logo
ಕನ್ನಡ ಸುದ್ದಿ  /  ಕರ್ನಾಟಕ  /  Dk Shivakumar: ಊಟ, ನಿದ್ದೆಯಿಲ್ಲದೇ ಪಕ್ಷ ಸಂಘಟನೆ ಮಾಡಿದ್ದಕ್ಕೆ ಪ್ರತಿಫಲ ಸಿಗಲಿದೆ: ಸಿಎಂ ಚರ್ಚೆಯನ್ನು ಮತ್ತಷ್ಟು ರೋಚಕಗೊಳಿಸಿದ ಡಿಕೆಶಿ

DK Shivakumar: ಊಟ, ನಿದ್ದೆಯಿಲ್ಲದೇ ಪಕ್ಷ ಸಂಘಟನೆ ಮಾಡಿದ್ದಕ್ಕೆ ಪ್ರತಿಫಲ ಸಿಗಲಿದೆ: ಸಿಎಂ ಚರ್ಚೆಯನ್ನು ಮತ್ತಷ್ಟು ರೋಚಕಗೊಳಿಸಿದ ಡಿಕೆಶಿ

Nikhil Kulkarni HT Kannada

Apr 06, 2023 02:12 PM IST

google News

ಡಿಕೆ ಶಿವಕುಮಾರ್

    • ಮೇ ತಿಂಗಳಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ, ಯಾರು ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂಬುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಪಕ್ಷನಿಷ್ಠೆ, ಕಠಿಣ ಪರಿಶ್ರಮಕ್ಕೆ ಹೈಕಮಾಂಡ್‌ ಪ್ರತಿಫಲ ನೀಡುತ್ತದೆ ಎಂಬ ನಂಬಿಕೆ ನನ್ನದು ಡಿಕೆಶಿ ಹೇಳಿದ್ದಾರೆ.
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್ (ANI)

ಬೆಂಗಳೂರು ಮೇ ತಿಂಗಳಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ, ಯಾರು ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂಬುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಎನ್‌ಡಿಟಿವಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್‌, ಪಕ್ಷನಿಷ್ಠೆ, ಕಠಿಣ ಪರಿಶ್ರಮಕ್ಕೆ ಹೈಕಮಾಂಡ್‌ ಪ್ರತಿಫಲ ನೀಡುತ್ತದೆ ಎಂಬ ನಂಬಿಕೆ ಇದೆ ಎಂದು ಮಾರ್ಮಿಕವಾಗಿ ಹೇಳಿದ್ಧಾರೆ. ಅಲ್ಲದೇ ಮುಖ್ಯಮಂತ್ರಿ ಹುದ್ದೆಗಾಗಿ ಪಕ್ಷದ ನಾಯಕರ ನಡುವೆ ಪೈಪೋಟಿ ಇದೆ ಎಂಬುದು ಕೇವಲ ಊಹಾಪೋಹ ಎಂದೂ ಡಿಕೆಶಿ ಸ್ಪಷ್ಟಪಡಿಸಿದ್ದಾರೆ.

"ಪಕ್ಷದ ಉನ್ನತ ನಾಯಕತ್ವವು ನಿಷ್ಠೆ ಮತ್ತು ಕಠಿಣ ಪರಿಶ್ರಮಕ್ಕೆ ಪ್ರತಿಫಲ ನೀಡುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಪಕ್ಷಕ್ಕೆ ಎಂದಿಗೂ ದ್ರೋಹ ಮಾಡಿಲ್ಲ. ಕಷ್ಟದ ಸಮಯದಲ್ಲಿ ಪಕ್ಷದೊಂದಿಗೆ ಗಟ್ಟಿಯಾಗಿ ನಿಂತಿದ್ದು, ಇದಕ್ಕೆ ತಕ್ಕ ಪುರಸ್ಕಾರ ನೀಡಲು ಹೈಕಮಾಂಡ್ ಮನಸ್ಸು ಮಾಡುತ್ತದೆ ಎಂಬ ಭರವಸೆ ಇದೆ.." ಎಂದು ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ನೀವು ಮುಖ್ಯಮಂತ್ರಿ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಚುಟುಕಾಗಿ ಉತ್ತರಿಸಿದ ಡಿಕೆಶಿ, ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದು ತಮ್ಮ ಮುಂದಿರುವ ಏಕೈಕ ಗುರಿ ಎಂದು ಹೇಳಿದರು. ಪಕ್ಷ ದುರ್ಬಲ ಸ್ಥಿತಿಯಲ್ಲಿರುವಾಗ ನಾನು ಅದರ ನಾಯಕತ್ವವಹಿಸಿಕೊಂಡಿದ್ದೇನೆ. ಪ್ರಸ್ತುತ ರಾಜ್ಯದಲ್ಲಿ ಪಕ್ಷ ಸಂಘಟನೆ ಅತ್ಯಂತ ಪ್ರಬಲವಾಗಿದ್ದು, ಹೈಕಮಾಂಡ್‌ ಈ ಎಲ್ಲ ಸಂಗತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಿದೆ ಎಂದು ಕೆಪಿಸಿಸಿ ಅಧ್ಯಕ್ಷರು ವಿಶ್ವಾಸ ವ್ಯಕ್ತಪಡಿಸಿದರು.

