logo
ಕನ್ನಡ ಸುದ್ದಿ  /  ಕರ್ನಾಟಕ  /  Puttur Temple Dress Code: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹೊಸ ವಸ್ತ್ರ ಸಂಹಿತೆ: ಸಭ್ಯ, ಶುಭ್ರ ಉಡುಪು ಧರಿಸಿ ಬರಲು ಸೂಚನೆ

Puttur Temple Dress code: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹೊಸ ವಸ್ತ್ರ ಸಂಹಿತೆ: ಸಭ್ಯ, ಶುಭ್ರ ಉಡುಪು ಧರಿಸಿ ಬರಲು ಸೂಚನೆ

Umesha Bhatta P H HT Kannada

Nov 14, 2024 07:50 PM IST

google News

ದಕ್ಷಿಣ ಕನ್ನಡದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ಹೊಸ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ.

    • ದಕ್ಷಿಣ ಕನ್ನಡದ ಪುತ್ತೂರಿನ ಇತಿಹಾಸ ಪ್ರಸಿದ್ದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹೊಸ ವಸ್ತ್ರ ಸಂಹಿತೆಯೊಂದಿಗೆ ಬರುವಂತೆ ಭಕ್ತರಿಗೆ ಫಲಕ ಅಳವಡಿಸಿ ಸೂಚಿಸಲಾಗುತ್ತಿದೆ.
    • ವರದಿ: ಹರೀಶ ಮಾಂಬಾಡಿ, ಮಂಗಳೂರು
ದಕ್ಷಿಣ ಕನ್ನಡದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ಹೊಸ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ.
ದಕ್ಷಿಣ ಕನ್ನಡದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ಹೊಸ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ.

ಮಂಗಳೂರು: ಭಕ್ತಾದಿಗಳ ಗಮನಕ್ಕೆ – ದೇವರ ದರ್ಶನಕ್ಕೆ ಬರುವಾಗ ಸಾಧ್ಯವಾದಷ್ಟು ಸ್ವಚ್ಛವಾದ, ಶುಭ್ರವಾದ, ಸಭ್ಯವಾದ ಉಡುಪುಗಳನ್ನು ಧರಿಸಿಯೇ ಬನ್ನಿ.ಹೀಗೆ ಸೀರೆ, ಚೂಡಿದಾರ್ ಉಟ್ಟ ಮಹಿಳೆಯರು, ಬಿಳಿಪಂಚೆ, ಬಿಳಿ ಷರಟು, ಹೆಗಲಿಗೊಂದು ಶಾಲು ಹಾಕಿದ ಹಾಗೂ ಪ್ಯಾಂಟು, ಪೂರ್ಣತೋಳಿನ ಅಂಗಿ ಹಾಕಿದ ಪುರುಷರು ಇರುವ ಚಿತ್ರದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಳಗಳಲ್ಲಿ ಒಂದಾದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗ ಬೋರ್ಡ್ ಒಂದನ್ನು ಹಾಕಲಾಗಿದೆ.ಸದ್ಯಕ್ಕೆ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿಯ ಅವಧಿ ಮುಗಿದಿದ್ದು, ಇದೀಗ ಸರಕಾರಿ ಅಧಿಕಾರಿಗಳು ಆಡಳಿತಾಧಿಕಾರಿಯಾಗಿದ್ದಾರೆ. ಪ್ರಸ್ತುತ ಈ ಬೋರ್ಡನ್ನು ದೇವಸ್ಥಾನದ ಆಡಳಿತ ಮಂಡಳಿ ದೇವಸ್ಥಾನ ಪ್ರವೇಶಿಸುವ ಜಾಗದಲ್ಲಿ ಹಾಕಿದ್ದು, ಭಕ್ತರ ಗಮನ ಸೆಳೆಯುತ್ತಿದೆ. ಇದರ ಛಾಯಾಚಿತ್ರವನ್ನು ಸೆರೆಹಿಡಿದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗಿದ್ದು, ಹಲವು ಚರ್ಚೆಗಳಿಗೂ ಇದು ದಾರಿಯಾಗಿದೆ.

