logo
ಕನ್ನಡ ಸುದ್ದಿ  /  ಕರ್ನಾಟಕ  /  Wayanad Landslide: ಕೇರಳ ಭೂಕುಸಿತ ದುರಂತ, ಕನ್ನಡತಿ ವಯನಾಡು ಜಿಲ್ಲಾಧಿಕಾರಿ ಮೇಘಶ್ರೀ ಅವಿರತ ಶ್ರಮ, ಐಎಎಸ್‌ ಅಧಿಕಾರಿ ಕಾರ್ಯಕ್ಕೆ ಮೆಚ್ಚುಗೆ

Wayanad landslide: ಕೇರಳ ಭೂಕುಸಿತ ದುರಂತ, ಕನ್ನಡತಿ ವಯನಾಡು ಜಿಲ್ಲಾಧಿಕಾರಿ ಮೇಘಶ್ರೀ ಅವಿರತ ಶ್ರಮ, ಐಎಎಸ್‌ ಅಧಿಕಾರಿ ಕಾರ್ಯಕ್ಕೆ ಮೆಚ್ಚುಗೆ

Umesha Bhatta P H HT Kannada

Aug 06, 2024 02:43 PM IST

google News

ಕೇರಳದಲ್ಲಿ ಕನ್ನಡತಿ ಜಿಲ್ಲಾಧಿಕಾರಿ ಮೇಘಶ್ರೀ

    • ಕನ್ನಡತಿಯಾದ ಡಿ.ಆರ್.ಮೇಘಶ್ರೀ( DR Meghashri) ದುರಂತ ಸಂಭವಿಸಿದ ವಯನಾಡು ಜಿಲ್ಲಾಧಿಕಾರಿಯಾಗಿ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಹಿನ್ನೆಲೆ, ಕೆಲಸದ ವೈಖರಿ ಹೀಗಿದೆ.
ಕೇರಳದಲ್ಲಿ ಕನ್ನಡತಿ ಜಿಲ್ಲಾಧಿಕಾರಿ ಮೇಘಶ್ರೀ
ಕೇರಳದಲ್ಲಿ ಕನ್ನಡತಿ ಜಿಲ್ಲಾಧಿಕಾರಿ ಮೇಘಶ್ರೀ

ಬೆಂಗಳೂರು: ಯಾವುದೇ ಅಧಿಕಾರಿಗೆ ಸೇವೆ ಮಾಡುವ ಅವಕಾಶ ಸಿಕ್ಕಾಗ ಅದನ್ನು ಮನಪೂರ್ವಕವಾಗಿ ಕೆಲಸ ಮಾಡಿಬಿಡುತ್ತಾರೆ. ಅದರಲ್ಲೂ ಜಿಲ್ಲಾಧಿಕಾರಿಯಂತಹ ಹುದ್ದೆಯಲ್ಲಿರುವವರಿಗೆ ಇದು ಸವಾಲಷ್ಟೇ ಅಲ್ಲ. ಕಷ್ಟದಲ್ಲಿರುವವರಿಗೆ ಸ್ಪಂದಿಸುವ ಕೆಲಸವೂ ಹೌದು. ಅಂತಹ ಅವಕಾಶ ಸಿಗುವುದು ಅಪರೂಪವೇ. ಈಗ ಇಡೀ ದೇಶದ ಗಮನ ಸೆಳೆದಿರುವ ವಯನಾಡು ಜಿಲ್ಲೆಯ ಭೀಕರ ದುರಂತ. ಈ ದುರಂತದ ನಂತರ ಅಲ್ಲಿ ನಡೆದಿರುವ ರಕ್ಷಣಾ ಕಾರ್ಯಾಚರಣೆಗಳು, ಶವಗಳ ಪತ್ತೆ, ಕಷ್ಟದಲ್ಲಿರುವವರಿಗೆ ಸ್ಪಂದಿಸಿ ನೆಲೆ, ಆಹಾರ ಒದಗಿಸುವುದೂ ಸೇರಿದಂತೆ ಹಲವಾರು ಚಟುವಟಿಕೆಗಳು ವಾರದಿಂದ ನಿರಂತರವಾಗಿ ನಡೆದಿವೆ. ಇದರ ಹಿಂದೆ ಶ್ರಮ ಹಾಕುತ್ತಿರುವ ನೂರಾರು ಕೈಗಳಿವೆ. ಇದರಲ್ಲಿ ಕನ್ನಡದವರೇ ಆಗಿರುವ ಐಎಎಸ್‌ ಅಧಿಕಾರಿ ಹಾಗೂ ವಯನಾಡಿನ ಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ ಅವರ ಪಾತ್ರವೂ ಹಿರಿದು. ಅವರು ಜಿಲ್ಲಾಧಿಕಾರಿಯಾಗಿ ಒಂದು ವಾರದಿಂದಲೂ ನಿತ್ಯ 20 ಗಂಟೆ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಅಲ್ಲಿನ ತಂಡಗಳನ್ನು ಮುನ್ನೆಡೆಸಿ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.

