Hubli News: ಹುಬ್ಬಳ್ಳಿಯಲ್ಲಿ ಸಿಲಿಂಡರ್ ಸ್ಫೋಟ, 10 ಮಂದಿ ಅಯ್ಯಪ್ಪ ಮಾಲಾಧಾರಿಗಳ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲಿಸಿದ ಪೊಲೀಸರು
Dec 23, 2024 02:32 PM IST
ಹುಬ್ಬಳ್ಳಿಯಲ್ಲಿ ಗಾಯಗೊಂಡಿರುವ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಆರೋಗ್ಯ ಸ್ತಿತಿ ಕುರಿತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕುಟುಂಬದವರಿಂದ ಮಾಹಿತಿ ಪಡೆದರು.
- ಹುಬ್ಬಳ್ಳಿಯಲ್ಲಿ ಮಲಗಿದ್ದಾಗ ಸಿಲೆಂಡರ್ ಸೋರಿಕೆ ನಂತರ ಸ್ಟೋಟಗೊಂಡು ಹತ್ತು ಮಂದಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಹುಬ್ಬಳ್ಳಿ: ಹುಬ್ಬಳ್ಳಿ ನಗರದ ಸಾಯಿನಗರದ ಅಚ್ಚವ್ವನ ಕಾಲೊನಿಯ ಈಶ್ವರ ದೇವಸ್ಥಾನದಲ್ಲಿ ಅಡುಗೆ ಅನಿಲದ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ, 10 ಅಯ್ಯಪ್ಪ ಮಾಲಾಧಾರಿಗಳು ತೀವ್ರ ಗಾಯಗೊಂಡಿದ್ದಾರೆ. ಭಾನುವಾರ ತಡರಾತ್ರಿ 1.30ರ ವೇಳೆ ಘಟನೆ ನಡೆದಿದ್ದು, ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಗೊಂಡ ಮಾಲಾಧಾರಿಗಳನ್ನು ಕೆಎಂಸಿ-ಆರ್‌ಐಗೆ ದಾಖಲಿಸಲಾಗಿದೆ. ಬಹುತೇಕ ಎಲ್ಲರ ದೇಹ ಶೇ 50 ರಷ್ಟು ಸುಟ್ಟಿದ್ದು, 58 ವರ್ಷದ ಅಜ್ಜಾಸ್ವಾಮಿ ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ರಾಜು ಹರ್ಲಾಪುರ(21), ಸಂಜಯ ಸವದತ್ತಿ(20), ವಿನಾಯಕ ಬಾರಕೇರ(12), ಪ್ರಕಾಶ ಬಾರಕೇರ(42), ಮಂಜು ತೋರದ(22), ಅಜ್ಜಾಸ್ವಾಮಿ(58), ಪ್ರವೀಣ ಚಲವಾದಿ(24), ತೇಜಸ್ ರೆಡ್ಡಿ(26 ಮತ್ತು ಶಂಕರ ರಾಯನಗೌಡ್ರ(29) ಗಾಯಗೊಂಡವರು. ಇವರೆಲ್ಲ ಸಾಯಿನಗರದ ನಿವಾಸಿಗಳು ಆಗಿದ್ದಾರೆ.
ಅಯ್ಯಪ್ಪ ಮಾಲೆ ಧರಿಸಿ ವೃತ ಆಚರಿಸುತ್ತಿದ್ದ ಇವರು, ಈಶ್ವರ ದೇವಸ್ಥಾನದಲ್ಲಿ ವಾಸ್ತವ್ಯ ಮಾಡುತ್ತಿದ್ದರು. ರಾತ್ರಿ ಮಲಗಿದ್ದಾಗ ಮಾಲಾಧಾರಿಯೊಬ್ಬರ ಕಾಲು ಸಿಲಿಂಡರ್‌ಗೆ ತಾಗಿ ಉರುಳಿದೆ. ಪರಿಣಾಮ ರೆಗ್ಯೂಲೇಟರ್ ಸಡಿಲಗೊಂಡು ಗ್ಯಾಸ್ ಸೋರಿಕೆಯಾಗಿ, ದೇವಸ್ಥಾನದಲ್ಲಿ ಹಚ್ಚಿದ್ದ ದೀಪಕ್ಕೆ ತಗುಲಿದೆ. ಆಗ ಒಮ್ಮೆಲೆ ದೇವಸ್ಥಾನದ ಪ್ರಾಂಗಣದಲ್ಲಿ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ ಸಿ.ಆರ್., ಎಸಿಪಿ ಶಿವಪ್ರಕಾಶ ನಾಯಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಚನ್ನು ಹೊಸಮನಿ, ಜಿಲ್ಲಾಧಿಕಾರಿ ದಿವ್ಯಪ್ರಭು, ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರಲ್ಲದೇ, ಘಟನೆ ಮಾಹಿತಿ ಪಡೆದರು.
