ಫೆಂಗಲ್ ಚಂಡಮಾರುತ; ಬೆಂಗಳೂರಲ್ಲಿ ಏನಾಗಿದೆ, ಕರ್ನಾಟಕ ದಕ್ಷಿಣ ಒಳನಾಡು ಜನ ಕಂಗಾಲು, ಕೃಷಿ, ಬೆಳೆ ನಾಶ ನಷ್ಟ- 10 ಮುಖ್ಯ ಅಂಶಗಳು
Dec 03, 2024 02:11 PM IST
ಫೆಂಗಲ್ ಚಂಡಮಾರುತ; ಬೆಂಗಳೂರಲ್ಲಿ ಏನಾಗಿದೆ, ಕರ್ನಾಟಕ ದಕ್ಷಿಣ ಒಳನಾಡು ಭಾಗದಲ್ಲಿ ಕೃಷಿ, ಬೆಳೆ ನಾಶ ನಷ್ಟವಾಗಿದ್ದು ಜನ ಕಂಗಾಲಾಗಿದ್ದಾರೆ. (ಸಾಂಕೇತಿಕ ಚಿತ್ರ)
Cyclone Fengal: ಫೆಂಗಲ್ ಚಂಡಮಾರುತದ ಪರಿಣಾಮ ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಕರಾವಳಿ ಕರ್ನಾಟಕದಲ್ಲಿ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕೃಷಿ, ಬೆಳೆ ನಾಶ ನಷ್ಟ ಸಂಭವಿಸಿದೆ. ಬೆಂಗಳೂರಲ್ಲಿ ಏನಾಗಿದೆ ಎಂಬುದು ಸೇರಿ 10 ಮುಖ್ಯ ಅಂಶಗಳ ವಿವರ ಇಲ್ಲಿದೆ.
Cyclone Fengal: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿ ಕೇರಳದ ಕಡೆಗೆ ಸಾಗಿದ ಫೆಂಗಲ್ ಚಂಡಮಾರುತದ ಕಾರಣ ಕರ್ನಾಟಕದಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ. ವಿಶೇಷವಾಗಿ ಕರ್ನಾಟಕದ ದಕ್ಷಿಣ ಒಳನಾಡಲ್ಲಿ ಭಾರಿ ಸಂಕಷ್ಟ ಉಂಟಾಗಿದೆ. ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಮಳೆ ಸುರಿಯುತ್ತಿದ್ದು, ಚಾಮರಾಜನಗರ, ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ, ಮಂಡ್ಯ, ಮೈಸೂರು ಭಾಗದಲ್ಲಿ ಹೆಚ್ಚು ಮಳೆಯಾಗಿದೆ. ಈ ಎಲ್ಲ ಜಿಲ್ಲೆಗಳಲ್ಲಿ ನಿನ್ನೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಇಂದು ಕೂಡ ಕೆಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆಯಾಗಿದೆ. ಬೆಂಗಳೂರಲ್ಲಿ ಯೆಲ್ಲೋ ಅಲರ್ಟ್ ಇದ್ದರೂ ರಜೆ ಘೋಷಿಸಿಲ್ಲ ಎಂದು ಕೆಲವು ಪಾಲಕರು ಅಸಮಾಧಾನ ವ್ಯಕ್ತಪಡಿಸಿರುವುದಾಗಿ ಟಿವಿ ಮಾಧ್ಯಮಗಳು ವರದಿಮಾಡಿವೆ.