ಮೇಘಶ್ರೀ ಅವರು ಮೂಲತಃ ಗಂಡು ಮೆಟ್ಟಿನ ಜಿಲ್ಲೆ, ಒನಕೆ ಓಬವ್ವರ ತವರು ಚಿತ್ರದುರ್ಗದವರು. ಚಳ್ಳಕೆರೆ ತಾಲ್ಲೂಕಿನ ದೊಡ್ಡೇರಿ ಗ್ರಾಮದವರು. ಅವರ ತಂದೆ ರುದ್ರಮುನಿ ಅವರು ಎಸ್‌ಬಿಐ ಅಧಿಕಾರಿಯಾಗಿ ನಿವೃತ್ತರಾದವರು. ಚಿತ್ರದುರ್ಗದಲ್ಲಿಯೇ ಇದ್ದುಕೊಂಡು ವ್ಯಾಸಂಗ ಮಾಡಿ ಬಿಇ ಪದವೀಧರರರಾದ ಮೇಘಶ್ರೀ ಅವರು ಎಂಜಿನಿಯರ್‌ ಆಗಿ ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದರು.

ಐಎಎಸ್‌ ಅಧಿಕಾರಿ ಆಗಬೇಕು ಎಂಬ ಹಂಬಲ ಅವರಿಗಿತ್ತು. ಏಕೆಂದರೆ ಚಿತ್ರದುರ್ಗದಲ್ಲಿ ಅವರಿದ್ದ ಮನೆಯ ಪಕ್ಕದಲ್ಲೇ ಜಿಲ್ಲಾಧಿಕಾರಿ ಕಚೇರಿ. ಶಾಲಾ, ಕಾಲೇಜು ದಿನಗಳಲ್ಲಿಯೇ ಡಿಸಿ ಅವರು ಕಚೇರಿಗೆ ಬರುವುದು, ಹೋಗುವುದು, ಅಲ್ಲಿನ ವಾತಾವರಣ ಕಂಡಿದ್ದ ಮೇಘಶ್ರೀ ಅವರಿಗೂ ತಾನೂ ಐಎಎಸ್‌ ಅಧಿಕಾರಿಯಾಗಿ ಸೇವೆ ಮಾಡಬೇಕು ಎನ್ನುವ ಬಯಕೆ ಚಿಗುರೊಡೆದಿತ್ತು.

