IndiGo: ಕರಾವಳಿ ಭಾಗದ ಜನರಿಗೆ ಗುಡ್ನ್ಯೂಸ್; ಮಂಗಳೂರು TO ಅಬುಧಾಬಿ ಇಂಡಿಗೋ ವಿಮಾನ ಹಾರಾಟ ಆರಂಭ
Aug 11, 2024 12:04 PM IST
ಕರಾವಳಿ ಭಾಗದ ಜನರಿಗೆ ಗುಡ್ನ್ಯೂಸ್; ಮಂಗಳೂರು TO ಅಬುಧಾಬಿ ಇಂಡಿಗೋ ವಿಮಾನ ಹಾರಾಟ ಆರಂಭ
- Mangaluru International Airport: ಕರಾವಳಿ ಭಾಗದ ಜನರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದ್ದು, ಮಂಗಳೂರು ವಿಮಾನ ನಿಲ್ದಾಣದಿಂದ ಅಬುಧಾಬಿಗೆ ಇಂಡಿಗೋ ವಿಮಾನ ಹಾರಾಟ ಆರಂಭಗೊಂಡಿದೆ. (ವರದಿ: ಹರೀಶ ಮಾಂಬಾಡಿ)
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಬುಧಾಬಿಗೆ ಇಂಡಿಗೋ ವಿಮಾನ ಹಾರಾಟ ಆರಂಭಗೊಂಡಿದೆ. ಕರಾವಳಿ ಕರ್ನಾಟಕದ ಬಂದರು ನಗರ ಈಗಾಗಲೇ ಅಂತಾರಾಷ್ಟ್ರೀಯ ವಿಮಾನಯಾನಗಳ ಮೂಲಕ ಜನಾಕರ್ಷಣೆ ಗಳಿಸುತ್ತಿದ್ದು, ಇಂಡಿಗೋದೊಂದಿಗೆ ಈ ಸಹಯಾನ ಮತ್ತಷ್ಟು ಬಲ ನೀಡಲಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ರಾಜಧಾನಿ ಅಬುಧಾಬಿಗೆ ಇಂಡಿಗೋ ನೇರ ಯಾನ ಆರಂಭಿಸಿದೆ.
ಆಗಸ್ಟ್ 9 ರಿಂದ, ಇಂಡಿಗೊ ಪ್ರತಿದಿನ ಈ ವಿಮಾನ ಹಾರಾಟ ಆರಂಭ ಮಾಡಿದೆ. ಇದು ದುಬೈ ನಂತರ ಮಂಗಳೂರಿನಿಂದ ವಿಮಾನಯಾನದ ಎರಡನೇ ಸಾಗರೋತ್ತರ ತಾಣ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಸ್ತುತ ಎಂಟು ಮಧ್ಯಪ್ರಾಚ್ಯ ಸ್ಥಳಗಳಿಗೆ ಮತ್ತು ಆರು ದೇಶೀಯ ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತದೆ.
ಗಮನ ಸೆಳೆದ ಮೊದಲ ಫ್ಲೈಯರ್
ಈ ಉದ್ಘಾಟನಾ ವಿಮಾನದಲ್ಲಿ ತನ್ನ ತಾಯಿಯೊಂದಿಗೆ ಚೆಕ್-ಇನ್ ಮಾಡಿದ ಮೊದಲ ಫ್ಲೈಯರ್ ನಂದಿಕಾ ವಿ ಉಡಾವಣಾ ಸಮಾರಂಭದಲ್ಲಿ ಎಲ್ಲರ ಗಮನ ಸೆಳೆದರು. ಮಂಗಳೂರು ವಿಮಾನ ನಿಲ್ದಾಣ ಮತ್ತು ಏರ್ಲೈನ್ಸ್ ತಂಡದೊಂದಿಗೆ ಸಾಂಪ್ರದಾಯಿಕ ದೀಪವನ್ನು ಬೆಳಗಿಸುವ ಅವಕಾಶವನ್ನು ನಂದಿಕಾ ಪಡೆದರು. ಮೊದಲ ಬೋರ್ಡಿಂಗ್ ಪಾಸ್ ಮತ್ತು ಏರ್ಲೈನ್ನ ಬ್ಯಾಗ್ ಅನ್ನು ಆಕೆ ಪಡೆದರು.
ಬಳಿಕ ಕೇಕ್ ಕತ್ತರಿಸುವ ಕಾರ್ಯಕ್ರಮದಲ್ಲಿ ನಂದಿಕಾಗೆ ಅವಕಾಶ ದೊರೆಯಿತು. ಕ್ಯಾಪ್ಟನ್ ವಿಕರ್ ಯಾಸೀನ್ ನೇತೃತ್ವದ ಫ್ಲೈಟ್ 6ಇ 1442 180 ಪ್ರಯಾಣಿಕರೊಂದಿಗೆ ಅಬುಧಾಬಿಗೆ ರಾತ್ರಿ 9.40 ಗಂಟೆಗೆ ಹೊರಟಿತು. ಉದ್ಘಾಟನಾ ವಿಮಾನದ ಉಡಾವಣೆಗೆ ಮಂಗಳೂರು ವಿಮಾನ ನಿಲ್ದಾಣದ ನಿರ್ಗಮನ ಸಭಾಂಗಣ ಹಬ್ಬದ ನೋಟವನ್ನು ಹೊಂದಿತ್ತು. ಇದರೊಂದಿಗೆ, ಈಗ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅಬುಧಾಬಿಗೆ ಎರಡು ದೈನಂದಿನ ವಿಮಾನಗಳನ್ನು ಹೊಂದಿದೆ.
ಏರ್ ಇಂಡಿಯಾ ಎಕ್ಸ್ಪ್ರೆಸ್ ಮತ್ತೊಂದು ದೈನಂದಿನ ವಿಮಾನವನ್ನು ನಿರ್ವಹಿಸುತ್ತದೆ. ಈ ಹೊಸ ವಿಮಾನದ ಪ್ರಾರಂಭವು ವಿಮಾನಯಾನ ಮತ್ತು ವಿಮಾನ ನಿಲ್ದಾಣ ಆಪರೇಟರ್ ನಡುವಿನ ನಿಕಟ ಕೆಲಸದ ಸಂಬಂಧಕ್ಕೆ ಸಾಕ್ಷಿಯಾಗಿದೆ. ಇದು ಈ ಪ್ರದೇಶದ ಜನರಿಗೆ ಜಗತ್ತಿಗೆ ಸುಲಭವಾಗಿ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ. ಆಗಸ್ಟ್ 10ರಂದು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮೊದಲ ಇಂಡಿಗೊ ಅಬುಧಾಬಿ-ಮಂಗಳೂರು ವಿಮಾನಕ್ಕೆ ಸಾಂಪ್ರದಾಯಿಕ ವಾಟರ್ ಕ್ಯಾನನ್ ವಂದನೆ ಸಲ್ಲಿಸಿತು.