3 ಬಿಎಚ್‌ಕೆ ಮನೆ ಖರೀದಿಗೆ ಆದ್ಯತೆ ನೀಡುತ್ತಿದ್ದಾರೆ ಬೆಂಗಳೂರಿಗರು, ಎಫ್‌ಐಸಿಸಿಐ-ಅನರಾಕ್‌ ಸಮೀಕ್ಷಾ ವರದಿ ಮುಖ್ಯಾಂಶಗಳು
ಕನ್ನಡ ಸುದ್ದಿ  /  ಕರ್ನಾಟಕ  /  3 ಬಿಎಚ್‌ಕೆ ಮನೆ ಖರೀದಿಗೆ ಆದ್ಯತೆ ನೀಡುತ್ತಿದ್ದಾರೆ ಬೆಂಗಳೂರಿಗರು, ಎಫ್‌ಐಸಿಸಿಐ-ಅನರಾಕ್‌ ಸಮೀಕ್ಷಾ ವರದಿ ಮುಖ್ಯಾಂಶಗಳು

3 ಬಿಎಚ್‌ಕೆ ಮನೆ ಖರೀದಿಗೆ ಆದ್ಯತೆ ನೀಡುತ್ತಿದ್ದಾರೆ ಬೆಂಗಳೂರಿಗರು, ಎಫ್‌ಐಸಿಸಿಐ-ಅನರಾಕ್‌ ಸಮೀಕ್ಷಾ ವರದಿ ಮುಖ್ಯಾಂಶಗಳು

ಬೆಂಗಳೂರು ರಿಯಲ್‌ ಎಸ್ಟೇಟ್‌ಗೆ ಸಂಬಂಧಪಟ್ಟಂತೆ ಎಫ್‌ಐಸಿಸಿಐ ಅನರಾಕ್‌ ಸಮೀಕ್ಷೆ ಹೊರಬಿದ್ದಿದೆ. ಬೆಂಗಳೂರಿನಲ್ಲಿ ಶೇಕಡ 51ರಷ್ಟು ಜನರು 3 ಬಿಎಚ್‌ಕೆ, ಶೇಕಡ 39 ರಷ್ಟು ಜನರು 2 ಬಿಎಚ್‌ಕೆ ಮನೆ ಖರೀದಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಎಫ್‌ಐಸಿಸಿಐ-ಅನರಾಕ್‌ ಸಮೀಕ್ಷೆ ತಿಳಿಸಿದೆ.

3 ಬಿಎಚ್‌ಕೆ ಮನೆ ಖರೀದಿಗೆ ಬೆಂಗಳೂರಿಗರ ಆದ್ಯತೆ, ಎಫ್‌ಐಸಿಸಿಐ-ಅನರಾಕ್‌ ಸಮೀಕ್ಷಾ ವರದಿ
3 ಬಿಎಚ್‌ಕೆ ಮನೆ ಖರೀದಿಗೆ ಬೆಂಗಳೂರಿಗರ ಆದ್ಯತೆ, ಎಫ್‌ಐಸಿಸಿಐ-ಅನರಾಕ್‌ ಸಮೀಕ್ಷಾ ವರದಿ (PIXABAY)

ಬೆಂಗಳೂರಿನಲ್ಲಿ ದೊಡ್ಡ ಮನೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಕೋವಿಡ್‌-19 ಸಾಂಕ್ರಾಮಿಕದ ಬಳಿಕ ವಿಶಾಲ ಮನೆಗಳ ಖರೀದಿಗೆ ಆದ್ಯತೆ ನೀಡುತ್ತಿರುವುದು ಹೆಚ್ಚಾಗಿದೆ. ಮುಂಬೈನಲ್ಲಿ ನಡೆದ ಎಫ್‌ಐಸಿಸಿಐ ರಿಯಲ್‌ ಎಸ್ಟೇಟ್‌ ಹೂಡಿಕೆ ಸಮ್ಮೇಳನದಲ್ಲಿ "ಮನೆ ಖರೀದಿದಾರರ ಭಾವನೆ ಸಮೀಕ್ಷೆ- 2024ರ ಮೊದಲ ತ್ರೈಮಾಸಿಕ" (Homebuyer Sentiment Survey - H1 2024 ) ಎರಡನೇ ಸಂಚಿಕೆಯನ್ನು ಬಿಡುಗಡೆ ಮಾಡಲಾಗಿದೆ. ಆ ಸಮೀಕ್ಷೆಯಲ್ಲಿ ಭಾರತದ ವಿವಿಧ ನಗರಗಳ ರಿಯಲ್‌ ಎಸ್ಟೇಟ್‌ ಟ್ರೆಂಡ್‌ ಕುರಿತು ಆಸಕ್ತಿದಾಯಕ ವಿಚಾರಗಳು ತಿಳಿದುಬಂದಿವೆ.

