Hasanamba Darshan: ಹಾಸನಾಂಬೆ ದೇಗುಲದಲ್ಲಿ ಅವ್ಯವಸ್ಥೆ, ಜಿಲ್ಲಾಡಳಿತ ವಿರುದ್ದ ರೋಷಾವೇಶ, ವಿಐಪಿ ಪಾಸ್ ರದ್ದು, ಭಕ್ತರಿಗೆ ಲಾಠಿ ಏಟು
Oct 31, 2024 06:53 PM IST
ಹಾಸನದಲ್ಲಿ ಹಾಸನಾಂಬ ದೇವಿ ದರ್ಶನಕ್ಕೆ ಗುರುವಾರ ರಸ್ತೆಯಲ್ಲಿ ಸರದಿ ಸಾಲಿನಲ್ಲಿ ನಿಂತಿದ್ದ ಭಕ್ತರು.
- ಹಾಸನದಲ್ಲಿ ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬ ದೇಗುಲದ ಭಕ್ತರಿಗೆ ಸರಿಯಾಗಿ ದರ್ಶನವಾಗುತ್ತಿಲ್ಲ. ವಿಐಪಿ ಹೆಸರಲ್ಲಿ ಕಿರಿಕಿರಿ ಆಗುತ್ತಿದೆ ಎನ್ನುವ ಭಾರೀ ಆಕ್ರೋಶ ಕೇಳಿ ಬಂದಿದ್ದು, ಅಲ್ಲಲ್ಲಿ ಗಲಾಟೆಯೂ ಆಗಿದೆ. ಇದರಿಂದ ಪಾಸ್ ರದ್ದು ಮಾಡಿ ಬರೀ ಧರ್ಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಹಾಸನ: ವರ್ಷಕ್ಕೆ ಒಂದೇ ಬಾರಿ ದರ್ಶನ ನೀಡುವ ಹಾಸನದ ಹಾಸನಾಂಬ ದೇಗುಲಕ್ಕೆ ಈ ಬಾರಿ ಮಿತಿ ಮೀರಿ ಭಕ್ತರು ಬಂದಿದ್ದರಿಂದ ಅವರನ್ನು ನಿಯಂತ್ರಿಸಲು ಸಿಬ್ಬಂದಿ ಒಂದು ಕಡೆ ಪರದಾಡುತ್ತಿದ್ದರೆ, ಮತ್ತೊಂದು ಕಡೆ ವಿಐಪಿ ಪಾಸ್ ನೆಪದಲ್ಲಿ ಸಾಮಾನ್ಯ ಭಕ್ತರ ದರ್ಶನಕ್ಕೆ ಕಿರಿಕಿರಿ ಉಂಟು ಮಾಡಲಾಗುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಈ ಕಾರಣದಿಂದಾಗಿ ಹಾಸನ ಜಿಲ್ಲಾಡಳಿತ ಹಾಗೂ ಪೊಲೀಸರ ವರ್ತನೆ ವಿರುದ್ದ ಭಕ್ತರು ಸಿಡಿದೆದಿದ್ದಾರೆ. ಆಕ್ರೋಶ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನದಿಂದಲೇ ಎಲ್ಲಾ ರೀತಿಯ ಪಾಸ್‌ಗಳನ್ನು ರದ್ದುಪಡಿಸಲಾಗಿದ್ದು. ಧರ್ಮ ದರ್ಶನಕ್ಕೆ ಮಾತ್ರ ಅವಕಾಶ ಮಾಡಿಕೊಡುವಂತೆ ಹಾಸನ ಜಿಲ್ಲಾಡಳಿತ ಆದೇಶ ನೀಡಿದೆ. ಅವ್ಯವಸ್ಥೆ ವಿರುದ್ದ ಸಾಮಾಜಿಕ ಮಾಧ್ಯಮಗಳಲ್ಲೂ ಭಾರೀ ಟೀಕೆಗಳು ವ್ಯಕ್ತವಾಗಿವೆ. ಇನ್ನು ಮೂರು ದಿನ ದರ್ಶನಕ್ಕೆ ಅವಕಾಶವಿರುವುದರಿಂದ ಇನ್ನಷ್ಟು ಭಕ್ತರ ಸಂಖ್ಯೆ ಹೆಚ್ಚುವ ನಿರೀಕ್ಷೆಯಿದೆ.