ಅವರ ತಂದೆ ಕೂಡ ಐಎಎಸ್‌ ಅಧಿಕಾರಿಗೆ ಇರುವ ಹುದ್ದೆ, ಕೆಲಸ ಮಾಡಲು ಇರುವ ಮಿತಿಗಳನ್ನು ಮಗಳಲ್ಲಿ ಕನಸಿನ ರೂಪದಲ್ಲಿ ತುಂಬಿದ್ದರು. ಹಾಗೆಂದು ಸುಮ್ಮನೇ ಕೂರಲಿಲ್ಲ. ಕೆಲಸ ಮಾಡುತ್ತಲೇ ಓದಿದರು. ಮೊದಲ ಪ್ರಯತ್ನದಲ್ಲಿ ಆಗಲಿಲ್ಲ. ಕೆಲಸ ಬಿಟ್ಟು ಓದಿಗೆ ತೊಡಗಿಸಿಕೊಂಡರು. ಯಶಸ್ವಿಯೂ ಆದರು. 2016ರಲ್ಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ 289ನೇ ರ್ಯಾಂಕ್‌ ನೊಂದಿಗೆ ತೇರ್ಗಡೆಯೂ ಆದರು.ಸ್ವಲ್ಪದರಲ್ಲಿಯೇ ಕರ್ನಾಟಕದಲ್ಲಿ ಸೇವೆ ಮಾಡುವ ಅವಕಾಶ ತಪ್ಪಿದರೂ ಕೇರಳ ಕೇಡರ್‌ನಲ್ಲಿ ಐಎಎಸ್‌ ಹುದ್ದೆ ದೊರೆಯಿತು. ಕೇರಳದಲ್ಲಿ ಎಂಟು ವರ್ಷದಿಂದ ನಾನಾ ಹುದ್ದೆಯಲ್ಲಿ ಕೆಲಸ ಮಾಡಿ ವಯನಾಡು ಡಿಸಿಯಾಗಿ ಒಂದು ತಿಂಗಳ ಹಿಂದೆಯಷ್ಟೇ ನೇಮಕವಾಗಿದೆ.

ಮಳೆಗಾಲದಲ್ಲಿ ಅವರು ಡಿಸಿಯಾಗಿ ನೇಮಕಗೊಂಡಿರುವುದರಿಂದ ವಯನಾಡು ಜಿಲ್ಲೆಯ ಸ್ಥಿತಿ, ಮಳೆಯ ಪರಿಣಾಮಗಳ ಕುರಿತು ಮಾಹಿತಿ ಕಲೆ ಹಾಕಿದ್ದರು. ಜಲಾಶಯಗಳಿಗೆ ಭೇಟಿ ನೀಡಿ ನೀರು ಹೊರ ಬಿಟ್ಟರೆ ಆಗುವ ಕುರಿತು ಚರ್ಚಿಸಿದ್ದರು. ಮಳೆ ಅನಾಹುತ ಆದರೆ ಏನು ಮಾಡಬೇಕು, ತಂಡವಾಗಿ ಹೇಗೆ ಕೆಲಸ ಮಾಡಬೇಕು ಎನ್ನುವ ಕುರಿತಾಗಿಯೂ ಚರ್ಚಿಸಿದ್ದರು.