ಎರಡು ವರ್ಷಗಳ ಹಿಂದಿನ ಇದೇ ಅವಧಿಗೆ ಹೋಲಿಸಿದರೆ 3 ಬಿಎಚ್‌ಕೆ ಮನೆಗಳ ಬೇಡಿಕೆಯು ಗಮನಾರ್ಹವಾಗಿ ಹೆಚ್ಚಾಗಿದೆ. 2022ರ ಮೊದಲ ತ್ರೈಮಾಸಿಕದಲ್ಲಿ ಇದು 41%ರಷ್ಟಿತ್ತು. ಆದರೆ, 2024ರ ಮೊದಲ ತ್ರೈಮಾಸಿಕಕ್ಕೆ 51% ತಲುಪಿದೆ. ನಗರಗಳ ವಿಶ್ಲೇಷಣೆಯಲ್ಲಿ ಚೆನ್ನೈ, ಹೈದರಾಬಾದ್‌, ದೆಹಲಿ-ಎನ್‌ಸಿಆರ್‌ ಮತ್ತು ಬೆಂಗಳೂರಿನಲ್ಲಿ ಮೂರು ಬಿಎಚ್‌ಕೆ ಮನೆಗಳಿಗೆ ಬೇಡಿಕೆ ಹೆಚ್ಚಾಗಿರುವುದು ಕಂಡುಬಂದಿದೆ.

ಇದೇ ಸಮಯದಲ್ಲಿ, ಕೊಲ್ಕೊತ್ತಾ, ಮುಂಬೈ ಮಹಾನಗರಪಾಲಿಕೆ ಪ್ರದೇಶಗಳಲ್ಲಿ ಶೇಕಡ 40ಕ್ಕೂ ಹೆಚ್ಚು ಜನರು 2 ಬಿಎಚ್‌ಕೆ ಮನೆ ಖರೀದಿ ತಮ್ಮ ಪ್ರಮುಖ ಆದ್ಯತೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

ಮುಂಬೈ, ಪುಣೆಯಲ್ಲಿ ಒಂದು ಬಿಎಚ್‌ಕೆ ಮನೆ ಖರೀದಿಗೆ ಆದ್ಯತೆ ಹೆಚ್ಚಾಗಿದೆ. ವಸಾಯಿ, ವಿರಾರ್, ಬೊರಿವಲಿ, ದಹಿಸರ್, ಮೀರಾ ರೋಡ್, ಕಲ್ಯಾಣ್, ಡೊಂಬಿವಲಿ, ಥಾಣೆ ಮುಂತಾದ ಕಡೆ 1 ಬಿಎಚ್‌ಕೆ ಮನೆಗಳಿಗೆ ಬೇಡಿಕೆ ಹೆಚ್ಚಾಗಿದೆ.

ಕೋವಿಡ್‌ 19 ಸಾಂಕ್ರಾಮಿಕದ ಬಳಿಕ ಸಾಕಷ್ಟು ಮನೆ ಖರೀದಿದಾರರು 1 ಬಿಎಚ್‌ಕೆ ಅಪಾರ್ಟ್‌ಮೆಂಟ್‌ಗಳಿಗೆ ಆದ್ಯತೆ ನೀಡುತ್ತಿದೆ. ಕೂಡು ಕುಟುಂಬದಿಂದ ಸಣ್ಣ ಕುಟುಂಬಗಳು ಹೆಚ್ಚುತ್ತಿರುವ ಸೂಚನೆಯೂ ಇದು ಆಗಿರಬಹುದು. "ಮುಂಬೈನಲ್ಲಿ ಮೊದಲ ಬಾರಿಗೆ ಮನೆ ಖರೀದಿಸುವವರು 2 ಬಿಎಚ್‌ಕೆ ಮನೆ ಖರೀದಿಗೆ ಆದ್ಯತೆ ನೀಡುತ್ತಿದ್ದಾರೆ" ಎಂದು ರಿಯಲ್‌ ಎಸ್ಟೆಟ್‌ ತಜ್ಞ ದೀಪೇಶ್ ದೋಶಿ ಎಂಬವರು ಮಾಹಿತಿ ನೀಡಿದ್ದಾರೆ.