ಇದರ ನಡುವೆ ಅವ್ಯವಸ್ಥೆ ವಿರುದ್ದ ಆಕ್ರೋಶ ಹೊರ ಹಾಕಿ ಕೆಲವು ಭಕ್ತರು ದೇಗುಲ ದರ್ಶನಕ್ಕೆ ನುಗ್ಗಲು ಪ್ರಯತ್ನಿಸಿದಾಗ ನೂಕು ನುಗ್ಗಲು ಉಂಟಾಗಿದ್ದು. ಆಗ ಪೊಲೀಸರು ಲಾಠಿ ಬೀಸಿ ಓಡಿಸಿದ್ದಾರೆ. ಕೆಲವು ಭಕ್ತರು ಏಟು ತಿಂದು ಅಲ್ಲಿಂದ ಓಡಿದ್ದು ನಡೆದಿದೆ.
ಒಂದು ವಾರದಿಂದ ಹಾಸನದಲ್ಲಿ ಹಾಸನಾಂಬ ದೇಗುಲ ದರ್ಶನ ನಡೆದಿದೆ. ಇನ್ನು ಮೂರು ದಿನ ಮಾತ್ರ ಬಾಕಿ ಇದ್ದುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಈ ವೇಳೆ ದರ್ಶನ ವಿಳಂಬವಾಗಿದ್ದರಿಂದ ಆಕ್ರೋಶ ಹೊರ ಹಾಕಿದರು. ಎರಡು ಮೂರು ದಿನದಿಂದಲೂ ಇದು ನಡೆದಿದೆ.
ಅವ್ಯವಸ್ಥೆ ಆಗರ
ಎರಡು ದಿನದ ಹಿಂದೆ ಶಿಷ್ಟಾಚಾರ ಪಾಲನೆ ವಿಚಾರವಾಗಿ ಜಿಲ್ಲಾಡಳಿತ ಹಾಗೂ ಪೊಲೀಸರ ನಡುವೆ ಬಹಿರಂಗ ಸಂಘರ್ಷವೇ ಏರ್ಪಟ್ಟಿತ್ತು. ಡಿಸಿ ಸತ್ಯಭಾಮ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರೆ, ಅವ್ಯವಸ್ಥೆ ವಿರುದ್ದ ಪೊಲೀಸ್ ಅಧಿಕಾರಿಗಳು ಕಿಡಿ ಕಾರಿದ್ದು ನಡೆದಿತ್ತು.
ಗುರುವಾರವೂ ಇದೇ ಸನ್ನಿವೇಶ ಎದುರಾಯಿತು. ಭಕ್ತರ ಸಂಖ್ಯೆ ಅಧಿಕವಾಗಿದ್ದರೂ ಸಾಮಾನ್ಯ ದರ್ಶನಕ್ಕಿಂತ ಹಣ ಕೊಟ್ಟು ದರ್ಶನಕ್ಕೆ ಹೋದವರು ಹಾಗೂ ವಿಐಪಿ ಪಾಸ್ ಇದ್ದವರಿಗೆ ಆದ್ಯತೆ ನೀಡಿದ್ದರಿಂದ ಆಕ್ರೋಶ ವ್ಯಕ್ತವಾಯಿತು. ಗಲಾಟೆಯೂ ನಡೆದು ಪೊಲೀಸರು ನಿಯಂತ್ರಿಸಲು ಹರಸಾಹಸ ಪಟ್ಟು ಲಾಠಿ ಬೀಸಬೇಕಾಯಿತು, ಈ ವೇಳೆ ಅವ್ಯವಸ್ಥೆಯಿಂದ ನೌಕರರು ಕೂಡ ಆಕ್ರೋಶ ಹೊರ ಹಾಕಿದರು.
ಅವ್ಯವಸ್ಥೆ ಹೆಚ್ಚಿದ್ದರಿಂದ ವಿಐಪಿ ಪಾಸ್ ರದ್ದು ಮಾಡಿ ಬರೀ ಧರ್ಮ ದರ್ಶನಕ್ಕೆ ಅವಕಾಶ ಮಾಡಿಕೊಡುವುದಾಗಿ ಹಾಸನ ಡಿಸಿ ಸಿ.ಸತ್ಯಭಾಮ ಪ್ರಕಟಿಸಿದ್ದಾರೆ.
