ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬ ದೇವಾಲಯದ ಬಾಗಿಲು ಯಾವಾಗ ತೆರೆಯಲಾಗುತ್ತೆ? ದಿನಾಂಕ, ಸಪ್ತಮಾತೃಕೆಯ ಮಹತ್ವ ಇಲ್ಲಿದೆ
Oct 17, 2024 09:33 AM IST
ಹಾಸನದಲ್ಲಿರುವ ಹಾಸನಾಂಬೆ ದೇವಾಲಯವನ್ನು ಯಾವಾಗ ತೆರೆಯಲಾಗುತ್ತದೆ, ಭಕ್ತರ ದರ್ಶನಕ್ಕೆ ಎಷ್ಟು ದಿನ ಅವಕಾಶ ನೀಡಲಾಗಿದೆ ಎಂಬುದರ ವಿವರ ಇಲ್ಲಿದೆ.
- ಪ್ರತಿ ವರ್ಷದ ದೀಪಾವಳಿಯ ಸಂದರ್ಭದಲ್ಲಿ ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ದಿನಾಂಕ, ಭಕ್ತರಿಗೆ ದೇವಿಯ ದರ್ಶನಕ್ಕೆ ಎಷ್ಟು ದಿನ ಅವಕಾಶ ನೀಡಲಾಗುತ್ತದೆ, ಸಪ್ತಮಾತೃಕೆಯ ಮಹತ್ವವನ್ನು ತಿಳಿಯೋಣ.
ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಹಾಸನದ ಅಧಿದೇವತೆ ಹಾಸನಾಂಬ ದೇವಾಲಯವನ್ನು ವರ್ಷಕ್ಕೆ ಒಮ್ಮೆ ಮಾತ್ರ ತೆರೆಯಲಾಗುತ್ತದೆ. ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಮಂದಿ ಭಕ್ತರು ದೇವಾಲಯಕ್ಕೆ ಆಗಮಿಸುತ್ತಾರೆ. ಇದಕ್ಕಾಗಿ ಹಾಸನ ಜಿಲ್ಲಾಡಳಿತ ಕೂಡ ಸಕಲ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಪ್ರತಿ ವರ್ಷ ದೀಪಾವಳಿಯ ಸಂದರ್ಭದಲ್ಲಿ ಹಾಸನಾಂಬೆ ದೇವಾಲಯದ ಬಾಗಿಲನ್ನು ತೆರೆಯಲಾಗುತ್ತದೆ. ಅದರಂತೆ 2024 ಅಕ್ಟೋಬರ್‌ನಲ್ಲಿ ದೇವಾಲಯದ ಬಾಗಿಲನ್ನು ಯಾವಾಗ ತೆರೆಯಲಾಗುತ್ತದೆ? ಭಕ್ತರಿಗೆ ಎಷ್ಟು ದಿನಗಳ ಕಾಲ ದರ್ಶನಕ್ಕೆ ಅವಕಾಶ ನೀಡಲಾಗಿದೆ, ಸಪ್ತಮಾತೃತೆಯ ಮಹತ್ವವನ್ನು ಇಲ್ಲಿ ತಿಳಿದುಕೊಳ್ಳೋಣ.
ತಾಜಾ ಫೋಟೊಗಳು
2024ರ ಅಕ್ಟೋಬರ್ 24ರ ಗುರುವಾರ ಹಾಸನಾಂಬ ದೇವಾಲಯದ ಬಾಗಿಲನ್ನು ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಜಿಲ್ಲಾಡಳಿತ ತೆರೆಯುತ್ತದೆ. ನವೆಂಬರ್ 3ರ ಭಾನುವಾರದವರಿಗೆ ದೇವಿ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಹಾಸನಾಂಬೆ ದೇಗುಲದ ಗರ್ಭಗುಡಿಯ ಬಾಗಿಲು ಈ ವರ್ಷ ಒಟ್ಟು 11 ದಿನ ತೆರೆದಿರುತ್ತದೆ. ಈ ಪೈಕಿ ಸಾರ್ವಜನಿಕರಿಗೆ ಒಟ್ಟು 9 ದಿನ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಕಳೆದ ವರ್ಷ ಅಂದರೆ 2023 ರಲ್ಲಿ 14 ದಿನ ಹಾಸನಾಂಬೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ, ಹಾಸನ ಜಿಲ್ಲಾಡಳಿತದ ಅಧಿಕಾರಿಗಳ ಸಮ್ಮುಖದಲ್ಲಿ ಮುಖ್ಯ ಅರ್ಚಕ ನಾಗರಾಜ್ ಅವರು ದೇವಾಲಯದ ಬಾಗಿಲು ತೆರೆಯಲಿದ್ದಾರೆ.
