Hasanamba Darshan: ಹಾಸನಾಂಬ ಜಾತ್ರೆಯಲ್ಲಿ ಈ ಬಾರಿ ಬಗೆಬಗೆಯ ಕಾರ್ಯಕ್ರಮ, ಪ್ಯಾರಾ ಗ್ಲೈಡಿಂಗ್, ವಿಶೇಷ ದೀಪಾಲಂಕಾರ, ಫಲಪುಷ್ಪ ಪ್ರದರ್ಶನ
ಕನ್ನಡ ಸುದ್ದಿ  /  ಕರ್ನಾಟಕ  /  Hasanamba Darshan: ಹಾಸನಾಂಬ ಜಾತ್ರೆಯಲ್ಲಿ ಈ ಬಾರಿ ಬಗೆಬಗೆಯ ಕಾರ್ಯಕ್ರಮ, ಪ್ಯಾರಾ ಗ್ಲೈಡಿಂಗ್, ವಿಶೇಷ ದೀಪಾಲಂಕಾರ, ಫಲಪುಷ್ಪ ಪ್ರದರ್ಶನ

Hasanamba Darshan: ಹಾಸನಾಂಬ ಜಾತ್ರೆಯಲ್ಲಿ ಈ ಬಾರಿ ಬಗೆಬಗೆಯ ಕಾರ್ಯಕ್ರಮ, ಪ್ಯಾರಾ ಗ್ಲೈಡಿಂಗ್, ವಿಶೇಷ ದೀಪಾಲಂಕಾರ, ಫಲಪುಷ್ಪ ಪ್ರದರ್ಶನ

ವರ್ಷಕ್ಕೆ ಒಂದೇ ಬಾರಿ ದರ್ಶನ ನೀಡುವ ಹಾಸನದ ಹಾಸನಾಂಬ ದೇಗುಲ ದರ್ಶನದ ಹನ್ನೊಂದು ದಿನಗಳ ಚಟುವಟಿಕೆಗಳು ಏನೇನು ಇರಲಿವೆ. ಇಲ್ಲಿದೆ ವಿವರ.

ಹಾಸನದ ಹಾಸನಾಂಬ ದೇಗುಲ ದರ್ಶನಕ್ಕೆ ಬಹುತೇಕ ಸಿದ್ದತೆಗಳು ಪೂರ್ಣಗೊಂಡಿವೆ.
ಹಾಸನದ ಹಾಸನಾಂಬ ದೇಗುಲ ದರ್ಶನಕ್ಕೆ ಬಹುತೇಕ ಸಿದ್ದತೆಗಳು ಪೂರ್ಣಗೊಂಡಿವೆ.

ಹಾಸನ: ವರ್ಷದಲ್ಲಿ ಎರಡೇ ವಾರ ದರ್ಶನ ನೀಡುವ ಹಾಸನದ ಹಾಸನಾಂಬ ದೇವಸ್ಥಾನದ ಈ ವರ್ಷದ ಧಾರ್ಮಿಕ ಚಟುವಟಿಕೆಗಳ ಜತೆಗೆ ಜಾತ್ರಾ ಮಹೋತ್ಸವದಲ್ಲಿ ವಿಭಿನ್ನ ಚಟುವಟಿಕೆಗಳು ಇರಲಿವೆ. ಇದಕ್ಕಾಗಿ ಹಾಸನ ಜಿಲ್ಲಾಡಳಿತ ಹಾಗೂ ದೇವಸ್ಥಾನ ಸಮಿತಿ ಸಿದ್ದತೆಗಳನ್ನು ಮಾಡಿಕೊಂಡಿದೆ. ಹಾಸನಕ್ಕೆ ಬರುವ ಭಕ್ತರಿಗೆ ಸುಸೂತ್ರ ದರ್ಶನದ ಜತೆಗೆ ಮನರಂಜನೆಗೂ ಯೋಜನೆ ಹಾಕಿಕೊಳ್ಳಲಾಗಿದೆ. ಹನ್ನೊಂದು ದಿನಗಳ ಕಾಲ ಪೂಜೆಗಳು ನಡೆದರೂ ಒಂಬತ್ತು ದಿನಗಳ ಕಾಲ ಮಾತ್ರ ದರ್ಶನ ಇರಲಿದೆ. ಈಗಾಗಲೇ ಹಾಸನಾಂಬೆ ದೇವಿ ಹಾಗೂ ಸಿದ್ದೇಶ್ವರಸ್ವಾಮಿ ಜಾತ್ರಾಮಹೋತ್ಸವಕ್ಕಾಗಿ ಹಾಸನ ನಗರ ಬೆಳಕುಗಳಿಂದ ಜಗಮಗಿಸುತ್ತಿದ್ದು, ಮೈಸೂರು ದಸರಾ ಮಾದರಿಯ ದೀಪಾಲಂಕಾರ ಮಾಡಲಾಗಿದೆ.