ವಯನಾಡಿನಲ್ಲಿ ಭಾರೀ ಮಳೆಯಾಗುವ ದಿನ ಅಲ್ಲಿಯೇ ಇದ್ದರು. ತಂದೆ ರುದ್ರಮುನಿ ಹಾಗೂ ಕುಟುಂಬದವರು ಬಂದಿದ್ದರು. ಅವರು ಅಂದು ಮಧ್ಯಾಹ್ನವೇ ಅಲ್ಲಿಂದ ಚಿತ್ರದುರ್ಗ ಕಡೆಗೆ ಹೊರಟಿದ್ದರು. ರಾತ್ರಿ ಮಲಗಿ ಬೆಳಕು ಹರಿಯುವ ಮುನ್ನ ಎರಡು ಬಾರಿ ಭಾರೀ ಮಳೆಗೆ ಊರಿಗೆ ಊರುಗಳೇ ಕೊಚ್ಚಿಕೊಂಡು ಹೋಗಿದ್ದವು. ರಾತ್ರಿಯೇ ಮಾಹಿತಿ ದೊರೆತು ಬೆಳಗಿನ ಜಾವ 3ರ ಹೊತ್ತಿಗೆ ಸ್ಥಳಕ್ಕೆ ಬಂದರು ಮೇಘಶ್ರೀ. ಮೇಘ ಸ್ಪೋಟದ ಸ್ಥಿತಿ ನೋಡಿ ಏನು ಮಾಡಬೇಕು ಎಂದು ತೋಚದ ಸನ್ನಿವೇಶದಲ್ಲೂ ದೃತಿಗೆಡದೇ ಕೆಲಸ ಶುರು ಮಾಡಿದರು ಜಿಲ್ಲಾಧಿಕಾರಿ ಮೇಘಶ್ರೀ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದರು. ಕೆಳ ಹಂತದ ಅಧಿಕಾರಿಗಳು,. ಸಿಬ್ಬಂದಿಯನ್ನೂ ಎಚ್ಚರಿಸಿ ತಂಡವಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿದರು. ಅದೆಷ್ಟೋ ಮಂದಿಯ ಶವದ ಗುರುತೇ ಪತ್ತೆಯಾಗದೇ ಇದ್ದಾಗ ಖುದ್ದು ನಿಂತು ಗೌರವ ಯುತ ಅಂತ್ಯಸಂಸ್ಕಾರ ಮಾಡಿಸಿದರು. ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ತಾಯಿಯಂತೆ ನಿಂತು ಆಸರೆ ಕೊಡಿಸಿದರು. ಪರಿಹಾರ ಕೇಂದ್ರಗಳಿಗೆ ತೆರಳಿ ಊಟೋಪಚಾರದ ವ್ಯವಸ್ಥೆ ಮಾಡಿದರು. ಈಗೆ ಸತತ ಒಂದು ವಾರದಿಂದಲೂ ಮೇಘಶ್ರೀ ಅವರ ಸೇವೆ ಮುಂದುವರೆದಿದೆ.

ದಿನಕ್ಕೆ 20 ಗಂಟೆಗೂ ಅಧಿಕ ಸಮಯ ಕೆಲಸ ಮಾಡುತ್ತಲೇ ಇದ್ದಾರೆ. ಇದು ಇನ್ನು ಕೆಲವು ದಿನ ಮುಂದುವರೆಯುವುದರಿಂದ ಅನಾಹುತಕ್ಕೆ ಸಿಲುಕಿದವರ ಬದುಕನ್ನು ಹೊಸದಾಗಿ ಕಟ್ಟಲು ದೊಡ್ಡ ಶ್ರಮವೇ ಬೇಕಾಗುತ್ತದೆ. ಇದನ್ನು ನಿಭಾಯಿಸುವ ಛಾತಿಯೊಂದಿಗೆ ಕೆಲಸ ಮಾಡುತ್ತಿದ್ದಾರೆ ಮೇಘಶ್ರೀ.

ವಯನಾಡಿಗೆ ಮಗಳು ಡಿಸಿಯಾಗಿ ಹೋದ ಮೇಲೆ ಅಲ್ಲಿಗೆ ಹೋಗಿದ್ದೆ. ಮಳೆ ಇತ್ತು. ಕೆಲ ದಿನ ಇದ್ದು ವಾಪಾಸ್‌ ಬಂದಿದ್ದೆ. ದುರ್ಘಟನೆ ನಡೆದ ದಿನವೇ ಹಿಂದಿನ ದಿನವೇ ನಾನು ಹೊರಟಿದ್ದೆ. ಮರು ದಿನ ಇಂತಹ ದುರ್ಘಟನೆಯಾಗಿದೆ. ಮಗಳು ನಿಂತು ಕೆಲಸ ಮಾಡುತ್ತಿದ್ದಾರೆ, ಸಮಯವನ್ನು ನೋಡದೇ ಕಷ್ಟದಲ್ಲಿರುವವರಿಗೆ ಸ್ಪಂದಿಸುತ್ತಿದ್ದಾರೆ. ಇದು ಕೆಲಸ ಮಾಡಬೇಕಾದ ಸಮಯ ಎಂದು ತಂದೆ ರುದ್ರಮುನಿ ಅಲ್ಲಿನ ಕ್ಷಣ ನೆನಪಿಸಿಕೊಂಡಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