ಕೇರಳದ ವಯನಾಡ್ ಭೀಕರ ದುರಂತದಲ್ಲಿ ಅರಣ್ಯ ಇಲಾಖೆಗೂ ಇದೆ ಪಾಠ, ಶೀಘ್ರ ಎಚ್ಚೆತ್ತುಕೊಂಡರೆ ಮಾತ್ರ ಅನಾಹುತಕ್ಕೆ ಕಡಿವಾಣ ಸಾಧ್ಯ -ಕಾಡಿನ ಕಥೆಗಳು-forest news wayanad landslides tragedy karnataka forest department had lessons to learn ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಕೇರಳದ ವಯನಾಡ್ ಭೀಕರ ದುರಂತದಲ್ಲಿ ಅರಣ್ಯ ಇಲಾಖೆಗೂ ಇದೆ ಪಾಠ, ಶೀಘ್ರ ಎಚ್ಚೆತ್ತುಕೊಂಡರೆ ಮಾತ್ರ ಅನಾಹುತಕ್ಕೆ ಕಡಿವಾಣ ಸಾಧ್ಯ -ಕಾಡಿನ ಕಥೆಗಳು

ಕೇರಳದ ವಯನಾಡ್ ಭೀಕರ ದುರಂತದಲ್ಲಿ ಅರಣ್ಯ ಇಲಾಖೆಗೂ ಇದೆ ಪಾಠ, ಶೀಘ್ರ ಎಚ್ಚೆತ್ತುಕೊಂಡರೆ ಮಾತ್ರ ಅನಾಹುತಕ್ಕೆ ಕಡಿವಾಣ ಸಾಧ್ಯ -ಕಾಡಿನ ಕಥೆಗಳು

Wayanad Landslide: ಪಶ್ಚಿಮ ಘಟ್ಟಗಳ ಸಾಲು ಕೇರಳದಂತೆ ಕರ್ನಾಟಕದಲ್ಲೂ ಇದೆ. ಕೊಡಗು ಕೂಡ ದುರಂತವನ್ನು ಅನುಭವಿಸಿದೆ. ಚಿಕ್ಕಮಗಳೂರು, ಹಾಸನ ಸಹಿತ ಹಲವು ಕಡೆ ದುರಂತದ ನೋಟಗಳನ್ನೂ ಕಂಡಿದ್ದೇವೆ. ಕೇರಳದಲ್ಲಿ ಆದ ಭೀಕರ ದುರಂತಗಳಲ್ಲಿ ಖಂಡಿತಾ ನಮ್ಮ ಕರ್ನಾಟಕಕ್ಕೂ ಪಾಠಗಳಿವೆ. ಕರ್ನಾಟಕ ಅರಣ್ಯ ಇಲಾಖೆ ಏನು ಮಾಡಬೇಕು. ಇಲ್ಲಿದೆ ಕಾಡಿನ ಕಥೆಗಳಲ್ಲಿ ಉತ್ತರ.

ಕೇರಳದ ವಯನಾಡ್ ಭೀಕರ ದುರಂತದಲ್ಲಿ ಅರಣ್ಯ ಇಲಾಖೆಗೂ ಇದೆ ಪಾಠ, ಶೀಘ್ರ ಎಚ್ಚೆತ್ತುಕೊಂಡರೆ ಮಾತ್ರ ಅನಾಹುತಕ್ಕೆ ಕಡಿವಾಣ ಸಾಧ್ಯ -ಕಾಡಿನ ಕಥೆಗಳು
ಕೇರಳದ ವಯನಾಡ್ ಭೀಕರ ದುರಂತದಲ್ಲಿ ಅರಣ್ಯ ಇಲಾಖೆಗೂ ಇದೆ ಪಾಠ, ಶೀಘ್ರ ಎಚ್ಚೆತ್ತುಕೊಂಡರೆ ಮಾತ್ರ ಅನಾಹುತಕ್ಕೆ ಕಡಿವಾಣ ಸಾಧ್ಯ -ಕಾಡಿನ ಕಥೆಗಳು

