ಅಂಚೆ ಇಲಾಖೆಗೆ ಪ್ರೀತಿಯಿಂದ ಪತ್ರ ಬರೆಯಿರಿ, 25 ಸಾವಿರ ರೂ. ಬಹುಮಾನ ಗೆಲ್ಲಿರಿ; ಡಿಸೆಂಬರ್ 14 ಕಡೆಯ ದಿನ
Oct 04, 2024 07:12 PM IST
ಭಾರತೀಯ ಅಂಚೆ ಇಲಾಖೆಯು ಪತ್ರ ಬರೆಯುವ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.
- ಭಾರತೀಯ ಅಂಚೆ ಇಲಾಖೆಯು ಪತ್ರ ಬರೆಯುವ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ಅತ್ಯುತ್ತಮವಾಗಿ ಪತ್ರ ಬರೆಯುವವರಿಗೆ ನಗದು ಬಹುಮಾನವಿದ್ದು, ರಾಜ್ಯ ಮಟ್ಟದಲ್ಲಿ ಗೆದ್ದವರು ರಾಷ್ಟ್ರಮಟ್ಟದಲ್ಲೂ ಭಾಗಿಯಾಗಬಹುದು.
ಬೆಂಗಳೂರು: ನಿಮಗೆ ಈಗಲೂ ಪತ್ರ ಬರೆಯುವ ಹವ್ಯಾಸವಿದೆಯೇ, ಡಿಜಿಟಲ್ ಯುಗದಲ್ಲೂ ಇನ್ನೂ ಪತ್ರ ಬರೆಯುವ ಅಭ್ಯಾಸವನ್ನು ಬಿಟ್ಟಿಲ್ಲವೇ, ಹಾಗಿದ್ದರೆ ನೀವು ಈಗಲೂ ಪತ್ರ ಬರೆಯಬಹುದು. ಅಷ್ಟೇ ಅಲ್ಲ ಭಾರೀ ಮೊತ್ತದ ಬಹುಮಾನವನ್ನೂ ಪಡೆದುಕೊಳ್ಳಬಹುದು. ಭಾರತೀಯ ಅಂಚೆ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಪತ್ರ ಬರೆಯುವ ಸ್ಪರ್ಧೆ ಏರ್ಪಡಿಸಲಾಗಿದೆ. ವಿವಿಧ ವಯೋಮಾನದವರು ಸ್ಪರ್ಧೆಯಲ್ಲಿ ಭಾಗಿಯಾಗಬಹುದು. ಮೊದಲು ರಾಜ್ಯ ಮಟ್ಟದಲ್ಲಿ ಸ್ಪರ್ಧೆ ನಡೆಯಲಿದ್ದು, ಆನಂತರ ರಾಷ್ಟ್ರ ಮಟ್ಟದಲ್ಲೂ ಭಾಗಿಯಾಗಿ ಅಲ್ಲೂ ಹೆಚ್ಚಿನ ಬಹುಮಾನ ಪಡೆಯಬಹುದು.
ಪತ್ರ ಬರೆಯಲು ಇರುವ ವಿಷಯ ‘ದಿ ಜಾಯ್ ಆಫ್ ರೈಟಿಂಗ್: ಇಂರ್ಪಾಟೆಂಟ್ಸ್ ಆಪ್ ಲೆಟರ್ಸ್ ಇನ್ ಎ ಡಿಜಿಟಲ್ ಏಜ್’. ಸಾರ್ವಜನಿಕರು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅಂಚೆ ಕಚೇರಿಯಲ್ಲಿ ದೊರೆಯುವ ಇನ್ ಲ್ಯಾಂಡ್ ಲೆಟರ್ ಕಾರ್ಡ್ ಅಥವಾ ಎನ್‍ವಲಪ್‍ಗಳನ್ನು ಉಪಯೋಗಿಸಬೇಕು ಎನ್ನುವುದು ಭಾರತೀಯ ಅಂಚೆ ಇಲಾಖೆಯು ಸ್ಪರ್ಧಾಳುಗಳಿಗೆ ನೀಡಿರುವ ಸೂಚನೆ.
ಇನ್‍ಲ್ಯಾಂಡ್ ಲೆಟರ್ ಕಾರ್ಡ್ (ಐಎಲ್‍ಸಿ) ಉಪಯೋಗಿಸುವವರು 500 ಪದಗಳಿಗೆ ಮೀರದಂತೆ ಮತ್ತು ಎನ್‍ವಲಪ್ ಉಪಯೋಗಿಸುವವರು 1000 ಪದಗಳಿಗೆ ಮೀರದಂತೆ ಎ4 ಶೀಟ್‍ನಲ್ಲಿ ಬರೆದು ಎನ್‍ವಲಪ್ ಒಳಗೆ ಹಾಕಿ ಕಳುಹಿಸಬೇಕು. ಪತ್ರಗಳನ್ನು ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಬರೆಯಬಹುದು ಎಂದು ತಿಳಿಸಲಾಗಿದೆ.