ಮಧ್ಯರಾತ್ರಿಯೇ ಬೆಂಕಿ ಬಿದ್ದಿರುವುದು ಹಾಗೂ ಅಯ್ಯಪ್ಪ ಮಾಲಾಧಾರಿಗಳು ಕಿರುಚಾಡುತ್ತಿದ್ದುದನ್ನು ಗಮನಿಸಿದ ನೆರೆ ಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಧಾವಿಸಿದರೆ, ಅಗ್ನಿಶಾಮಕ ದಳದವರು ಧಾವಿಸಿ ಬೆಂಕಿ ನಂದಿಸಲು ನೆರವಾದರು. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿದೆ. ಕುಟುಂಬದವರು, ಪರಿಚಯಸ್ಥರು ಆಸ್ಪತ್ರೆ ಬಳಿ ಧಾವಿಸಿದ್ದರು.
ಕೆಲವು ದಿನಗಳ ಹಿಂದೆ ಮಾಲಾಧಾರಿಗಳಾಗಿದ್ದ ತಂಡವೊಂದು ಮುಂದಿನ ವಾರ ಶಬರಿಮಲೆಗೆ ಹೋಗಲು ತಯಾರಿ ಮಾಡಿಕೊಂಡಿತ್ತು. ಈ ವೇಳೆ ದುರಂತ ಸಂಭವಿಸಿದೆ ಎಂದು ಕುಟುಂಬದವರು ಬೇಸರದಿಂದಲೇ ಹೇಳಿಕೊಂಡರು.
ಸಿಲೆಂಡರ್ ಬಳಕೆ ವೇಳೆ ಎಚ್ಚರಿಕೆಯಿಂದ ಇರಬೇಕು ಎಂದು ಪದೇ ಪದೇ ಹೇಳಲಾಗುತ್ತದೆ. ಆದರೂ ಅಚಾತುರ್ಯದಿಂದ ಈ ಘಟನೆ ನಡೆದಿದೆ. ಕುಟುಂಬಸ್ಥರಿಗೆ ಪರಿಹಾರವನ್ನು ನೀಡುವ ಕುರಿತು ಪರಿಶೀಲಿಸುವುದಾಗಿ ಅಧಿಕಾರಿಗಳು ಅಭಯ ನೀಡಿದ್ದಾರೆ. ಸದ್ಯ ಗಾಯಗೊಂಡವರಿಗೆ ಚಿಕಿತ್ಸೆ ಮುಂದುವರಿದಿದೆ.
ಅಯ್ಯಪ್ಪ ಮಾಲಾಧಾರಿಗಳು ನಿತ್ಯ ಬೆಳಿಗ್ಗೆ ಹಾಗೂ ಸಂಜೆ ಸ್ನಾನ ಮಾಡಲು ನೀರು ಹಾಗೂ ಅಡುಗೆ ಮಾಡಿಕೊಳ್ಳಲು ಸಿಲೆಂಡರ್ ಇಟ್ಟುಕೊಂಡಿರುತ್ತಾರೆ. ಬಳಸುವಾಗ ಕೊಂಚ ಹೆಚ್ಚಾದರೂ ಸಮಸ್ಯೆಯಾಗಲಿದೆ. ಈ ವೇಳೆ ಎಚ್ಚರಿಕೆ ಇರಬೇಕು ಎನ್ನುವುದು ಸ್ಥಳೀಯರ ಅಭಿಪ್ರಾಯ.
ವಿಭಾಗ