ಕೇರಳದ ವಯನಾಡ್ ಜಿಲ್ಲೆ ಮೆಪ್ಪಾಡಿ ಪಂಚಾಯಿತಿ ವ್ಯಾಪ್ತಿಯ ನಾಲ್ಕಾರು ಹಳ್ಳಿಗಳ ಜನ ಹತ್ತು ದಿನದ ಹಿಂದೆ ನಿರಂತರ ಮಳೆಯಿಂದ ರೋಸಿ ಹೋಗಿದ್ದರು. ಅವರಿಗೆ ಮಳೆಯೇನೂ ಹೊಸದಲ್ಲ. ಬಂದು ಹೋಗುತ್ತದೆ ಬಿಡು ಎಂದು ಊಟ ಮಾಡಿ ಮಲಗಿದವರಿಗೆ ಮಧ್ಯರಾತ್ರಿ ಜವರಾಯ ಹೀಗೆ ಪ್ರವಾಹ ರೂಪದಲ್ಲಿ ಬರುತ್ತಾನೆ ಎನ್ನುವ ನಿರೀಕ್ಷೆಯೂ ಇರಲಿಲ್ಲ. ಆಗಷ್ಟೇ ನಿದ್ದೆ ಹತ್ತಿದ್ದವರಿಗೆ ಏಕಾಏಕಿ ಎಬ್ಬಿಸಿಕೊಂಡು ಹೋಯಿತು ಅದೇ ಭೀಕರ ಮಳೆ. ಕತ್ತಲು ಹರಿಯದರೊಳಗೆ ಸುರಿದ ಎರಡು ಮಳೆಗಳು ಸುತ್ತಮುತ್ತಲ ಹಳ್ಳಿಗಳನ್ನೇ ನಾಮಾವಶೇಷ ಮಾಡಿ ಹಾಕಿದವು.ಕನಿಷ್ಠ ಮೂರು ನೂರು ಮಂದಿ ಜೀವ ಕಳೆದುಕೊಂಡರು. ಅದರಲ್ಲಿ ಅದೆಷ್ಟು ಸಂಬಂಧಗಳು, ಅಮ್ಮ-ಮಗ, ಪತಿ- ಪತ್ನಿ, ಸ್ನೇಹಿತರು ಕೊಚ್ಚಿ ಹೋಗಿಯೆ ಬಿಟ್ಟರು. ಎರಡು ಗಂಟೆಯ ಮಳೆ ಹೀಗೆ ಭೀಕರತೆಯನ್ನು ಬೆಳಗಾಗುವುದರಲ್ಲಿ ಸೃಷ್ಟಿಸಿತ್ತು ಪ್ರಕೃತಿ. ಈಗಲೂ ಅದೆಷ್ಟೋ ಜನ ಕಾಣೆಯಾಗಿದ್ದಾರೆ. ಹುಡುಕಾಟ ನಿಂತಿಲ್ಲ. ಕಣ್ಣೀರು ಆರುತ್ತಿಲ್ಲ.

ಇದರಲ್ಲಿ ಬಹಳಷ್ಟು ಜನ ಅಲ್ಲಿಯೇ ಶತಮಾನಗಳಿಂದ ಬದುಕು ಕಟ್ಟಿಕೊಂಡವರು. ಇತ್ತೀಚಿನ ವರ್ಷಗಳಲ್ಲಿ ಪಶ್ಚಿಮ ಘಟ್ಟವನ್ನೇ ಬೇಧಿಸಿ ಬದುಕು ರೂಢಿಸಿಕೊಂಡವರೂ ಹಲವರು ಇದ್ದರು. ಸುತ್ತಲೂ ಅರಣ್ಯ ಪ್ರದೇಶ, ಹಸಿರು ಬೆಟ್ಟಗಳ ಸಾಲಿನ ನಡುವೆ ಊರುಗಳು. ಒಂದೆರಡು ದಶಕಗಳ ಹಿಂದೆ ಇಲ್ಲಿ ಹೀಗೆ ಇರಲಿಲ್ಲ. ಈಗ ಏನೆಲ್ಲಾ ಬದಲಾವಣೆ ಹೋಗಿದೆ.

