logo
ಕನ್ನಡ ಸುದ್ದಿ  /  ಕರ್ನಾಟಕ  /  ಮುಡಾ ಹಗರಣ ತನಿಖೆ ಚುರುಕು; 2ನೇ ದಿನವೂ ಇಡಿ ಅಧಿಕಾರಿಗಳು ಶೋಧ, ಉಪಚುನಾವಣೆ ಹೊತ್ತಲ್ಲಿ ಸಿಎಂಗೆ ಸಂಕಷ್ಟ

ಮುಡಾ ಹಗರಣ ತನಿಖೆ ಚುರುಕು; 2ನೇ ದಿನವೂ ಇಡಿ ಅಧಿಕಾರಿಗಳು ಶೋಧ, ಉಪಚುನಾವಣೆ ಹೊತ್ತಲ್ಲಿ ಸಿಎಂಗೆ ಸಂಕಷ್ಟ

Prasanna Kumar P N HT Kannada

Oct 19, 2024 01:21 PM IST

google News

ಮುಡಾ ಹಗರಣ ತನಿಖೆ ಚುರುಕು; 2ನೇ ದಿನವೂ ಇಡಿ ಅಧಿಕಾರಿಗಳು ಶೋಧ

    • Mysore News: ಸಿದ್ದರಾಮಯ್ಯ ವಿರುದ್ಧ ದಾಖಲಾಗಿರುವ ಮುಡಾ ಹಗರಣಕ್ಕೆ ಸಂಬಂಧಿಸಿ ಇಡಿ ಅಧಿಕಾರಿಗಳು, ಪ್ರಾಧಿಕಾರದಲ್ಲಿ ದಾಖಲೆಗಳ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಮುಡಾ ಹಗರಣ ತನಿಖೆ ಚುರುಕು; 2ನೇ ದಿನವೂ ಇಡಿ ಅಧಿಕಾರಿಗಳು ಶೋಧ
ಮುಡಾ ಹಗರಣ ತನಿಖೆ ಚುರುಕು; 2ನೇ ದಿನವೂ ಇಡಿ ಅಧಿಕಾರಿಗಳು ಶೋಧ

ಮೈಸೂರು: ಮುಡಾ ಸೈಟ್ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿ ಅಕ್ಟೋಬರ್​ 18ರ ಶನಿವಾರ ತಡರಾತ್ರಿವರಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ದಾಖಲೆಗಳ ಕಾರ್ಯಾಚರಣೆ ನಡೆಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಇಂದು‌ ಕೂಡ ಇಡಿ ತಲಾಶ್ ನಡೆಸುತ್ತಿದ್ದಾರೆ. ತಡರಾತ್ರಿ 11.30ರ ತನಕ ತನಿಖೆ ಸಿಬ್ಬಂದಿ ನಡೆಸಿದರು. ದಾಖಲೆಗಳು ಕಳ್ಳತನ ಆಗಬಾರದು ಎಂದು ಸಿಆರ್​​ಪಿಎಫ್ ಯೋಧರಿಂದ ಮುಡಾಗೆ ಹೆಚ್ಚು ಭದ್ರತೆ ಒದಗಿಸಲಾಗಿದೆ. ಅವರು ಹಾಸಿಗೆ, ದಿಂಬು, ರಗ್ಗು ತರಿಸಿಕೊಂಡು ಮುಡಾದಲ್ಲೇ ಮಲಗಿದ್ದರು. ಸ್ಥಳಕ್ಕೆ ಮೂರು ಹೊತ್ತು ತಿಂಡಿ-ಊಟ ತರಿಸಿಕೊಂಡು ಅಲ್ಲಿಯೇ ವಾಸ್ತವ್ಯ ಹೂಡಿದ್ದರು.

ಶತಯಗತಾಯ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿಕೊಂಡು ಹೋಗಬೇಕೆಂದು ನಿರ್ಧರಿಸಿರುವ ಇಡಿ ಅಧಿಕಾರಿಗಳ ತಂಡವು, ಇಂದು ಬೆಳಿಗ್ಗೆ ಕೂಡ ಮುಡಾಗೆ ಮರಳಿ ಆಗಮಿಸಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಮುಡಾ ಆಯುಕ್ತ ರಘುನಂದನ್ ಅವರು, ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ತಮ್ಮ ಕಚೇರಿಗೆ ದೌಡಾಯಿಸಿದರು. ಇಡಿ ಅಧಿಕಾರಿಗಳ ಸೂಚನೆಯಂತೆ ಮುಡಾಗೆ ಆಗಮಿಸಿದ ಮುಡಾದ ಕಾರ್ಯದರ್ಶಿ ಪ್ರಸನ್ನಕುಮಾರ್ ಸೇರಿದಂತೆ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ದ ಇಡಿ ತನಿಖೆಗೆ ದೂರುದಾರ ಸ್ನೇಹಮಯಿ ಕೃಷ್ಣ ದೂರು ನೀಡಿದ್ದರು. ಅಲ್ಲದೆ, ಲೋಕಾಯುಕ್ತದಲ್ಲೂ ದೂರು ದಾಖಲಾಗಿದೆ.

