logo
ಕನ್ನಡ ಸುದ್ದಿ  /  ಕರ್ನಾಟಕ  /  ಸಚಿವ ಜಮೀರ್‌ ನಿಂದಿಸಿದ ಪುನೀತ್‌ ಕೆರೆಹಳ್ಳಿ ಬಂಧನ; ಅತ್ತೆ ಮಗನ ಕಾಟಕ್ಕೆ ಬೇಸತ್ತು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ!

ಸಚಿವ ಜಮೀರ್‌ ನಿಂದಿಸಿದ ಪುನೀತ್‌ ಕೆರೆಹಳ್ಳಿ ಬಂಧನ; ಅತ್ತೆ ಮಗನ ಕಾಟಕ್ಕೆ ಬೇಸತ್ತು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ!

Prasanna Kumar P N HT Kannada

Nov 14, 2024 08:08 AM IST

google News

ಸಚಿವ ಜಮೀರ್‌ ಅಹ್ಮದ್ ಖಾನ್ ಅವರನ್ನು ನಿಂದಿಸಿದ ಹಿಂದೂ ಕಾರ್ಯಕರ್ತ ಪುನೀತ್‌ ಕೆರೆಹಳ್ಳಿ ಬಂಧನ.

    • ಸಚಿವ ಜಮೀರ್‌ ನಿಂದನೆ, ಪುನೀತ್‌ ಕೆರೆಹಳ್ಳಿ ಬಂಧನವಾಗಿದೆ. ಮತ್ತೊಂದು ಪ್ರಕರಣದಲ್ಲಿ ಅತ್ತೆ ಮಗನ ಕಾಟಕ್ಕೆ ಬೇಸತ್ತು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗೆಯೇ ಮತ್ತೊಂದು ಪ್ರಕರಣದಲ್ಲಿ ಅತ್ಯಾಚಾರದ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. (ವರದಿ-ಎಚ್‌.ಮಾರುತಿ)
ಸಚಿವ ಜಮೀರ್‌ ಅಹ್ಮದ್ ಖಾನ್ ಅವರನ್ನು ನಿಂದಿಸಿದ ಹಿಂದೂ ಕಾರ್ಯಕರ್ತ ಪುನೀತ್‌ ಕೆರೆಹಳ್ಳಿ ಬಂಧನ.
ಸಚಿವ ಜಮೀರ್‌ ಅಹ್ಮದ್ ಖಾನ್ ಅವರನ್ನು ನಿಂದಿಸಿದ ಹಿಂದೂ ಕಾರ್ಯಕರ್ತ ಪುನೀತ್‌ ಕೆರೆಹಳ್ಳಿ ಬಂಧನ.

ಬೆಂಗಳೂರು: ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್‌ ಅಹಮದ್‌ ಖಾನ್‌ (Zameer Ahmed Khan) ವಿರುದ್ಧ ಅಸಭ್ಯ ಪದ ಬಳಕೆ ಆಡಿ ಧರ್ಮ ಹಾಗೂ ಜಾತಿ ನಿಂದನೆ ಆಡಿದ್ದ ಆರೋಪದಡಿಯಲ್ಲಿ ರಾಷ್ಟ್ರ ರಕ್ಷಣಾ ಪಡೆ ಮುಖಂಡ ಪುನೀತ್‌ ಕೆರೆಹಳ್ಳಿ (Puneeth kerehalli) ವಿರುದ್ಧ ಚಾಮರಾಜಪೇಟೆ ಠಾಣೆಯಲ್ಲಿ ಎಫ್​ಐಆರ್‌ ದಾಖಲಾಗಿದೆ. ಸಚಿವರ ಆಪ್ತ ಕಾರ್ಯದರ್ಶಿ ನೀಡಿದ್ದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಪ್ರಚಾರದ ಸಂದರ್ಭದಲ್ಲಿ ಜಮೀರ್‌ ಅವರು ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಕರಿಯ ಎಂದು ನಿಂದಿಸಿದ್ದರು. ಇದಕ್ಕೆ ಪ್ರತಿಯಾಗಿ ಪುನೀತ್‌ ಫೇಸ್‌ ಬುಕ್‌ ನಲ್ಲಿ ಸಚಿವರನ್ನು ನಿಂದಿಸಿದ್ದರು. ನಾವು ಹಿಂದೂಗಳು. ಧರ್ಮಗಳ ಧರ್ಮಗಳ ನಡುವೆ ದ್ವೇಷ ಬಿತ್ತುವ ಕೆಲಸ ಮಾಡಿದ್ದಾರೆ. ನಮ್ಮ ಕೃಷ್ಣ ಕರಿಯ. ನಿಮ್ಮ ಅಲ್ಲಾ ಯಾವ ಬಣ್ಣ ಎಂದು ಏಕ ವಚನದಲ್ಲಿ ನಿಂದಿಸಿದ್ದ ಎಂದು ತಿಳಿದು ಬಂದಿದೆ.