ವಯನಾಡ್ ಜಿಲ್ಲೆ (Wayanad) ಎಂದರೆ ಒಂದು ಕಾಲಕ್ಕೆ ಹಸಿರಿನ ಸ್ವರ್ಗ ಎನ್ನುವಂತಿತ್ತು. ಈಗ ಅದು ಪ್ರವಾಸಿಗರ ಹಸಿರು ಸ್ವರ್ಗ. ಅಲ್ಲಿ ರೆಸಾರ್ಟ್‌ಗಳು, ಹೋಂಸ್ಟೇಗಳು, ಹೊಟೇಲ್‌ಗಳು, ಬೃಹತ್‌ ಕಟ್ಟಡಗಳು ತಲೆ ಎತ್ತಿವೆ. ಜನರ ಸುಖಕ್ಕಾಗಿ ಅಲ್ಲಿನ ಜನ ತಮ್ಮ ಊರುಗಳನ್ನು ತೆರೆದುಕೊಂಡರು. ಗುಡ್ಡಗಳನ್ನೇ ಕೊರೆದು ಮನೆಗಳನ್ನು ಕಟ್ಟಿ ಅತಿಥಿದೇವೋಭವ ಎಂದರು. ಬಂದವರಿಗೆಲ್ಲಾ ಉಣ ಬಡಿಸಿದರು. ಕುಟುಂಬಗಳನ್ನು ಇಲ್ಲಿಯೇ ಬಿಟ್ಟು ದೂರದ ಯಾವುದೋ ದೇಶಕ್ಕೆ ಉದ್ಯೋಗಕ್ಕೆಂದು ಹೋಗುವುದು ಸ್ವಲ್ಪ ತಪ್ಪಿತು. ಮನೆಯಾತ ಕಣ್ಣು ಮುಂದೆಯೇ ಇರುವ ಸಮಾಧಾನ ಒಂದು ಕಡೆ. ಇನ್ನೊಂದು ಕಡೆ ಪ್ರವಾಸೋದ್ಯಮದ ಹೆಸರಿನಲ್ಲಿ ಪರಿಸರದ ಮೇಲೆ ಶೋಷಣೆ. ಇದು ಮಿತಿ ಮೀರಿತು. ಅನಾಹುತ ಕಣ್ಣ ಮುಂದೆಯೇ ಆಗಿ ಹೋಯಿತು.

ದೇವರ ನಾಡು ಕೇರಳ ಈಗ ಪ್ರವಾಸಿ ನಾಡಾಗಿದೆ

ಕೇರಳವನ್ನು ದೇವರ ನಾಡು ಎನ್ನುತ್ತಾರೆ. ದೇಗುಲಗಳ ಕಾರಣಕ್ಕೆ ಈ ಹೆಸರು ಬಂದರೂ ಈಗ ಪ್ರವಾಸಿ ನಾಡು ಆಗಿ ಮಾರ್ಪಟ್ಟಿದೆ. ಕೇರಳದವರು ಕೆಲವು ವಿಚಾರ ಶಿಸ್ತು ಎನ್ನುವ ಮಾತನ್ನು ಮೀರಿ ಹೀಗೆ ಪ್ರವಾಸೋದ್ಯಮಕ್ಕೆ ಒಡ್ಡಿಕೊಂಡು ಅನಾಹುತ ತಂದುಕೊಂಡಿದ್ದಾರೆ. ಇದು ಕೇರಳದ ಸ್ಥಿತಿ ಮಾತ್ರವಲ್ಲ. ಐದು ವರ್ಷದ ಹಿಂದೆ ನಮ್ಮದೇ ಕೊಡಗಿನಲ್ಲಿ ಸಂಭವಿಸಿದ ಭೀಕರ ಪ್ರವಾಹ ಭಾರೀ ಅನಾಹುತವನ್ನೇ ಮಾಡಿತು. ಕಟ್ಟಡಗಳೇ ಕುಸಿದು ಹೋದವು. ಹಲವರು ಜೀವ ಕಳೆದುಕೊಂಡರು. ಇನ್ನಷ್ಟು ಮಂದಿ ನೆಲೆ ಕಳೆದುಕೊಳ್ಳಬೇಕಾಯಿತು. ಎರಡು ವರ್ಷ ಕಾಲ ಕೊಡಗು ಭಾರೀ ಹೊಡೆತ ತಿಂದಿತು.