ಸ್ಪರ್ಧೆಗೆ ಉಪಯೋಗಿಸಿದ ಐಎಲ್‍ಸಿ/ಎನ್‍ವಲಪ್ ಮೇಲೆ ಸೂಪರ್‍ಡೆಂಟ್ ಆಪ್ ಪೋಸ್ಟ್ ಆಫಿಸಸ್, ಎನ್ನುವ ಹೆಸರಿನಲ್ಲಿ ಆಯಾ ಜಿಲ್ಲೆಯ ಅಂಚೆ ಮುಖ್ಯ ಅಧೀಕ್ಷಕರ ಹೆಸರಿನಲ್ಲಿ ‘ಪತ್ರ ಬರೆಯುವ ಸ್ಪರ್ಧೆ’ ಎಂದು ವಿಳಾಸ ಬರೆದು ಜನ್ಮ ದಿನಾಂಕವನ್ನು ಕಡ್ಡಾಯವಾಗಿ ನಮೂದಿಸಬೇಕು. ನಂತರ ಐಎಲ್‍ಸಿ/ಎನ್‍ವಲಪ್ ಅನ್ನು ನಿಮ್ಮ ಹತ್ತಿರದ ಅಂಚೆ ಕಚೇರಿಗೆ ತಲುಪಿಸಬೇಕು. ನಿಮ್ಮ ಪತ್ರ ನಮ್ಮ ಕಚೇರಿಗೆ ತಲುಪಲು ಡಿಸೆಂಬರ್, 14 ಕೊನೆಯ ದಿನವಾಗಿದೆ.
ಈ ಸ್ಪರ್ಧೆಯಲ್ಲಿ 18 ವರ್ಷ ಒಳಗಿನ ಮತ್ತು 18 ವರ್ಷ ಮೇಲ್ಪಟ್ಟ ವರ್ಗ ಎಂದು ಎರಡು ವಿಭಾಗದಲ್ಲಿ ನಡೆಸಲಾಗುವುದು. ಕರ್ನಾಟಕ ವೃತ್ತ ಮಟ್ಟದ ಪ್ರತಿ ವಿಭಾಗದಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುವುದು. ಪ್ರತಿ ವಿಭಾಗದಲ್ಲಿ ಮೊದಲ ಬಹುಮಾನ ರೂ.25 ಸಾವಿರ, ಎರಡನೇ ಬಹುಮಾನ ರೂ.10 ಸಾವಿರ, ಮೂರನೇ ಬಹುಮಾನ ರೂ.5 ಸಾವಿರ.
ಹಾಗೆಯೇ ರಾಷ್ಟ್ರೀಯ ಮಟ್ಟದಲ್ಲಿ ಪ್ರತಿ ವಿಭಾಗದಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುವುದು. ಮೊದಲ ವಿಜೇತರಿಗೆ ರೂ.50 ಸಾವಿರ, ಎರಡನೇ ವಿಜೇತರಿಗೆ ರೂ.25 ಸಾವಿರ ಮತ್ತು ತೃತೀಯ ಬಹುಮಾನ ರೂ.10 ಸಾವಿರ ನಗದು ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ www.karnatakapost.gov.in ನ್ನು ಸಂಪರ್ಕಿಸಿ ಪಡೆಯಬಹುದು.ಇದರಲ್ಲಿ ಅಂಚೆ ಇಲಾಖೆ ಸ್ಪರ್ಧೆಗೆ ನೀಡಿರುವ ಸೂಚನೆಗಳು, ನಿಬಂಧನೆಗಳು ಹಾಗೂ ಬಹುಮಾನದ ವಿವರಗಳನ್ನು ಒದಗಿಸಲಾಗಿದೆ. ಆಸಕ್ತರು ಜಿಲ್ಲಾ ಅಂಚೆ ಅಧೀಕ್ಷಕರ ಕಚೇರಿಗೆ ತೆರಳಿ ಮಾಹಿತಿ ಪಡೆಯಬಹುದು ಎಂದು ಕರ್ನಾಟಕ ವಿಭಾಗದ ಅಂಚೆ ಮುಖ್ಯಸ್ಥರು ತಿಳಿಸಿದ್ದಾರೆ.