ದಕ್ಷಿಣ ಕನ್ನಡ ಕ್ರೈಮ್: ಕಾಯರ್ತಡ್ಕದಲ್ಲಿ ಬಿಜೆಪಿ ಯುವ ನಾಯಕ ರಾಜೇಶ್ ನಿಡ್ಡಾಜೆ ಮೇಲೆ ಹಲ್ಲೆ; ನೆಟ್ಟಾರು ಹತ್ಯೆ ಪ್ರಕರಣ ಆರೋಪಿ ಸೆರೆ
Jun 05, 2024 09:37 AM IST
ಕಾಯರ್ತಡ್ಕದಲ್ಲಿ ಬಿಜೆಪಿ ಯುವ ನಾಯಕ ರಾಜೇಶ್ ನಿಡ್ಡಾಜೆ ಮೇಲೆ ಹಲ್ಲೆ; ನೆಟ್ಟಾರು ಹತ್ಯೆ ಪ್ರಕರಣ ಆರೋಪಿ ಸೆರೆ
- ದಕ್ಷಿಣ ಕನ್ನಡ ಅಪರಾಧ ಸುದ್ದಿಗಳು: ಪ್ರತ್ಯೇಕ ಪ್ರಕರಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಾಯರ್ತಡ್ಕದಲ್ಲಿ ಬೆಳ್ತಂಗಡಿ ತಾಲೂಕು ಬಿಜೆಪಿ ಎಸ್‌ಟಿ ಮೋರ್ಚಾ ಅಧ್ಯಕ್ಷ ರಾಜೇಶ್ ನಿಡ್ಡಾಜೆ ಮೇಲೆ ಹಲ್ಲೆ ನಡೆಸಲಾಗಿದೆ. ಮತ್ತೊಂದೆಡೆ, ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆಯಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ.
ಮಂಗಳೂರು: ಯುವ ಉದ್ಯಮಿ, ಬೆಳ್ತಂಗಡಿ ತಾಲೂಕು ಎಸ್‌ಟಿ ಮೋರ್ಚಾ ಅಧ್ಯಕ್ಷ ರಾಜೇಶ್ ನಿಡ್ಡಾಜೆ (33) ಮೇಲೆ ಕಾಯರ್ತಡ್ಕದಲ್ಲಿ ಜೂ.4ರಂದು ಸಂಜೆ ಮಾರಾಕಾಯುಧದಿಂದ ಹಲ್ಲೆ ನಡೆದಿದೆ. ಕಳೆಂಜ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಕುಶಾಲಪ್ಪ ಗೌಡ ಕಜೆ ದಾಳಿ ನಡೆಸಿದವರು ಎಂದು ಆರೋಪಿಸಲಾಗಿದೆ.
ಸಂಜೆ ತನ್ನ ಅಂಗಡಿ ಮುಚ್ಚಿ ಮನೆಗೆ ಹೊರಟಿದ್ದ ರಾಜೇಶ್ ಮೇಲೆ ದಾಳಿ ನಡೆಸಲಾಗಿದೆ. ತಕ್ಷಣ ಅವರನ್ನು ಉಜಿರೆಯ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ಧಾರೆ.
ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿ ಸೆರೆ
ದಕ್ಷಿಣ ಕನ್ನಡದ ಬೆಳ್ಳಾರೆಯಲ್ಲಿ ನಡೆದಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆಯಲ್ಲಿ ಭಾಗಿಯಾಗಿದ್ದ ಇನ್ನೊಬ್ಬ ಆರೋಪಿಯನ್ನು ಎನ್‌ಐಎ ಬಂಧಿಸಿದೆ. ಬಂಧಿತ ಆರೋಪಿ ರಿಯಾಜ್ ಯೂಸಫ್ ಹಾರಳ್ಳಿ ಅಲಿಯಾಸ್ ರಿಯಾಜ್ ವಿದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಎನ್‌ಐಎ ಹೇಳಿಕೆ ತಿಳಿಸಿದೆ.
ರಿಯಾಜ್ ಬಂಧನದೊಂದಿಗೆ ಪ್ರಕರಣ ಸಂಬಂಧ ಈವರೆಗೆ ಬಂಧಿತರಾಗಿರುವ ಒಟ್ಟು ಆರೋಪಿಗಳ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಕಳೆದ ತಿಂಗಳು ಮನ್ಸೂರ್ ಪಾಷಾ ಜತೆಗೆ ತಲೆಮರೆಸಿಕೊಂಡಿದ್ದ ಮುಸ್ತಫಾ ಪೈಚಾರ್‌ನನ್ನು ಬಂಧಿಸಲಾಗಿತ್ತು.
2022ರ ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಬಿಜೆಪಿ ಯುವ ನೇತಾರ ಪ್ರವೀಣ್ ನೆಟ್ಟಾರು ಅವರನ್ನು ಅವರ ಕೋಳಿ ಅಂಗಡಿ ಸಮೀಪವೇ ಹಂತಕರು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಆಗ ಆಡಳಿತದಲ್ಲಿದ್ದ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧವೇ ಬಿಜೆಪಿ ಯುವಮೋರ್ಚಾ ಸಿಡಿದೆದ್ದಿತ್ತು. ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ನಡೆಸುತ್ತಿದೆ. ಇತ್ತೀಚೆಗಷ್ಟೇ ಕೊಡಗು ಜಿಲ್ಲೆಯ ಸೋಮವಾರಪೇಟೆಯ ಮುಸ್ತಫಾ ಪೈಚಾರ್, ಸಿರಾಜ್ ಮತ್ತು ಇಲ್ಯಾಸ್ ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಮುಸ್ತಫಾ ಮತ್ತು ಇಲ್ಯಾಸ್ ಇಬ್ಬರಿಗೂ ಹಾಸನ ಜಿಲ್ಲೆಯ ಸಕಲೇಶಪುರದ ಸಿರಾಜ್ ಆಶ್ರಯ ನೀಡಿದ್ದರು.