ಪಶ್ಚಿಮಘಟ್ಟ (Western Ghats) ಎನ್ನುವುದು ಪ್ರಕೃತಿಯ ಮುಕುಟ. ಕೇರಳದಿಂದಲೇ ಆರಂಭಗೊಂಡು ತಮಿಳುನಾಡು, ಕರ್ನಾಟಕ, ಗೋವಾ, ಮಹಾರಾಷ್ಟ್ರದಲ್ಲಿ ಹಾದು ಗುಜರಾತ್‌ವರೆಗೂ ಹಬ್ಬಿರುವ ಪಶ್ಚಿಮ ಘಟ್ಟವನ್ನು ಉಳಿಸಿಕೊಳ್ಳಿ ಎನ್ನುವ ಕೂಗು ಈಗಿನದ್ದಲ್ಲ. ಯಾವಾಗ ಅನಾಹುತ ಸಂಭವಿಸುತ್ತದೋ ಆಗೆಲ್ಲಾ ಈ ಕೂಗು ಜೋರಾಗುತ್ತದೆ. ಆನಂತರ ತಣ್ಣಗಾಗಿಬಿಡುತ್ತದೆ. ಮತ್ತದೇ ಪ್ರವಾಸಿ ಚಟುವಟಿಕೆ. ಹಣದ ವ್ಯಾಮೋಹ.

ಈ ರೀತಿ ಪಶ್ಚಿಮ ಘಟ್ಟ ಹೆಚ್ಚು ಹಾಳಾಗಿರುವುದು ಕರ್ನಾಟಕ, ಕೇರಳ, ಗೋವಾದಲ್ಲಿಯೇ. ಪ್ರವಾಸಿ ಚಟುವಟಿಕೆಗಳಿಗೆ ಒಂದು ಮಿತಿ ಎನ್ನುವುದೇ ಇಲ್ಲ. ಕರ್ನಾಟಕದ ಹತ್ತು ಜಿಲ್ಲೆಗಳಲ್ಲಿ ಚಾಚಿಕೊಂಡಿರುವ ಪಶ್ಚಿಮ ಘಟ್ಟಗಳ ಸಾಲು ಆನೆ, ಹುಲಿ, ಕರಡಿ, ಕಾಡೆಮ್ಮೆ, ಜಿಂಕೆ, ಕಡವೆ, ಚಿರತೆ ಮಾತ್ರವಲ್ಲದೇ ಅದೆಷ್ಟೋ ಜೀವ ವೈವಿಧ್ಯದ ತಾಣ. ಮನುಷ್ಯನಿಗೂ ಆಸರೆ. ಬಗೆಬಗೆಯ ಮರಗಳು ಇಲ್ಲಿನ ಜೀವಧಾರೆ. ಇವುಗಳಿಗೆ ಮಾತ್ರವಲ್ಲದೇ ಈ ಪಶ್ಚಿಮಘಟ್ಟ ಮಳೆ ನಂಬಿರುವ ಅರ್ಧ ರಾಜ್ಯಗಳೇ ಇವೆ. ವಯನಾಡಿನಲ್ಲಿ ಮಳೆಯಾಗದೇ ಇದ್ದರೆ ತಮಿಳುನಾಡಿಗೆ ಮಾತ್ರವಲ್ಲ. ಬೆಂಗಳೂರು, ಮೈಸೂರಿಗೂ ನೀರು ಇರುವುದಿಲ್ಲ.