ಅತ್ತೆ ಮಗನ ಕಾಟಕ್ಕೆ ಬೇಸತ್ತು 1 ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಬೆಂಗಳೂರು: ಅತ್ತೆ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿಯೊಬ್ಬಳು ಬಾಗಲಕುಂಟೆಯ ಶೆಟ್ಟಿಹಳ್ಳಿಯ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾಳೆ. ಈ ಸಂಬಂಧ ಬಾಗಲಕುಂಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಿರುಕುಳ ನೀಡಿದ ಆರೋಪದಡಿಯಲ್ಲಿ ಈಕೆಯ ಅತ್ತೆ ಮಗ ಸ್ವಾಗತ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಸ್ವಾಗತ್‌ ಹಾಗೂ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಹಲವು ವರ್ಷಗಳಿಂದ ಅನೋನ್ಯವಾಗಿದ್ದರು. ಆದರೆಮ ಇತ್ತೀಚೆಗೆ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿ ಪದೇ ಪದೇ ಜಗಳವಾಡುತ್ತಿದ್ದರು. ಮೇಲಾಗಿ ಅತ್ತೆಯ ಮಗ ಹೊಡೆದು ಬಡಿಯುತ್ತಿದ್ದ ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ. ವಿದ್ಯಾರ್ಥಿನಿ ತಾಯಿ ಕೆಲಸದಿಂದ ಮನೆಗೆ ಬಂದು ನೋಡಿದಾಗ ಆತ್ಮಹತ್ಯೆಗೆ ಶರಾಣಾಗಿರುವುದು ಬೆಳಕಿಗೆ ಬಂದಿದೆ.

ಅತ್ಯಾಚಾರ ಆರೋಪಿಗೆ 20 ವರ್ಷ ಜೈಲು ಶಿಕ್ಷೆ

ಬೆಂಗಳೂರು: ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ 5ನೇ ಪೋಕ್ಸೋ ನ್ಯಾಯಾಲಯ 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಕೆಆರ್‌ ಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ರಾಮಮೂರ್ತಿನಗರದ ಚಲುವಯ್ಯ ರಸ್ತೆಯ ನಿವಾಸಿ 30 ವರ್ಷದ ಗಣೇಶ್‌ ಶಿಕ್ಷೆಗೆ ಒಳಗಾದ ಆರೋಪಿ. ಈತ ಶಾಲಾ ರಜಾದಿನಗಳಲ್ಲಿ ಬಾಲಕಿ ಮನೆ ಬಂದು ಪದೇ ಪದೇ ಲೈಂಗಿಕ ಅತ್ಯಾಚಾರ ಎಸಗಿದ್ದ. ಅಲ್ಲದೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದ. ಈ ಸಂಬಂಧ ಕೆಆರ್‌ ಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಪೂರ್ಣಗೊಳಿಸಿದ ಇನ್‌ ಸ್ಪೆಕ್ಟರ್‌ ಎಸ್​ಆರ್ ಮಂಜುನಾಥ್‌ ಅವರು ಆರೋಪಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ವಕೀಲ ಅನುರೇವು ಅವರು ಸಮರ್ಥವಾಗಿ ವಾದ ಮಂಡಿಸಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಎನ್ ನರಸಮ್ಮ ಅವರು ಅಪರಾಧಿಗೆ ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಬಾಲಕಿಗೆ 10 ಲಕ್ಷ ರೂ. ಪರಿಹಾರ ನೀಡುವಂತೆಯೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶ ಹೊರಡಿಸಿದ್ದಾರೆ.

ಕಾರು ಹರಿದು ಯುವಕ ಸಾವು

ಬೆಂಗಳೂರು: ರಾತ್ರಿ ಪಾಳಿ ಕೆಲಸ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ಹೊರಟಿದ್ದ ಯುವಕನ ಮೇಲೆ ಕಾರು ಹರಿದು ಸ್ಥಳದಲೇ ಮೃತಪಟ್ಟಿರುವ ಘಟನೆ ನಡೆದಿದೆ. ಬಾಗೇಪಲ್ಲಿ ಮೂಲದ 20 ವರ್ಷದ ಶಶಿಕುಮಾರ್‌ ಮೃತ ಯುವಕ. ಶಶಿಕುಮಾರ್‌ ಪೀಣ್ಯದ ಕಾರ್ಖಾನೆಯೊಂದರಲ್ಲಿ ಫ್ಯಾಬ್ರಿಕೇಷನ್‌ ಕೆಲಸ ಮಾಡುತ್ತಿದ್ದರು. ಮಂಗಳವಾರ ರಾತ್ರಿ ಪಾಳಿ ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದರು. ವೇಗವಾಗಿ ಬೈಕ್‌ ಚಲಾಯಿಸುತ್ತದ್ದ ಕಾರಣ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದಿದ್ದರು.

ಅದೇ ಮಾರ್ಗದಲ್ಲಿ ವೇಗವಾಗಿ ಬಂದ ಕಾರು ಯುವಕನ ಮೇಲೆ ಹರಿದಿತ್ತು. ಪರಿಣಾಮ ಶಶಿಕುಮಾರ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರನ್ನು ಚಾಲಕ ನಿಲ್ಲಿಸದೆ ತೆರಳಿದ್ದಾನೆ. ಆ ಮಾರ್ಗದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿದೆ. ಕಾರು ಬಿಳಿ ಬಣ್ಣದ್ದು ಎಂದು ತಿಳಿದು ಬಂದಿದೆ. ಆರೋಪಿಯ ಪತ್ತೆಗೆ ಹುಡುಕಾಟ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಕಲಾಸಿಪಾಳ್ಯ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