logo
ಕನ್ನಡ ಸುದ್ದಿ  /  ಕರ್ನಾಟಕ  /  ದಕ್ಣಿಣ ಕನ್ನಡದಲ್ಲಿ ಕೃಷಿ ರಕ್ಷಣೆಗೆ ಮಾತ್ರ ಆಯುಧ, ಚುನಾವಣೆಗೆ ಠಾಣೆಗಳಲ್ಲಿರಿಸಿದ ಶಸ್ತ್ರಾಸ್ತ್ರ ಹಿಂಪಡೆಯಲು ಜಿಲ್ಲಾಧಿಕಾರಿ ಆದೇಶ

ದಕ್ಣಿಣ ಕನ್ನಡದಲ್ಲಿ ಕೃಷಿ ರಕ್ಷಣೆಗೆ ಮಾತ್ರ ಆಯುಧ, ಚುನಾವಣೆಗೆ ಠಾಣೆಗಳಲ್ಲಿರಿಸಿದ ಶಸ್ತ್ರಾಸ್ತ್ರ ಹಿಂಪಡೆಯಲು ಜಿಲ್ಲಾಧಿಕಾರಿ ಆದೇಶ

Umesha Bhatta P H HT Kannada

Apr 30, 2024 04:00 PM IST

google News

ದಕ್ಷಿಣ ಕನ್ನಡದಲ್ಲಿ ಶಸ್ತ್ರಾಸ್ತ್ರ ಬಳಕೆ ವಿಚಾರದಲ್ಲಿ ಸೂಚನೆ ನೀಡಲಾಗಿದೆ.

  • ಚುನಾವಣೆ ನೀತಿ ಸಂಹಿತೆ ಕಾರಣದಿಂದ ದಕ್ಷಿಣ ಕನ್ನಡದಲ್ಲಿ ಇರಿಸಿಕೊಳ್ಳಲಾಗಿದ್ದ ಶಸ್ತ್ರಾಸ್ತ್ರಗಳನ್ನು ಕೃಷಿ ರಕ್ಷಣೆಗೆ ಬಳಸುವ ಷರತ್ತಿನೊಂದಿಗೆ ವಾಪಾಸ್‌ ನೀಡಲಾಗಿದೆ.

    ವರದಿ: ಹರೀಶ ಮಾಂಬಾಡಿ, ಮಂಗಳೂರು

ದಕ್ಷಿಣ ಕನ್ನಡದಲ್ಲಿ ಶಸ್ತ್ರಾಸ್ತ್ರ ಬಳಕೆ ವಿಚಾರದಲ್ಲಿ ಸೂಚನೆ ನೀಡಲಾಗಿದೆ.
ದಕ್ಷಿಣ ಕನ್ನಡದಲ್ಲಿ ಶಸ್ತ್ರಾಸ್ತ್ರ ಬಳಕೆ ವಿಚಾರದಲ್ಲಿ ಸೂಚನೆ ನೀಡಲಾಗಿದೆ.