ಫೆಂಗಲ್ ಚಂಡಮಾರುತ, ಕರ್ನಾಟಕದಲ್ಲಿ ಮಳೆ, ದಕ್ಷಿಣ ಒಳನಾಡಲ್ಲಿ ಏನಾನಾಗಿದೆ 10 ಅಂಶಗಳು
1) ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರ, ಉಡುಪಿ, ಮೈಸೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಂಗಳವಾರ ಶಾಲಾ-ಕಾಲೇಜುಗಳಿಗೆ ಆಯಾ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ. ವಿಶೇಷವೆಂದರೆ, ಚಾಮರಾಜನಗರದಲ್ಲಿ ಪದವಿ ಕಾಲೇಜುಗಳನ್ನು ಹೊರತುಪಡಿಸಿ ಪರೀಕ್ಷೆ ನಡೆಸುವ ಎಲ್ಲಾ ಸಂಸ್ಥೆಗಳಿಗೆ ರಜೆ ನೀಡಲಾಗಿದೆ. ಅದೇ ರೀತಿ ಚಿಕ್ಕಮಗಳೂರಿನಲ್ಲಿ ಪ್ರಾಥಮಿಕ, ಪ್ರೌಢಶಾಲೆಗಳು ಮತ್ತು ಅಂಗನವಾಡಿಗಳಿಗೆ ರಜೆ ಅನ್ವಯಿಸುತ್ತದೆ.
2) ಹವಾಮಾನ ಎಚ್ಚರಿಕೆಯ ಹೊರತಾಗಿಯೂ ಬೆಂಗಳೂರಿನ ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಬೆಂಗಳೂರು ನಗರ ಜಿಲ್ಲಾ ಉಪ ಆಯುಕ್ತರು ಸ್ಪಷ್ಟಪಡಿಸಿದ್ದಾರೆ ಎಂದು ಪಬ್ಲಿಕ್ ಟಿವಿ ವರದಿ ಮಾಡಿದೆ. ಬೆಂಗಳೂರಿನಲ್ಲಿ ಭಾರೀ ಮಳೆಯ ನಡುವೆ ವಿದ್ಯಾರ್ಥಿಗಳ ಯೋಗಕ್ಷೇಮಕ್ಕೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಒತ್ತಾಯಿಸಿ ಹಲವಾರು ಪೋಷಕರು ತಮ್ಮ ಕಳವಳವನ್ನು ವ್ಯಕ್ತಪಡಿಸಲು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡರು.
3) ಸತತವಾಗಿ ಮಳೆ ಸುರಿದ ಕಾರಣ ಮೈಸೂರು ಚಾಮುಂಡಿ ಬೆಟ್ಟದಲ್ಲಿ ರಸ್ತೆಗೆ ಬಂಡೆ ಉರುಳಿ ಬಿದ್ದಿದೆ. ನಿನ್ನೆ ಇಡೀ ದಿನ ಮಳೆ ಸುರಿದ ಕಾರಣ ಬೆಟ್ಟದ ಮಣ್ಣು ಸಡಿವಲಾಗಿದೆ. ರಸ್ತೆಗೆ ಬಂಡೆ ಉರುಳಿದ ಕಾರಣ ವಾಹನ ಸಂಚಾರಕ್ಕೆ ಕೆಲ ಹೊತ್ತು ಅಡ್ಡಿ ಉಂಟಾಗಿತ್ತು. ನಂತರ ಬಂಡೆಗಳನ್ನು ತೆರವುಗೊಳಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.
4) ಮೈಸೂರು ನಗರದ ಸರಸ್ವತಿಪುರಂ ಬಡಾವಣೆಯಲ್ಲಿ ಎರಡು ಮರಗಳು ಏಕಾಕಿಯಾಗಿ ಒಟ್ಟಿಗೇ ಧರೆಗುರುಳಿವೆ. ರಸ್ತೆ ಬದಿಗೆ ಕಟ್ಟಡಗಳ ಪಕ್ಕವೇ ಇದ್ದ ಮರಗಳು ಬಿದ್ದ ಕಾರಣ ಎರಡು ಕಾರುಗಳು ಹಾನಿಗೀಡಾಗಿವೆ. ಈ ಮರಗಳು ಧರೆಗುರುಳುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
5) ಮೈಸೂರು ಜಿಲ್ಲೆಯಾದ್ಯಂತ ನಿರಂತರ ಮಳೆ ಸುರಿದ ಕಾರಣ, ಹುಣಸೂರು ತಾಲೂಕಿನ ಕಾಳೇನಹಳ್ಳಿಯಲ್ಲಿ ಕಟಾವು ಮಾಡಿದ್ದ ಭತ್ತದ ಪೈರು ಜಲಾವೃತ್ತವಾಗಿದ್ದು, ಅಪಾರ ಹಾನಿಯಾಗಿದೆ. ಇದರಿಂದಾಗಿ, ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದು ಪರಿಹಾರಕ್ಕೆ ಆಗ್ರಹಿಸಿದ್ದಾರೆ.
6) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಾಲ್ ಚಂಡಮಾರುತ ಅಬ್ಬರ ಜೋರಾಗಿದೆ. ಬಜಪೆಯ ಸಮೀಪ ಆದ್ಯಪಾಡಿ ಎಂಬಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, ಬಜಪೆ- ಅದ್ಯಪಾಡಿ ಸಂಪರ್ಕ ಕಡಿತವಾಗಿದೆ. ಮಂಗಳೂರು ವಿಮಾನ ನಿಲ್ದಾಣ ಕೆಳಭಾಗದ ಪ್ರದೇಶದಲ್ಲಿರುವ ಅದ್ಯಪಾಡಿಯಲ್ಲಿ ಬೆಟ್ಟದಿಂದ ನೀರು ಹರಿದು ಬಂದ ಕಾರಣ ಗುಡ್ಡ ಕುಸಿದಿದೆ. ವಿದ್ಯುತ್ ಕಂಬಗಳು ಉರುಳಿವೆ. ಮನೆ ಅಂಗಳಕ್ಕೆ ಮಣ್ಣು ಬಿದ್ದು ಕೆಸರು ತುಂಬಿಕೊಂಡಿದೆ. ಇನ್ನೊಂದೆಡೆ, ಮಂಗಳೂರು ಬಂದರು ಪ್ರದೇಶದಲ್ಲಿ ಲಂಗರು ಹಾಕಿ ನಿಲ್ಲಿಸಿದ್ದ ಬಲೆ ಬೀಸುವ ದೋಣಿಗಳು ಭಾರಿ ಮಳೆ, ಗಾಳಿಗೆ ಕೊಚ್ಚಿ ಹೋಗಿವೆ. ಹತ್ತು ದೋಣಿಗಳಿಗೆ ಹಾನಿಯಾಗಿವೆ. ಉಳ್ಳಾಲ ತಾಲೂಕು ತೊಕ್ಕೊಟ್ಟು ಸೇವಾಸೌಧ ಸಮೀಪವಿರುವ ಮರದ ಮಿಲ್‌ಗೆ ನೀರು ನುಗ್ಗಿದೆ. ಬಂಟ್ವಾಳ ಸಮೀಪದ ಉಳ್ಳಗುಡ್ಡೆ ಎಂಬಲ್ಲಿ ಸಿಡಿಲು ಬಡಿದು ಮನೆಯೊಂದು ಹಾನಿಗೀಡಾಗಿದೆ.
7) ಸೋಮವಾರ ಜೆಪಿನಗರದಲ್ಲಿ 70 ವರ್ಷ ಹಳೆಯ ಮನೆಯ ಗೋಡೆ ಕುಸಿದು ಬಿದ್ದಿದೆ. ಕಸ್ತೂರಿ ಹಾಗೂ ಲೋಕೇಶ್ ಎಂಬ ವಯೋವೃದ್ಧ ಅಕ್ಕ-ತಮ್ಮ ವಾಸಿಸುತ್ತಿದ್ದರು. ಗೋಡೆ ಕುಸಿಯುತ್ತಿರುವುದನ್ನು ಕಂಡು ಇಬ್ಬರು ಜೋರಾಗಿ ಕೂಗಿಕೊಂಡರು. ಕೂಡಲೇ ಅಕ್ಕಪಕ್ಕದ ಮನೆಯವರು ಮನೆಯಲ್ಲಿ ಸಿಲುಕಿಕೊಂಡಿದ್ದ ಇಬ್ಬರನ್ನು ರಕ್ಷಿಸಿದ್ದಾರೆ. ಸದ್ಯ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜಗಜೀವನರಾಮ್ ನಗರದಲ್ಲಿ ಕೂಡ ಮನೆಯ ಗೋಡೆ ಕುಸಿದಿದೆ. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಆಗಿಲ್ಲ.
