ಕರ್ನಾಟಕ ಹುಲಿ ಯೋಜನೆಗೆ ಕೊನೆಗೂ ಬಂದರು ಕಾಯಂ ಕ್ಷೇತ್ರ ನಿರ್ದೇಶಕರು: ನಾಮ್‌ಕೇ ವಾಸ್ತೆ ಹುದ್ದೆಗೆ ಬಲ ತುಂಬುವ ಸವಾಲು
Jan 03, 2024 07:08 AM IST
ಕರ್ನಾಟಕ ಹುಲಿ ಯೋಜನೆ ನಿರ್ದೇಶಕರಾಗಿ ಲಿಂಗರಾಜು ಅಧಿಕಾರ ಸ್ವೀಕರಿಸಿದ್ದಾರೆ.
- project tiger ಕರ್ನಾಕದಲ್ಲಿ ನಾಮ್‌ಕೇ ವಾಸ್ತೆ ಹುದ್ದೆಯಾಗಿ ಮಾರ್ಪಟ್ಟಿದ್ದ ಹುಲಿ ಯೋಜನೆ ನಿರ್ದೇಶಕರ ಹುದ್ದೆಗೆ ಹಿರಿಯ ಅಧಿಕಾರಿ ಲಿಂಗರಾಜು ಅವರನ್ನು ನೇಮಿಸಲಾಗಿದ್ದು, ಬದಲಾವಣೆ ನಿರೀಕ್ಷಿಸಲಾಗುತ್ತಿದೆ.
ಬೆಂಗಳೂರು: ಮೈಸೂರು ಕೇಂದ್ರಿತ ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ಸ್ಥಾನಕ್ಕೆ ಕಾಯಂ ಅಧಿಕಾರಿ ಕೊನೆಗೂ ನೇಮಕಗೊಂಡಿದ್ದಾರೆ. ವರ್ಷದ ಹಿಂದೆ ಈ ಹುದ್ದೆ ಖಾಲಿಯಾದ ನಂತರ ಇಲ್ಲಿಗೆ ಹೆಚ್ಚುವರಿ ಸೇವೆ ಮೇಲೆ ಬಂದವರು ತಾತ್ಕಾಲಿಕ ಅಧಿಕಾರದಲ್ಲಿದ್ದು ಹೋಗುತ್ತಲೇ ಇದ್ದರು.
ಈಗಷ್ಟೇ ಬೆಂಗಳೂರು ಸಿಸಿಎಫ್ ಆಗಿದ್ದ ಲಿಂಗರಾಜು ಅವರಿಗೆ ಅಪರ ಪ್ರಧಾನ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ ಹುದ್ದೆಗೆ ಬಡ್ತಿ ನೀಡಿ ಹುಲಿ ಯೋಜನೆ ಕ್ಷೇತ್ರ ನಿರ್ದೇಶಕರ ಹುದ್ದೆಗೆ ನಿಯೋಜಿಸಲಾಗಿದೆ. ಅವರು ಹೊಸ ವರ್ಷದ ದಿನವೇ ಅಧಿಕಾರ ವಹಿಸಿಕೊಂಡಿದ್ದಾರೆ.
ನಾಮಕೇ ವಾಸ್ತೇ ಹುದ್ದೆಯಾಗಿ ಮಾರ್ಪಟ್ಟಿರುವ ಕರ್ನಾಟಕದ ಹುಲಿ ಯೋಜನೆ ಕ್ಷೇತ್ರ ನಿರ್ದೇಶಕರ ಹುದ್ದೆಗೆ ಬಲ ತುಂಬುವ ದೊಡ್ಡ ಸವಾಲಿನ ನಡುವೆಯೇ ಹಿರಿಯ ಅಧಿಕಾರಿ ಲಿಂಗರಾಜು ಅವರನ್ನು ಕರ್ನಾಟಕ ಸರ್ಕಾರ ನೇಮಕ ಮಾಡಿದೆ.