ದೇಗುಲ ದರ್ಶನಕ್ಕಾಗಿ ವರ್ಷದಿಂದ ವರ್ಷ ಭಕ್ತರ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಈ ಬಾರಿಯೂ 20ಲಕ್ಷಕ್ಕೂ ಅಧಿಕ ಭಕ್ತರು ಬರಬಹುದು ಎನ್ನುವ ಅಂದಾಜಿದೆ. ಹಾಸನಾಂಬೆ ದೇವಿ ಹಾಗೂ ಸಿದ್ದೇಶ್ವರಸ್ವಾಮಿ ಜಾತ್ರಾಮಹೋತ್ಸವದ ಸೊಬಗನ್ನು ಹೆಚ್ಚಿಸುವ ಪ್ರಯತ್ನಗಳು ಆಗಿವೆ.

ಈ ಬಾರಿಯೂ ದಸರಾ ಮಾದರಿಯಲ್ಲಿಯೇ ದೀಪಾಲಂಕಾರವನ್ನು ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ವ್ಯವಸ್ಥೆ ಮಾಡಿದೆ. ಬಗೆಬಗೆಯ ದೀಪಗಳಿಂದ ರಸ್ತೆ, ವೃತ್ತಗಳು, ದೇಗುಲದ ಆವರಣ ಮಿಂಚುತ್ತಿದೆ. ದಸರಾ ದೀಪಾಲಂಕಾರದ ವೀಕ್ಷಣೆಗೆ ಡಬಲ್ ಡೆಕ್ಕರ್ ಬಸ್ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಸಂಜೆ ನಂತರ ವಿಶೇಷ ದೀಪಾಲಂಕಾರವನ್ನು ಕಣ್ತುಂಬಿಕೊಳ್ಳಬಹುದು.

ಬರುವ ಭಕ್ತರು ದರ್ಶನದ ನಂತರ ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ವಿಹಾರದಲ್ಲಿ ಭಾಗಿಯಾಗಲು ಹಾಟ್ ಏರ್ ಬಲೂನ್ ಸಂಚಾರ, ಪ್ಯಾರಾ ಗ್ಲೈಡಿಂಗ್ ಸಾಹಸ ಚಟುವಟಿಕೆಗಳು ಇರಲಿವೆ. ದೇಗುಲದ ಆವರಣದಲ್ಲಿ ಕರ್ನಾಟಕ ರಾಜ್ಯಮಟ್ಟದ ಸಮೂಹ ನೃತ್ಯ ಸ್ಪರ್ಧೆ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳೂ ಹನ್ನೊಂದು ದಿನವೂ ಇರಲಿದೆ.

ಹಾಸನದ ಪ್ರಮುಖ ಉದ್ಯಾನದಲ್ಲಿ ಫಲ ಪುಷ್ಪ ಪ್ರದರ್ಶನವೂ ಇರಲಿದೆ. ಅಲ್ಲಿ ಸಂವಿಧಾನದ ಸಂದೇಶ ಸಾರುವುದು ಸೇರಿದಂತೆ ಹಲವು ಬಗೆಯ ಪುಷ್ಪ ಅಲಂಕಾರಗಳು. ಹಣ್ಣಿನ ಅಲಂಕಾರಗಳು ಗಮನ ಸೆಳೆಯಲಿವೆ.

