logo
ಕನ್ನಡ ಸುದ್ದಿ  /  ಕರ್ನಾಟಕ  /  Kalaburagi News: ಬಾರದ ಮಳೆ, ತುಂಬದ ಜಲಾಶಯಗಳು; ಕಲ್ಯಾಣ ಕರ್ನಾಟಕ ಭಾಗದಲ್ಲೂ ಬರಿದಾಗುತ್ತಿವೆ ನದಿಗಳು, ರೈತರಲ್ಲಿ ಹೆಚ್ಚಿದ ಆತಂಕ

Kalaburagi News: ಬಾರದ ಮಳೆ, ತುಂಬದ ಜಲಾಶಯಗಳು; ಕಲ್ಯಾಣ ಕರ್ನಾಟಕ ಭಾಗದಲ್ಲೂ ಬರಿದಾಗುತ್ತಿವೆ ನದಿಗಳು, ರೈತರಲ್ಲಿ ಹೆಚ್ಚಿದ ಆತಂಕ

HT Kannada Desk HT Kannada

Jun 09, 2023 07:31 AM IST

google News

ಕಲ್ಯಾಣ ಕರ್ನಾಟಕ ಭಾಗದಲ್ಲಿ ಬರಿದಾಗುತ್ತಿರುವ ನದಿಗಳು

    • Kalaburagi News: ಮಳೆ ಸುರಿಯದ ಕಾರಣ ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ, ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ನದಿಗಳು ಬರಿದಾಗುತ್ತಿರುವುದು ರೈತರ ಆತಂಕಕ್ಕೆ ಮತ್ತಷ್ಟು ಕಾರಣವಾಗಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಬರಿದಾಗುತ್ತಿರುವ ನದಿಗಳು
ಕಲ್ಯಾಣ ಕರ್ನಾಟಕ ಭಾಗದಲ್ಲಿ ಬರಿದಾಗುತ್ತಿರುವ ನದಿಗಳು

ಕಲಬುರಗಿ: ಇನ್ನೇನು ಬೇಸಿಗೆ ಮುಗಿಯಿತು ಮುಂಗಾರು ಮಳೆ ಬಂದು ನದಿ, ಹಳ್ಳ ಕೊಳ್ಳಗಳು ಭರ್ತಿಯಾಗಿ ರೈತರ ಫಸಲಿಗೆ ಶುಕ್ರದೆಸೆ ಶುರುವಾಗಲಿದೆ ಎಂಬ ಅನ್ನದಾತರ ಲೆಕ್ಕಾಚಾರ ಇತ್ತು. ಆದರೆ, ಹವಾಮಾನ ಇಲಾಖೆಯ (Meteorological Department) ಮುನ್ಸೂನೆಯಂತೆ ಇನ್ನೂ ಒಂದು ವಾರ ವಿಳಂಭವಾಗಲಿದೆ ಎಂಬ ಮಾಹಿತಿಯಿಂದ ರೈತ ಕೆಂಗೆಟ್ಟು ಹೋಗಿದೆ. ಮತ್ತೊಂದೆಡೆ ಮಳೆ ಸುರಿಯದ ಕಾರಣ ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ (Yadagiri), ಬೀದರ್ (Bidar) ಮತ್ತು ಕಲಬುರಗಿ (Kalaburagi) ಜಿಲ್ಲೆಗಳಲ್ಲಿ ನದಿಗಳು ಬರಿದಾಗುತ್ತಿರುವುದು ರೈತರ ಆತಂಕಕ್ಕೆ ಮತ್ತಷ್ಟು ಕಾರಣವಾಗಿದೆ.

