ಆನ್‌ಲೈನ್‌ನಲ್ಲಿ ಕಳೆದುಕೊಂಡಿದ್ದ 1.40 ಕೋಟಿ ಹಣ ಮರಳಿ ಪಡೆದ ಟೆಕ್ಕಿ ದಂಪತಿ; ಹೇಗೆ ಸಾಧ್ಯವಾಯ್ತು?
ಕನ್ನಡ ಸುದ್ದಿ  /  ಕರ್ನಾಟಕ  /  ಆನ್‌ಲೈನ್‌ನಲ್ಲಿ ಕಳೆದುಕೊಂಡಿದ್ದ 1.40 ಕೋಟಿ ಹಣ ಮರಳಿ ಪಡೆದ ಟೆಕ್ಕಿ ದಂಪತಿ; ಹೇಗೆ ಸಾಧ್ಯವಾಯ್ತು?

ಆನ್‌ಲೈನ್‌ನಲ್ಲಿ ಕಳೆದುಕೊಂಡಿದ್ದ 1.40 ಕೋಟಿ ಹಣ ಮರಳಿ ಪಡೆದ ಟೆಕ್ಕಿ ದಂಪತಿ; ಹೇಗೆ ಸಾಧ್ಯವಾಯ್ತು?

ಪೊಲೀಸರ ಸಹಕಾರದಿಂದ ಆನ್‌ಲೈನ್‌ ಹೂಡಿಕೆ ವ್ಯವಹಾರದಲ್ಲಿ ಕಳೆದುಕೊಂಡಿದ್ದ 1.40 ಕೋಟಿ ಹಣವನ್ನು ಟೆಕ್ಕಿ ದಂಪತಿ ಮರಳಿ ಪಡೆದಿದ್ದಾರೆ. ಆನ್‌ಲೈನ್‌ ವಂಚನೆಗಳ ಬಗ್ಗೆ ನಾವು ಎಷ್ಟು ಜಾಗರೂಕರಾಗಿದ್ದರೂ ಅದು ಕಡಿಮೆ. ಅಂತೆಯೇ ಕಳೆದುಕೊಂಡ ಹಣ ವಾಪಸ್‌ ಪಡೆಯಲು ಏನು ಮಾಡಬಹುದು ಎಂಬ ವಿಚಾರವೂ ಇಲ್ಲಿದೆ ಗಮನಿಸಿ. (ವರದಿ: ಎಚ್‌. ಮಾರುತಿ)

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (Canva)

ಬೆಂಗಳೂರು: ಪೊಲೀಸರ ಸಹಕಾರದಿಂದ ಆನ್‌ಲೈನ್‌ ಹೂಡಿಕೆ ವ್ಯವಹಾರದಲ್ಲಿ ಕಳೆದುಕೊಂಡಿದ್ದ 1.40 ಕೋಟಿ ಹಣವನ್ನು ಟೆಕ್ಕಿ ದಂಪತಿ ಮರಳಿ ಪಡೆದಿದ್ದಾರೆ. ಪೊಲೀಸ್‌ ಮತ್ತು ಬ್ಯಾಂಕ್‌ ಅಧಿಕಾರಿಗಳ ಸಹಕಾರದಿಂದ ಇದು ಸಾಧ್ಯವಾಗಿದೆ. ನೀವೂ ಸಹ ಮೊದಲೇ ಎಚ್ಚರ ವಹಿಸಿದರೆ ಹಣ ಕಳೆದುಕೊಳ್ಳುವ ಸಂಭವ ಕಡಿಮೆ ಇರುತ್ತದೆ. ಕಳೆದುಕೊಂಡ ಹಣಕ್ಕಿಂತ ಹೆಚ್ಚಿನ ಹಣವನ್ನು ಈ ಟೆಕ್ಕಿ ದಂಪತಿ ಮರಳಿ ಪಡೆದುಕೊಂಡಿದ್ದಾರೆ.

ಮಾಹಿತಿ ತಂತ್ರಜ್ಞಾನ ಉದ್ಯಮವನ್ನು ನಡೆಸುವ ಈ ದಂಪತಿಗಳು ಆನ್‌ಲೈನ್‌ ಹೂಡಿಕೆ ವಂಚನೆ ಜಾಲದಲ್ಲಿ 1.53 ಕೋಟಿ ರೂ. ಕಳೆದುಕೊಂಡಿದ್ದರು. ಪೂರ್ವ ವಿಭಾಗದ ಸೈಬರ್‌ ಪೊಲೀಸರ ಸಮಯಪ್ರಜ್ಞೆಯಿಂದ 1.4 ಕೋಟಿ ರೂಗಳನ್ನು ಹಿಂಪಡೆದಿದ್ದಾರೆ.

