Fire Accident: ಬೆಂಗಳೂರು ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್‌ನಲ್ಲಿ ಅಗ್ನಿ ಅವಘಡ; 20 ವರ್ಷದ ಯುವತಿ ಬೆಂಕಿಗೆ ಆಹುತಿ
Nov 20, 2024 10:54 AM IST
ಬೆಂಗಳೂರು ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್‌ನಲ್ಲಿ ಬೆಂಕಿ, ಬಲಚಿತ್ರದಲ್ಲಿ ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದ ಪ್ರಿಯಾ
ಬೆಂಗಳೂರು ರಾಜಾಜಿನಗರದ ಎಲೆಕ್ಟ್ರಿಕ್ ಬೈಕ್ ಶೋರೂಮ್‌ನಲ್ಲಿ ಮಂಗಳವಾರ ಸಂಜೆ ಅಗ್ನಿ ಅನಾಹುತ ಸಂಭವಿಸಿದ್ದು ಘಟನೆಯಲ್ಲಿ ಪ್ರಿಯಾ ಎಂಬ 20 ವರ್ಷದ ಯುವತಿ ಸಾವನಪ್ಪಿದ್ದಾರೆ. ಘಟನೆಯಲ್ಲಿ 30ಕ್ಕೂ ಹೆಚ್ಚು ಬೈಕ್‌ಗಳು ಬೆಂಕಿಗೆ ಆಹುತಿಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್‌ನಲಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ 20 ವರ್ಷದ ಯುವತಿಯೊಬ್ಬರು ಬೆಂಕಿಗೆ ಆಹುತಿಯಾದ ಘಟನೆ ಬೆಂಗಳೂರಿನ ರಾಜಾಜಿನಗರದ ರಾಜ್‌ಕುಮಾರ್ ರಸ್ತೆಯಲ್ಲಿರುವ ಮೈ ಇವಿ ಎಲೆಕ್ಟ್ರಿಕ್ ಸ್ಕೂಟರ್ ಶೋ ರೂಮ್‌ನಲ್ಲಿ ಮಂಗಳವಾರ ಸಂಜೆ ನಡೆದಿದೆ.
ಬೆಂಗಳೂರು ರಾಜಾಜಿನಗರದಲ್ಲಿರುವ ಎಲೆಕ್ಟ್ರಿಕ್ ಬೈಕ್ ಶೋರೂಮ್
ಶೋರೂಮ್‌ನಲ್ಲಿ ಒಂದು ಎಲೆಕ್ಟ್ರಿಕ್ ಬೈಕ್ ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿಕೊಂಡ ಬೆಂಕಿ ನೋಡ ನೋಡುತ್ತಿದ್ದಂತೆ ಇಡೀ ಶೋ ರೂಮ್ ವ್ಯಾಪಿಸಿದೆ. ಶೋ ರೂಮ್‌ನಲ್ಲಿದ್ದ ಎಲ್ಲಾ ಬೈಕ್‌ಗಳು ಸೇರಿ ಇಡೀ ಶೋ ರೂಮ್ ಬೆಂಕಿಗೆ ಆಹುತಿಯಾಗಿದೆ. ಜೊತೆಗೆ ಶೋರೂಮ್‌ನಲ್ಲಿದ್ದ 20 ವರ್ಷದ ಪ್ರಿಯಾ ಎಂಬ ಯುವತಿ ಬಲಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದೆ. ಪ್ರಿಯಾ, ಶೋರೂಮ್‌ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದರು. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಶೋರೂಮ್‌ನ ಇತರ ಸಿಬ್ಬಂದಿ ಹೊರ ಹೋಗಲು ಯತ್ನಿಸಿದರೆ ಪ್ರಿಯಾ ಮಾತ್ರ ಬೆಂಕಿಯ ನಡುವೆ ಸಿಲುಕಿ ಹೊರ ಬಾರಲಾಗದೆ ಅಲ್ಲೇ ಉಳಿದಿದ್ದರು.
ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಉದ್ಯೋಗಿ
ಬೆಂಕಿಯಿಂದ ಗಂಭೀರ ಗಾಯಗಳಾಗಿದ್ದ ಪ್ರಿಯಾ ಅವರನ್ನು ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಿಯಾ ಸಾವನ್ನಪ್ಪಿದ್ದಾರೆ. ಸಂಜೆ ಸುಮಾರು 5.30 ರಲ್ಲಿ ಶೋರೂಮ್‌ನಲ್ಲಿ ಎಲೆಕ್ಟ್ರಿಕ್ ಬೈಕ್ ಸೆಕ್ಷನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಒಂದು ಬೈಕ್‌ನ ಬ್ಯಾಟರಿ ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿಕೊಂಡ ಬೆಂಕಿ ಇಡೀ ಶೋರೂಮ್ ವ್ಯಾಪಿಸಿದೆ. ಸುತ್ತಲೂ ಇತರ ಎಲೆಕ್ಟ್ರಿಕ್ ಸ್ಕೂಟರ್‌ಗಳು ಇದ್ದ ಕಾರಣ ಸ್ಪೋಟ ಹೆಚ್ಚಾಗಿ ಬೆಂಕಿ ಸುತ್ತಲೂ ವ್ಯಾಪಿಸಿದೆ. ಶೋರೂಮ್‌ನಲ್ಲಿ ಬೆಂಕಿ ವ್ಯಾಪಿಸುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ 3 ಅಗ್ನಿಶಾಮಕ ವಾಹನ ಬೆಂಕಿ ನಂದಿಸಿದೆ. ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
30ಕ್ಕೂ ಹೆಚ್ಚು ಬೈಕ್‌ಗಳು ಬೆಂಕಿಗೆ ಆಹುತಿ
ಘಟನೆಯಲ್ಲಿ ಸುಮಾರು 30ಕ್ಕೂ ಹೆಚ್ಚು ಸ್ಕೂಟರ್‌ಗಳು ಬೆಂಕಿಗೆ ಆಹುತಿಯಾಗಿವೆ. ಹೊಸದಾಗಿ ಎಲೆಕ್ಟ್ರಿಕ್ ಬೈಕ್ ಖರೀದಿಸಿದ್ದ ವ್ಯಕ್ತಿಯೊಬ್ಬರು ಸೋಮವಾರವಷ್ಟೇ ಶೋರೂಮ್‌ಗೆ ಬಂದು ತಮ್ಮ ಸ್ಕೂಟರನ್ನು ಸರ್ವಿಸ್‌ಗೆ ಬಿಟ್ಟು ಹೋಗಿದ್ದಾರೆ. ಅದರೆ ನಿನ್ನೆ ಸ್ಕೂಟರ್ ಹಿಂಪಡೆಯಲು ಶೋರೂಮ್‌ಗೆ ಬಂದವರು ಇತರ ವಾಹನಗಳ ಜೊತೆ ತಮ್ಮ ಸ್ಕೂಟರ್ ಕೂಡಾ ಸುಟ್ಟು ಕರಕಲಾಗಿರುವ ವಿಚಾರ ತಿಳಿದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ದುರಂತದಲ್ಲಿ ಸಾವನ್ನಪಿದ ಪ್ರಿಯಾ ಬುಧವಾರ(ನ.20) ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿತ್ತು ಎಂದು ಸ್ನೇಹಿತರು ನೋವು ಹಂಚಿಕೊಂಡಿದ್ದಾರೆ.