"ರಾಜ್ಯದಲ್ಲಿ ಪಕ್ಷವನ್ನು ಪುನರುಜ್ಜೀವನಗೊಳಿಸಲು ನಾನು ಅವಿರತವಾಗಿ ಶ್ರಮಿಸಿದ್ದೇನೆ.ನಿದ್ದೆ, ಊಟವಿಲ್ಲದೇ ರಾಜ್ಯದ ಮೂಲೆ ಮೂಲೆಗೆ ಸಂಚಾರ ಮಾಡಿದ್ದೇನೆ. ಪಕ್ಷದ ಎಲ್ಲಾ ನಾಯಕರು ಮತ್ತು ಖಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದೇನೆ. ಬಿಜೆಪಿ ವಿರುದ್ಧ ಪ್ರಬಲ ಸಂಘಟನೆ ಕಟ್ಟುವಲ್ಲಿ ನಾವು ಯಶಸ್ವಿಯಾಗಿದ್ದೇವೆ.." ಎಂದು ಡಿಕೆ ಶಿವಕುಮಾರ್‌ ಉತ್ತರಿಸಿದರು.

ಮುಖ್ಯಮಂತ್ರಿ ಪಟ್ಟಕ್ಕಾಗಿ ನನ್ನ ಮತ್ತು ಸಿದ್ದರಾಮಯ್ಯ ನಡುವೆ ಯಾವುದೇ ಪೈಪೋಟಿ ಇಲ್ಲ. ಇಬ್ಬರೂ ಪಕ್ಷ ಸಂಘಟನೆಗಾಗಿ ಕೆಲಸ ಮಾಡುತ್ತಿದ್ದು, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬ ಉದ್ದೇಶದಿಂದ ಅವಿರತವಾಗಿ ಶ್ರಮಿಸುತ್ತಿದ್ದೇವೆ. ಆದರೆ ಬಿಜೆಪಿ ನಮ್ಮ ನಡುವೆ ಭಿನ್ನಮತವಿದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಡಿಕೆ ಶಿವಕುಮಾರ್‌ ಕಿಡಿಕಾರಿದರು.

ಮಾಧ್ಯಮದ ಒಂದು ವಿಭಾಗ ಕೂಡ ಸುಳ್ಳು ವದಂತಿಗಳನ್ನು ಹರಡುತ್ತಿದ್ದು, ಇದು ನಮ್ಮ ಒಗ್ಗಟ್ಟನ್ನು ಮುರಿಯುವ ಕುತಂತ್ರವಾಗಿದೆ. ಬಿಜೆಪಿಯನ್ನು ಸೋಲಿಸಿ ಕರ್ನಾಟಕದ ಘನತೆಯನ್ನು ಮರುಸ್ಥಾಪಿಸುವ ನಮ್ಮ ಗುರಿಯನ್ನು ತಲುಪುವುದನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ ಎಂದು ಡಿಕೆ ಶಿವಕುಮಾರ್‌ ಗುಡುಗಿದರು.

ಇನ್ನು ಜೆಡಿಎಸ್‌ ಜೊತೆಗೆ ಹೊಂದಾಣಿಕೆ ಸಾಅಧ್ಯತೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್‌, ಮೈತ್ರಿಯ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಕಾಂಗ್ರೆಸ್‌ 140 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ನಮಗೆ ಯಾರ ಮೈತ್ರಿಯ ಅವಶ್ಯಕತೆಯೂ ಇಲ್ಲ ಎಂದು ಅವರು ಖಚಿತವಾಗಿ ನುಡಿದರು.

ಜನಾದೇಶವಿಲ್ಲದೆ ಬಿಜೆಪಿ ಜೊತೆ ಕೈಜೋಡಿಸಿ ಜೆಡಿಎಸ್ ಎರಡು ಬಾರಿ ರಾಜ್ಯದ ಜನರಿಗೆ ದ್ರೋಹ ಬಗೆದಿದೆ. ಕೊಟ್ಟ ಭರವಸೆಗಳನ್ನು ಈಡೇರಿಸುವಲ್ಲಿ ಹೆಚ್‌ಡಿ ಕುಮಾರಸ್ವಾಮಿ ವಿಫಲವಾಗಿದ್ದು, ಅವರ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಯಾವುದೇ ಸಾಧ್ಯತೆ ಇಲ್ಲ ಎಂದು ಡಿಕೆ ಶಿವಕುಮಾರ್‌ ಹರಿಹಾಯ್ದರು.

ಇನ್ನು ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಕುರಿತು ಕೇಳಲಾದ ಪ್ರಶ್ನೆಗೆ, ಮುಖ್ಯಮಂತ್ರಿ ಸ್ಥಾನದಿಂದ ತಮ್ಮನ್ನು ಕೆಳಗಿಳಿಸಿದ ರೀತಿಯಿಂದ ಬಿಎಸ್‌ವೈ ತುಂಬ ನೊಂದಿದ್ದಾರೆ ಎಂದು ಹೇಳಿದರು. ಬಿಜೆಪಿಯು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತಿದೆ. ಈ ಮೂಲಕ ಬಿಎಸ್‌ವೈ ಅವರನ್ನು ಮೂಲೆಗೆ ತಳ್ಳುವ ವ್ಯವಸ್ಥಿತ ತಂತ್ರ ಹೆಣೆಯಲಾಗುತ್ತಿದೆ ಎಂದು ಡಿಕೆ ಶಿವಕುಮಾರ್‌ ಇದೇ ವೇಳೆ ಅಭಿಪ್ರಾಯಪಟ್ಟರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