ಮಳೆಯಿಂದಷ್ಟೇ ದುರಂತವಲ್ಲ

ವಯನಾಡಿನ ದುರಂತಗಳು ಬರೀ ಮಳೆಗೆ ನಿಂತಿಲ್ಲ. ಅರಣ್ಯ ಪ್ರದೇಶ ಚದುರಿದಂತೆ ಆಗಿರುವುದು ಇಲ್ಲಿ ವನ್ಯಜೀವಿ ಸಂಘರ್ಷಕ್ಕೂ ದಾರಿ ಮಾಡಿಕೊಟ್ಟಿದೆ. ಹುಲಿಗಳು, ಆನೆಗಳಿಗೆ ಗುಂಡಿಕ್ಕಿ ಹೊಡೆಯುವ, ಆನೆಗಳ ತುಳಿತಕ್ಕೆ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ಇದು ಕರ್ನಾಟಕದಲ್ಲೂ ಇಲ್ಲ ಎಂದೇನೂ ಅಲ್ಲ. ಪಶ್ಚಿಮ ಘಟ್ಟ ಇರುವ ಹತ್ತು ಜಿಲ್ಲೆಗಳಲ್ಲೂ ಇಂತಹ ಸ್ಥಿತಿ ಇದ್ದರೂ ಇಲ್ಲಿ ಕೊಂಚ ಭಿನ್ನವಾಗಿಯೇ ಇದೆ.

ಅನಾಹುತಗಳು ಮುಂದೆ ಭಾರೀ ದುರಂತಗಳಿಗೆ ದಾರಿ ಮಾಡಿಕೊಡಬಹುದು ಎಂದು ತಜ್ಞರು ಎಚ್ಚರಿಸುತ್ತಲೇ ಇದ್ದಾರೆ. ಮಾಧವಗಾಡ್ಗೀಳ್‌ ಅವರು ಅವರಲ್ಲಿ ಒಬ್ಬರು. ಮಹಾರಾಷ್ಟ್ರದವರಾದ ಗಾಡ್ಗೀಳ್‌ ಅವರು ಅಧ್ಯಯನಯಗಳು ಹೆಚ್ಚು ನಡೆದಿರುವುದು ಕೇರಳ ಹಾಗೂ ಕರ್ನಾಟಕದಲ್ಲಿ. ಅವರ ಸಲಹೆ, ವರದಿಗಳ ಮೂಲಕ ಅದೆಷ್ಟೋ ಒಳ್ಳೆಯದು ಆಗಿದೆ.ಭಾರತದ ಪರಿಸರ ಸಂರಕ್ಷಣೆಗಾಗಿ ಅವರು ನಿರಂತರವಾಗಿ ನಡೆಸಿದ ಕ್ಷೇತ್ರ ಕಾರ್ಯ ಮತ್ತು ಅಧ್ಯಯನಗಳ ಮೂಲಕ ದೇಶದ ಹಲವಾರು ಜೀವತಾಣಗಳನ್ನು ರಕ್ಷಿಸಿದ ಹಿರಿಮೆ ಅವರದ್ದು. 1980 ರ ದಶಕದಲ್ಲಿ ಅವರ ಕಾಳಜಿಯಿಂದಾಗಿಯೇ ಕರ್ನಾಟಕ, ಕೇರಳ, ತಮಿಳುನಾಡಿನ ನೀಲಗಿರಿ ಪ್ರದೇಶವನ್ನು ಭಾರತದಲ್ಲಿ ಮೊದಲ ಜೀವತಾಣಗಳ ಮೀಸಲು ಪ್ರದೇಶ( Nilgiri Biosphere) ಎಂದು ಗುರುತಿಸಲು ಸಾಧ್ಯವಾಯಿತು.

