logo
ಕನ್ನಡ ಸುದ್ದಿ  /  ಕರ್ನಾಟಕ  /  Hasanamba Darshan: ವರ್ಷಕ್ಕೆ ಒಂದೇ ಬಾರಿ ದರ್ಶನ ನೀಡುವ ಹಾಸನ ಹಾಸನಾಂಬೆ ದೇಗುಲ ಬಾಗಿಲು ತೆಗೆಯಲು ಕ್ಷಣಗಣನೆ

Hasanamba Darshan: ವರ್ಷಕ್ಕೆ ಒಂದೇ ಬಾರಿ ದರ್ಶನ ನೀಡುವ ಹಾಸನ ಹಾಸನಾಂಬೆ ದೇಗುಲ ಬಾಗಿಲು ತೆಗೆಯಲು ಕ್ಷಣಗಣನೆ

Umesha Bhatta P H HT Kannada

Oct 24, 2024 11:28 AM IST

google News

ಈ ವರ್ಷ ಹಾಸನ ದೇಗುಲ ಬಾಗಿಲು ತೆರೆಯಲು ಸಿದ್ದತೆಗಳು ಆಗಿದ್ದು,. ಹೂವಿನ ಅಲಂಕಾರ ಮಾಡಲಾಗಿದೆ.

    • ಹಾಸನದ ಪ್ರಸಿದ್ದ ಹಾಸನಾಂಬ ದೇಗುಲದ ವರ್ಷದ ವಿಧಿ ವಿಧಾನಗಳು ಗುರುವಾರದಿಂದ ಆರಂಭವಾಗಲಿವೆ. ಮಧ್ಯಾಹ್ನ 12ಕ್ಕೆ ದೇಗುಲ ತೆರಲಿದ್ದು, ಇದಕ್ಕಾಗಿ ಕ್ಷಣಗಣನೆ ಶುರುವಾಗಿದೆ.
ಈ ವರ್ಷ ಹಾಸನ ದೇಗುಲ ಬಾಗಿಲು ತೆರೆಯಲು ಸಿದ್ದತೆಗಳು ಆಗಿದ್ದು,. ಹೂವಿನ ಅಲಂಕಾರ ಮಾಡಲಾಗಿದೆ.
ಈ ವರ್ಷ ಹಾಸನ ದೇಗುಲ ಬಾಗಿಲು ತೆರೆಯಲು ಸಿದ್ದತೆಗಳು ಆಗಿದ್ದು,. ಹೂವಿನ ಅಲಂಕಾರ ಮಾಡಲಾಗಿದೆ.

ಹಾಸನ: ಎಡಬಿಡದೇ ಸುರಿದಿರುವ ಮಳೆಯ ಆಹ್ಲಾದಕರ ವಾತಾವರಣದ ನಡುವೆ ನಗರ ದೇವತೆ ಹಾಸನದ ಹಾಸನಾಂಬ ದೇಗುಲದ ಈ ವರ್ಷದ ಧಾರ್ಮಿಕ ಚಟುವಟಿಕೆಗಳ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಹಾಸನದ ಪ್ರಸಿದ್ದ ಹಾಸನಾಂಬ ದೇಗುಲವನ್ನು ಇಂದಿನಿಂದ 11 ದಿನಗಳ ಕಾಲ ತೆರೆದು 9 ದಿನಗಳ ಕಾಲ ಭಕ್ತರಿಗೆ ದರ್ಶನ ನೀಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. 2024ರ ಅಕ್ಟೋಬರ್‌ 24 ರ ಗುರುವಾರ ಮಧ್ಯಾಹ್ನ 12ಕ್ಕೆ ದೇಗುಲದ ಬಾಗಿಲನ್ನು 11 ತಿಂಗಳ ಬಳಿಕ ತೆಗೆಯಲಾಗುತ್ತಿದೆ. ಹಾಸನಾಂಬೆ ದರ್ಶನಕ್ಕೆ ಭಕ್ತರು ಅಣಿಯಾಗಿದ್ದು ಶುಕ್ರವಾರದಿಂದ ಸತತ 9 ದಿನಗಳ ಕಾಲ ದೇವಿ ದರ್ಶನಕ್ಕೆ ಅವಕಾಶವಿದೆ. ಕೊನೆಯ ದಿನ ಪೂಜಾ ವಿಧಿ ವಿಧಾನಗಳನ್ನು ಮುಗಿಸಿ ಮತ್ತೆ ಬಾಗಿಲು ಮುಚ್ಚಲಾಗುತ್ತದೆ.

ಹಾಸನ ಜಿಲ್ಲಾಡಳಿತ ದೇಗುಲ ತೆರೆಯಲು ತಯಾರಿ ಮಾಡಿಕೊಂಡಿದೆ. ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ ಅವರ ಸಮ್ಮುಖದಲ್ಲಿ ದೇಗುಲದ ಬಾಗಿಲು ತೆರೆಯಲಾಗುತ್ತದೆ. ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌.ರಾಜಣ್ಣ, ಸಂಸದ ಶ್ರೇಯಸ್‌ ಪಟೇಲ್‌, ಹಾಸನ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಮತ್ತತಿರರು ಈ ವೇಳೆ ಇರುವರು. ದೇಗುಲ ಬಾಗಿಲು ತೆರೆದು ದಿನವಿಡೀ ಅಲಂಕಾರ ಹಾಗೂ ಪೂಜಾ ವಿಧಿ ವಿಧಾನಗಳನ್ನು ಕೈಗೊಳ್ಳಲಾಗುತ್ತದೆ.

