logo
ಕನ್ನಡ ಸುದ್ದಿ  /  ಕರ್ನಾಟಕ  /  ದೀಪಾವಳಿಗೆ ಊರಿಗೆ ಹೊರಟ್ರಾ, 800 ರೂ ಟಿಕೆಟ್‌ಗೆ 2600 ರೂ ಕೇಳ್ತಿದ್ದಾರಾ, ಸಾರಿಗೆ ಇಲಾಖೆಗೆ ದೂರು ಕೊಡಲು ಹೀಗೆ ಮಾಡಿ..

ದೀಪಾವಳಿಗೆ ಊರಿಗೆ ಹೊರಟ್ರಾ, 800 ರೂ ಟಿಕೆಟ್‌ಗೆ 2600 ರೂ ಕೇಳ್ತಿದ್ದಾರಾ, ಸಾರಿಗೆ ಇಲಾಖೆಗೆ ದೂರು ಕೊಡಲು ಹೀಗೆ ಮಾಡಿ..

Umesh Kumar S HT Kannada

Oct 26, 2024 04:22 PM IST

google News

ದೀಪಾವಳಿಗೆ ಊರಿಗೆ ಹೊರಟ್ರಾ, 800 ರೂ ಟಿಕೆಟ್‌ಗೆ 2600 ರೂ ಕೇಳ್ತಿದ್ದಾರಾ.. ಒಂದು ದೂರು ಕೊಡಿ ಸಾಕು. ಉಳಿದ್ದದ್ದು ಸಾರಿಗೆ ಇಲಾಖೆ ನೋಡ್ಕೊಳ್ಳುತ್ತೆ. (ಸಾಂಕೇತಿಕ ಚಿತ್ರ)

  • ದೀಪಾವಳಿಗೆ ಊರಿಗೆ ಹೊರಟ್ರಾ, ಬಸ್ ಟಿಕೆಟ್‌ ಖರೀದಿಸೋದಕ್ಕೆ ಹೋದ್ರೆ ಅಲ್ಲಿ 800 ರೂ ಟಿಕೆಟ್‌ಗೆ 2600 ರೂ ಕೇಳ್ತಿದ್ದಾರಾ, ಚಿಂತೆ ಮಾಡಬೇಕಾಗಿಲ್ಲ, ಒಂದು ಫೋನ್ ಮಾಡಿ ದೂರು ಕೊಡಿ. ಅವರ ಪರ್ಮಿಟ್ ಕೂಡ ಕ್ಯಾನ್ಸಲ್ ಆಗಬಹುದು. ಸಾರಿಗೆ ಇಲಾಖೆಗೆ ದೂರು ಕೊಡಲು ಹೀಗೆ ಮಾಡಿ.

ದೀಪಾವಳಿಗೆ ಊರಿಗೆ ಹೊರಟ್ರಾ, 800 ರೂ ಟಿಕೆಟ್‌ಗೆ 2600 ರೂ ಕೇಳ್ತಿದ್ದಾರಾ.. ಒಂದು ದೂರು ಕೊಡಿ ಸಾಕು. ಉಳಿದ್ದದ್ದು ಸಾರಿಗೆ ಇಲಾಖೆ ನೋಡ್ಕೊಳ್ಳುತ್ತೆ. (ಸಾಂಕೇತಿಕ ಚಿತ್ರ)
ದೀಪಾವಳಿಗೆ ಊರಿಗೆ ಹೊರಟ್ರಾ, 800 ರೂ ಟಿಕೆಟ್‌ಗೆ 2600 ರೂ ಕೇಳ್ತಿದ್ದಾರಾ.. ಒಂದು ದೂರು ಕೊಡಿ ಸಾಕು. ಉಳಿದ್ದದ್ದು ಸಾರಿಗೆ ಇಲಾಖೆ ನೋಡ್ಕೊಳ್ಳುತ್ತೆ. (ಸಾಂಕೇತಿಕ ಚಿತ್ರ) (HTK)

ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್‌ ಟಿಕೆಟ್ ದರ ರಾಕೆಟ್‌ನಂತೆ ಸರ್‍ರಂತ ಮೂರು ಪಟ್ಟು, ನಾಲ್ಕು ಪಟ್ಟು ಏರಿಕೆಯಾಗಿದ್ದು ನೆನಪಿದೆ ಅಲ್ವ. ಈಗ ದೀಪಾವಳಿ ಹಬ್ಬ ಬಂದಿದೆ. ಈಗಾಗಲೇ ಬಸ್‌ ಟಿಕೆಟ್ ದರ ಕಲಬರಗಿಗೆ 800 ರೂಪಾಯಿ ಟಿಕೆಟ್‌ ಇದ್ದರೂ ಅದು 2600 ರೂಪಾಯಿ ಆಗಿದೆ. ಈ ಹಗಲು ದರೋಡೆಯನ್ನು ನಿಲ್ಲಿಸೋದು ಹೇಗೆ ಎಂದು ಚಿಂತಿಸುತ್ತಿದ್ದೀರಾ, ಆ ಚಿಂತೆ ಬಿಡಿ. ಸಾರಿಗೆ ಇಲಾಖೆ ಸಹಾಯವಾಣಿಯನ್ನು ಶುರುಮಾಡಿದೆ. ಒಂದು ಫೋನ್ ಕರೆ ಸಾಕು. ಅದರಲ್ಲೇ ದೂರು ದಾಖಲಿಸಿ. ಉಳಿದದ್ದನ್ನು ಸಾರಿಗೆ ಇಲಾಖೆ ನೋಡಿಕೊಳ್ಳುತ್ತದೆ. ಈಗಾಗಲೆ ಈ ಕುರಿತು ಪ್ರಕಟಣೆ ಹೊರಡಿಸಿರುವ ಸಾರಿಗೆ ಇಲಾಖೆ, ಬೇಕಾಬಿಟ್ಟಿ ಟಿಕೆಟ್ ದರ ವಸೂಲಿ ಮಾಡಿದರೆ ದೂರು ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ದೀಪಾವಳಿ ಬಸ್‌ ಟಿಕೆಟ್ ದರ; ಸಾರಿಗೆ ಇಲಾಖೆ ಹೇಳಿರುವುದಿಷ್ಟು

"ದೀಪಾವಳಿ ಹಬ್ಬದ ಪ್ರಯುಕ್ತ ಸರದಿ ರಜೆಗಳು ಇರುವ ಕಾರಣ ಸಾರ್ವಜನಿಕರು ಸ್ವಂತ ಊರುಗಳಿಗೆ ತೆರಳುತ್ತಾರೆ. ಈ ಸಂದರ್ಭದಲ್ಲಿ ಕೆಲವು ಖಾಸಗಿ ಪ್ರಯಾಣಿಕ ವಾಹನಗಳ ಮಾಲೀಕರು ಹಾಗೂ ಆನ್‌ಲೈನ್ ಮೂಲಕ ಮುಂಗಡ ಟಿಕೆಟ್ ಬುಕಿಂಗ್ ತಾಣಗಳು ಪ್ರಯಾಣ ದರಗಳನ್ನು ಎರಡು- ಮೂರು ಪಟ್ಟು ಹೆಚ್ಚಳ ಮಾಡಿ ಸಂಗ್ರಹಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಹೀಗಾಗಿ ಖಾಸಗಿ ಬಾಸ್ ಮಾಲೀಕರು ಮತ್ತು ಥರ್ಡ್‌ ಪಾರ್ಟಿ ಏಜೆನ್ಸಿಗಳ ಪ್ರತಿನಿಧಿಗಳ ಸಭೆ ನಡೆಸಿದ ಸಾರಿಗೆ ಇಲಾಖೆ ಅಯುಕ್ತರು ಸಾಮಾನ್ಯ ದರಕ್ಕಿಂತ ಹೆಚ್ಚು ದರ ಪಡೆಯದಂತೆ ತಾಕೀತು ಮಾಡಿದ್ದಾರೆ. ಆದಾಗ್ಯೂ ದುಪ್ಪಟ್ಟು, ಮೂರು ಪಟ್ಟು ಹಣವನ್ನು ಟಿಕೆಟ್‌ಗಾಗಿ ಸಂಗ್ರಹಿಸಿ ಸಾರ್ವಜನಿಕರಿಗೆ ಅನಾನುಕೂಲ ಉಂಟುಮಾಡಿದರೆ ಅಂತಹ ವಾಹನ ಮಾಲೀಕರ ವಿರುದ್ಧ ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

ಟಿಕೆಟ್ ದರ ಹೆಸರಲ್ಲಿ ಸುಲಿಗೆ ಮಾಡಿದರೆ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಸಿರುವ ಇಲಾಖೆ ಅಧಿಕಾರಿಗಳು, ಅಂತಹ ವಾಹನಗಳ ಮಾಲೀಕರಿಗೆ ವಾಹನ ಓಡಿಸಲು ಕೊಟ್ಟಿರುವ ರಹದಾರಿ (ಪರ್ಮಿಟ್) ಮತ್ತು ನೋಂದಣಿ ಪತ್ರವನ್ನು (ಆರ್‌ಸಿ) ಅಮಾನತು ಮಾಡಲು ಹಾಗೂ ಟಿಕೆಟ್ ವಿತರಕರು (ಟಿಕೆಟ್ ಬುಕ್ಕಿಂಗ್ ಆಪ್) ವಿರುದ್ಧ ಕಾನೂನು ರೀತ್ಯ ಕ್ರಮಕೈಗೊಳ್ಳಲಾಗುತ್ತದೆ. ಸಾರ್ವಜನಿಕರು ಆನ್‌ಲೈನ್ ಮೂಲಕ ಟಿಕೆಟ್ ಮುಂಗಡ ಬುಕಿಂಗ್ ಮಾಡುವ ಸಂದರ್ಭದಲ್ಲಿ ಅನಧಿಕೃತ ಆಪ್‌ಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

ಇದಲ್ಲದೆ ಪ್ರಯಾಣಿಕ ಸೇವಾ ವಾಹನಗಳಲ್ಲಿ ಅನಧಿಕೃತವಾಗಿ ಸ್ಫೋಟಕ ಸಾಮಾಗ್ರಿಗಳು ಹಾಗೂ ಇತರೆ ಸರಕು ಸಾಗಣೆ ಮಾಡುವುದನ್ನು ನಿಷೇಧಿಸಲಾಗಿದ್ದು, ಇಂತಹ ಪ್ರಕರಣಗಳು ಕಂಡುಬಂದಲ್ಲಿ ವಾಹನ ಮಾಲೀಕರುಗಳ ವಿರುದ್ಧ ಕಾನೂನು ರೀತಿಯಲ್ಲಿ ಪ್ರಕರಣ ದಾಖಲಿಸಲು ಕ್ರಮ ವಹಿಸುವುದಾಗಿ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಟಿಕೆಟ್‌ಗೆ ಬೇಕಾ ಬಿಟ್ಟಿ ಹಣ ಸುಲಿಗೆ ಮಾಡಿದರೆ, ದೂರು ನೀಡಲು ಹೀಗೆ ಮಾಡಿ

ಬೆಂಗಳೂರಿನಿಂದ ವಿವಿಧೆಡೆಗೆ ಹೋಗುವ ಖಾಸಗಿ ಬಸ್‌ಗಳಲ್ಲಿ ಬೇಕಾಬಿಟ್ಟಿ ಟಿಕೆಟ್ ದರ ವಸೂಲಿ ಮಾಡಿದರೆ ಅಂತಹ ಬಸ್‌ಗಳ ವಿರುದ್ಧ ದೂರು ನೀಡಲು ಸಾರಿಗೆ ಇಲಾಖೆ ಎರಡು ಮೊಬೈಲ್‌ ಸಂಖ್ಯೆಗಳನ್ನು ಸಹಾಯವಾಣಿಯಾಗಿ ಪರಿಚಯಿಸಿದೆ. ಈ ಎರಡು ಸಂಖ್ಯೆಗಳು ಇಂದು (ಅಕ್ಟೋಬರ್ 26) ಚಾಲ್ತಿಗೆ ಬಂದಿದ್ದು, ಬೆಳಗ್ಗೆಯಿಂದಲೇ ದೂರುಗಳು ದಾಖಲಾಗುತ್ತಿವೆ ಎಂದು ಸಹಾಯವಾಣಿ ನಿರ್ವಹಿಸುತ್ತಿರುವವರು ಹಿಂದೂಸ್ತಾನ್ ಟೈಮ್ಸ್ ಕನ್ನಡಕ್ಕೆ ತಿಳಿಸಿದ್ದಾರೆ.

ಸಾರಿಗೆ ಇಲಾಖೆ ಸಿಬ್ಬಂದಿಯನ್ನೇ ಸಹಾಯವಾಣಿ ಕರೆಗಳನ್ನು ಸ್ವೀಕರಿಸಿ ಅವುಗಳನ್ನು ದಾಖಲಿಸಿ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಕಳುಹಿಸುತ್ತಾರೆ. ಅಧಿಕಾರಿಗಳು ಮುಂದಿನ ಕ್ರಮ ಜರುಗಿಸುತ್ತಾರೆ ಎಂದು ಅವರು ವಿವರಿಸಿದರು. ದುಪ್ಪಟ್ಟು ಮೂರು ಪಟ್ಟು ದರ ವಿಧಿಸುತ್ತಿರುವ ಪ್ರಕರಣ ಈಗಾಗಲೇ ದಾಖಲಾಗಿದ್ದು, 15ಕ್ಕೂ ಹೆಚ್ಚು ದೂರುಗಳು ಮಧ್ಯಾಹ್ನಕ್ಕೂ ಮೊದಲೇ ಬಂದಿವೆ ಎಂದು ಸಹಾಯವಾಣಿ ನಿರ್ವಹಿಸುತ್ತಿರುವವರು ತಿಳಿಸಿದ್ದಾರೆ.

ಬೆಂಗಳೂರು - ಕಲಬುರಗಿ ಟಿಕೆಟ್ ದರ 800 ರೂಪಾಯಿ ಇರುವುದು ಈಗ 2,600 ರೂಪಾಯಿ ಆಗಿದೆ ಎಂದು ದೂರು ಬಂದಿದೆ. ಇದೇ ರೀತಿ ಕುಮಟಾ ಮತ್ತಿತರ ಕಡೆಗೆ ಹೋಗುವ ಖಾಸಗಿ ಬಸ್‌ ಟಿಕೆಟ್ ದರಗಳ ಬಗ್ಗೆಯೂ ದೂರು ಕೊಡುತ್ತಿದ್ದಾರೆ ಎಂದು ಅವರು ತಿಳಿಸಿದರು.

ದೂರು ನೀಡುವವರು ಟಿಕೆಟ್ ದರ ಮತ್ತು ಯಾವ ಬಸ್ ಎಂಬಿತ್ಯಾದಿ ಮಾಹಿತಿಯನ್ನು ಸಹಾಯವಾಣಿಗೆ ಕರೆ ಮಾಡಿ ತಿಳಿಸಿದರೆ ಸಾಕು. ಟಿಕೆಟ್ ಖರೀದಿ ಮಾಡಿದ್ದರೆ ಅದರ ಪ್ರತಿಯನ್ನು ದಾಖಲೆಗಾಗಿ ಉಳಿಸಿಕೊಂಡಿರುವುದು ಉತ್ತಮ. ಕಾನೂನು ರೀತ್ಯಾ ಕ್ರಮ ಜರುಗಿಸಲು ಈ ದಾಖಲೆಗಳು ನೆರವಾದೀತು. ಸಾರಿಗೆ ಇಲಾಖೆ ನಿಯಂತ್ರಣ ಕೊಠಡಿ ಸಂಖ್ಯೆ ಹೀಗಿದೆ- 9449863429, 9449863426. ನಿತ್ಯ ಬೆಳಗ್ಗೆ ಕಚೇರಿ ಅವಧಿಯಲ್ಲಷ್ಟೆ ಈ ಸಂಖ್ಯೆಗಳು ಚಾಲ್ತಿಯಲ್ಲಿರುತ್ತವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