1976 ರಿಂದಲೇ ಮಾಧವ್ ಗಾಡ್ಗೀಳ್ ಅವರಿಗೆ ಕರ್ನಾಟಕದ ನಂಟು

ಅದಕ್ಕೂ ಮೊದಲು 1976 ರಲ್ಲಿ, ಕರ್ನಾಟಕ ಸರ್ಕಾರವು ರಾಜ್ಯದ ಬಿದಿರು ಸಂಪನ್ಮೂಲಗಳನ್ನು ರಕ್ಷಿಸಲು ನಿರ್ಧರಿಸಿದಾಗ, ಗಾಡ್ಗೀಳ್ ಅವರನ್ನು ಅಧ್ಯಯನ ಮಾಡಲು ಕೋರಲಾಗಿತ್ತು. ನಾಲ್ಕು ವರ್ಷಗಳ ಕಾಲ 1986 ರಿಂದ 1990 ರ ವರೆಗೆ ಅವರು ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹಾ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು. 2021 ರ ಮೇ ತಿಂಗಳಲ್ಲಿ ಗುಜರಾತ್‌ಗೆ ಅಪ್ಪಳಿಸಿದ ಮತ್ತು ಪಶ್ಚಿಮ ಕರಾವಳಿಗೆ ಭಾರೀ ಮಳೆ ತಂದ ಚಂಡಮಾರುತದಂತಹ ವೈವಿಧ್ಯಮಯ ಪರಿಸರ ಘಟನೆಗಳನ್ನು ವೈಜ್ಞಾನಿಕವಾಗಿ ಅವರು ವಿಶ್ಲೇಷಿಸಿದ್ದರು.
ಸಮುದ್ರಗಳು ಬೆಚ್ಚಗಾಗುತ್ತಲೇ ಇರುವುದರಿಂದ ಭಾರತದ ಪಶ್ಚಿಮ ಕರಾವಳಿಯು ಹೆಚ್ಚು ತೀವ್ರವಾದ ಚಂಡಮಾರುತಗಳನ್ನು ನೋಡಬೇಕಾಗಬಹುದು ಎಂದು ಗಾಡ್ಗೀಳ್ ದೇಶಕ್ಕೆ ಎಚ್ಚರಿಕೆ ಸಂದೇಶವನ್ನು ನೀಡಿದ್ದರು. ಅದು ಸತ್ಯ ಎನ್ನುವಂತಾಯಿತು.

ಪಶ್ಚಿಮ ಘಟ್ಟಗಳ ಉಳಿವಿಗೆ ಅವರು 2012ರಲ್ಲಿ ನೀಡಿದ ವರದಿಯೂ ಅಷ್ಟೇ ಮಹತ್ವದ್ದು. ಪಶ್ಚಿಮ ಘಟ್ಟಗಳ ಬೈಬಲ್‌ ನಂತಿರುವ ಈ ವರದಿಯಲ್ಲಿ ಅದೆಷ್ಟೂ ಅಧ್ಯಯನಗಳಿವೆ. ಉಲ್ಲೇಖಗಳಿವೆ. ಭಾರತದ ಉಳಿವಿನ ಕಾಳಜಿಯ ಮಾತುಗಳು, ಸಾಲುಗಳಿವೆ. ಅದರ ಜಾರಿ ವಿಚಾರದಲ್ಲಿ ಮಾತ್ರ ನಮ್ಮಲ್ಲಿ ಅಸಡ್ಡೆ. ಜನ ಹಿತಕ್ಕಿಂತ ಪ್ರಭಾವಿಗಳು, ಲಾಬಿಗಳನ್ನು ಮೆಟ್ಟಿ ನಿಲ್ಲಲು ಆಗುತ್ತಲೇ. ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಈಗ ಪಂಚೆ ಉಟ್ಟು ತಮ್ಮದೇ ಶೈಲಿಯ ರಾಜಕಾರಣಕ್ಕೆ ಹೆಸರಾದ ಸಿದ್ದರಾಮಯ್ಯ, ಸ್ಟಾಲಿನ್‌, ಪಿಣರಾಯಿ ವಿಜಯನ್‌ ಇದ್ದಾರೆ. ಅವರೂ ಪರಿಸರ ಹಿತದ ವಿಚಾರದಲ್ಲಿ ಗಟ್ಟಿ ನಿರ್ಧಾರ ತೆಗೆದುಕೊಳ್ಳಲಾಗದ ಸನ್ನಿವೇಶ ನಿರಾಶಾದಾಯಕ ಎನ್ನಿಸುತ್ತದೆ.