ಬಹು ದಿನಗಳ ಬೇಡಿಕೆ

ದಕ್ಷಿಣ ಕನ್ನಡದ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಯಾಗಬೇಕು ಎಂದು ಹಿಂದುಪರ ಸಂಘಟನೆಗಳು ಹಲವಾರು ವರ್ಷಗಳಿಂದ ಒತ್ತಾಯಿಸುತ್ತಿದ್ದರು. ಈಗಾಗಲೇ ಪ್ರಮುಖ ದೇವಸ್ಥಾನಗಳ ಮುಂಭಾಗ ಅಥವಾ ಪರಿಸರದಲ್ಲಿ ವಸ್ತ್ರಸಂಹಿತೆಯ ಕುರಿತು ಸಂಘಟನೆಗಳು ಫಲಕಗಳನ್ನು ಬ್ಯಾನರ್ ಗ ಳನ್ನು ಹಾಕುವ ಮೂಲಕ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ದೇವಸ್ಥಾನದ ಪಾವಿತ್ರ್ಯವನ್ನು ಕಾಪಾಡುವಂತೆ ಒತ್ತಾಯಿಸುತ್ತಿದ್ದರು. ಈ ಕುರಿತು ಹಲವು ಬಾರಿ ಧಾರ್ಮಿಕ ದತ್ತಿ ಇಲಾಖೆ ಸಹಿತ ಸಂಬಂಧಪಟ್ಟವರಿಗೆ ಮನವಿಯನ್ನೂ ಮಾಡುತ್ತಿದ್ದರು.

ವಿಶೇಷವಾಗಿ ಕಟೀಲು, ಪೊಳಲಿ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆಯನ್ನು ಅಳವಡಿಸಲು ಬ್ಯಾನರ್ ಹಾಕಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ದೇವಸ್ಥಾನಗಳಲ್ಲಿ ಕೇರಳ ರೀತಿಯಲ್ಲಿ ವಸ್ತ್ರಸಂಹಿತೆ ಜಾರಿ ಮಾಡಬೇಕು, ಹಿಂದು ಸಂಪ್ರದಾಯದ ಪ್ರಕಾರ ವಸ್ತ್ರ ಧರಿಸಬೇಕು, ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಕಡ್ಡಾಯವಾಗಿ ವಸ್ತ್ರಸಂಹಿತೆ ಜಾರಿ ಮಾಡಬೇಕು ಎಂದು ಹಿಂದುಪರ ಸಂಘಟನೆಗಳು ಸರಕಾರಕ್ಕೆ ಮನವಿಯನ್ನೂ ಮಾಡಿದ್ದವು.

ಬಿಜೆಪಿ ಸರ್ಕಾರದ ಅವಧಿಯಲ್ಲೂ

ಬಿಜೆಪಿ ಸರಕಾರ ಆಡಳಿತದಲ್ಲಿದ್ದಾಗಲೇ ಈ ಮನವಿಯನ್ನು ಮಾಡಲಾಗಿತ್ತು. ಅಂದಿನ ಧಾರ್ಮಿಕ ಪರಿಷತ್ತಿನ ರಾಜ್ಯ ಸಮಿತಿ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರು ಶೀಘ್ರ ಜಾರಿಯಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಸರಕಾರವಾಗಲೀ, ಅಥವಾ ಧಾರ್ಮಿಕ ದತ್ತಿ ಇಲಾಖೆಯಾಗಲೀ ಅಧಿಕೃತವಾಗಿ ಈ ದೇವಸ್ಥಾನಗಳಲ್ಲಿ ಜಾರಿ ಮಾಡಿರಲಿಲ್ಲ, ಆದರೆ ಧಾರ್ಮಿಕ ಆಚಾರ, ನಂಬಿಕೆಗೆ ಅನುಗುಣವಾಗಿ ಈ ಎರಡು ದೇವಸ್ಥಾನಗಳಲ್ಲಿ ಬ್ಯಾನರ್ ಅಳವಡಿಸಲಾಗಿತ್ತು. ಇದೀಗ ಪುತ್ತೂರು ದೇವಸ್ಥಾನದಲ್ಲಿ ಆಡಳಿತವೇ ಈ ಬೋರ್ಡನ್ನು ಹಾಕಿರುವುದು ಕುತೂಹಲ ಕೆರಳಿಸಿದೆ.