ಮಂಗಳೂರು: ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿ ಸಂದರ್ಭ ಸಾಕಷ್ಟು ಸದ್ದು ಮಾಡಿದ್ದ 2024ರ ಲೋಕಸಭಾ ಚುನಾವಣೆ ಅವಧಿಯಲ್ಲಿ ಶಸ್ತ್ರಾಸ್ತ್ರಗಳ ಬಳಕೆಯ ನಿರ್ಬಂಧ ಹೇರುವ ಪ್ರಕರಣಕ್ಕೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅದೇಶವೊಂದನ್ನು ಹೊರಡಿಸಿದ್ದಾರೆ. ಶಸ್ತ್ರಾಸ್ತ್ರ ಬಳಕೆ ನಿರ್ಬಂಧ ಹಿಂಪಡೆಯಲು ಕುರಿತಂತೆ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಿಷ್ಯಂತ್ ಸಿ.ಬಿ. ಅವರ ನೇತೃತ್ವದಲ್ಲಿ ನಡೆದ ಸ್ಕ್ರೀನಿಂಗ್ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಧಾರವಿದು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ರಕ್ಷಣೆಗಾಗಿ ಆಯುಧ ಪರವಾನಿಗೆ ಹೊಂದಿರುವ (ಪೊಲೀಸ್ ಆಯುಕ್ತರ ಕಾರ್ಯವ್ಯಾಪ್ತಿಯನ್ನು ಹೊರತುಪಡಿಸಿ) ಆಯುಧ ಪರವಾನಿಗೆದಾರರು ತಮ್ಮ ಆಯುಧಗಳನ್ನು ಈಗಾಗಲೇ ಪೊಲೀಸ್ ಠಾಣೆ / ಅಧಿಕೃತ ಕೋವಿ ಹಾಗೂ ಮದ್ದುಗುಂಡು ವ್ಯಾಪಾರಸ್ಥರಲ್ಲಿ ಠೇವಣೆ ಇರಿಸಿದ್ದರು, ಈ ವಿಚಾರ ಸಾಕಷ್ಟು ಆಕ್ಷೇಪಗಳಿಗೂ ಕಾರಣವಾಗಿತ್ತು. ಕೃಷಿ ರಕ್ಷಣೆಗಾಗಿ ಇರುವ ಆಯುಧಗಳನ್ನು ನಾವು ದುರ್ಬಳಕೆ ಮಾಡುವುದಿಲ್ಲ. ಇಂಥ ನಿರ್ಧಾರದಿಂದ ಕಾಡುಪ್ರಾಣಿಗಳ ಉಪಟಳವಿದ್ದ ಸಂದರ್ಭ ನಾವೇನು ಮಾಡಬೇಕು ಎಂದು ಕೃಷಿಕರು ಪ್ರಶ್ನಿಸಿದ್ದರು. ಒಂದು ವೇಳೆ ಕಾಡುಪ್ರಾಣಿಗಳು ಬಂದರೆ ಪೊಲೀಸರಿಗೆ ಕರೆ ಮಾಡಬೇಕಾದ ಅನಿವಾರ್ಯತೆ ಉದ್ಭವವಾಗಬಹುದು ಎಂದು ಎಚ್ಚರಿಸಿದ್ದರು. ವಿಟ್ಲ ಸಮೀಪದ ಕೃಷಿಕ ತನ್ನ ತೋಟಕ್ಕೆ ಕೋತಿಗಳು ಬಂದಿವೆ ಎಂದು 112 ಗೆ ಕರೆ ಮಾಡಿದ ವಿಚಾರ ವೈರಲ್ ಆಯಿತು. ರೈತಸಂಘ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿತ್ತು. ಅನಗತ್ಯ ತೊಂದರೆಯನ್ನು ಮಾಡಲು ಹೊರಟರೆ ಹೋರಾಟ ಮಾಡುವುದಾಗಿಯೂ ಎಚ್ಚರಿಕೆ ನೀಡಿತ್ತು.

ಇದೀಗ ಈ ಆಯುಧಗಳನ್ನು ಹಿಂಪಡೆಯಲು ಆಯುಧ ಪರವಾನಿಗೆದಾರರಿಗೆ ಏ.29ರ ಸೋಮವಾರದಿಂದ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಮುಲ್ಲೈ ಮುಗಿಲನ್ ಎಂ.ಪಿ ಅವರು ಆದೇಶಿಸಿದ್ದಾರೆ.

ಹೊಸ ಆದೇಶದ ಪ್ರಕಾರ ಮಿತಿಯೊಳಗೆ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಬೇಕು. ಸಾರ್ವಜನಿಕವಾಗಿ ತೆಗೆದುಕೊಂಡು ಹೋಗಿ ಪ್ರದರ್ಶನ ಮಾಡಲು ಅವಕಾಶವಿಲ್ಲ. ಚು ನಾವಣೆ ನೀತಿ ಸಂಹಿತೆ ಮುಗಿದ ನಂತರ ಯಥಾರೀತಿ ಬಳಕೆಗೆ ಅವಕಾಶ ನೀಡಲಾಗುವುದು ಎನ್ನುವ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಆದೇಶ ನೀಡಿದ್ದು. ಇದನ್ನು ಶಸ್ತ್ರಾಸ್ತ್ರ ಹೊಂದಿರುವವರು ಸ್ವಾಗತಿಸಿದ್ದಾರೆ. ಕಾನೂನು ಉಲ್ಲಂಘನೆಗೆ ಅವಕಾಶ ನೀಡದೇ ಬಳಕೆ ಮಾಡಲು ಗಮನ ನೀಡುವುದಾಗಿಯೂ ತಿಳಿಸಿದ್ದಾರೆ. ಈ ಕುರಿತು ಶಸ್ತ್ರಾಸ್ತ್ರ ಹೊಂದಿರುವವರಲ್ಲೂ ಜಾಗೃತಿ ಮೂಡಿಸುವುದಾಗಿಯೂ ಭರವಸೆ ನೀಡಿದ್ದಾರೆ.