ಬೆಂಗಳೂರಲ್ಲಿ ಅಪಾರ್ಟ್‌ಮೆಂಟ್‌, ವಿಲ್ಲಾ ಖರೀದಿಗೆ ಬೇಡಿಕೆ ಹೆಚ್ಚಳ

ಬೆಂಗಳೂರಿನಲ್ಲಿ 2 ಬಿಎಚ್‌ಕೆ ಮತ್ತು 3 ಬಿಎಚ್‌ಕೆ ಮನೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೆಚ್ಚಿನ ಜನರು 3 ಬಿಎಚ್‌ಕೆಗೆ ಆದ್ಯತೆ ನೀಡುತ್ತಿದ್ದಾರೆ. ವರ್ಕ್‌ ಫ್ರಮ್‌ ಹೋಮ್‌ ಸಮಯದಲ್ಲಿ ಅವಶ್ಯಕತೆ ಬೀಳುತ್ತದೆ ಎಂದು ದೊಡ್ಡ ಮನೆಗಳನ್ನು ಹೆಚ್ಚಿನವರು ಖರೀದಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಗ್ರಾಹಕರ ಬಜೆಟ್‌ಗೆ ತಕ್ಕಂತೆ ಎರಡು, ಮೂರು ಬಿಎಚ್‌ಕೆಯ ಮನೆಗಳು ದೊರಕುತ್ತಿವೆ.

ಎಫ್‌ಐಸಿಸಿಐ ಅನರಾಕ್‌ ಸಮೀಕ್ಷೆಯನ್ನು 14 ನಗರಗಳಲ್ಲಿ ನಡೆಸಲಾಗಿದೆ. 7,615 ಜನರು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ. 2024ರ ಜನವರಿ-ಜೂನ್‌ ನಡುವೆ ಈ ಸಮೀಕ್ಷೆ ನಡೆಸಲಾಗಿದೆ. ಬೆಂಗಳೂರು, ಚೆನ್ನೈ, ಹೈದರಾಬಾದ್‌ ಸೇರಿದಂತೆ ವಿವಿಧ ನಗರಗಳಲ್ಲಿ ಸಮೀಕ್ಷೆ ನಡೆಸಲಾಗಿದೆ.

ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಎಂಎಂಆರ್‌, ಎನ್‌ಸಿಆರ್‌, ಪುಣೆಯಲ್ಲಿ ಅಪಾರ್ಟ್‌ಮೆಂಟ್‌ ಖರೀದಿಸಲು ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ. ಚೆನ್ನೈನಲ್ಲಿ ಶೇಕಡ 30, ಬೆಂಗಳೂರಿನಲ್ಲಿ ಶೇಕಡ 29ರಷ್ಟು ಜನರು ಅಪಾರ್ಟ್‌ಮೆಂಟ್‌ ಖರೀದಿಸುವುದಾಗಿ ಹೇಳಿದ್ದಾರೆ. ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ನಗರಗಳಲ್ಲಿ ಅಪಾರ್ಟ್‌ಮೆಂಟ್‌ಗಳ ಜತೆಗೆ ವಿಲ್ಲಾ ಮತ್ತು ರೋ ಹೌಸಸ್‌ಗಳಿಗೂ ಬೇಡಿಕೆ ಹೆಚ್ಚಾಗಿದೆ. ಶೇಕಡ 98ರಷ್ಟು ಮನೆ ಖರೀದಿದಾರರು ಪ್ರಾಜೆಕ್ಟ್‌ ಸರಿಯಾದ ಸಮಯಕ್ಕೆ ಪೂರ್ಣಗೊಳ್ಳಬೇಕೆಂದು ಬಯಸಿದ್ದಾರೆ.

Whats_app_banner