ಹಾಸನಾಂಬೆ ದರ್ಶನಕ್ಕೆ ಹರಿದು ಬರುತ್ತೆ ಭಕ್ತ ಸಾಗರ
ಕರ್ನಾಟಕದ ಭಕ್ತರು ಮಾತ್ರವಲ್ಲದೆ, ದೇಶದ ಮೂಲೆ ಮೂಲೆಗಳಿಂದ ದೇವಿಯ ದರ್ಶನಕ್ಕೆ ಭಕ್ತರು ಆಗಮಿಸುತ್ತಾರೆ. ವಿಶೇಷವಾಗಿ ಮಹಾರಾಷ್ಟ್ರ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೇವಿಯ ದರ್ಶನ ಪಡೆಯುತ್ತಾರೆ. ದೇವಾಲಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. 1500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗುತ್ತದೆ.
ಹಾಸನಾಂಬೆ ದೇವಿಯ ಮಹತ್ವ
ದೇವಾಲಯಕ್ಕೆ ಭೇಟಿ ನೀಡಿರುವ ಭಕ್ತರಿಗೆ ಹಾಸನಾಂಬೆ ಸುಖ, ಸಂತೋಷ, ನೆಮ್ಮದಿ ಹಾಗೂ ಸಮೃದ್ಧಿಯನ್ನು ನೀಡುತ್ತಾಳೆ ಎಂಬ ನಂಬಿಕೆ ಇದೆ. ಹಾಸನಾಂಬೆಯ ವಿಶೇಷವೆಂದರೆ ಕೊನೆಯ ದಿನ ಪೂಜೆಯನ್ನು ಸಲ್ಲಿಸಿದ ಬಳಿಕ ಗರ್ಭಗುಡಿಯ ಬಾಗಿಲನ್ನು ಮುಚ್ಚುವ ಸಂದರ್ಭದಲ್ಲಿ ದೇವಿಗೆ ತುಪ್ಪದ ದೀಪವನ್ನು ಹಚ್ಚಲಾಗುತ್ತದೆ. ದೇವಿಗೆ ಹೂವುಗಳನ್ನು ಅರ್ಪಿಸಲಾಗುತ್ತದೆ. ಮುಂದಿನ ವರ್ಷ ದೇವಾಲಯದ ಬಾಗಿಲು ತೆರೆದಾಗ ದೀಪ ಉರಿಯುತ್ತಲೇ ಇರುತ್ತದೆ. ಇದನ್ನು ನಂದಾದೀಪ ಅಂತಲೂ ಕರೆಯಲಾಗುತ್ತದೆ. ಹಿಂದಿನ ವರ್ಷ ಅರ್ಪಿಸಿದ್ದ ಹೂವುಗಳು ಬಾಡಿರುವುದಿಲ್ಲ. ದೇವಿಯ ಈ ಅದ್ಭುತ ಕಾರ್ಯದಿಂದಲೇ ಅಪಾರ ಭಕ್ತರನ್ನು ಹೊಂದಿದ್ದಾಳೆ.
ದೇವಾಲಯದ ಪ್ರಾಂಗಣದಲ್ಲಿ ಮುಖ್ಯವಾಗಿ ದರ್ಬಾರ್ ಗಣಪತಿ, ಹಾಸನಾಂಬ ಹಾಗೂ ಸಿದ್ದೇಶ್ವರ ದೇವಾಲಯಗಳಿವೆ. ಹಿಂದೆ ಹಾಸನಕ್ಕೆ ಸಿಂಹಾಸನಪುರಿ ಎಂಬ ಹೆಸರಿತ್ತು. ಅದು ಕಾಲಾನಂತರ ಹಾಸನ ಎಂದಾಗಿದೆ. ಸುಮಾರು 12ನೇ ಶತಮಾನದಲ್ಲಿ ಹೊಯ್ಸಳರ ಕಾಲದಲ್ಲಿ ಒಂದು ವಿಗ್ರಹ ಸಿಕ್ಕತ್ತು. ಅದರ ಮುಖ ಮಂದಸ್ಮಿತವನ್ನು ಹೊಂದಿದ್ದರಿಂದ ಹಸನ ಅಂದರೆ ಹಾಸನ ಎಂಬ ಹೆಸರು ಬಂದಿತು ಎಂದು ಹೇಳಲಾಗುತ್ತದೆ. ಹಾಸನ ಅಧಿದೇವತೆ ಹಾಸನಾಂಬೆ ದರ್ಶನ ಪಡೆಯಲು ಸಾವಿರಾರು ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ ಅವರ ಸಮ್ಮುಖದಲ್ಲಿ 2024ರ ನವೆಂಬರ್ 3ರ ಭಾನುವಾರ ಸಕಲ ರೀತಿಯ ಪೂಜೆಗಳ ನಂತರ ದೇವಾಲಯದ ಗರ್ಭಗುಡಿ ಬಾಗಿಲು ಬಂದ್ ಮಾಡಲಾಗುತ್ತದೆ. ಪ್ರಧಾನ ಅರ್ಚಕ ನಾಗರಾಜ್ ಅವರು ಹಾಸನಾಂಬೆಗೆ 11 ದಿನಗಳ ಪೂಜೆಯ ಬಳಿಕ ದೇವಾಲಯಕ್ಕೆ ಬೀಗ ಹಾಕಲಿದ್ದಾರೆ.