ಆಯುಕ್ತರಿಗೆ ಪ್ರಶ್ನೆಗಳ ಸುರಿಮಳೆ

ರಾತ್ರಿಯಿಡೀ ಶೋಧ ಕಾರ್ಯ ನಡೆಸಿದ ಇಡಿ ಅಧಿಕಾರಿಗಳು, ಮುಡಾ ಅಧಿಕಾರಿಗಳಿಂದ ಸಿಆರ್​ಪಿಎಫ್ ಸಿಬ್ಬಂದಿಗೆ ಹಾಸಿಗೆ ದಿಂಬು ತರಿಸಿದ್ದರು. ಮಧ್ಯರಾತ್ರಿವರೆಗೂ ಕಡತಗಳ ಶೋಧ ಕಾರ್ಯ ನಡೆಸುವ ಸಾಧ್ಯತೆ ಇತ್ತು. ಆದರೆ, ಇಡಿ ಅಧಿಕಾರಿಗಳು ಕೂಡ ಮುಡಾದಲ್ಲೇ ವಾಸ್ತವ್ಯ ಹೂಡಲಿದ್ದಾರೆ ಎನ್ನುವ ಸಾಧ್ಯತೆ ಇತ್ತು. ಆದರೆ 11.30ರ ಸುಮಾರಿಗೆ ಅಲ್ಲಿಂದ ಜಾಗ ಖಾಲಿ ಮಾಡಿದ್ದರು. ನಿರಂತರ ಶೋಧ ಕಾರ್ಯ ನಡೆಸಿ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಅಲ್ಲದೆ, ಮುಡಾ ಆಯುಕ್ತ, ಕಾರ್ಯದರ್ಶಿ, ಸಿಬ್ಬಂದಿಗೆ ಪ್ರಶ್ನೆಗಳ ಸುರಿಮಳೆ ಸುರಿಸಿದ್ದರು. ಆಯುಕ್ತ ರಘುನಂದನ್​ಗೆ ತರಾಟೆ ತೆಗೆದುಕೊಂಡಿದ್ದರು.

ಮುಡಾದ ಕಾರ್ಯದರ್ಶಿ ಪ್ರಸನ್ನ ಕುಮಾರ್ ಅವರಿಗೂ ಸಾಲು ಸಾಲು ಪ್ರಶ್ನೆ ಹಾಕಲಾಗಿತ್ತು. ಸಿಬ್ಬಂದಿಯಿಂದ ಜೆರಾಕ್ಸ್ ಪ್ರತಿಯ ಜತೆಗೆ ಮೂಲ ಪ್ರತಿಗಳಿಗೆ ಹುಡುಕಾಟ ನಡೆಸಿದರು. ರಾತ್ರಿ ಊಟ ತರಿಸಿಕೊಂಡು ನಂತರ ಮತ್ತೊಮ್ಮೆ ತಲಾಶ್ ನಡೆಸಿದ್ದರು. ಒಟ್ಟಾರೆ ಸಂಪೂರ್ಣವಾಗಿ ವಶಕ್ಕೆ ಪಡೆಯಲು ನಿರ್ಧರಿಸಿದ್ದಾರೆ. ಪ್ರಕರಣ ತನಿಖೆ ತೀವ್ರಗೊಂಡಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಅಧಿಕಾರಿಗಳಿಗೆ ಆತಂಕ ಹೆಚ್ಚಾಗಿದೆ. ಉಪ ಚುನಾವಣೆ ಹೊತ್ತಲ್ಲೇ ಸಿದ್ದರಾಮಯ್ಯಗೆ ಮುಡಾ ಸಂಕಷ್ಟ ಎದುರಾಗಿದ್ದು, ಕಾಂಗ್ರೆಸ್ ಹಿನ್ನಡೆಗೂ ಕಾರಣವಾಗಬಹುದು ಎನ್ನಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