ವರ್ಷದಿಂದ ಖಾಲಿ
ಕರ್ನಾಟಕ ಹುಲಿ ಯೋಜನೆ ಕ್ಷೇತ್ರ ನಿರ್ದೇಶಕರ ಹುದ್ದೆ ವರ್ಷದಿಂದ ಖಾಲಿ ಇತ್ತು. ಇದಕ್ಕೂ ಮೊದಲೂ ಇಲ್ಲಿ ಅಧಿಕಾರಿಗಳಿದ್ದರೂ ಅಧಿಕಾರವಿಲ್ಲದೇ ಬರೀ ಉತ್ಸವ ಮೂರ್ತಿ ಆಗಿದ್ದರು. ಇಲ್ಲಿಯೇ ಎರಡು ಬಾರಿ ಹುಲಿ ನಿರ್ದೇಶಕರಾಗಿದ್ದ ಜಗತ್‌ರಾಂ ಅವರಿಗೆ ಕಳೆದ ವರ್ಷ ಸರ್ಕಾರ ಪಿಸಿಸಿಎಫ್ ಹುದ್ದೆಗೆ ಬಡ್ತಿ ನೀಡಿ ನಂತರ ಇಲ್ಲಿಯೇ ಮುಂದುವರೆಸಿತ್ತು. ಆನಂತರ ಅವರನ್ನು ವರ್ಗ ಮಾಡಿ ಹೆಚ್ಚುವರಿ ಕಾರ್ಯಭಾರವನ್ನು ಜಿ.ವಿ.ರಂಗರಾವು ಅವರಿಗೆ ನೀಡಲಾಗಿತ್ತು. ಅವರೂ ಸೆಪ್ಟಂಬರ್‌ನಲ್ಲಿ ನಿವೃತ್ತರಾದ ನಂತರ ಆನೆ ಯೋಜನೆ ನಿರ್ದೇಶಕರಾಗಿದ್ದ ಸಾಸ್ವತಿ ಮಿಶ್ರ ಅವರಿಗೆ ಹುಲಿ ಯೋಜನೆ ಪ್ರಭಾರ ನೀಡಲಾಗಿತ್ತು. ಅವರನ್ನೂ ಈಗ ವರ್ಗ ಮಾಡಲಾಗಿದ್ದು, ಎಸ್.ಎಸ್.ಲಿಂಗರಾಜು ಅವರನ್ನು ನೇಮಿಸಲಾಗಿದೆ. ಲಿಂಗರಾಜು ಅವರು ಈ ಹಿಂದೆ ಬಿಳಿಗಿರಿ ರಂಗನ ಹುಲಿಧಾಮದ ನಿರ್ದೇಶಕರಾಗಿಯೂ ಕೆಲಸ ಮಾಡಿರುವುದರಿಂದ ಅನುಭವವೂ ಇದೆ.
ಅವರೂ ಹುಲಿ ಯೋಜನೆ ಕ್ಷೇತ್ರ ನಿರ್ದೇಶಕರ ಕಚೇರಿ ಹಳೆ ವೈಭವವನ್ನು ಮರುಕಳಿಸಿ ಹುಲಿ ಸಂಬಂಧಿತ ಎಲ್ಲಾ ವಿಷಯಗಳಲ್ಲೂ ನಿಖರ ಹಾಗೂ ನಿರ್ದಿಷ್ಟ ಯೋಜನೆ ರೂಪಿಸುವ ಉದ್ದೇಶವನ್ನು ಹೊಂದಿದ್ದಾರೆ.
ನಿರಂತರ ಬದಲಾವಣೆ
ದೇಶದಲ್ಲೇ ಅತಿ ಹೆಚ್ಚು ಹುಲಿಗಳಿರುವ ಕರ್ನಾಟಕಕ್ಕೂ ಪ್ರತ್ಯೇಕ ಹುಲಿ ಯೋಜನೆ ನಿರ್ದೇಶಕರನ್ನು ನೇಮಿಸಲಾಗಿತ್ತು. ಮೂರು ದಶಕದಿಂದಲೇ ಮೈಸೂರಿನಲ್ಲೇ ಕಚೇರಿಯಿದ್ದು, ಹಿರಿಯ ಐಎಫ್‌ಎಸ್ ಅಧಿಕಾರಿ ಕ್ಷೇತ್ರ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ಧಾರೆ. ಈ ಹಿಂದೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ದರ್ಜೆ ಅಧಿಕಾರಿ ಈ ಹುದ್ದೆಯ ಉಸ್ತುವಾರಿಯಲ್ಲಿದ್ದರು. ಆನಂತರ ಇದನ್ನು ಅಪರ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ ಮೇಲ್ದರ್ಜೆಗೇರಿಸಲಾಯಿತು. ಇದಾದ ನಂತರ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ ಬದಲಾಯಿಸಲಾಯಿತು. ಈಗ ಮತ್ತೆ ಕೆಳ ದರ್ಜೆಗೆ ಇಳಿಸಿ ಹಿಂದಿನಂತೆಯೇ ಅಪರ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ದರ್ಜೆ ಅಧಿಕಾರಿಯನ್ನು ನಿಯೋಜಿಸಲಾಗಿದೆ.
