ATMs Loot: ನಾಲ್ಕು ಎಟಿಎಂಗಳನ್ನು ಲೂಟಿ ಮಾಡಿ, 70 ಲಕ್ಷಕ್ಕೂ ಹೆಚ್ಚು ಹಣದೊಂದಿಗೆ ಪರಾರಿಯಾದ ಗ್ಯಾಂಗ್
ನಾಲ್ಕು ಎಟಿಎಂಗಳನ್ನು ಕಟ್ ಮಾಡಿ 70 ಲಕ್ಷಕ್ಕೂ ಹೆಚ್ಚು ಹಣವನ್ನು ದೋಚಿ ಗ್ಯಾಂಗ್ವೊಂದು ಪರಾರಿಯಾಗಿರುವ ಘಟನೆ ತಮಿಳುನಾಡಿದ ತಿರುವಣ್ಣಾಮಲೈ ಜಿಲ್ಲೆಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಈ ಗ್ಯಾಂಗ್ ತಮಿಳುನಾಡಿನ ಹೊರಗಿನಿಂದ ಬಂದಿರುವ ಶಂಕೆ ವ್ಯಕ್ತವಾಗಿದೆ.
ತಿರುವಣ್ಣಾಮಲೈ (ತಮಿಳುನಾಡು): ನಾಲ್ಕು ಎಟಿಎಂಗಳನ್ನು ಕಟ್ ಮಾಡಿ 70 ಲಕ್ಷಕ್ಕೂ ಹೆಚ್ಚು ಹಣವನ್ನು ದೋಚಿ ಗ್ಯಾಂಗ್ವೊಂದು ಪರಾರಿಯಾಗಿರುವ ಘಟನೆ ತಮಿಳುನಾಡಿದ ತಿರುವಣ್ಣಾಮಲೈ ಜಿಲ್ಲೆಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಈ ಗ್ಯಾಂಗ್ ತಮಿಳುನಾಡಿನ ಹೊರಗಿನಿಂದ ಬಂದಿರುವ ಶಂಕೆ ವ್ಯಕ್ತವಾಗಿದೆ.
ಅಲ್ಲದೇ ಪ್ರಾಥಮಿಕ ತನಿಖೆಯ ಪ್ರಕಾರ, 2021 ರ ಜೂನ್ ಮತ್ತು ಜುಲೈನಲ್ಲಿ ಚೆನ್ನೈ, ತಿರುವಣ್ಣಾಮಲೈ, ವೆಲ್ಲೂರು, ಪುದುಚೇರಿ ಮತ್ತು ಇತರ ಜಿಲ್ಲೆಗಳಲ್ಲಿ ಎಟಿಎಂಗಳಿಂದ ಹಣವನ್ನು ಲೂಟಿ ಮಾಡಿದ ತಂಡದ ಪ್ರದೇಶದವರೇ ಇವರು ಎಂದು ಪತ್ತೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ನಾವು ಸುಳಿವುಗಳು ಮತ್ತು ವೈಜ್ಞಾನಿಕ ಪುರಾವೆಗಳನ್ನು ಸ್ವೀಕರಿಸಿದ್ದೇವೆ. ಈ ಅಪರಾಧದ ಶಂಕಿತರು ಉತ್ತಮ ತಾಂತ್ರಿಕ ಜ್ಞಾನವನ್ನು ಹೊಂದಿದ್ದಾರೆ. ವಿವಿಧ ಯಂತ್ರಗಳಲ್ಲಿನ ದೋಷಗಳ ಬಗ್ಗೆ ಅವರಿಗೆ ತಿಳಿದಿತ್ತು. ಲೂಟಿ ಮಾಡಲಾದ ಎಲ್ಲಾ ನಾಲ್ಕು ಎಟಿಎಂಗಳು ಒಂದೇ ರೀತಿಯ ಯಂತ್ರಗಳಾಗಿವೆ ” ಎಂದು ಇನ್ಸ್‌ಪೆಕ್ಟರ್ ಜನರಲ್ ಎನ್ ಕಣ್ಣನ್ ಹೇಳಿದ್ದಾರೆ.
ಭಾನುವಾರ ತಡರಾತ್ರಿ 2 ಗಂಟೆ ಒಳಗೆ ಘಟನೆ ನಡೆದಿದೆ ಎಂದು ವರದಿಯಾಗಿದೆ. ಪೊಲೀಸ್ ಗಸ್ತು ತಂಡವು ಸುಮಾರು 2 ಗಂಟೆಗೆ ಒಂದು ಎಟಿಎಂ ಹಾನಿಗೊಳಗಾಗಿರುವುದನ್ನು ಪತ್ತೆ ಮಾಡಿದ್ದಾರೆ. ಕೇವಲ 500 ಮೀಟರ್ ದೂರದಲ್ಲಿರುವ ಮತ್ತೊಂದು ಎಟಿಎಂ ಕೂಡ ಹಾನಿಗೊಳಗಾಗಿರುವುದು ಕಂಡುಬಂದಿದೆ. ಎರಡೂ ಯಂತ್ರಗಳು ತಿರುವಣ್ಣಾಮಲೈ ಪಟ್ಟಣ ವ್ಯಾಪ್ತಿಯಲ್ಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂರನೆಯ ಎಟಿಎಂ ಪಟ್ಟಣದಿಂದ 25 ಕಿ.ಮೀ ದೂರದಲ್ಲಿದೆ ಮತ್ತು ನಾಲ್ಕನೆಯದು ಅಲ್ಲಿಂದ 10 ಕಿ.ಮೀ ದೂರದಲ್ಲಿದೆ. ಎರಡು ಗಂಟೆಗಳ ಅವಧಿಯಲ್ಲಿ ಕೃತ್ಯ ನಡೆದಿದೆ ಎಂದು ಅಂದಾಜಿಸಲಾಗಿದೆ. ಮೂರು ಎಟಿಎಂಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮತ್ತು ನಾಲ್ಕನೆಯದು ಇಂಡಿಯಾ 1 ಎಟಿಎಂ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ತಮಿಳುನಾಡು ಡಿಜಿಪಿ ಸೈಲೇಂದ್ರ ಬಾಬು ಅವರು ಹಿರಿಯ ಬ್ಯಾಂಕ್ ಅಧಿಕಾರಿಗಳು ಮತ್ತು ಭದ್ರತಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಭವಿಷ್ಯದಲ್ಲಿ ಇಂತಹ ಅಪರಾಧಗಳನ್ನು ತಡೆಗಟ್ಟಲು ಗುಪ್ತ ಕ್ಯಾಮೆರಾಗಳು, ಮುಖ ಗುರುತಿಸುವ ವ್ಯವಸ್ಥೆಗಳು ಮತ್ತು ಎಚ್ಚರಿಕೆಯ ಗಂಟೆಗಳನ್ನು ಅಳವಡಿಸುವಂತೆ ಡಿಜಿಪಿ ಅವರಿಗೆ ಸೂಚನೆ ನೀಡಿದರು.
ಆರೋಪಿಗಳು ಕೃತ್ಯ ಎಸಗಲು ಬಳಸಿದ ವಾಹನವನ್ನು ಪೊಲೀಸರು ಗುರುತಿಸಿದ್ದು, ಅದರ ಮೇಲೆ ತನಿಖೆ ಆರಂಭಿಸಿದ್ದಾರೆ. ಆರೋಪಿಗಳು ಒಂದರ ನಂತರ ಒಂದರಂತೆ ಎಟಿಎಂ ಅನ್ನು ಗುರಿಯಾಗಿಸಿಕೊಂಡು ಗುಂಪಿನಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಎಟಿಎಂಗಳನ್ನು ಕತ್ತರಿಸಲು ಅವರು ಗ್ಯಾಸ್ ವೆಲ್ಡಿಂಗ್ ಯಂತ್ರವನ್ನು ಬಳಸಿದ್ದಾರೆ ”ಎಂದು ಪೊಲೀಸರು ಹೇಳಿದರು.