ಇದಕ್ಕಾಗಿ ಬುಧವಾರದಿಂದಲೇ ದೇಗುಲದ ಹೊರ ಭಾಗದಲ್ಲಿ ಅಲಂಕಾರ ನಡೆದಿತ್ತು. ದೇವಸ್ಥಾನದ ಮುಂಭಾಗದಲ್ಲಿ ಭಾರೀ ಹೂವುಗಳಿಂದ ಸ್ವಾಗತ ಕಮಾನು. ದೇಗುಲದ ಬಾಗಿಲಿಗೂ ಹೂವಿನ ಅಲಂಕಾರ ಮಾಡಲಾಗಿದೆ. ಹೂವುಗಳ ಜತೆಗೆ ಬಗೆಬಗೆಯ ದವಸ ಧಾನ್ಯಗಳನ್ನು ಬಳಸಲಾಗಿದೆ. ಬಗೆಬಗೆಯ ಹೂವುಗಳು ಭಕ್ತರನ್ನು ಸೆಳೆಯುತ್ತಿವೆ.

ಇದಲ್ಲದೇ ಹಾಸನದ ಅರಸು ಮನೆತನದವರು ಆಗಮಿಸಿ ಬಾಳೆ ಕಂದು ಕಡಿಯುವ ಮೂಲಕ ಸಾಂಪ್ರದಾಯಿಕ ಪೂಜೆಗಳಿಗೆ ಚಾಲನೆ ನೀಡಲಿದ್ದಾರೆ. ಆನಂತರ ಸ್ವಚ್ಛತೆ, ಅಲಂಕಾರ, ಪೂಜೆಗಳು ಮುಂದುವರಿಯಲಿವೆ.ಮೊದಲ ದಿನ ಯಾವುದೇ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶವಿಲ್ಲ.

ಈ ಬಾರಿಯೂ ಹಾಸನಾಂಬೆ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರೆ ಹಿನ್ನೆಲೆಯಲ್ಲಿ ಹಲವಾರು ಚಟುವಟಿಕೆಗಳನ್ನು ಮಾಡಿಕೊಳ್ಳಲಾಗಿದೆ. ಹನ್ನೊಂದು ದಿನವೂ ವಿವಿಧ ಚಟುವಟಿಕೆಗಳು ಇರಲಿವೆ.

ಯಾವುದೇ ತೊಂದರೆಯಾಗದಂತೆ ಹಾಸನ ಜಿಲ್ಲಾ ಪೊಲೀಸರು ಭದ್ರತೆಯನ್ನು ಕೈಗೊಂಡಿದ್ದಾರೆ. ದೇಗುಲ ಸುತ್ತಮುತ್ತಲಿನ ಸಂಚಾರದಲ್ಲೂ ಬದಲಾವಣೆ ಮಾಡಲಾಗಿದೆ. ದೇವಸ್ಥಾನದಿಂದ ಅನತಿ ದೂರದಲ್ಲಿಯೇ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಯಾವುದೇ ವಾಹನಗಳನ್ನು ದೇಗುಲದ ಸುತ್ತಮುತ್ತ ನಿಲ್ಲಿಸಲು ಅವಕಾಶ ಇಲ್ಲದಂತೆ ಅಲ್ಲಲ್ಲಿ ಬ್ಯಾರಿಕೇಡ್‌ ಹಾಕಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವುದರಿಂದ ಪೊಲೀಸರ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಭಕ್ತರು ಉತ್ತಮವಾದ ಲಡ್ಡು ಖರೀದಿಸಲು ಅನುವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಇಸ್ಕಾನ್‌ ಈ ಬಾರಿ ಲಡ್ಡು ತಯಾರಿಸಲು ನೆರವು ನೀಡಲಿದೆ. ಅಲ್ಲಿನ ತಂತ್ರಜ್ಞಾನ ಬಳಸಿಯೇ ವಿಶೇಷ ಲಡ್ಡು ತಯಾರಿಸಲಾಗುತ್ತಿದೆ. ಒಂದು ಲಡ್ಡು ದರ ಮೂವತ್ತು ರೂ. ಇರಲಿದೆ. ಅಲ್ಲದೇ ಹಣ ನೀಡಿ ದರ್ಶನಕ್ಕೆ ಬರುವವರಿಗೆ ಉಚಿತವಾಗಿ ಲಡ್ಡು ಸಿಗಲಿದೆ. ಒಂದು ಸಾವಿರರೂ. ದರ್ಶನದವರಿಗೆ ಎರಡು ಹಾಗೂ ಮೂರು ನೂರು ರೂ. ದರ್ಶನ ದವರಿಗೆ ಒಂದು ಲಾಡು ನೀಡಲು ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