8) ಬೆಂಗಳೂರು ನಗರದಲ್ಲಿ ಸೋಮವಾರ ಇಡೀ ದಿನ ಮೋಡ ಕವಿದ ವಾತಾವರಣ ಮತ್ತು ಜಿಟಿಜಿಟಿ ಮಳೆ ಬಿದ್ದ ಕಾರಣ ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಶಿಯಸ್‌ಗೆ ಕುಸಿದಿತ್ತು. ಮೆಜೆಸ್ಟಿಕ್, ಕೆ.ಆರ್. ಮಾರುಕಟ್ಟೆ, ಚಾಮರಾಜಪೇಟೆ, ರಾಜರಾಜೇಶ್ವರಿನಗರ, ಕೆಆರ್‌ಪುರ, ಕೋರಮಂಗಲ, ತುಮಕೂರು ರಸ್ತೆ, ಕನಕಪುರ ರಸ್ತೆ, ಬನ್ನೇರಘಟ್ಟ ರಸ್ತೆ, ಮೈಸೂರು ರಸ್ತೆ ಸೇರಿ ಬಹುತೇಕ ಕಡೆ ಸೋಮವಾರ ಸಂಜೆ 5 ಗಂಟೆಯವರೆಗೆ ಜಿಟಿಜಿಟಿ ಮಳೆ ಸುರಿದಿದೆ. ನಂತರ ರಾತ್ರಿ 8 ಗಂಟೆಯಿಂದ ಆಗಾಗ ಮಳೆ ಸುರಿದಿದ್ದು, ರಾತ್ರಿ 11 ಗಂಟೆಯವರೆಗೂ ಮಳೆ ಮುಂದುವರಿದಿದೆ.
9) ಚಾಮರಾಜನಗರ ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಬರುವ ತಾಳು ಬೆಟ್ಟದ ತಿರುವಿನಲ್ಲಿ ಗುಡ್ಡ ಕುಸಿದು ಸಂಚಾರ ಅಸ್ತವ್ಯಸ್ತಗೊಂಡಿದೆ. ರಸ್ತೆಗೆ ಅಡ್ಡಲಾಗಿ ಮರಗಳು ಬಿದ್ದ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದಲ್ಲದೆ, ಮಲೆ ಮಹದೇಶ್ವರ ಬೆಟ್ಟದಲ್ಲಿ ಸೋಮವಾರ ಬೆಳಗ್ಗೆ ಮನೆಯ ಗೋಡೆಯೊಂದು ಕುಸಿದಿದ್ದು, ಮನೆಯೊಳಗಿದ್ದ ಮೂವರು ಅದೃಷ್ಟವಶಾತ್ ಪಾರಾಗಿದ್ದಾರೆ.
10) ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೆಲವೆಡೆ ರಸ್ತೆಯಲ್ಲಿ ಮಳೆ ನೀರು ಸಂಗ್ರಹಗೊಂಡಿದ್ದರಿಂದ, ವಾಹನಗಳ ದಟ್ಟಣೆ ಕಂಡು ಬಂತು. ಇನ್ನೊಂದೆಡೆ, ಇದೇವೇಳೆ, ಧಾರವಾಡ, ಬಳ್ಳಾರಿ, ವಿಜಯನಗರ, ಕೊಪ್ಪಳ, ಹಾವೇರಿ, ಉತ್ತರ ಕನ್ನಡ ಸೇರಿ ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ಸೋಮವಾರ ಮಧ್ಯಾಹ್ನದಿಂದ ಜಿಟಿ ಜಿಟಿ ಮಳೆ ಆರಂಭವಾಗಿದ್ದು, ವಿಪರೀತ ಚಳಿ ವಾತಾವರಣ ಮನೆ ಮಾಡಿದೆ.