ಅರಣ್ಯವನ್ನು ಕಸಿಯುತ್ತಿರುವ ರಸ್ತೆಗಳು ಮತ್ತು ಹೆದ್ದಾರಿಗಳು, ಮೆಟ್ರೋ ಮತ್ತು ರೈಲ್ವೆ ಮಾರ್ಗಗಳು ಮತ್ತು ಶ್ರೀಮಂತರಿಗಾಗಿ ಅರಣ್ಯ ಪ್ರದೇಶಗಳಲ್ಲಿ ವಸತಿಗಾಗಿ ರೆಸಾರ್ಟ್ ಇವುಗಳ ನಿರ್ಮಾಣದ ಆದ್ಯತೆಯನ್ನು ಮತ್ತೊಮ್ಮೆ ಪರಿಶೀಲಿಸಲು ಗಾಡ್ಗೀಳ್‌ ಮನವಿ ಮಾಡಿದ್ದರು, ಈ ಚಟುವಟಿಕೆಗಳು ತೆರೆದ ಸಾರ್ವಜನಿಕ ಸ್ಥಳಗಳು, ನದಿಗಳು, ನದೀಮುಖಗಳು, ಮ್ಯಾಂಗ್ರೋವ್ ಕಾಡುಗಳು ಮತ್ತು ಕಡಲತೀರದ ಕಡಲತೀರಗಳನ್ನು ಅತಿಕ್ರಮಿಸಿ ವ್ಯಾಪಕ ಮರಗಳ ಕಡಿಯುವಿಕೆಗೆ ಕಾರಣವಾಗುತ್ತವೆ ಮತ್ತು ಪರಿಸರ ವಿನಾಶಕಾರಿ ಕಲ್ಲು ಕ್ವಾರಿಗಳು ಮತ್ತು ಮರಳು ಗಣಿಗಾರಿಕೆಯನ್ನು ಉತ್ತೇಜಿಸುತ್ತವೆ. ಇವು ಹವಾಮಾನ ಬದಲಾವಣೆಯ ಆತಂಕಕಾರಿ ವಾಸ್ತವ ಎಂದು ಅವರು ಗಮನಸೆಳೆದಿದ್ದರು ಎನ್ನುವುದನ್ನು ಪಶ್ಚಿಮ ಘಟ್ಟಗಳ ಕುರಿತ ವಿಸ್ತೃತ ಲೇಖನಗಳನ್ನು ಬರೆದ ಹಿರಿಯ ಪತ್ರಕರ್ತ ಜಗದೀಶ್‌ ಕೊಪ್ಪ ಅವರು ಉಲ್ಲೇಖಿಸಿದ್ದಾರೆ.

