ಮಣ್ಣಿನ ಹಣತೆಗೆ ಮಂಗಳೂರಿನ ದಿವ್ಯಾಂಗ ಮಕ್ಕಳಿಂದ ವರ್ಣಸ್ಪರ್ಶ; ಬಣ್ಣದ ಹಣತೆಯೊಂದಿಗೆ ದೀಪಾವಳಿ ಸಂಭ್ರಮ
Oct 25, 2024 01:40 PM IST
ಮಣ್ಣಿನ ಹಣತೆಗೆ ಮಂಗಳೂರಿನ ದಿವ್ಯಾಂಗ ಮಕ್ಕಳಿಂದ ವರ್ಣಸ್ಪರ್ಶ; ದೀಪಾವಳಿ ಸಂಭ್ರಮಕ್ಕೆ ಸಿದ್ಧತೆ
- ಮಂಗಳೂರಿನ ವಿಶೇಷಚೇತನ ಮಕ್ಕಳು ದೀಪಾವಳಿ ಸಂಭ್ರಮಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಹಬ್ಬಕ್ಕಾಗಿ ಮಣ್ಣಿನ ಹಣತೆಗೆ ಬಣ್ಣ ಹಚ್ಚುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ದೀಪಾವಳಿಗೆ ಕೆಲವೇ ದಿನಗಳು ಉಳಿದಿದ್ದು, ಮಕ್ಕಳ ಕೈಯಿಂದ ರಂಗು ಪಡೆವ ಹಣತೆಗೂ ಭಾರಿ ಬೇಡಿಕೆ ಇದೆ. (ವಿಶೇಷ ವರದಿ: ಹರೀಶ ಮಾಂಬಾಡಿ, ಮಂಗಳೂರು)
ಮಂಗಳೂರು: ದೀಪಾವಳಿ ಸಂದರ್ಭ ಮಣ್ಣಿನಲ್ಲಿ ಮಾಡಿದ ಹಣತೆಯನ್ನು ಉಪಯೋಗಿಸಿದರೆ ಪರಿಸರ ಉಳಿಸಿದ ಸಮಾಧಾನವೂ ಆಗುತ್ತದೆ. ಅದರಲ್ಲೂ ವಿಶೇಷಚೇತನ ಮಕ್ಕಳು (ದಿವ್ಯಾಂಗ ಮಕ್ಕಳು) ಹಣತೆಗೆ ವಿಶೇಷ ಬಣ್ಣಗಳನ್ನು ಲೇಪಿಸಿದ್ದನ್ನು ಉಪಯೋಗಿಸಿದರೆ, ಅವರ ಶ್ರಮಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಸೇವಾಭಾರತಿ ಮಂಗಳೂರು ನಡೆಸುವ ಚಟುವಟಿಕೆಗಳಲ್ಲಿ ಚೇತನಾ ವಿಶೇಷಚೇತನ ಮಕ್ಕಳ ಸಂಸ್ಥೆಯ ಪ್ರೌಢಾವಸ್ಥೆಗೆ ಬಂದ ವಿಶೇಷಚೇತನ ಮಕ್ಕಳು ದೀಪಾವಳಿ ಸಂದರ್ಭ ಹಣತೆಗೆ ಬಣ್ಣ ಹಚ್ಚುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ದೀಪಾವಳಿಗೆ ಕೆಲವೇ ದಿನಗಳು ಉಳಿದಿರುವಂತೆ ಮಕ್ಕಳು ಮಾಡಿದ ಹಣತೆಗೂ ಬೇಡಿಕೆಗಳಿವೆ ಎನ್ನುತ್ತಾರೆ ಕೇಂದ್ರದ ಸ್ವಯಂಸೇವಕರಲ್ಲೊಬ್ಬರಾದ ಗಣರಾಜ್.