ದೇವಸ್ಥಾನಕ್ಕೆ ಬರುವ ಭಕ್ತರು ಸಭ್ಯ ಮತ್ತು ಶುಭ್ರವಾದ ಉಡುಪುಗಳನ್ನು ಧರಿಸಿ ಬರುವಂತೆ ಪುತ್ತೂರು ಮಹಾಲಿಂಗೇಶ್ವರ ದೇವಳದ ವತಿಯಿಂದ ಭಕ್ತರಿಗೆ ಮನವಿ ಮಾಡಲಾಗಿದೆ. ಈ ಮೂಲಕ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಅಳವಡಿಸಬೇಕೆಂಬ ಭಕ್ತರ ಬೇಡಿಕೆಗೆ ದೇವಸ್ಥಾನದಿಂದ ಭಾಗಶಃ ಸ್ಪಂದನೆ ಸಿಕ್ಕಂತಾಗಿದೆ. ಹಿಂದಿನ ವ್ಯವಸ್ಥಾಪನಾ ಸಮಿತಿಯ ಅವಧಿಯಲ್ಲಿ ವಸ್ತ್ರಸಂಹಿತೆ ಬೇಡಿಕೆ ಬಂದಾಗ ಫಲಕ ಅಳವಡಿಸುವ ಕಾರ್ಯನಡೆದಿತ್ತಾದರೂ ಅದು ಕಟ್ಟುನಿಟ್ಟಾಗಿ ಪಾಲನೆಯಾಗಿರಲಿಲ್ಲ.

ಸಮಿತಿ ಸೂಚನೆ ಏನು?

ಪ್ರಸ್ತುತ ದೇವಸ್ಥಾನದಲ್ಲಿ ವ್ಯವಸ್ಥಾಪನಾ ಸಮಿತಿ ಅಸ್ತಿತ್ವಕ್ಕೆ ಬಂದಿಲ್ಲ.. ತಾಪಂ ಕಾರ್ಯನಿರ್ವಹಣಾ ಅಧಿಕಾರಿಯವರು ಆಡಳಿತಾಧಿಕಾರಿಯಾಗಿದ್ದಾರೆ. ಕಾರ್ಯನಿರ್ವಹಣಾ ಅಧಿಕಾರಿ ದೇಗುಲದ ವ್ಯವಹಾರ ಮುನ್ನಡೆಸುತ್ತಿದ್ದಾರೆ. ಈ ನಡುವೆ, ಕಳೆದ ಕೆಲವು ದಿನಗಳಿಂದ ಭಕ್ತರು ಸಾಮಾಜಿಕ ಜಾಲತಾಣದಲ್ಲಿ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಅಳವಡಿಸಬೇಕೆಂಬ ಬೇಡಿಕೆ ಬಗ್ಗೆ ಚರ್ಚೆ ನಡೆಸಲಾರಂಭಿಸಿದ್ದರು. ಇದರ ಬೆನ್ನಲ್ಲೇ ಬೋರ್ಡ್ ಕಾಣಿಸಿಕೊಂಡಿದೆ. ಆದರೆ ಈ ಫಲಕದಲ್ಲಿ ಇಂಥದೇ ನಿರ್ದಿಷ್ಟ ಉಡುಪನ್ನು ಪುರುಷರು, ಮಹಿಳೆಯರು, ಮಕ್ಕಳು ಧರಿಸಿಕೊಂಡು ಬರಬೇಕೆಂಬ ಸ್ಪಷ್ಟ ಸೂಚನೆ ನೀಡಿಲ್ಲ. ಬದಲಾಗಿ ಶುಭ್ರ, ಸ್ವಚ್ಛ ಮತ್ತು ಸಭ್ಯ ಉಡುಪು ಧರಿಸುವಂತೆ ಮನವಿ ಮಾಡಲಾಗಿದೆ. ಇದು ಮನವಿಯಷ್ಟೇ ಆಗಿರುವ ಕಾರಣ, ಕಟ್ಟುನಿಟ್ಟಾಗಿ ಜಾರಿಯೇನೂ ಆಗಿಲ್ಲ. ಈ ಕುರಿತು ಆಡಳಿತಾಧಿಕಾರಿ ಪ್ರತಿಕ್ರಿಯೆಗೆ ಸಿಗಲಿಲ್ಲ.

(ವರದಿ: ಹರೀಶ ಮಾಂಬಾಡಿ, ಮಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