Davanagere News: ಆರ್ ಯೂ ಎಸ್ಪಿ; ಜಿಲ್ಲಾ ಪೊಲೀಸ್ ಅಧಿಕಾರಿ ಮೇಲೆ ಸಿಎಂ ಸಿದ್ದರಾಮಯ್ಯ ಗರಂ
Jun 06, 2023 07:21 AM IST
ಮುಖ್ಯಮಂತ್ರಿ ಸಿದ್ದರಾಮಯ್ಯ
Davanagere News: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿಂತ ಮೊದಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಹೊರ ಹೋಗಲು ಮುನ್ನುಗ್ಗಿದರು. ಆಗ ಪೊಲೀಸ್ ವರಿಷ್ಠಾಧಿಕಾರಿಯ ವರ್ತನೆಯಿಂದ ಕಿರಿಕಿರಿಗೊಳಗಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಪಗೊಂಡರು.
ದಾವಣಗೆರೆ: ಹೇ.. ನೀವು ನನಗಿಂತ ಮೊದಲೇ ಎದ್ದು ನಿಲ್ಲುತ್ತೀರೆನ್ರೀ? ಆರ್ ಯೂ ಎಸ್ಪಿ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಅವರ ಮೇಲೆ ಕೆಂಡಾಮಂಡಲರಾದ ಘಟನೆ ಸೋಮವಾರ ಜಿಲ್ಲಾ ಪಂಚಾಯತ್‌ನಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ನಡೆಯಿತು.
ಜಿಲ್ಲಾ ಪಂಚಾಯತ್ ನಲ್ಲಿ ಮೊದಲ ಬಾರಿಗೆ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿ, ಸಭೆ ಮುಗಿಸುತ್ತಿದ್ದ ಸಂದರ್ಭ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿಂತ ಮೊದಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಹೊರ ಹೋಗಲು ಮುನ್ನುಗ್ಗಿದರು. ಪೊಲೀಸ್ ವರಿಷ್ಠಾಧಿಕಾರಿಯ ವರ್ತನೆಯಿಂದ ಕಿರಿಕಿರಿಗೊಳಗಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಪಗೊಂಡರು.
ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಅವರು ಮುಖ್ಯಮಂತ್ರಿಯವರಿಗೆ ವಿಷಯ ಮನದಟ್ಟು ಮಾಡಿದರು. ಆಗ ಶಾಂತರಾದಸಿಎಂ, ಇದು ಮಧ್ಯಕರ್ನಾಟದ ದಾವಣಗೆರೆ ಜಿಲ್ಲೆ ಇಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ಎಚ್ಚರ ವಹಿಸಿ, ಶಾಂತಿ ಕಾಪಾಡುವಂತೆ ಸೂಚಿಸಿದರು.
ಎಸ್.ಎಸ್. ಮಲ್ಲಿಕಾರ್ಜುನ್ ಜಿಲ್ಲಾಮಂತ್ರಿ ಖಚಿತ
ಗಣಿ, ಭೂವಿಜ್ಞಾನ ಮತ್ತು ತೋಟಗಾರಿಕೆ ಖಾತೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಬಹುತೇಕ ಜಿಲ್ಲಾಮಂತ್ರಿ ಆಗುವುದು ಖಚಿತ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ದಾವಣಗೆರೆ ಜಿಲ್ಲೆ ಪ್ರಗತಿಪರವಾದ ಊರು. ಈ ಜಿಲ್ಲೆ ಇನ್ನಷ್ಟು ಪ್ರಗತಿ ಕಾಣಬೇಕಾದರೆ ಮತ್ತಷ್ಟು ಅಭಿವೃದ್ಧಿ ಆಗಬೇಕು. ಅಭಿವೃದ್ಧಿ ಆಗಲು ವ್ಯವಸ್ಥೆ ಚುರುಕುಗೊಳ್ಳಬೇಕು. ಆದ್ದರಿಂದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನಿಮ್ಮೊಂದಿಗೆ ನಿರಂತರವಾಗಿ ಸಭೆ ನಡೆಸಿ ಸೂಚನೆಗಳನ್ನು ಕೊಡುತ್ತಾರೆ ಎಂದರು.
ಬಿಜೆಪಿಯವರು ಉದ್ಘಾಟಿಸಿರುವ ಕಾಮಗಾರಿಗಳಿಗೆ ಅನುದಾನ ಮಂಜೂರು ಮಾಡಬೇಡಿ
ಬಿಜೆಪಿಯವರು ಅಧಿಕಾರ ಮುಗಿಯುವ ಸಮಯದಲ್ಲಿ ತರಾತುರಿಯಲ್ಲಿ ಉದ್ಘಾಟಿಸಿರುವ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡದಂತೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಇನ್ನೊಂದು ವಾರ ಅಧಿಕಾರವಿದ್ದಾಗ ತರಾತುರಿಯಲ್ಲಿ ಕೆಲವು ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಹೋಗಿದ್ದಾರೆ. ಈ ಯಾವ ಕಾಮಗಾರಿಗಳಿಗೂ ಪೇಮೆಂಟ್ ಮಾಡಬಾರದು ಎಂದು ಸೂಚಿಸಿದರು.
ಹೀಗೆ ತರಾತುರಿಯಲ್ಲಿ ಮಾಡಿ ಬಸ್ ನಿಲ್ದಾಣ ಹಾಳು ಮಾಡಿಟ್ಟಿದ್ದೀರಿ. ಶೀಘ್ರದಲ್ಲಿಯೇ ನಾನೊಂದು ಸಭೆ ತೆಗೆದುಕೊಳ್ಳುತ್ತೇನೆ ಅಲ್ಲಿ ಚರ್ಚಿಸೋಣ. ಅಭಿವೃದ್ಧಿ ಕಾಮಗಾರಿಗಳು ಅನುಕೂಲವಾಗುವಂತೆ ಇರಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕುಂದುಕೊರತೆ ಪರಿಹಾರ ಆಗ್ರಹಿಸಿ ಬಂದವರ ಜತೆಗೆ ಸೌಜನ್ಯ ಇರಲಿ
ಜನರು ತಮ್ಮ ಕುಂದುಕೊರತೆಗಳ ಪರಿಹಾರಕ್ಕೆ ಸರ್ಕಾರಿ ಕಚೇರಿಗಳಿಗೆ ಬಂದಾಗ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅವರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಅವರ ಕಷ್ಟಗಳನ್ನು ಪರಿಹರಿಸುವ ಕೆಲಸ ಮಾಡದಿದ್ದರೆ ಅಂತಹ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದರು.
ನಮ್ಮದು ಪ್ರಜಾಪ್ರಭುತ್ವ. ಇಲ್ಲಿ ಪ್ರಜೆಗಳೇ ಮಾಲಿಕರು. ಸರ್ಕಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಅವರ ಸೇವೆ ಮಾಡುವವರು. ಆದ್ದರಿಂದ, ಜನರ ಕುಂದು ಕೊರತೆಗಳಿಗೆ ತಕ್ಷಣ ಸ್ಪಂದಿಸಬೇಕು. ಹಾಗೊಂದು ವೇಳೆ ಉಡಾಫೆ ಮಾಡಿದರೆ ಅಂತಹ ಅಧಿಕಾರಿಗಳಿಗೆ ಇಲ್ಲಿ ಜಾಗವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.