ನಿಜವಾದ ಗಾಡ್ಗೀಳ್ ಆತಂಕ

ಮಾಧವ ಗಾಡ್ಗೀಳ್‌ (Madhav Gadgil) ಅವರು ಪಶ್ಚಿಮ ಘಟ್ಟ ವರದಿ ನೀಡುವಾಗ ಕೊಂಚವಾದರೂ ನಮ್ಮತನ ಉಳಿಯಲಿ ಎಂದು ಹೇಳಿದ್ದರು. ಆದರೆ ವರದಿ ನೀಡಿದ ಕೆಲ ವರ್ಷಗಳ ನಂತರ ಬಂದಾಗ ಕೇರಳದಲ್ಲಿನ ರೆಸಾರ್ಟ್‌, ಕೃತಕ ಕೆರೆಗಳು, ವಾಣಿಜ್ಯ ಕಟ್ಟಡಗಳನ್ನು ಕಂಡು ಬೇಸರಗೊಂಡಿದ್ದರು. ವೈಯಾಡಿನ ವೈಥಿರಿ ಪ್ರದೇಶ ಅತ್ಯಂತ ಪರಿಸರ ಸೂಕ್ಷ್ಮ ಪರಿಸರದಲ್ಲಿ ಹೀಗೆ ಬೇಕಾಬಿಟ್ಟಿ ಬೆಳವಣಿಗೆ ಆದರೆ ಮುಂದೆ ಏನೋ ಅಂದಿದ್ದರು. ಈಗ ಅದು ನಿಜವೂ ಆಗಿದೆ. ವಯನಾಡು ವರದಿಗಳನ್ನು ನೋಡಿ ದೂರದ ಮಹಾರಾಷ್ಟ್ರದಲ್ಲಿ ಗಾಡ್ಗೀಳ್‌ ಅವರು ದೀರ್ಘ ನಿಟ್ಟುಸಿರು ಬಿಟ್ಟಿರಬಹುದು.

ಪಶ್ಚಿಮ ಘಟ್ಟಗಳ ಅನಾಹುತದ ಸದ್ದು ನಮ್ಮ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರನ್ನು ಹೃದಯ ಕಲಕುವಂತೆ ಮಾಡಿರಬಹುದು, ಇದಕ್ಕಾಗಿ ಸಭೆ ಕರೆದು ಅರಣ್ಯ ಒತ್ತುವರಿ ತೆರವು, ಅಕ್ರಮ ರೆಸಾರ್ಟ್‌, ಹೋಂಸ್ಟೇಗಳನ್ನು ಅರಣ್ಯ ಪ್ರದೇಶದ ಸುತ್ತಮುತ್ತಲಿನ ಸೂಕ್ಷ್ಮ ಪರಿಸರ ವಲಯದಲ್ಲಿ ಬಂದ್‌ ಮಾಡಿಸುತ್ತೇವೆ ಎಂದರು. ಒತ್ತುವರಿ ತೆರವು ಕೆಲವು ಕಡೆ ಆಯಿತು. ಅವರು ಕರ್ನಾಟಕದಲ್ಲಿ ಕೆಎಚ್‌ ಪಾಟೀಲ್‌, ಎಚ್‌.ವಿಶ್ವನಾಥ್‌, ಸಿ.ಎಚ್.ವಿಜಯಶಂಕರ್‌, ರಮಾನಾಥ ರೈ ಅವರ ನಂತರ ಕಾಳಜಿಯಿಂದಲೇ ಸ್ಪಂದಿಸುತ್ತಿದ್ದಾರೆ. ಎಲ್ಲವೂ ಈಗಲೇ ಆಗಿಬಿಡಲಿ ಎನ್ನುವ ಬದಲು ಪಶ್ಚಿಮ ಘಟ್ಟಗಳಿಗೆ ಆಗುತ್ತಿರುವ ಒತ್ತಡ ತಗ್ಗಲಿ. ಆ ಮೂಲಕ ಅಕ್ರಮಗಳಿಗೆ ಕಡಿವಾಳ ಬೀಳಲಿ. ಕರ್ನಾಟಕದಲ್ಲಿ ಕೊಡಗಿನ ನಂತರ ಇನ್ನೆಲ್ಲಾ ಅನಾಹುತ ಮರುಕಳಿಸಿ ಜೀವ ರೋಧಿಸುವ ಮುನ್ನ ಎಚ್ಚರವನ್ನೂ ತೆಗೆದುಕೊಳ್ಳುವಂತಾಗಲಿ. ಕೇರಳದ ಅನಾಹುತ ಕರ್ನಾಟಕ ಅರಣ್ಯ ಇಲಾಖೆಗೆ ಪಾಠವಾಗಲಿ.

-ಕುಂದೂರು ಉಮೇಶಭಟ್ಟ, ಮೈಸೂರು