ಮೊದಲು ಕರ್ನಾಟಕಕ್ಕೆ ಒಬ್ಬರೇ ಹುಲಿ ಯೋಜನೆ ನಿರ್ದೇಶಕರಿದ್ದರು. ಕರ್ನಾಟಕದ ಬಂಡೀಪುರ, ನಾಗರಹೊಳೆ ವ್ಯಾಪ್ತಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ಆನಂತರ ಹುಲಿ ಯೋಜನೆ ಪ್ರದೇಶಗಳಾದ ಬಿಆರ್‌ಟಿ, ಅಣಶಿ ದಾಂಡೇಲಿ ಹಾಗೂ ಭದ್ರಾ ಯೋಜನೆ ಸೇರಿಸಲಾಯಿತು.
ಕೆಲ ವರ್ಷದ ಹಿಂದೆ ಇಬ್ಬರು ಹುಲಿ ಯೋಜನಾ ನಿರ್ದೇಶಕರನ್ನು ನೇಮಿಸಲಾಯಿತು. ನಾಗರಹೊಳೆ, ಬಂಡೀಪುರ, ಬಿಆರ್‌ಟಿ ಸೇರಿ ಮೂರು ಹುಲಿ ಯೋಜನೆ ಸೇರಿಸಿ ಮೈಸೂರು ಹುಲಿ ಯೋಜನೆ ನಿರ್ದೇಶಕರ ಹುದ್ದೆ ಸೃಷ್ಟಿಸಿದರೆ, ಭದ್ರಾ, ಅಣಶಿ ಹುಲಿಧಾಮ ಸೇರಿ ಶಿವಮೊಗ್ಗ ಹುಲಿ ನಿರ್ದೇಶಕರ ಯೋಜನೆ ಹುದ್ದೆ ಸೃಷ್ಟಿಸಲಾಯಿತು. ಇದಾದ ಕೆಲವೇ ವರ್ಷಗಳಲ್ಲಿ ಶಿವಮೊಗ್ಗ ಹುದ್ದೆ ರದ್ದಾಗಿ ನಂತರ ಮೈಸೂರು ಹುಲಿ ಯೋಜನೆ ನಿರ್ದೇಶಕರ ಹುದ್ದೆಯನ್ನು ಮಾತ್ರ ಉಳಿಸಲಾಯಿತು. ಹೀಗೆ ನಿರಂತರವಾಗಿ ಬದಲಾವಣೆ ಆಗುತ್ತಲೇ ಮೈಸೂರಿನಲ್ಲಿಯೇ ಹುಲಿ ಯೋಜನೆ ನಿರ್ದೇಶಕರ ಹುದ್ದೆ ಉಳಿದಿದೆ.
ಅಧಿಕಾರವೇ ಇಲ್ಲ
ಇನ್ನು ಕರ್ನಾಟಕದಲ್ಲಿ ಹುಲಿ ಯೋಜನೆ ನಿರ್ದೇಶಕರ ಹುದ್ದೆ ಇದ್ದರೂ ಮೊದಲು ಕರ್ನಾಟಕದ ಎಲ್ಲಾ ಐದು ಹುಲಿ ಯೋಜನಾ ನಿರ್ದೇಶಕರು ಇವರಿಗೆ ವರದಿ ಮಾಡಿಕೊಳ್ಳಬೇಕಿತ್ತು. ಹುಲಿ ಯೋಜನೆ ನಿರ್ದೇಶಕರಿಗೆ ಎಲ್ಲಾ ಐದು ಹುಲಿಧಾಮಗಳ ಮೇಲೆ ಅಧಿಕಾರಯುತ ನಿಯಂತ್ರಣವಿತ್ತು. ನಾಲ್ಕೈದು ವರ್ಷದ ಹಿಂದೆ ಇದನ್ನೂ ಬದಲಾಯಿಸಲಾಯಿತು. ಆಯಾ ಜಿಲ್ಲಾ ವ್ಯಾಪ್ತಿಯಲ್ಲೇ ಬರುವ ವೃತ್ತ ಸಂರಕ್ಷಣಾಧಿಕಾರಿಗೆ ಆಯಾ ಹುಲಿಧಾಮಗಳ ಉಸ್ತುವಾರಿ ನೀಡಲಾಯಿತು. ಮೈಸೂರು ವೃತ್ತಕ್ಕೆ ಬಂಡೀಪುರ, ಕೊಡಗು ವೃತ್ತಕ್ಕೆ ನಾಗರಹೊಳೆ, ಚಾಮರಾಜನಗರ ವೃತ್ತಕ್ಕೆ ಬಿಆರ್‌ಟಿ, ಚಿಕ್ಕಮಗಳೂರು ವೃತ್ತಕ್ಕೆ ಭದ್ರಾ ಹಾಗೂ ಕೆನರಾ ವೃತ್ತಕ್ಕೆ ಅಣಶಿ ದಾಂಡೇಲಿ ಹುಲಿಧಾಮಗಳ ಅಧಿಕಾರ ವ್ಯಾಪ್ತಿ ಹಂಚಲಾಯಿತು. ಇದರಿಂದ ಹುಲಿ ಯೋಜನೆ ಎನ್ನುವುದು ಅಧಿಕಾರವೇ ಇಲ್ಲದ ಹುದ್ದೆಯಾಗಿ ರೂಪುಗೊಂಡಿತ್ತು. ಇದರಿಂದ ಯಾರೂ ಇಲ್ಲಿಗೆ ಬರಲು ಇಷ್ಟಪಡದೇ ಮಹತ್ವದ ಹುದ್ದೆಗೆ ಕಿಮ್ಮತ್ತು ಇಲ್ಲದ ರೀತಿ ಮಾಡಲಾಯಿತು.
ಬೆಂಗಳೂರಿನಲ್ಲಿ ಹಿಂದೆ ಪಿಸಿಸಿಎಫ್ ಆಗಿದ್ದ ಅಧಿಕಾರಿಯೊಬ್ಬರು ಕೆಳ ಹಂತದ ಮೇಲಿನ ಅಧಿಕಾರಿಯೊಬ್ಬರು ಅಧಿಕಾರ ಕಿತ್ತುಕೊಳ್ಳಬೇಕು ಎನ್ನುವ ಕಾರಣಕ್ಕೆ ಹುಲಿ ಯೋಜನೆ ಕ್ಷೇತ್ರ ನಿರ್ದೇಶಕರ ಹುದ್ದೆ ಬಲವನ್ನೇ ಕುಂದಿಸಿದರು. ಇದರಿಂದ ಕರ್ನಾಟಕದಲ್ಲಿ ಹುಲಿ ಯೋಜನೆ ನಿರ್ದೇಶಕರ ಹುದ್ದೆ ಇದ್ದೂ ಇಲ್ಲದಂತಾಗಿದೆ. ಇದನ್ನು ಮೊದಲಿನಂತೆಯೇ ಬದಲಾಯಿಸುವುದು ಸೂಕ್ತ. ಈಗಾಗಲೇ ವೃತ್ತಗಳಲ್ಲಿ ಇರುವ ಕೆಲಸವೇ ನೋಡಲು ಆಗದ ವೃತ್ತ ಸಂರಕ್ಷಣಾಧಿಕಾರಿ ಬದಲು ಹುಲಿ ಯೋಜನೆಗೆಂದೇ ಇರುವ ಕ್ಷೇತ್ರ ನಿರ್ದೇಶಕರಿಗೆ ಹೆಚ್ಚಿನ ಅಧಿಕಾರ ನೀಡಬೇಕು ಎನ್ನುವುದು ಸ್ವಯಂ ಸೇವಾ ಸಂಘಟನೆಯೊಂದರ ಪ್ರಮುಖರ ಸಲಹೆ.
=====́