Hubballi News: ಹುಬ್ಬಳ್ಳಿ ಶಿರಸಿ ತಾಳಗುಪ್ಪ ರೈಲು ಮಾರ್ಗ ಎಲ್ಲಿ ತನಕ ಬಂತು, ಸ್ಥಿತಿಗತಿ ವಿವರ ಹೀಗಿದೆ
Mar 22, 2024 01:08 PM IST
ಹುಬ್ಬಳ್ಳಿ - ತಾಳಗುಪ್ಪ ರೈಲು ಮಾರ್ಗ (ಸಾಂಕೇತಿಕ ಚಿತ್ರ)
ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಹುಬ್ಬಳ್ಳಿ - ಶಿರಸಿ- ತಾಳಗುಪ್ಪ ರೈಲು ಮಾರ್ಗದ ಕನಸು ನನಸಾಗುವುದಕ್ಕೆ ಒಂದು ಹೆಜ್ಜೆ ಮುಂದಡಿ ಇಡಲಾಗಿದೆ. ಕೇಂದ್ರ ಸರ್ಕಾರ ಇದಕ್ಕೆ ಅನುಮೋದನೆ ನೀಡಿದ್ದಾಗಿ ವರದಿ ಇದೆ. ಹುಬ್ಬಳ್ಳಿ ತಾಳಗುಪ್ಪ ರೈಲುಮಾರ್ಗ ಎಲ್ಲಿತನಕ ಬಂತು, ಅದರ ಸ್ಥಿತಿಗತಿ ವಿವರ ಹೀಗಿದೆ.
ಹುಬ್ಬಳ್ಳಿ: ನನೆಗುದಿಗೆ ಬಿದ್ದಿದ್ದ ಬಹುನಿರೀಕ್ಷಿತ ಹುಬ್ಬಳ್ಳಿ-ಶಿರಸಿ-ತಾಳಗುಪ್ಪ ರೈಲ್ವೆ ಮಾರ್ಗದ ಅಂತಿಮ ಸ್ಥಳ ಸಮೀಕ್ಷೆ (ಎಫ್‌ಎಲ್‌ಎಸ್) ಮತ್ತು ವಿವರವಾದ ಯೋಜನಾ ವರದಿ (ಡಿಪಿಆರ್) ತಯಾರಿಸುವುದಕ್ಕೆ ಅನುಮೋದನೆ ಸಿಕ್ಕಿದೆ. ಲೋಕಸಭಾ ಚುನಾವಣೆ ಘೋಷಣೆಗೂ ಮೊದಲೇ ಕೇಂದ್ರ ಸರ್ಕಾರವು ಈ ಮಾರ್ಗದ ಎಫ್‌ಎಲ್‌ಎಸ್ ಮತ್ತು ಡಿಪಿಆರ್ ತಯಾರಿಗೆ ಒಪ್ಪಿಗೆ ನೀಡಿದೆ. ಅದೇ ರೀತಿ, 3.95 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಕಳೆದ ವಾರವೇ ಈ ಮಾರ್ಗದ ಅಂತಿಮ ಸ್ಥಳ ಸಮೀಕ್ಷೆಗೆ ಒಪ್ಪಿಗೆ ಸೂಚಿಸಿದ್ದರು. ಮಾ.15ಕ್ಕೆ ಎಫ್‌ಎಸ್‌ಎಲ್ ಸಮೀಕ್ಷೆಗೆ ಅನುಮೋದನೆ ನೀಡಿ ಹಣ ಮಂಜೂರಾತಿ ನೀಡಿದ್ದಾರೆ. ಇದರಿಂದಾಗಿ ಮಲೆನಾಡು-ಉತ್ತರ ಕರ್ನಾಟಕ ಸಂಪರ್ಕಿಸುವ ಮಹತ್ವದ ಹಾಗೂ ಬಹುನಿರೀಕ್ಷಿತ ಹುಬ್ಬಳ್ಳಿ-ಶಿರಸಿ-ತಾಳಗುಪ್ಪ ರೈಲ್ವೆ ಮಾರ್ಗ ಕನಸು ನನಸಾಗಿಸುವ ಕಡೆಗೆ ಇನ್ನಷ್ಟು ಉತ್ತೇಜನ ಕೊಟ್ಟಂತಾಗಿದೆ.
ದಶಕಗಳ ಬೇಡಿಕೆ ಈ ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ರೈಲು ಮಾರ್ಗ
ಉತ್ತರ ಕನ್ನಡ ಮತ್ತು ಶಿವಮೊಗ್ಗ ಜನರ ಬಹಳ ದಶಕಗಳ ಬೇಡಿಕೆ ಇದು. ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ರೈಲು ಮಾರ್ಗ ಬೇಕು ಎಂದು ನಿತ್ಯ ನಿರಂತರ ಹೋರಾಟಗಳು ನಡೆದಿವೆ. ರೈಲ್ವೆಯ ರಾಜ್ಯ ಸಚಿವರಾಗಿದ್ದ ಈ ಭಾಗದ ಸುರೇಶ ಅಂಗಡಿ ಅವರು ಈ ಮಾರ್ಗದ ವಿಚಾರದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿದ್ದರು. ಹಾಗಾಗಿ, ಈ ಮಾರ್ಗಕ್ಕೆ 2019ರಲ್ಲಿ ಪಿಇಟಿ (ಪ್ರಾಥಮಿಕ ಎಂಜಿನಿಯ ರಿಂಗ್ ಆ್ಯಂಡ್ ಟ್ರಾಫಿಕ್) ಸಮೀಕ್ಷೆಗೆ ಒಪ್ಪಿಗೆ ಕೊಡಿಸಿದ್ದರು. ನೈಋತ್ಯ ರೈಲ್ವೆ ವಲಯ ಈ ಪಿಇಟಿ ಸಮೀಕ್ಷೆಯನ್ನು 2023ರಲ್ಲಿ ಪೂರ್ಣಗೊಳಿಸಿ ಕೇಂದ್ರ ಸರ್ಕಾರಕ್ಕೆ ಅದರ ವರದಿಯನ್ನು ಸಲ್ಲಿಸಿತ್ತು.