ವಿಷಯ

ವಿಷಯ ಏನೆಂದರೆ ಹೂಡಿಕೆ ಮಾಡಿದರೆ ಭಾರಿ ಪ್ರಮಾಣದ ಲಾಭ ಪಡೆಯಬಹುದು ಎಂದು ವಂಚಕರು ಈ ಸಾಪ್ಟ್‌ವೇರ್‌ ದಂಪತಿಗಳಿಗೆ ಆಮಿಷವೊಡ್ಡಿದ್ದರು. ಇಷ್ಟು ಲಾಭ ಬರುವುದಾದರೆ ನೋಡೋಣ ಎಂದು ಬಾಣಸವಾಡಿ ನಿವಾಸಿಗಳಾದ ಈ ದಂಪತಿ ಹೂಡಿಕೆ ಮಾಡಲು ಒಪ್ಪಿಕೊಂಡಿದ್ದರು. ಇಂಗ್ಲೆಂಡ್‌ನಿಂದ ಕಾರ್ಯಾಚರಣೆ ನಡೆಸುತ್ತಿದ್ದ ವಂಚಕರ ತಂಡ ಉತ್ತರ ಭಾರತದ ನಿವಾಸಿಗಳಿಂದ ಬ್ಯಾಂಕ್‌ ಖಾತೆಗಳನ್ನು ಬಾಡಿಗೆಗೆ ಪಡೆದು ಈ ರೀತಿ ವಂಚನೆ ನಡೆಸುತ್ತಿದ್ದರು.

ಈ ಹೂಡಿಕೆಯ ವ್ಯವಹಾರ ಕಾನೂನುಬದ್ಧ ಎನ್ನುವುದನ್ನು ತೋರಿಸಲು ನಕಲಿ ವೆಬ್‌ಸೈಟ್‌ಗಳನ್ನು ಹುಟ್ಟು ಹಾಕಿ ಅಲ್ಲಿ ನಿಮ್ಮ ಹಣ ದುಪ್ಪಟ್ಟಾಗುತ್ತಿದೆ ಎಂದು ತೋರಿಸುತ್ತಿದ್ದರು. ಈ ಜಾಲತಾಣದಲ್ಲಿ ಟೆಕ್ಕಿ ದಂಪತಿ ಪರಿಶೀಲಿಸಿದಾಗ ನಕಲಿ ಎಂದೂ ತಿಳಿದು ಬಂದಿರಲಿಲ್ಲ. ತಮ್ಮ ಹೂಡಿಕೆಯ ಹಣ ಈ ವೇಗದಲ್ಲಿ ಬೆಳೆಯುತ್ತಿರುವುದನ್ನು ಕಂಡು ಅಚ್ಚರಿಪಟ್ಟ ದಂಪತಿ ಕೆಲವು ತಿಂಗಳ ನಂರ ಸ್ವಲ್ಪ ಹಣವನ್ನು ಹಿಂಪಡೆಯಲು ನಿರ್ಧರಿಸಿದ್ದರು.

ನಕಲಿ ವೆಬ್‌ಸೈಟ್‌

ಇವರು ಹಣ ಮರಳಿ ಪಡೆಯಲು ಪ್ರಯತ್ನ ನಡೆಸುತ್ತಿದ್ದಂತೆ ವೆಬ್‌ಸೈಟ್‌ ಸ್ಥಗಿತಗೊಂಡಿತ್ತು. ನಂತರ ಅನುಮಾನಗೊಂಡ ದಂಪತಿಗಳು ಸೈಬರ್‌ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಬ್ಯಾಂಕ್‌ ಅಧಿಕಾರಿಗಳ ಸಹಕಾರದಿಂದ ಪೊಲೀಸರು ಈ ವಂಚನೆಯಲ್ಲಿ ಭಾಗಿಯಾಗಿದ್ದ 50 ಖಾತೆಗಳ ವಹಿವಾಟನ್ನು ಸ್ಥಗಿತಗೊಳಿಸಿದ್ದರು. ಸಮರೋಪಾದಿಯಲ್ಲಿ ತ್ವರಿತವಾಗಿ ಈ ಕೆಲಸ ಮಾಡಿದ್ದರಿಂದ ಕಳೆದುಕೊಂಡಿದ್ದ ಬಹುಪಾಲು ಹಣವನ್ನು ಮರಳಿ ಪಡೆಯಲು ಸಾಧ್ಯವಾಯಿತು.

