುಂಭಾಗದ ಗಾಜು ಒಡೆದಿದ್ದಾರೆ. ಎಟಿಎಂ ಮೆಷಿನ್‌ಅನ್ನು ಕೆಳಗೆ ಬೀಳಿಸಿ ಅಲ್ಲಿಂದ ಹೊತ್ತೊಯ್ಯಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ಸಿಸಿಟಿವಿ ಸೆಂಟ್ರಲ್ ಟೀಮ್ ನಿಂದ ಬ್ಯಾಂಕ್ ಮ್ಯಾನೇಜರ್‌ಗೆ ಕರೆ ಬಂದಿದ್ದು, ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಕಳ್ಳರು ಪರಾರಿಯಾಗಿದ್ದಾರೆ
ಶುಕ್ರವಾರ ಮುಂಜಾನೆ 2.13ರ ವೇಳೆಗೆ ಈ ಘಟನೆ ನಡೆದಿದ್ದು, ಇಬ್ಬರು ಕಳ್ಳರು ಮುಖಕ್ಕೆ ಕವಚ ಹಾಕಿಕೊಂಡು ಈ ಕೃತ್ಯ ನಡೆಸಿದ್ದರು ಎಂದು ತಿಳಿದು ಬಂದಿದೆ. ಈ ಕೃತ್ಯಕ್ಕೆ ಬಳಸಿದ ಜೆಸಿಬಿ ಜೋಕಟ್ಟೆ ಬಳಿ ಪತ್ತೆಯಾಗಿದೆ.
ಈ ಎಟಿಎಂ ಹೆದ್ದಾರಿ ಪಕ್ಕದಲ್ಲಿದ್ದು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿದ್ದರೂ ಸೆಕ್ಯುರಿಟಿ ಗಾರ್ಡ್ ಇರಲಿಲ್ಲ. ಎಟಿಎಂನಲ್ಲಿ 2 ಲಕ್ಷ ರೂ. ಇತ್ತು. ಸೈರನ್ ಮೊಳಗಿ ಕಳ್ಳರ ಪ್ರಯತ್ನ ವಿಫಲವಾದ ಕಾರಣ ದೊಡ್ಡಮಟ್ಟದ ಘಟನೆ ತಪ್ಪಿಹೋಗಿದೆ. ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳಕ್ಕೆ ಮಂಗಳೂರು ಡಿಸಿಪಿ ದಿನೇಶ್ ಕುಮಾರ್ ಭೇಟಿ ನೀಡಿ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ. ಶ್ವಾನದಳ, ಬೆರಳಚ್ಚು ತಂಡ ಆಗಮಿಸಿ ಪರಿಶೀಲನೆ ನಡೆಸಿದೆ. ಸುರತ್ಕಲ್ ಪಿಐ ಮಹೇಶ್ ಪ್ರಸಾದ್ ಕೇಸ್ ದಾಖಲಿಸಿಕೊಂಡಿದ್ದಾರೆ. (ವರದಿ: ಹರೀಶ ಮಾಂಬಾಡಿ)
ವಿಭಾಗ