ಕಳೆದ ಬಾರಿ ವಿದ್ಯುತ್‌ ಶಾಕ್‌ನಿಂದಾಗಿ ಭಕ್ತರು ಭಾರೀ ತೊಂದರೆ ಅನುಭವಿಸಿದ್ದರು. ಈ ಬಾರಿ ಇಂತಹ ಅವಘಡಗಳು ಸಂಭವಿಸಿದಂತೆ, ಭಕ್ತರ ನೂಕುನುಗ್ಗಲು ಉಂಟಾಗದಂತೆ ಎಚ್ಚರಿಕೆಯನ್ನು ತೆಗೆದುಕೊಳ್ಳಲಾಗಿದೆ.ದೇಗುಲದ ಆವರಣದಲ್ಲಿ ಭಕ್ತರ ದರ್ಶನಕ್ಕಾಗಿ ವ್ಯವಸ್ಥಿತ ಸರತಿ ಸಾಲುಗಳ ಬ್ಯಾರಿಕೇಡ್, ಮಳೆ, ಬಿಸಿಲಿನಿಂದ ರಕ್ಷಣೆಗಾಗಿ ಜರ್ಮನ್ ಟೆಂಟ್ ದರ್ಶನದ ಮಾರ್ಗದಲ್ಲಿ ಹಾಕಲಾಗಿದೆ.

ಗುರುವಾರ ಮಧ್ಯಾಹ್ನ 12 ಗಂಟೆಗೆ ದೇಗುಲದ ಗರ್ಭಗುಡಿ ಬಾಗಿಲು ತೆರೆಯಲಿದೆ. ಬಾಗಿಲು ತೆರೆದ ನಂತರ ದೇಗುಲ ಶುದ್ದಿ ಮಾಡಲಾಗುತ್ತದೆ. ಶುಕ್ರವಾರ ಬೆಳಿಗಿನ ಜಾವದಿಂದಲೇ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ನೈವೇದ್ಯದ ಸಂದರ್ಭ ಹೊರತು ಪಡಿಸಿ ದಿನದ 24 ಗಂಟೆಯೂ ದರ್ಶನ ಇರಲಿದೆ. ದೇವಿಗೆ ನಿತ್ಯ ನಾಲ್ಕು ಬಾರಿ ಬೇರೆ ಬೇರೆ ರೀತಿಯ ವಿಶಿಷ್ಟ ಅಲಂಕಾರ, ವಸ್ತ್ರಧಾರಣೆ ಮಾಡುವುದು ಈ ವರ್ಷದ ಪಟ್ಟಿಯಲ್ಲಿ ಸೇರಿದೆ.

ಆನ್‌ ಲೈನ್‌ ಬುಕ್ಕಿಂಗ್‌ ವ್ಯವಸ್ಥೆ, ಹಾಸನಾಂಬ ಆಪ್‌ ಕೂಡ ರೂಪಿಸಲಾಗಿದೆ. ನೇರ ದರ್ಶನ ಪಡೆಯ ಬಯಸುವ ಭಕ್ತರಿಗೆ 1000 ರೂ. ಟಿಕೆಟ್ 300 ರೂ. ಟಿಕೆಟ್ ಕೂಡ ಇರಲಿದೆ. ಇದಲ್ಲದೇ ದೇಗುಲಕ್ಕೆ ಬರುವ ವಿಶೇಷ ಗಣ್ಯರ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆಯಿದೆ ಎನ್ನುವುದು ಹಾಸನದ ಜಿಲ್ಲಾಧಿಕಾರಿ ಸಿ.ಸತ್ಯಭಾಮ ವಿವರಣೆ.

Whats_app_banner