ಪ್ರತಿಯೊಂದು ಸೈಬರ್‌ ವಂಚನೆಯ ಪ್ರಕರಣಕ್ಕೆ ಪೊಲೀಸರು ಮೂರು ನಿಯಮಗಳನ್ನು ಅನುಸರಿಸುತ್ತಾರೆ. ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸುವುದು, ಸರಿಯಾದ ಸಮಯಕ್ಕೆ ದೂರುದಾರರಿಂದ ದೂರು ಪಡೆಯುವುದು, ಮತ್ತು ಆ ಅವಧಿಯಲ್ಲಿ ದೂರನ್ನು ನೋಂದಣಿ ಮಾಡಿಕೊಳ್ಳುತ್ತಾರೆ. ನಂತರ ಅವರು ಬ್ಯಾಂಕ್‌ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ತ್ವರಿತವಾಗಿ ಖಾತೆಗಳನ್ನು ಸೀಜ್‌ ಮಾಡಿ ಹಣವನ್ನು ಹಿಂಪಡೆಯುತ್ತಾರೆ.

ಪೊಲೀಸರೂ ಸಹ ನಿರಂತರವಾಗಿ ಇಂತಹ ಸೈಬರ್‌ ವಂಚನೆಯ ಜಾಲಕ್ಕೆ ಮರುಳಾಗದ ಹಾಗೆ ಎಚ್ಚರವಹಿಸುವಂತೆ ಮನವಿ ಮಾಡಿಕೊಳ್ಳುತ್ತಲೇ ಬಂದಿದ್ದಾರೆ.

ಹೂಡಿಕೆಗೂ ಮುನ್ನ ಅನುಸರಿಸಬೇಕಾದ ಟಿಪ್ಸ್‌ಗಳು:

1. ಹೂಡಿಕೆಯ ಸಂದೇಶಗಳಿಗೆ ಮರುಳಾಗಬೇಡಿ. ಕಾನೂನುಬದ್ಧ ಹೂಡಿಕೆಯ ಕಂಪನಿಗಳು ಈ ರೀತಿಯಲ್ಲಿ ಇ ಮೇಲ್‌, ಮೆಸೇಜ್‌ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹೂಡಿಕೆ ಮಾಡುವಂತೆ ಕೋರುವುದಿಲ್ಲ.

2. ಅತಿಯಾದ ಲಾಭ ಬರುತ್ತದೆ ಎನ್ನುವುದನ್ನು ನಂಬಬೇಡಿ. ಯಾವುದೇ ರಿಸ್ಕ್‌ ಇಲ್ಲದೆ ಅತಿಯಾದ ಲಾಭ ನಿರಿಕ್ಷಿಸುವುದು ಕಷ್ಟ.

3. ಇಂತಹ ಹೂಡಿಕೆ ಮಾಡುವಾಗ ಕಂಪನಿ ಅಥವಾ ವ್ಯಕ್ತಿಗಳ ಪೂರ್ವಾಪರ ತಿಳಿದುಕೊಳ್ಳುವುದು ಕ್ಷೇಮ. ಹೂಡಿಕೆ ಮಾಡುವುದಕ್ಕೂ ಮುನ್ನ ಇಂತಹವರ ಬಗ್ಗೆ ಸಂಶೋಧನೆ ಮಾಡುವುದು ಇನ್ನೂ ಉತ್ತಮ.

4. ಆಧಾರ್‌, ಬ್ಯಾಂಕ್‌ ಖಾತೆ, ಕ್ರೆಡಿಟ್‌ ಕಾರ್ಡ್‌ ಮಾಹಿತಿಯಂತಹ ವೈಯಕ್ತಿಕ ವಿಷಯಗಳನ್ನು ಯಾವುದೇ ಕಾರಣಕ್ಕೂ ಯಾವುದೇ ಕಂಪನಿ ಅಥವಾ ವ್ಯಕ್ತಿಗಳಿಗೆ ನೀಡಬಾರದು.

5. ಆನ್‌ಲೈನ್‌ ಅರ್ಜಿಗಳನ್ನು ಭರ್ತಿ ಮಾಡುವಾಗ ಎಚ್ಚರ ವಹಿಸಬೇಕು. ಭದ್ರತೆ ಹೊಂದಿರುವ ವೆಬ್‌ಸೈಟ್‌ಗಳ ಯುಆರ್‌ಎಲ್‌ನಲ್ಲಿ ಎಚ್‌ಟಿಟಿಪಿಎಸ್‌ ಹೊಂದಿದ್ದರೆ ಮಾತ್ರ ಮಾಹಿತಿ ಹಂಚಿಕೊಳ್ಳಬಹುದು.

6. ಒಂದು ವೇಳೆ ಹೂಡಿಕೆ ಮಾಡುವಾಗ ಅನುಮಾನ ಬಂದಲ್ಲಿ ಕೂಡಲೇ ಸಂಬಂಧಪಟ್ಟ ಇಲಾಖೆ ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕು.