logo
ಕನ್ನಡ ಸುದ್ದಿ  /  ಕರ್ನಾಟಕ  /  ಧಾರವಾಡ: ಮಕ್ಕಳ ಅಪಹರಣದಲ್ಲಿ ತಾಯಂದಿರು ಶಾಮೀಲು; ಆರೋಪಿಗಳನ್ನು ಬಂಧಿಸಿ 6 ಮಕ್ಕಳನ್ನು ರಕ್ಷಿಸಿದ ವಿದ್ಯಾಗಿರಿ ಪೊಲೀಸರು

ಧಾರವಾಡ: ಮಕ್ಕಳ ಅಪಹರಣದಲ್ಲಿ ತಾಯಂದಿರು ಶಾಮೀಲು; ಆರೋಪಿಗಳನ್ನು ಬಂಧಿಸಿ 6 ಮಕ್ಕಳನ್ನು ರಕ್ಷಿಸಿದ ವಿದ್ಯಾಗಿರಿ ಪೊಲೀಸರು

Rakshitha Sowmya HT Kannada

Nov 20, 2024 04:44 PM IST

google News

ಧಾರವಾಡ: ಮಕ್ಕಳನ್ನು ಕಿಡ್ನಾಪ್‌ ಮಾಡಿದ ಆರೋಪಿಗಳು

  • ಧಾರವಾಡ: ಮಕ್ಕಳನ್ನು ಅಪಹರಿಸಿದ ಆರೋಪದ ಮೇಲೆ ಧಾರವಾಡದ ವಿದ್ಯಾಗಿರಿ ಪೊಲೀಸರು ನಾಲ್ವರು ಆರೋಪಿಗಳನ್ನು ಅರೆಸ್ಟ್‌ ಮಾಡಿದ್ದಾರೆ. ಕಿಡ್ನಾಪ್‌ನಲ್ಲಿ ಮಕ್ಕಳ ತಾಯಂದಿರು ಕೂಡಾ ಶಾಮೀಲಾಗಿದ್ದು, ಅಪಹರಣಾಕಾರದಿಂದ ಪೊಲೀಸರು 6 ಮಕ್ಕಳನ್ನು ಸುರಕ್ಷಿತವಾಗಿ ಕರೆ ತಂದಿದ್ದಾರೆ. 

ಧಾರವಾಡ: ಮಕ್ಕಳನ್ನು ಕಿಡ್ನಾಪ್‌ ಮಾಡಿದ ಆರೋಪಿಗಳು
ಧಾರವಾಡ: ಮಕ್ಕಳನ್ನು ಕಿಡ್ನಾಪ್‌ ಮಾಡಿದ ಆರೋಪಿಗಳು

ಧಾರವಾಡ: ಮಕ್ಕಳನ್ನು ಅಪಹರಿಸಿ ಹೊರ ರಾಜ್ಯ, ಹೊರ ದೇಶಗಳಿಗೆ ಸಾಗಾಣಿ ಮಾಡುವ ದಂಧೆ ಹೆಚ್ಚುತ್ತಲೇ ಇದೆ. ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು ಧಾರವಾಡದ ವಿದ್ಯಾಗಿರಿ ಪೊಲೀಸರು ನಾಲ್ವರನ್ನು ಬಂಧಿಸಿ ಇವರ ವಶದಲ್ಲಿದ್ದ 6 ಮಕ್ಕಳನ್ನು ರಕ್ಷಿಸಿದ್ದಾರೆ.

ಮಕ್ಕಳ ಅಪಹರಣದಲ್ಲಿ ತಾಯಂದಿರು ಶಾಮೀಲು

ಮಕ್ಕಳನ್ನು ಅಪಹರಿಸಿದ್ದ ಧಾರವಾಡದ ರೇಷ್ಮಾ ಸಾಂಬ್ರಾಣಿ, ಪ್ರಿಯಾಂಕಾ ಸಾಂಬ್ರಾಣಿ, ಭೂಸಪ್ಪ ಚೌಕ್‌ನ ಸುನೀಲ ಕರಿಗಾರ ಮತ್ತು ಶಿಕಾರಿ ಪುರದ ಮುತ್ತುರಾಜ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಮಕ್ಕಳ ಅಪಹರಣದಲ್ಲಿ ಅವರ ತಾಯಂದಿರೇ ಶಾಮೀಲಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆರೋಪಿಗಳು ನವೆಂಬರ್‌ 5 ರಂದು ನಗರದಿಂದ 6 ಮಕ್ಕಳನ್ನು ಅಪಹರಿಸಿದ್ದರು. ಅದೇ ದಿನ ದೀಪಕ್‌ ಸಾಂಬ್ರಾಣಿ ಎಂಬವರು ವಿದ್ಯಾಗಿರಿ ಠಾಣೆಯಲ್ಲಿ ಮಕ್ಕಳು ಅಪಹರಣವಾಗಿರುವ ಬಗ್ಗೆ ದೂರು ದಾಖಲಿಸಿದ್ದರು.‌

6 ಮಕ್ಕಳನ್ನು ರಕ್ಷಿಸಿದ ಪೊಲೀಸರು

ಪ್ರಕರಣದ ಜಾಡು ಹಿಡಿದ ವಿದ್ಯಾಗಿರಿ ಠಾಣೆಯ ಸಿಪಿಐ ಸಂಗಮೇಶ ದಿಡಿಗಿನಾಳ ನೇತೃತ್ವದ ತಂಡ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಮಕ್ಕಳ ಕಳ್ಳರು ಹಾಗೂ ಅಪಹರಣವಾಗಿದ್ದ ಮಕ್ಕಳನ್ನು ಬೆಂಗಳೂರಿನಿಂದ ರಕ್ಷಣೆ ಮಾಡಿ ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾರೆ. ಅಪಹರಣಕ್ಕೊಳಗಾದ ಮಕ್ಕಳನ್ನು ಕೃಷ್ಣ ಸಾಂಬ್ರಾಣಿ (10), ಸೂರಜ್ ಸಾಂಬ್ರಾಣಿ (7) ಸಿಂಚನಾ ಸಾಂಬ್ರಾಣಿ (6) ಸಾನ್ವಿ ಸಾಂಬ್ರಾಣಿ (7), ಸಾತ್ವಿಕ ಸಾಂಬ್ರಾಣಿ (6), ಮನ್ವಿತ್ ಸಾಂಬ್ರಾಣಿ (3) ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ವಿದ್ಯಾಗಿರಿ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ತುಮಕೂರಿನಲ್ಲಿ ಸುದ್ದಿಯಾಗಿದ್ದ ಮಕ್ಕಳ ಕಿಡ್ನಾಪ್‌ ಕೇಸ್

ಇದೇ ವರ್ಷ ಜೂನ್‌ ತಿಂಗಳಲ್ಲಿ ತುಮಕೂರಿನಲ್ಲಿ ಕೂಡಾ ಮಕ್ಕಳ ಅಪಹರಣ ಕೇಸ್‌ ಸುದ್ದಿ ಮಾಡಿತ್ತು. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ 11 ತಿಂಗಳ ಮಗು ಅಪಹರಣ ಪ್ರಕರಣ ದಾಖಲಾಗಿತ್ತು. ಕೇಸ್‌ ಬೆನ್ನತ್ತಿದ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದ 7 ಆರೋಪಿಗಳನ್ನು ಬಂಧಿಸಿದ್ದರು. ಮಕ್ಕಳನ್ನು ಅಪಹರಿಸಿ ಮಾರಾಟ ಮಾಡಿ ಹಣ ಮಾಡಿಕೊಳ್ಳುತ್ತಿದ್ದ ದೊಡ್ಡ ದಂಧೆಯನ್ನೇ ಪೊಲೀಸರು ಬೇಧಿಸಿದ್ದರು. ತುಮಕೂರು ಮಾತ್ರವಲ್ಲದೆ ಮಂಡ್ಯ, ಬೆಂಗಳೂರು ಸಹಿತ ಹಲವು ಕಡೆಗಳಲ್ಲಿ ಮಕ್ಕಳ ಖರೀದಿ, ಮಾರಾಟ ಜಾಲ ಹರಡಿರುವುದು ತನಿಖೆಯಿಂದ ಬಯಲಾಗಿದೆ. ಆಸ್ಪತ್ರೆಗಳಲ್ಲಿ ಕೂಡಾ ಮಕ್ಕಳನ್ನು ಅಪಹರಿಸುವ ಪ್ರಕರಣಗಳು ಹೆಚ್ಚುತ್ತಲೇ ಇದ್ದು ಸಮಸ್ಯೆಗೆ ಕಡಿವಾಣ ಹಾಕಬೇಕಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