ಹುಬ್ಬಳ್ಳಿ-ಶಿರಸಿ-ತಾಳಗುಪ್ಪ ಮಾರ್ಗದಲ್ಲಿ ಎರಡು ಸ್ಥಳ ನಡುವಿನ ಪ್ರಯಾಣದ ಅಂತರ 170.92 ಕಿಮೀ. ಈ ಪೈಕಿ ಉತ್ತರ ಕನ್ನಡ ಜಿಲ್ಲೆಯಲ್ಲಿ 111.60 ಕಿಮೀ, ಧಾರವಾಡ- 40.42, ಶಿವಮೊಗ್ಗ- 14.40 ಹಾಗೂ ಹಾವೇರಿ 4.50 ಕಿಮೀ ರೈಲು ಮಾರ್ಗ ಹಾದುಹೋಗುತ್ತದೆ. ಇದಕ್ಕಾಗಿ 512 ಹೆಕ್ಟೇರ್ ಪ್ರದೇಶವನ್ನು ಸ್ವಾಧೀನ ಪಡಿಸಿಕೊಳ್ಳಬೇಕಾಗಬಹುದು ಎಂದು ಅಂದಾಜು ವರದಿ ಹೇಳಿದೆ. ಅದೇ ರೀತಿ ಒಂದು ಕಡೆ ಸುರಂಗ ಮಾರ್ಗ ನಿರ್ಮಿಸಬೇಕಾಗುತ್ತದೆ ಎಂದು ಪಿಇಟಿ ಸಮೀಕ್ಷೆಯ ವರದಿಯಲ್ಲಿ ವಿವರಿಸಲಾಗಿತ್ತು.
ಮುಂದಿನ ಹಂತದಲ್ಲಿ ನಿಖರ ವೆಚ್ಚ, ಸಂಚಾರ ದಟ್ಟಣೆ ಸಮೀಕ್ಷೆ
ಹುಬ್ಬಳ್ಳಿ-ಶಿರಸಿ-ತಾಳಗುಪ್ಪ ರೈಲ್ವೆ ಮಾರ್ಗದ ಎಫ್‌ಎಸ್‌ಎಲ್ ಸಮೀಕ್ಷೆಯ ನಂತರ ಯೋಜನೆಯ ನಿಖರ ವೆಚ್ಚ ಸಂಚಾರ ದಟ್ಟನೆ ಸೇರಿದಂತೆ ಮತ್ತಿತರರ ಸಮೀಕ್ಷೆ ನಡೆಯಲಿದೆ. ಆ ಸಮೀಕ್ಷೆ ಮುಗಿದ ಬಳಿಕ, ಸಮಗ್ರ ವರದಿ ಸಲ್ಲಿಕೆಯಾಗುತ್ತದೆ. ಅದನ್ನು ಆಧರಿಸಿ ಆರ್ಥಿಕ ಇಲಾಖೆಯ ಅನುಮೋದನೆ ಪಡೆಯಲಾಗುತ್ತದೆ. ಅದಾಗಿ, ಟೆಂಡರ್ ಕರೆದು ಈ ಮಾರ್ಗದ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ತಾಳಗುಪ್ಪ - ಶಿರಸಿ- ಹುಬ್ಬಳ್ಳಿ ರೈಲು ಮಾರ್ಗವು ಸಿದ್ದಾಪುರ - ಶಿರಸಿ- ಮುಂಡಗೋಡ, ತಡಸ ದಾರಿಯಾಗಿ ಹುಬ್ಬಳ್ಳಿಯನ್ನು ಸಂಪರ್ಕಿಸುತ್ತದೆ. ಈ ಮಾರ್ಗದ ಮಧ್ಯೆ 16 ನಿಲ್ದಾಣಗಳು ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಮಾರ್ಗ ನಿರ್ಮಾಣವಾದರೆ ಶಿವಮೊಗ್ಗದಿಂದ ಉತ್ತರ ಕನ್ನಡ ಹಾಗೂ ಉತ್ತರ ಕರ್ನಾಟಕದ ಮಧ್ಯೆ ನೇರ ಸಂಪರ್ಕ ಸಾಧಿಸಿದಂತಾಗುತ್ತದೆ. ಮಲೆನಾಡು- ಬಯಲಸೀಮೆಯ ಮಧ್ಯೆ ಸಂಪರ್ಕ ಕೊಂಡಿಯಾಗಿ ಈ ರೈಲು ಮಾರ್ಗ ಗಮನಸೆಳೆಯಲಿದೆ.
(This copy first appeared in Hindustan Times Kannada website. To read more like this please logon to kannada.hindustantimes.com)