ಬರಿದಾದ ನಾರಾಯಣಪುರ ಜಲಾಶಯ

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದಲ್ಲಿ ಬರುವ ನಾರಾಯಣಪುರ ಜಲಾಶಯದಲ್ಲಿ (Narayanpur Dam) ನೀರು ಅತಿ ಕನಿಷ್ಠ ಅಂದರೆ 0.75 ಟಿಎಂಸಿ ಮಾತ್ರ ಬಳಕೆಗೆ ಲಭ್ಯವಿದೆ. ಕಳೆದ ಒಂದು ದಶಕದಲ್ಲಿ ಜಲಾಶಯ ಇಷ್ಟೊಂದು ಪ್ರಮಾಣದಲ್ಲಿ ಖಾಲಿ ಇರಲಿಲ್ಲ. ಕಳೆದ ವರ್ಷ ಇದೇ ಸಮಯದಲ್ಲಿ ಹನ್ನೊಂದು ಟಿಎಂಸಿ ನೀರು ಜಲಾಶಯದಲ್ಲಿ ಲಭ್ಯವಿತ್ತು ಎಂದು ಅಂಕಿ ಅಂಶ ತಿಳಿಸುತ್ತವೆ.

ಜಲಾಶಯದ ನೀರಿನ ಮಟ್ಟ (ಎಫ್ಆರ್‌ಎಲ್) 492.25 ಮೀ. ಜಲಾಶಯ ಭರ್ತಿಯಾದ ಸಮಯದಲ್ಲಿ 33.31 ಟಿಎಂಸಿ ನೀರು ಸಂಗ್ರಹ ಇರುವುದು. ಜಲಾಶದ ಕನಿಷ್ಠ ಮಟ್ಟ 487.10 ಮಿ. ಭರ್ತಿಯಾದ ಸಮಯದಲ್ಲಿ ಬಳಕೆಗೆ ಲಭ್ಯವಾಗುವ ನೀರು 18 ಟಿಎಂಸಿ ಮಾತ್ರ. ಆದರೆ, ಮುಂಗಾರು ಮಳೆ ಬಿದ್ದಿಲ್ಲ. ಮಹಾರಾಷ್ಟ್ರದಲ್ಲಿಯೂ ಮಳೆ ಇಲ್ಲದೆ ಕಾರಣ ಜಲಾಶಯಕ್ಕೆ ನೀರಿನ ಹರಿವಿಲ್ಲದೆ ಸದ್ಯ 0.75 ಟಿಎಂಸಿ ನೀರು ಸಂಗ್ರಹವಿರುವುದು, ರೈತರ ಆತಂಕಕ್ಕೆ ಕಾರಣವಾಗಿದೆ.

ಎಡದಂಡೆ ಕುಸಿತ

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಬಳಿ ನಾರಾಯಣಪುರ ಎಡದಂಡೆ ನಾಲೆ ಕುಸಿದು, ಸದ್ಯ ದುರಸ್ತಿ ಕಾರ್ಯ ಭರದಿಂದ ಸಾಗಿದೆ. ಈ ನಡುವೆ ಕಲಬುರಗಿ ಮಹಾನಗರಕ್ಕೆ ಕುಡಿಯುವ ನೀರಿನ ತೀವ್ರ ತೊಂದರೆಯಾಗಿದೆ. ಕಲಬುರಗಿ ಪಟ್ಟಣಕ್ಕೆ ಭೀಮಾ ನದಿ ದಂಡೆಯ ಸರಡಗಿ ಬ್ಯಾರೇಜ್‌ಗೆ ನೀರನ್ನು ಆಲಮಟ್ಟಿ ಜಲಾಶಯದಿಂದ ನಾರಾಯಣಪುರ ಜಲಾಶಯದ ಮೂಲಕ ಹರಿಸುವಂತೆ ವಿಡಿಯೋ ಸಂವಾದದ ಸಭೆಯಲ್ಲಿ ಬೆಳಗಾವಿ ಹಾಗೂ ಕಲಬುರಗಿ ಪ್ರಾದೇಶಿಕ ಆಯುಕ್ತರು ತಿಳಿಸಿದ್ದರು.

ನಾರಾಯಣಪುರದಿಂದ ನಾರಾಯಣಪುರ ಎಡದಂಡೆ, ವಿಜಯಪುರ ಜಿಲ್ಲೆಯ ಇಂಡಿ ಶಾಖಾ ಕಾಲುವೆ ಮುಖಾಂತರ ಭೀಮಾನದಿಗೆ ಹರಿಸಿ ಕಲಬುರಗಿ ಜಿಲ್ಲೆಯ ಸರಡಗಿ ಬ್ಯಾರೆಜ್‌ಗೆ ನೀರು ಸಂಗ್ರಹ ಮಾಡಬೇಕು ಅಂದಾಗ ಮಾತ್ರ ಕಲಬುರಗಿ ಮಹಾನಗರಕ್ಕೆ ಕುಡಿಯುವ ನೀರು ತಲುಪಲು ಸಾಧ್ಯ. ಈ ನಡುವೆ ಆಲಮಟ್ಟಿಯಿಂದ ನಾರಾಯಣಪುರಕ್ಕೆ ನೀರು ಹರಿದು ಬಂದರೂ ಕೂಡ ನಾರಾಯಣಪುರ ಮುಖ್ಯ ನಾಲೆ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ನೀರು ಸದ್ಯಕ್ಕೆ ಲಭ್ಯವಾಗುವುದಿಲ್ಲ.

ಕಾರಂಜಾದಲ್ಲೂ ನೀರಿನ ಕೊರತೆ

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ 7,691 ಟಿಎಂಸಿ ಅಡಿ ಸಾರ‍್ಥ್ಯದ ಕಾರಂಜಾ ಜಲಾಶಯ ರ‍್ತಿಯಾಗಲು ಶೇ.35 ರಷ್ಟು ನೀರಿನ ಅವಶ್ಯಕತೆ ಇದೆ. ಬುಧವಾರ ಬೆಳಗ್ಗೆ 8 ಗಂಟೆಗೆ ಮಾಡಿದ ಮಾಪನದ ಪ್ರಕಾರ ಆಣೆಕಟ್ಟಿನಲ್ಲಿ ಶೇ. 65.4ರಷ್ಟು ನೀರಿನ ಸಂಗ್ರಹವಿದೆ. ಜಲಾಶಯದ ಒಳಹರಿವಿನ ಪ್ರಮಾಣ ಈ ತಿಂಗಳ ಮೊದಲ ದಿನದಿಂದ ಇಲ್ಲಿಯವರೆಗೆ ಶೂನ್ಯ ಪ್ರಮಾಣದಲ್ಲಿದೆ. ರೈತರ ಬೆಳೆಗಳಿಗೆ ಕಾಲುವೆ ಮುಖಾಂತರ 0.02716 ಟಿಎಂಸಿ ಅಡಿ ನೀರು ಹರಿಬಿಡಲಾಗುತ್ತಿದೆ.

ಕಾರಂಜಾದಿಂದ ಮಾಂಜ್ರಾ ನದಿಗೆ ನೀರು ಹರಿಬಿಡುವುದನ್ನು ಸದ್ಯದ ಮಟ್ಟಿಗೆಸ್ಥಗಿತಗೊಳಿಸಲಾಗಿದೆ. ಜಿಲ್ಲೆಯಲ್ಲಿನ ಏಕೈಕ ಮಧ್ಯಮ ಗಾತ್ರದ ಅಣೆಕಟ್ಟು ಇದಾಗಿದೆ. ಪಕ್ಕದ ತೆಲಂಗಾಣಾದ ಮೆದಕ್ ಜಿಲ್ಲೆಯ ಜಹೀರಾಬಾದ್ ತಾಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಸುರಿದರೆ ಕಾರಂಜಾ ಜಲಾಶಯದ ಒಳ ಹರಿವಿನಲ್ಲಿ ಹೆಚ್ಚಳವಾಗಲಿದೆ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ.

ರಾಜ್ಯದ ಕ್ಷಣಕ್ಷಣ ಸುದ್ದಿಗಳಿಗಾಗಿ ಈ ಲಿಂಕ್​ ಮೇಲೆ ಕ್ಲಿಕ್​ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