ಚೇತನಾ ಬಾಲವಿಕಾಸ ಕೇಂದ್ರದಲ್ಲಿ ಕಿವುಡ ಮತ್ತು ಮೂಕ, ದೃಷ್ಟಿಮಾಂದ್ಯತೆ ಹೊರತುಪಡಿಸಿ, ಎಲ್ಲ ಬಗೆಯ ಅಂಗವೈಕಲ್ಯವಿರುವ ದಿವ್ಯಾಂಗರ ಆರೋಗ್ಯ ಶಿಕ್ಷಣ ಮತ್ತು ಸಾಮಾನ್ಯ ಶಿಕ್ಷಣ ಕೊಡುವ ವ್ಯವಸ್ಥೆ ಇದೆ. ಇಲ್ಲಿ ಸೆರೆಬ್ರಲ್ ಪಾಲ್ಸಿ, ಆಟಿಸಂ, ಬುದ್ಧಿಮಾಂದ್ಯತೆ, ಅಕ್ಷರದ ಗುರುತನ್ನು ಹಿಡಿಯಲು ಕಷ್ಟವಾಗುವವರು, ಮಾನಸಿಕ ವೈಕಲ್ಯ ಇರುವ ಮಕ್ಕಳು ಜೀವನದಲ್ಲಿ ಸ್ವಂತವಾಗಿ ನೆಲೆಯೂರುವಂತಾಗಬೇಕು ಎಂಬ ನಿಟ್ಟಿನಲ್ಲಿ ತರಬೇತಿ ನೀಡಲಾಗುತ್ತದೆ.
ಈ ಸಂಸ್ಥೆಯಲ್ಲಿ ಸುಮಾರು ಎಪ್ಪತ್ತಕ್ಕೂ ಅಧಿಕ ಮಕ್ಕಳು ತರಬೇತಿ ಪಡೆಯಲು ಆಗಮಿಸುತ್ತಾರೆ. ಅವರಲ್ಲಿ ಹದಿನೆಂಟು, ಇಪ್ಪತ್ತು ದಾಟಿದ ಮಕ್ಕಳನ್ನು ಸ್ವೋದ್ಯೋಗದ ತರಬೇತಿ ನೀಡುವ ನಿಟ್ಟಿನಲ್ಲಿ ಕರಕುಶಲ ವಸ್ತು ತಯಾರಿಕಾ ಕೌಶಲ್ಯವನ್ನು ಹೇಳಿಕೊಡಲಾಗುತ್ತದೆ. ಇಲ್ಲಿ ನುರಿತ ಶಿಕ್ಷಕರ ತಂಡ ಹಾಗೂ ಸ್ವಯಂಸೇವಕರ ತಂಡ ಮಾರ್ಗದರ್ಶನ ನೀಡುತ್ತದೆ.
ಬಣ್ಣದ ಹಣತೆ ಜೊತೆ ದೀಪಾವಳಿ ರಂಗು
ಕಳೆದ ವರ್ಷ ಮಕ್ಕಳು ಬಣ್ಣ ನೀಡಿದ ಹಣತೆಗಳಿಗೆ ಭಾರಿ ಬೇಡಿಕೆ ಬಂದಿತ್ತು. ಅದನ್ನು ಮಾರಾಟ ಮಾಡಿ ಸಂಗ್ರಹಿಸಲಾದ ಹಣವನ್ನು ಮಕ್ಕಳಿಗೋಸ್ಕರ ಉಪಯೋಗಿಸಿದೆವು ಎನ್ನುತ್ತಾರೆ ಇಲ್ಲಿನ ಸ್ವಯಂಸೇವಕರು. ಈಗ ಸುಮಾರು 30ರಷ್ಟು ಮಕ್ಕಳು ಹಣತೆ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಶಿಕ್ಷಕಿಯರ ಮಾರ್ಗದರ್ಶನ ಇವರಿಗಿದೆ. ಹಣತೆಗಳಿಗೆ ರಂಗು ತುಂಬುವಾಗ ಮಕ್ಕಳು ಬಹಳ ಏಕಾಗ್ರತೆಯನ್ನು ವಹಿಸುತ್ತಾರೆ. ಎಲ್ಲೂ ಬಣ್ಣ ಸ್ವಲ್ಪವೂ ಚೆಲ್ಲದಂತೆ ಎಚ್ಚರ ವಹಿಸಿಕೊಳ್ಳುವುದು ಗಮನಾರ್ಹ. ಹಾಗೆ ಸುಮಾರು 15ರಿಂದ 18 ಸಾವಿರ ಹಣತೆಗೆ ಒಪ್ಪ ನೀಡಲಾಗುತ್ತದೆ.
