Forest News: ಸಹೋದ್ಯೋಗಿಗಳ ಮೇಲೆ ದೂರು ಅರ್ಜಿ ಬರೆದ ಧಾರವಾಡ ಆರ್‌ಎಫ್‌ಒ ಸಸ್ಪೆಂಡ್; ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಆದೇಶ
Sep 05, 2024 03:52 PM IST
ಅಮಾನತ್ತಾದ ಧಾರವಾಡ ವಲಯ ಅರಣ್ಯಾಧಿಕಾರಿ ಪ್ರಸನ್ನ ಸುಬೇದಾರ
- Dharwad news ಧಾರವಾಡ ವಲಯ ಅರಣ್ಯಾಧಿಕಾರಿಯನ್ನು ಕರ್ತವ್ಯ ಲೋಪದ ಮೇಲೆ ಅಮಾನತು ಮಾಡಲಾಗಿದೆ.
- ವರದಿ:ಪ್ರಸನ್ನಕುಮಾರ್ ಹಿರೇಮಠ, ಹುಬ್ಬಳ್ಳಿ
ಧಾರವಾಡ : ತಮ್ಮ ಸಹೋದ್ಯೋಗಿಗಳ ಮೇಲೆ ಮೂರನೇ ವ್ಯಕ್ತಿಯ ಹೆಸರಿಂದ ಇಲ್ಲಸಲ್ಲದ ಆರೋಪಗಳೊಂದಿಗೆ ದೂರರ್ಜಿಯನ್ನು ಸಲ್ಲಿಸಿದ ಧಾರವಾಡ ಸಾಮಾಜಿಕ ಅರಣ್ಯ ವಲಯದ ವಲಯ ಅರಣ್ಯಾಧಿಕಾರಿ( ಆರ್ ಎಫ್ ಒ) ಪ್ರಸನ್ನ ಸುಬೇದಾರ ಅವರನ್ನು ಶಿಸ್ತು ಪ್ರಾಧಿಕಾರಿ ಹಾಗು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಜೇಶಕುಮಾರ ದೀಕ್ಷಿತ್ ಸೇವೆಯಿಂದ ಅಮಾನತುಗೊಳಿಸಿದ್ದಾರೆ. ಧಾರವಾಡ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೀಡಿದ ದೂರಿನ ಮೇರೆಗೆ ಕೂಡಲೇ ಜಾರಿಗೆ ಬರುವಂತೆ ಇಲಾಖಾ ವಿಚಾರಣೆ ಮತ್ತು ತನಿಖೆಯನ್ನು ಬಾಕಿ ಇರಿಸಿ ಅಮಾನತು ಆದೇಶ ಹೊರಡಿಸಲಾಗಿದೆ.
ಧಾರವಾಡ ಆರ್.ಎಫ್.ಒ ಸುಬೇದಾರ ಇವರು ತಮ್ಮ ಸಹೋದ್ಯೋಗಿ ಅಧಿಕಾರಿಗಳ ದೂರರ್ಜಿ ತಯಾರಿಕೆಯ ರೂವಾರಿಯಾಗಿರುವುದು ತನಿಖಾ ವರದಿಯಿಂದ ಸಾಬೀತಾದ ಹಿನ್ನೆಲೆಯಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರ ವರದಿ ಮತ್ತು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ಬೆಳಗಾವಿ ಆದೇಶದ ಅಂತಿಮ ಆದೇಶದನ್ವಯ ಕರ್ನಾಟಕ ನಾಗರಿಕ ಸೇವಾ ನಿಯಮಾವಯನ್ವಯ ಕರ್ತವ್ಯ ಲೋಪದ ಕಾರಣ ಅಮಾನತುಗೊಳಿಸಲಾಗಿದೆ.
ಈಗಾಗಲೇ ಧಾರವಾಡ ವಲಯ ಸಾಮಾಜಿಕ ಅರಣ್ಯ ಪಾಲಕ ವಿಠ್ಠಲ ಎಂ ಜೋನಿಯವರನ್ನೂ ಸಹ ಇದೇ ಪ್ರಕರಣದಲ್ಲಿ ನಾಲ್ಕು ತಿಂಗಳ ಹಿಂದೆಯೇ ಅಮಾನತಿನಲ್ಲಿರಿಸಿ ಆದೇಶ ಹೊರಡಿಸಲಾಗಿದೆ.
ಜೋನಿ ಇವರು ಧಾರವಾಡ ಸಾಮಾಜಿಕ ವಲಯ ಅರಣ್ಯಾಧಿಕಾರಿ ಪ್ರಸನ್ನ ಸುಭೇದಾರ ಅವರೊಂದಿಗೆ ಸೇರಿಕೊಂಡು ಮೂರನೇ ವ್ಯಕ್ತಿ ಮುಬಾರಕ್ ಭಾಗವಾನ ಎಂಬುವವರ ಹೆಸರಿನಲ್ಲಿ ಇಬ್ಬರು ಅಧಿಕಾರಿಗಳ ಮೇಲೆ ದೂರರ್ಜಿಯನ್ನು ತಯಾರಿಸಿರುವುದು ತನಿಖಾಧಿಕಾರಿಗಳ ವರದಿಯಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿತ್ತು.
ಸಹೋದ್ಯೋಗಿಗಳನ್ನೇ ಟಾರ್ಗೆಟ್ ಮಾಡಿ ದೂರರ್ಜಿ ದಾಖಲಿಸಿದ ಅರೋಪದಲ್ಲಿ ಭಾಗಿಯಾದ ಆರ್ ಎಫ್ ಒ ಸಹಿತ ಅಧಿಕಾರಿಗಳ ಮೇಲೆ ಅರಣ್ಯ ಪಡೆ ಮುಖ್ಯಸ್ಥರು ಕ್ರಮ ಕೈಗೊಳ್ಳಬೇಕೆಂದು ಹಿಂದೆ ಆಗ್ರಹಿಸಿದ್ದೆ. ಈಗ ಅಮಾನತುಗೊಳಿಸಿದ್ದು ಸ್ವಾಗತಾರ್ಹವಾಗಿದೆ. ಸಮಗ್ರ ತನಿಖೆ ನಡೆಸಿ ತಮ್ಮದೇ ಇಲಾಖೆ ಅಧಿಕಾರಿಗಳಿಗೆ ದ್ರೋಹ ಬಗೆಯುವರನ್ನು ಸೇವೆಯಿಂದಲೇ ವಜಾಗೊಳಿಸಬೇಕು ಎನ್ನುವುದು ಆರ್.ಟಿ.ಐ.ಕಾರ್ಯಕರ್ತ ಹಾಗೂ ಪರಿಸರವಾದಿ ಮಂಜುನಾಥ ಬದ್ದಿ ಉಣಕಲ್ ಅವರ ಒತ್ತಾಯ.
ವರದಿ:ಪ್ರಸನ್ನಕುಮಾರ್ ಹಿರೇಮಠ, ಹುಬ್ಬಳ್ಳಿ
ವಿಭಾಗ