ಷರತ್ತುಗಳು ಹೀಗಿವೆ:

  • ಯಾವುದೇ ಮೆರವಣಿಗೆ, ಜಾತ್ರೆ ಇತ್ಯಾದಿಗಳಲ್ಲಿ ಶಸ್ತ್ರಾಸ್ತ್ರವನ್ನು ಒಯ್ಯಬಾರದು.
  • ಆಯುಧಗಳನ್ನು ಬೆಳೆಗಳ ರಕ್ಷಣೆಗಾಗಿಯಷ್ಟೇ ಬಳಸತಕ್ಕದ್ದು.
  • ಪರವಾನಗಿಯಲ್ಲಿ ಹೊಂದಿರುವ ಶಸ್ತ್ರಾಸ್ತ್ರವನ್ನು ಬಹಿರಂಗವಾಗಿ ಎಲ್ಲೂ ಪ್ರದರ್ಶಿಸುವಂತಿಲ್ಲ.
  • ಸಾರ್ವಜನಿಕರನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೆದರಿಸಲು ಶಸ್ತ್ರಾಸ್ತ್ರವನ್ನು ಬಳಸಬಾರದು.
  • ಯಾವುದೇ ಸಂದರ್ಭದಲ್ಲಿ ಅವಶ್ಯವೆನಿಸಿದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸರಕಾರಿ ಅಧಿಕಾರಿಗಳಿಗೆ ತಪಾಸಣೆ ವೇಳೆ ಹಾಜರುಪಡಿಸತಕ್ಕದ್ದು ಮತ್ತು ತಪಾಸಣೆಗೆ ಸಹಕರಿಸಿ ಪೂರಕ ದಾಖಲೆಗಳನ್ನು ಒದಗಿಸತಕ್ಕದ್ದು.
  • ಪರವಾನಿಗೆದಾರರು ಮೇಲಿನ ನಿಯಮಗಳನ್ನು ಉಲ್ಲಂಘನೆ ಮಾಡಿ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿರುವುದು ಕಂಡುಬಂದಲ್ಲಿ, ಪರವಾನಿಗೆಯಲ್ಲಿ ಹೊಂದಿರುವ ಶಸ್ತ್ರಾಸ್ತ್ರವನ್ನು ಯಾವುದೇ ಮುನ್ಸೂಚನೆ ನೀಡದೆ ವಶಪಡಿಸಿಕೊಳ್ಳಲಾಗುವುದು.
  • ನೀತಿ ಸಂಹಿತೆಯು ಜಾರಿಯಲ್ಲಿರುವ ಸಮಯದಲ್ಲಿ ಆಯುಧ ಪರವಾನಿಗೆದಾರರು ಯಾವುದೇ ಷರತ್ತುಗಳನ್ನು ಉಲ್ಲೇಖಿಸಿದಲ್ಲಿ ಐಪಿಸಿ ಸೆಕ್ಷನ್ 188 ರಂತೆ ಪ್ರಕರಣ ದಾಖಲಿಸಲು ಹಾಗೂ ಪರವಾನಿಗೆ ರದ್ದುಪಡಿಸಲು ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಆದೇಶದಲ್ಲಿ ತಿಳಿಸಿದ್ದಾರೆ.

ವರದಿ: ಹರೀಶ ಮಾಂಬಾಡಿ. ಮಂಗಳೂರು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