ಈ ಗುಂಪು ತಮಿಳುನಾಡಿನಲ್ಲಿ ಮೊದಲ ಬಾರಿಗೆ ಈ ವಿಧಾನವನ್ನು ಬಳಸಿದೆ. 2021 ರ ಪ್ರಕರಣ ಗುಂಪು ಹಾಗೂ ಈ ಗುಂಪು ಒಂದೇ ಅಲ್ಲ. ಏಕೆಂದರೆ ಈ ಗ್ಯಾಂಗ್ ಬಳಸಿದ ವಿಧಾನವೇ ಬೇರೆ. ಆದರೆ ಅವರು ಒಂದೇ ಪ್ರದೇಶಕ್ಕೆ ಸೇರಿದವರು. ಡಿಐಜಿ ವೆಲ್ಲೂರು ಎಸ್ ಮುತ್ತುಸಾಮಿ ನೇತೃತ್ವದಲ್ಲಿ ಈ ಪ್ರಕರಣದ ತನಿಖೆ ನಡೆಯುತ್ತಿದೆ. ಒಂಬತ್ತು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಇದರಲ್ಲಿ ಐವರು ಪೊಲೀಸ್ ವರಿಷ್ಠಾಧಿಕಾರಿಗಳು ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಇತರ ಪ್ರಕರಣಗಳಲ್ಲಿ, ತನಿಖಾ ಅಧಿಕಾರಿಗಳು ಸಾಮಾನ್ಯವಾಗಿ ಎಸ್‌ಐ ಅಥವಾ ಇನ್‌ಸ್ಪೆಕ್ಟರ್‌ಗಳಾಗಿರುತ್ತಾರೆ ಆದರೆ ಈ ಪ್ರಕರಣದಲ್ಲಿ ಡಿಎಸ್‌ಪಿಯನ್ನು ನಿಯೋಜಿಸಲಾಗಿದೆ. ನಮ್ಮ ತಂಡಗಳು ತಮಿಳುನಾಡಿನ ಹೊರಗೆ ಬೀಡುಬಿಟ್ಟಿವೆ. ನಾವು ಫಲಪ್ರದ ಫಲಿತಾಂಶವನ್ನು ಪಡೆಯುತ್ತೇವೆ ಎಂದು ನಾವು ಭಾವಿಸುತ್ತೇವೆ ಎಂದು ಪೊಲೀಸರು ಹೇಳಿದರು.
ಕಳೆದ ಜನವರಿಯಲ್ಲಿ ಸೆಕ್ಯುರಿಟಿ ಗಾರ್ಡ್ ಮೇಲೆ ಗುಂಡು ಹಾರಿಸಿ, ವ್ಯಾನ್‌ನಲ್ಲಿದ್ದ ಹಣವನ್ನು ಲೂಟಿ ಮಾಡಿ ಸಿನಿಮೀಯ ರೀತಿಯಲ್ಲಿ ಕಿರಾತಕ ಪರಾರಿಯಾಗಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿತ್ತು. ದೆಹಲಿಯ ವಜೀರಾಬಾದ್‌ನ ಜಗತ್‌ಪುರ ಮೇಲ್ಸೇತುವೆ ಬಳಿಯಿರುವ ಐಸಿಐಸಿಐ ಎಟಿಎಂಗೆ ಹಣ ಹಾಕಲು ಕ್ಯಾಶ್ ವ್ಯಾನ್ ಬಂದಿತ್ತು. ಒಬ್ಬ ವ್ಯಕ್ತಿ ಬಂದು ಕ್ಯಾಶ್ ವ್ಯಾನ್ ಸಿಬ್ಬಂದಿ ಮೇಲೆ ಗುಂಡು ಹಾರಿಸಿ, ಹಣ ಪಡೆದು ಪರಾರಿಯಾಗಿದ್ದಾನೆ. ಗಾಯಗೊಂಡ ಸಿಬ್ಬಂದಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲೇ ಅವರು ಮೃತಪಟ್ಟಿದ್ದರು. ಲೂಟಿ ಮಾಡಿರುವ ಹಣ ಸುಮಾರು 8 ಲಕ್ಷ ರೂ. ಆಗಿತ್ತು.
ವಿಭಾಗ