ಸುಮಾರು 21 ನಮೂನೆಯ ಗಾತ್ರ, ಶೈಲಿ ಹೊಂದಿರುವ ಹಣತೆಗಳಿಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದ್ದು, ತಯಾರಾದದ್ದು, ಹೊರಗಿನ ಕೌಂಟರ್‌ನಲ್ಲಿ 10 ರೂಗಳಿಂದ 60 ರೂಗಳವೆರೆಗೆ ಮಾರಾಟವಾಗುತ್ತದೆ. ನವೆಂಬರ್ 1ರವರೆಗೆ ಈ ಮಾರಾಟ ನಡೆಯುತ್ತದೆ. ಕಳೆದ ಬಾರಿ ಹಣತೆ ಮಾರಾಟದಿಂದ 4 ಲಕ್ಷ ರೂ ವಹಿವಾಟು ನಡೆದಿತ್ತು. ಈ ಬಾರಿಯೂ ಬೇಡಿಕೆ ಇದೆ. ರಾಜ್ಯ, ಹೊರರಾಜ್ಯಗಳಿಂದಲೂ ಬೇಡಿಕೆ ಇದೆ ಎಂದು ಎಚ್‌ಟಿ ಕನ್ನಡಕ್ಕೆ ಗಣರಾಜ ತಿಳಿಸಿದ್ದಾರೆ.
ಹಣತೆಯಷ್ಟೇ ಅಲ್ಲ, ಪೇಪರ್ ಬ್ಯಾಗ್ ಕೂಡ ಮಾಡ್ತೇವೆ
ಈ ಕುರಿತು ಎಚ್‌ಟಿ ಕನ್ನಡ ಜೊತೆಗೆ ಉತ್ಸಾಹದಿಂದಲೇ ಮಾತನಾಡಿದ ವಿದ್ಯಾರ್ಥಿನಿ ಅನುಷಾ ಕಾಕುಂಜೆ, ನಾವು ಹಣತೆಗೆ ಬಣ್ಣ ನೀಡುವುದಷ್ಟೇ ಅಲ್ಲ, ಪೇಪರ್ ಬ್ಯಾಗ್ ಅನ್ನೂ ಮಾಡ್ತೇವೆ ಎನ್ನುತ್ತಾರೆ. ತನ್ನದೇ ಓರಗೆಯವರೊಂದಿಗೆ ಹಣತೆಗೆ ಬಣ್ಣ ಹಚ್ಚುವ ಜೊತೆ ಉಪಯೋಗಿಸಿದ ಪೇಪರ್ ಅನ್ನು ಮಡಚಿ, ಅದನ್ನು ಪ್ಲಾಸ್ಟಿಕ್‌ಗೆ ಪರ್ಯಾಯವಾದ ಕೈಚೀಲದ ಮಾದರಿಯಲ್ಲಿ ಶಿಕ್ಷಕಿಯರ ಮಾರ್ಗದರ್ಶನದಲ್ಲಿ ಮಾಡುತ್ತಿದ್ದ ಅನುಷಾ, ಇದರಿಂದ ಪರಿಸರಕ್ಕೂ ಒಳ್ಳೇದು ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