ಸಮನ್ವಯ ಕೊರತೆ, ಎಡವಿದ ಜಿಲ್ಲಾಡಳಿತ
ಹಾಸನದಲ್ಲಿ ಹೆಚ್ಚು ಭಕ್ತರು ಬರುವ ಸೂಚನೆಯಿದ್ದರೂ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಮನ್ವಯತೆಯಿಂದ ಕೆಲಸ ಮಾಡದೇ ಇರುವುದು ಬಹಿರಂಗಗೊಂಡಿತು. ಎರಡೂ ಇಲಾಖೆ ಅಧಿಕಾರಿಗಳೇ ಬೀದಿಯಲ್ಲಿ ನಿಂತು ಕಚ್ಚಾಡಿದ್ದರಿಂದ ಭಕ್ತರು ಬೇಸರಗೊಂಡರು.
ಕಳೆದ ವರ್ಷ ವಿದ್ಯುತ್ ಶಾಕ್ ನಡೆದು ಅವ್ಯವಸ್ಥೆ ಉಂಟಾಗಿತ್ತು. ಈ ಬಾರಿ ಸಿದ್ದತೆ ಮಾಡಿಕೊಂಡಿರುವುದಾಗಿ ಜಿಲ್ಲಾಡಳಿತ ಹೇಳಿದ್ದರೂ ಇಲಾಖೆಗಳ ನಡುವೆ ಸಮನ್ವಯವಿಲ್ಲದೇ ಅವ್ಯವಸ್ಥೆ ಉಂಟಾಗಿದೆ ಎಂದು ದೂರಿದರು.
ಹಾಸನಾಂಬೆ ದರ್ಶನಕ್ಕೆ ಸುಲಭ ಪರಿಹಾರ...
ಹಾಸನದ ಜನರು ತಾಯಿ ಹಾಸನಾಂಬೆಯನ್ನು ಸುಲಭವಾಗಿ ದರ್ಶನ ಮಾಡಬೇಕೆ....? ಎನ್ನುವ ವಿಷಯ ಟ್ರೋಲ್ ಕೂಡ ಆಯಿತು.
ಒಂದು ಸರಳ ಮಾರ್ಗ ಹೇಳ್ತೀನಿ ಕೇಳಿ. ಬೆಳಗ್ಗೆ ತುಮಕೂರು ಅಥವಾ ಮಧುಗಿರಿಗೆ ಬಸ್ ಹತ್ತಿ ಅಲ್ಲಿ ನಮ್ಮ ಮಿನಿಸ್ಟರ್ ರಾಜಣ್ಣನವರ ಮನೆಗೆ ಹೋಗಿ ತಿಂಡಿ ಮಾಡಿಕೊಂಡು ಪಾಸ್ ತಗೊಂಡು ನಿಮಗಾಗಿಯೇ ಕಾಯುತ್ತಿರುವ ಎಸಿ ಬಸ್ ಹತ್ತಿ ಹಾಸನಕ್ಕೆ ಬನ್ನಿ .
ಇಲ್ಲಿನ ಐಬಿಗೆ ಬಂದು ಮಿನಿಸ್ಟರ್ ಕಡೆಯವರು ಪ್ರೋಟೋಕಾಲ್ ಎಂದು ಹೇಳಿ. ಹತ್ತು ನಿಮಿಷದಲ್ಲಿ ದೇವಸ್ಥಾನದ ತಾಯಿ ಮುಂದೆ ಕರೆತಂದು ದರ್ಶನ ಮಾಡಿಸಿ ಮತ್ತೆ ಅದೇ ಕಾರಲ್ಲಿ ಐಬಿ ಹತ್ರ ಬಿಡುತ್ತಾರೆ....ಈ ಅವಕಾಶ ಇನ್ನು ಮೂರು ದಿನ ಮಾತ್ರ ಎಂದು ಲೇಖಕ ಹೆತ್ತೂರು ನಾಗರಾಜ್ ಫೇಸ್‌ಬುಕ್ ಮೂಲಕ ಅಸಮಾಧಾನ ಹೊರ ಹಾಕಿದರು.